ಅರ್ಜುನ್ ಟ್ಯಾಂಕ್ನ ಮಾರ್ಕ್-1ಎ ಆವೃತ್ತಿಯನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ರಕ್ಷಣಾ ಇಲಾಖೆ ಸಮ್ಮತಿಸಿದೆ. 118 ಟ್ಯಾಂಕ್ಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ಚೆನ್ನೈನ ಭಾರಿ ವಾಹನಗಳ ಕಾರ್ಖಾನೆಗೆ (Heavy Vehicles Factory – HVF) ₹ 7,523 ಕೋಟಿ ಮೊತ್ತದ ಆರ್ಡರ್ ನೀಡಿದೆ. ಅರ್ಜುನ್ ಮಾರ್ಕ್-1ಎ ಯುದ್ಧ ಟ್ಯಾಂಕ್ಗಳ ಉತ್ಪಾದನೆ ಮತ್ತು ಸರಬರಾಜು ಈ ಹಂತಕ್ಕೆ ಬಂದಿರುವುದು ಹಲವರ ಗಮನ ಸೆಳೆದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು 1980ರ ಉತ್ತರಾರ್ಧದಲ್ಲಿ ಅರ್ಜುನ್ ಟ್ಯಾಂಕ್ಗಳ ಬಗ್ಗೆ ಸಂಶೋಧನೆ ಆರಂಭಿಸಿತು. ಆ ದಿನಗಳಲ್ಲಿ ಭಾರತೀಯ ಸೇನೆಯು ಬಳಸುತ್ತಿದ್ದ ಬಹುತೇಕ ಟ್ಯಾಂಕ್ಗಳನ್ನು ರಷ್ಯಾ ನಿರ್ಮಿಸಿತ್ತು. ಈ ಟ್ಯಾಂಕ್ಗಳಲ್ಲಿ ಅಗತ್ಯ ಮಾರ್ಪಾಡು ತರುವ, ಇನ್ನಷ್ಟು ಸುಧಾರಣೆಗಳನ್ನು ಜಾರಿ ಮಾಡುವುದು ಡಿಆರ್ಡಿಒ ಉದ್ದೇಶವಾಗಿತ್ತು.
1990ರ ದಶಕದ ಆರಂಭದಲ್ಲಿ ಅರ್ಜುನ್ ಟ್ಯಾಂಕ್ಗಳ ಮೊದಲ ಆವೃತ್ತಿಯ ಮೇಲೆ ಕೆಲಸ ಆರಂಭವಾಯಿತು. 2004ರಲ್ಲಿ ಈ ಟ್ಯಾಂಕ್ ಸೇನೆಗೆ ಸೇರ್ಪಡೆಯಾಯಿತು. ಇದೇ ಟ್ಯಾಂಕ್ನ ಸುಧಾರಿತ ಆವೃತ್ತಿಯಾಗಿ ಮಾರ್ಕ್-1ಎ ಅಭಿವೃದ್ಧಿಪಡಿಸುವ ಪ್ರಯತ್ನಗಳು ಜೂನ್ 2010ರಿಂದ ಆರಂಭವಾದವು. ಜೂನ್ 2012ರಲ್ಲಿ ವಿವಿಧ ಭೂಪ್ರದೇಶಗಳಲ್ಲಿ ಟ್ಯಾಂಕ್ನ ಪರೀಕ್ಷೆಗಳು ನಡೆದವು. ಡಿಆರ್ಡಿಒ ಮತ್ತು ಸೇನೆಗಳು ನಂತರದ ದಿನಗಳಲ್ಲಿಯೂ ಪ್ರತ್ಯೇಕವಾಗಿ ವಿಸ್ತೃತ ಪರಿಶೀಲನೆ ನಡೆಸಿದವು.
