ಭಾರತದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ದೆಹಲಿಯ ಜವಾಹರಲಾಲ ನೆಹರೂ ಯೂನಿವರ್ಸಿಟಿ (ಜೆಎನ್ಯು) ನಾಲ್ಕನೇ ವಾರ್ಷಿಕ ಘಟಿಕೋತ್ಸವನ್ನು ಇಂದು ಆಯೋಜಿಸಿತು. ಕೇವಲ ಪಿಹೆಚ್ಡಿ ಪೂರೈಸಿರುವ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪದವಿಗಳನ್ನು ಪ್ರದಾನ ಮಾಡಲು ಘಟಿಕೋತ್ಸವ ಆಯೋಜಿಸಲಾಗಿದೆಯೆಂದು ಜಿಎನ್ಯು ರೆಕ್ಟರ್ ಸತೀಶ್ಚಂದ್ರ ಗರ್ಕೋಟಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ ಕೊವಿಂದ್ ಅವರು, ‘‘ವಿದ್ಯಾರ್ಥಿಗಳಿಗೆ ಸಮಗ್ರವಾದ ಶಿಕ್ಷಣವನ್ನು ಒದಗಿಸುವ ಮತ್ತು ಯುವ ಪೀಳಿಗೆಗೆ ಕೆಲಸ ಪಡೆಯಲು ನೆರವಾಗುವ ನಿಟ್ಟಿನಲ್ಲಿ ಜೆಎನ್ಯು, ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಿದೆಯೆಂಬ ಸಂಗತಿ ನನ್ನ ಗಮನಕ್ಕೆ ಬಂದಿದೆ. ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು, ವಿದ್ಯಾರ್ಥಿಗಳಿಗೆ ವಿಷಯಾಧಾರಿತ ಜ್ಞಾನವನ್ನು ಒದಗಿಸುತ್ತದೆ ಮತ್ತು ಭಾರತದ ಆರ್ಥಿಕತೆಗೂ ನೆರವಾಗಲಿದೆ,‘‘ ಎಂದರು.
ವಿದ್ಯಾರ್ಥಿಗಳಿಗೆ ಹಲವಾರು ಆಯಾಮಗಳಲ್ಲಿ ಶಿಕ್ಷಣ ಒದಗಿಸುತ್ತಿರುವ ಜೆಎನ್ಯು ಶ್ರಮವನ್ನು ರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ಕೊಂಡಾಡಿದರು.
‘‘ಸಾಮಾಜಿಕ ವಿಜ್ಞಾನ ಮೊದಲುಗೊಂಡು ತಂತ್ರಜ್ಞಾನದವರೆಗಿನ ವಿವಿಧ ಶೈಕ್ಷಣಿಕ ಆಯಾಮಗಳಲ್ಲಿ ಉನ್ನತ ಮಟ್ಟವನ್ನು ಕಾಯ್ದುಕೊಳ್ಳಲು ಜೆಎನ್ಯುಗೆ ನೆರವಾಗಿರುವ ಪ್ರತಿ ಸದಸ್ಯನ ಕೊಡುಗೆಯನ್ನು ನಾನು ತುಂಬು ಹೃದಯದಿಂದ ಶ್ಲಾಘಿಸುತ್ತೇನೆ. ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಇಲ್ಲಿನ ಬೋಧನೆ ಮತ್ತು ಸಂಶೋಧನೆ ಒಂದು ದೊಡ್ಡ ಪ್ರಭಾವನ್ನುಂಟು ಮಾಡಿದೆ, ಎನ್ನುವುದು ಉತ್ಪ್ರೇಕ್ಷೆಯಲ್ಲ,’‘ ಎಂದು ರಾಷ್ಟ್ರಪತಿಗಳು ಹೇಳಿದರು.