ರಾಜಸ್ಥಾನ: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು
ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಗೆ ಥಳಿಸಿ, ಚಪ್ಪಲಿ ಹಾರ ಹಾಕಿ ಬೆತ್ತಲೆ ಮೆರಣಿಗೆ ನಡೆಸಿದ ಘಟನೆ ನಡೆದಿದ್ದು, 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೋಟಾ: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯನ್ನು ಥಳಿಸಿ, ಚಪ್ಪಲಿ ಹಾರ ಹಾಕಿ ಬೆತ್ತಲೆ ಮೆರಣಿಗೆ ನಡೆಸಿದ ಘಟನೆ ರಾಜಸ್ಥಾನದ ಝಲಾವರ್ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.
ಈ ಪ್ರಕರಣದ ಬಗ್ಗೆ ರಾಕೇಶ್ ರಾಥೋಡ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ವ್ಯಕ್ತಿಯೊಬ್ಬನ ಮೇಲೆ ಹಲ್ಲೆ, ಅವಮಾನ ಮತ್ತು ಬಂಧನದಲ್ಲಿರಿಸಿದ ಆರೋಪದ ಮೇಲೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರು ನೀಡಿದ್ದ ರಾಕೇಶ್ ರಾಥೋಡ್ ಅವರನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ರಾಕೇಶ್ ಮೇಲಿದೆ. ಶನಿವಾರ ಸಂಜೆ ರಾಥೋಡ್ ಮಹಿಳೆಯ ಜತೆ ಇರುವುದನ್ನು ಆಕೆಯ ಪತಿ ಪತ್ತೆ ಹಚ್ಚಿದ್ದರು. ಅಲ್ಲಿ ರಾಕೇಶ್ಗೆ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿತ್ತು. ಮರುದಿನ ಮಹಿಳೆಯ ಪತಿಯ ಗೆಳೆಯರು ರಾಥೋಡ್ಗೆ ಕರೆ ಮಾಡಿ ಕರೆದು ಥಳಿಸಿದ್ದಾರೆ. ಆಮೇಲೆ ಚಪ್ಪಲಿ ಹಾರ ಹಾಕಿ ಬಘೇರ್ ಗ್ರಾಮದಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದ್ದಾರೆ ಎಂದು ಖಾನ್ಪುರ್ನ ಪೊಲೀಸ್ ಅಧಿಕಾರಿ ರಾಜೀವ್ ಪರಿಹರ್ ಹೇಳಿದ್ದಾರೆ.
ರಾಥೋಡ್ ಮನರೇಗಾ ಯೋಜನೆಯ ಮೇಲ್ವಿಚಾರಕರಾಗಿದ್ದು, ಮಹಿಳೆ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣದಲ್ಲಿ 9 ಆರೋಪಿಗಳ ಪೈಕಿ 8 ಮಂದಿಯನ್ನು ಸೋಮವಾರ ಬಂಧಿಸಲಾಗಿದೆ. ಮಹಿಳೆಯ ಪತಿ ತಲೆ ಮರೆಸಿಕೊಂಡಿದ್ದಾನೆ. ಎರಡೂ ಕಡೆಯವರು ಪರಸ್ಪರ ದೂರು ನೀಡಿದ್ದು ಸರೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.