ಅರ್ಜುನ್ ಟ್ಯಾಂಕ್ನ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಮಾರ್ಕ್-1ಎ ಆವೃತ್ತಿಯಲ್ಲಿ 72 ಹೊಸ ಫೀಚರ್ಗಳಿವೆ. ಈ ಪೈಕಿ 14 ಪ್ರಮುಖವಾದವು, 58 ಸಣ್ಣಪುಟ್ಟವು. ಈ ಹೊಸ ಸೇರ್ಪಡೆಗಳು ಟ್ಯಾಂಕ್ನ ಸಂಚಾರ ಮತ್ತು ವಿವಿಧ ಭೂಪ್ರದೇಶಗಳಲ್ಲಿ ಟ್ಯಾಂಕ್ ಮುನ್ನಡೆಯುವ ಸಾಧ್ಯತೆಯನ್ನು ಹೆಚ್ಚಿಸಿದೆ. ಕಾರ್ಯಾಚರಣೆಯಲ್ಲಿ ಸೇನಾ ಕಮಾಂಡರ್ಗಳಿಗೆ ಸಿಗುವ ಆಯ್ಕೆಗಳೂ ಹೆಚ್ಚಾಗಿವೆ. ಇದೀಗ ಈ ಟ್ಯಾಂಕ್ 360 ಡಿಗ್ರಿ ಸುತ್ತಳತೆಯಲ್ಲಿ ನಿಖರ ಗುರಿಯೊಂದಿಗೆ ಫೈರಿಂಗ್ ಮಾಡಬಲ್ಲದು. ‘ಕಂಚನ್’ ಹೆಸರಿನ ವಿವಿಧ ಪದರಗಳ ರಕ್ಷಣಾ ಕವಚವನ್ನೂ ಟ್ಯಾಂಕ್ಗೆ ಅಳವಡಿಸಲಾಗಿದೆ. 120 ಎಂಎಂ ರೈಫಲ್ಡ್ ಗನ್ ಜೊತೆಗೆ ಹೊಸದಾಗಿ ಸೇರ್ಪಡೆಗೊಳಿಸಿರುವ ವ್ಯವಸ್ಥೆಗಳು ಈ ಟ್ಯಾಂಕ್ಗೆ ‘ಹಂಟರ್ ಕಿಲರ್’ (ಬೇಟೆಗಾರನ ಬೇಟೆಗಾರ) ಎಂಬ ಕೀರ್ತಿ ತಂದುಕೊಟ್ಟಿದೆ. ಅರ್ಜುನ್ ಟ್ಯಾಂಕ್ನಿಂದ ಗೈಡೆಡ್ ಮಿಸೈಲ್ ಉಡಾಯಿಸುವ ಪ್ರಯೋಗಗಳು ನಡೆಯುತ್ತಿವೆ.
ಅರ್ಜುನ್ ಟ್ಯಾಂಕ್ನ ಮಾರ್ಕ್-1ಎ ಆವೃತ್ತಿಯಲ್ಲಿ ಇದೇ ಟ್ಯಾಂಕ್ನ ಮಾರ್ಕ್-1 ಆವೃತ್ತಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ದೇಶೀಯ ಉತ್ಪನ್ನಗಳು ಬಳಕೆಯಾಗಿವೆ. ವಿದೇಶಿ ಉತ್ಪಾದಕರ ಮೇಲಿನ ಅವಲಂಬನೆಯು ಇದರಿಂದ ಕಡಿಮೆಯಾಗಲಿದೆ. ನಾಲ್ವರು ಸೈನಿಕರು ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಈ ಹೊಸ ಆವೃತ್ತಿಯಲ್ಲಿ ಕೆಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ಟ್ಯಾಂಕ್ನಲ್ಲಿ ಅಳವಡಿಸಿರುವ ಸುಧಾರಿತ ಟ್ರಾನ್ಸ್ಮಿಷನ್ ವ್ಯವಸ್ಥೆಯು ಸಂವಹನವೇ ಅತಿಮುಖ್ಯ ಪಾತ್ರ ವಹಿಸುವ ಯುದ್ಧಭೂಮಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ನೆಟ್ವರ್ಕಿಂಗ್ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಲು ನೆರವು ನೀಡಲಿದೆ.
ಹೊಸ ಟ್ಯಾಂಕ್ ಖರೀದಿಸುವ ಸರ್ಕಾರದ ನಿರ್ಧಾರಕ್ಕೆ ಏಕಿಷ್ಟು ಪ್ರಾಮುಖ್ಯತೆ?
ತಲಾ 40ರಿಂದ 50 ಟ್ಯಾಂಕ್ಗಳ ಮೂರು ಸಶಸ್ತ್ರ ರೆಜಿಮೆಂಟ್ಗಳನ್ನು ರೂಪಿಸಲು ಸರ್ಕಾರ ಇದೀಗ ಖರೀದಿಸುತ್ತಿರುವ 118 ಹೊಸ ಟ್ಯಾಂಕ್ಗಳು ನೆರವಾಗಲಿವೆ. ಪಾಕಿಸ್ತಾನದ ಸೇನೆಯು ವಿಟಿ-4 ಮತ್ತು ಅಲ್-ಖಾಲಿದ್ ಹೆಸರಿನ ಎರಡು ಹೊಸ ಆವೃತ್ತಿಯ ಟ್ಯಾಂಕ್ಗಳನ್ನು ಸೇವೆಗೆ ಸೇರ್ಪಡೆಗೊಳಿಸುತ್ತಿದೆ. ಒಂದು ಚೀನಿ ಮೂಲದ್ದು, ಮತ್ತೊಂದು ರಷ್ಯಾ ಮೂಲದ ಟಿ-90 ಟ್ಯಾಂಕ್ಗಳ ತಂತ್ರಜ್ಞಾನ ಬಳಸಿಕೊಂಡಿದೆ. ಟಿ-90 ಆವೃತ್ತಿಯ ಟ್ಯಾಂಕ್ಗಳನ್ನು ಭಾರತೀಯ ಸೇನೆಯು ಈ ಹಿಂದೆ ಬಳಸುತ್ತಿದೆ.
ಅರ್ಜುನ್ ಮಾರ್ಕ್-1ಎ ಟ್ಯಾಂಕ್ಗಳು ಮರುಭೂಮಿಯಲ್ಲಿ ಬಳಸಲು ಸೂಕ್ತವಾಗಿವೆ. ಈ ಮೊದಲ ಆವೃತ್ತಿಯನ್ನೂ ಮರುಭೂಮಿಯಲ್ಲಿ ಬಳಸಬಹುದಾಗಿತ್ತಾದರೂ ಇದೀಗ ಹೊಸ ಸೇರ್ಪಡೆಗಳಿಂದಾಗಿ ಮಾರ್ಕ್-1ಎ ಟ್ಯಾಂಕ್ಗಳು ಮತ್ತಷ್ಟು ಪರಿಣಾಮಕಾರಿ ಹಾಗೂ ಗುರಿಯನ್ನು ಹೆಚ್ಚು ನಿಖರವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಪಡೆದುಕೊಂಡಿದೆ. ರಷ್ಯಾ ನಿರ್ಮಿತ ಸುಧಾರಿತ ಆವೃತ್ತಿಗಳಲ್ಲಿ ಲಭ್ಯವಿರುವ ಆಯ್ಕೆಗಳ ಜೊತೆಗೆ ಹಲವು ವಿಚಾರಗಳಲ್ಲಿ ಅದನ್ನೂ ಮೀರಿಸಿದ ನಿಖರತೆಯಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ.
ಇಷ್ಟೆಲ್ಲಾ ಅನುಕೂಲಗಳಿದ್ದರೂ ಟ್ಯಾಂಕ್ನ ಭಾರವೇ ಅದರ ದೊಡ್ಡಮಿತಿಯೂ ಆಗಿತ್ತು. ಈ ಟ್ಯಾಂಕ್ನ ಕಾರ್ಯಕ್ಷಮತೆಯನ್ನು 72 ಹೊಸ ಸೇರ್ಪಡೆಗಳು ಸಾಕಷ್ಟು ಸುಧಾರಿಸಿದೆ. ಆದರೆ ಈಗಾಗಲೇ ಭಾರ ಹೆಚ್ಚಾಗಿದ್ದ ಟ್ಯಾಂಕ್ಗಳಿಗೆ ಹೊಸದಾಗಿ ಮತ್ತೂ ಐದಾರು ಟನ್ ಹೊಸ ಭಾರ ಸೇರ್ಪಡೆಯಾಗಿದೆ. ಈ ಹೊಸ ಸಾಮರ್ಥ್ಯಗಳ ಸೇರ್ಪಡೆಯೊಂದಿಗೆ ಅರ್ಜುನ್ ಟ್ಯಾಂಕ್ಗಳು ಜಗತ್ತಿನ ಯಾವುದೇ ಸಮಕಾಲೀನ ಯುದ್ಧಟ್ಯಾಂಕ್ಗಳಿಗೆ ಹೋಲಿಕೆಯಲ್ಲಿ ಮೇಟಿಯಾಗಿಯೇ ನಿಲ್ಲಲಿದೆ. ಭಾರತದ ಭೂಪ್ರದೇಶದಲ್ಲಿ ಸಮರ್ಥ ಬಳಕೆಗೆ ಅನುಗುಣವಾಗಿ ಈ ಟ್ಯಾಂಕ್ಗಳನ್ನು ವಿನ್ಯಾಸ ಮಾಡಲಾಗಿದೆ. ಯುದ್ಧದ ಪರಿಸ್ಥಿತಿಯನ್ನು ಯಾವುದೇ ಗಡಿಗೆ ಅರ್ಜುನ್ ಟ್ಯಾಂಕ್ಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿಯೋಜಿಸಲು ಸಾಧ್ಯವಾಗಲಿದೆ.
ಭಾರತದ ಸಾಮರ್ಥ್ಯ ಸಾರಿ ಹೇಳಿದ ಹೆಗ್ಗುರುತು
ಟ್ಯಾಂಕ್ನ ಹೊಸ ಆವೃತ್ತಿಯಲ್ಲಿ ದೇಶೀಯ ನಿರ್ಮಾಣದ ವಸ್ತುಗಳನ್ನು ಗಮನಾರ್ಹ ಪ್ರಮಾಣದಲ್ಲಿ ಬಳಸಲಾಗಿದೆ. ರಕ್ಷಣಾ ಸಚಿವಾಲಯವು ಟ್ಯಾಂಕ್ಗಳ ಖರೀದಿಗೆ ಒಪ್ಪಿಕೊಂಡಿರುವುದು ಮೇಕ್ ಇನ್ ಇಂಡಿಯಾ ಉಪಕ್ರಮಗಳಿಗೆ ಹೊಸ ವೇಗ ನೀಡಲಿದೆ. ಆತ್ಮನಿರ್ಭಾರ್ ಭಾರತ್ ಕನಸು ಸಾಕಾರಗೊಳ್ಳಲು ಇದರಿಂದ ಸಹಾಯಕವಾಗಲಿದೆ ಎಂದು ರಕ್ಷಣಾ ಸಚಿವಾಲಯವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಭಾರೀ ವಾಹನಗಳ ಕಾರ್ಖಾನೆಗೆ ಸಿಕ್ಕಿರುವ ಈ ಆರ್ಡರ್ನಿಂದ 200ಕ್ಕೂ ಹೆಚ್ಚು ಭಾರತೀಯ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳ ಪುನಶ್ಚೇತನಕ್ಕೆ ಹಾಗೂ ಸುಮಾರು 8,000 ಮಂದಿಗೆ ಉದ್ಯೋಗ ದೊರಕಿಸಿಕೊಡಲು ನೆರವಾಗಲಿದೆ. ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತವು ದೃಢವಾಗಿ ಹೆಜ್ಜೆ ಇರಿಸಿರುವುದನ್ನು ಇದು ಸಾರಿ ಹೇಳುತ್ತದೆ ಎಂದು ಪತ್ರಿಕಾ ಹೇಳಿಕೆಯು ತಿಳಿಸಿತ್ತು.
2018-19ರಲ್ಲಿಯೇ ಅರ್ಜುನ್ ಮಾರ್ಕ್-1ಎ ಟ್ಯಾಂಕ್ ಸೇನೆಯ ಸೇವೆಗೆ ಸನ್ನದ್ಧವಾಗಿತ್ತು ಎಂದು ರಕ್ಷಣಾ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಅಧಿಕಾರಿಗಳು ಹೇಳಿದ್ದರು. ಈ ಟ್ಯಾಂಕ್ನ ಅಭಿವೃದ್ಧಿ ಹೊಣೆಗಾರಿಕೆಯನ್ನು ಚೆನ್ನೈನಲ್ಲಿರುವ ಡಿಆರ್ಡಿಒದ ಸಂಘರ್ಷ ವಾಹನಗಳ ಸಂಶೋಧನಾ ಕೇಂದ್ರವು (Combat Vehicles Research and Development Establishment – CVRDE) ಡಿಆರ್ಡಿಒ ಪ್ರಯೋಗಾಲಯಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಿತ್ತು.
ಕಳೆದ ಫೆಬ್ರುವರಿಯಲ್ಲಿ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜುನ್ ಎಂಕೆ-1ಎ ಟ್ಯಾಂಕ್ಗಳ ಮಾದರಿ ಪ್ರತಿಕೃತಿಯನ್ನು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಅವರಿಗೆ ನೀಡಿದ್ದರು. ಇದೀಗ ಸರ್ಕಾರವು ಖರೀದಿ ಆರ್ಡರ್ ನೀಡಿರುವ ಟ್ಯಾಂಕ್ಗಳು ಕಾರ್ಖಾನೆಯಿಂದ ಹೊರಗೆ ಬರಲು ಕನಿಷ್ಠ ಎರಡೂವರೆ ವರ್ಷ ಬೇಕು ಎಂದು ಆರ್ಡನೆನ್ಸ್ ಕಾರ್ಖಾನೆಯ ಅಧಿಕಾರಿಗಳು ಅಭಿಪ್ರಾಯಪಟ್ಟರು.
(Arjun Mark 1a Tank Whats New Why its Important Development)
ಇದನ್ನೂ ಓದಿ: Explainer | Arjun Mark 1A Tank: ಭೂಸೇನೆಗೆ ಅರ್ಜುನ್ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?
Published On - 7:00 pm, Sun, 26 September 21