ಭಾರತ-ಪಾಕ್ ಯುದ್ಧದ ಗತಿ ಬದಲಿಸಿದ್ದು ಯೋಧ ಅಬ್ದುಲ್ ಹಮೀದ್​ ಬಲಿದಾನ: ಪ್ಯಾಟನ್ ಟ್ಯಾಂಕ್​ಗಳನ್ನು ಎದುರಿಸಿ ಗೆದ್ದಿದ್ದು ಅವರ ಧೈರ್ಯ

Ghanashyam D M | ಡಿ.ಎಂ.ಘನಶ್ಯಾಮ

|

Updated on:Sep 15, 2021 | 11:14 PM

ಅಂದು ಅಬ್ದುಲ್ ಹಮೀದ್​ರಂಥ ಸಾವಿರಾರು ಯೋಧರು ಪ್ಯಾಟನ್​ ಟ್ಯಾಂಕ್​ಗಳಿಗೆ ಹೆದರಿ ತುಸು ಹಿಂಜರಿದಿದ್ದರೂ ಇಂದು ಭಾರತದ ಭೂಪಟ ಹೀಗೆ ಇರುತ್ತಿರಲಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಂತೆ ಪಾಕ್ ಆಕ್ರಮಿತ ಪಂಜಾಬ್ ಎಂಬ ಮತ್ತೊಂದು ಪ್ರಾಂತ್ಯ ಪಾಕಿಸ್ತಾನದ ಭೂಪಟದಲ್ಲಿ ಸ್ಥಾನ ಪಡೆಯುತ್ತಿತ್ತು.

ಭಾರತ-ಪಾಕ್ ಯುದ್ಧದ ಗತಿ ಬದಲಿಸಿದ್ದು ಯೋಧ ಅಬ್ದುಲ್ ಹಮೀದ್​ ಬಲಿದಾನ: ಪ್ಯಾಟನ್ ಟ್ಯಾಂಕ್​ಗಳನ್ನು ಎದುರಿಸಿ ಗೆದ್ದಿದ್ದು ಅವರ ಧೈರ್ಯ
ಯೋಧ ಅಬ್ದುಲ್ ಹಮೀದ್ ಮತ್ತು ಅವರು ಬಳಸುತ್ತಿದ್ದ ಜೀಪ್ ಮೌಂಟ್ ಟ್ಯಾಂಕ್ ನಿರೋಧಕ ಗನ್

2ನೇ ಮಹಾಯುದ್ಧದ ನಂತರ ಇಡೀ ಜಗತ್ತು ನಿಬ್ಬೆರಗಾಗಿ ಗಮನಿಸಿದ್ದು ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವ 1965ರಲ್ಲಿ ನಡೆದ ಪೂರ್ಣ ಪ್ರಮಾಣದ ಯುದ್ಧ. ಆಕ್ರಮಣ-ಪ್ರತಿ ಆಕ್ರಮಣದ ಈ ಯುದ್ಧದ ಆರಂಭದಲ್ಲಿ ಭಾರತಕ್ಕೆ ವ್ಯಾಪಕ ಹಿನ್ನಡೆಯಾಗಿತ್ತು, ಭಾರತದ ಎಲ್ಲೆಯೊಳಗೆ ಪಾಕ್ ಸೇನೆ ಪ್ರವೇಶಿಸಿ ಒಂದೆರೆಡು ಪಟ್ಟಣಗಳನ್ನು ಸುಪರ್ದಿಗೆ ತೆಗೆದುಕೊಂಡಿತ್ತು. ‘ಭಾರತ-ಪಾಕಿಸ್ತಾನದ ನಡುವೆ ನಿರ್ಣಾಯಕ ಯುದ್ಧವೊಂದು ನಡೆದು, ಭಾರತ ಅದರಲ್ಲಿ ಸೋತು, ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಒಪ್ಪಿಸುವ ಪರಿಸ್ಥಿತಿ ಬರುತ್ತದೆ’ ಎಂದು ಷರಾ ಬರೆದವರಿಗೆ ಲೆಕ್ಕವಿಲ್ಲ.

ಎರಡೂ ದೇಶಗಳ ನಡುವೆ ನಿರ್ಣಾಯಕ ಯುದ್ಧವೇನೋ ನಡೆಯಿತು. ಆದರೆ ಫಲಿತಾಂಶ ಮಾತ್ರ ಸಂಪೂರ್ಣ ಬೇರೆಯದ್ದೇ ಆಗಿತ್ತು. ಶ್ರೀನಗರವನ್ನು ತನ್ನ ಭೂಪಟದಲ್ಲಿ ಸೇರಿಸಿಕೊಳ್ಳುವ ಕನಸು ಕಾಣುತ್ತಾ ಭಾರತಕ್ಕೆ ಸೇನೆಯನ್ನು ನುಗ್ಗಿಸಿದ್ದ ಪಾಕಿಸ್ತಾನವು, ತನ್ನ ಸಾಂಸ್ಕೃತಿಕ ರಾಜಧಾನಿ ಲಾಹೋರ್ ಉಳಿಸಿಕೊಳ್ಳಲು ಹೆಣಗಾಡುವಂತಾಯಿತು. ಕೊನೆಕೊನೆಗೆ ತನ್ನದೇ ಗಾಯಗಳನ್ನು ನೆಕ್ಕಿಕೊಳ್ಳುತ್ತಾ, ಟ್ಯಾಂಕ್​ನಂಥ ಮಹತ್ವದ ಯುದ್ಧೋಪಕರಣಗಳನ್ನು ಭಾರತದ ಗಡಿಯೊಳಗೇ ಉಳಿಸಿ ಓಡಬೇಕಾಯಿತು.

ಈ ಘಟನೆ ನಡೆದದ್ದು 1965ರಲ್ಲಿ. ಹೀಗಾಗಿಯೇ ಅಸಲ್ ಉತ್ತರ್ ಕದನಕ್ಕೆ ಅಷ್ಟು ಮಹತ್ವ. ಏಕೆಂದರೆ ಭಾರತದ ಅರ್ಥ ವ್ಯವಸ್ಥೆ, ಮಿಲಿಟರಿ ಶಕ್ತಿಗಳು 2021ರಲ್ಲಿ ಇದ್ದಂತೆ 1965ರಲ್ಲಿ ಇರಲಿಲ್ಲ. 1962ರಲ್ಲಿ ಚೀನಾ ಎದುರು ಸೋತಿದ್ದ ಭಾರತಕ್ಕೆ ಹತ್ತಾರು ಸಮಸ್ಯೆಗಳಿದ್ದವು. ಸೇನೆಯನ್ನು ಮರುವಿಂಗಡಿಸಿ, ಪುನರ್​ ಸಂಘಟಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಅಮೆರಿಕ, ರಷ್ಯಾದಿಂದ ನಿರೀಕ್ಷೆಯಂತೆ ರಕ್ಷಣಾ ವ್ಯವಹಾರಗಳಿಗೆ ಸಹಾಯ ಒದಗುತ್ತಿರಲಿಲ್ಲ. ಪಾಕಿಸ್ತಾನದ ಪರ ಅಮೆರಿಕ ವರ್ತಿಸುತ್ತಿತ್ತು. ರಕ್ಷಣಾ ಉಪಕರಣಗಳ ದೇಶೀಯ ಉತ್ಪಾದನೆಯೂ ಸಶಸ್ತ್ರಪಡೆಗಳ ಬೇಡಿಕೆಯನ್ನು ಈಡೇರಿಸುವ ಸ್ಥಿತಿಯಲ್ಲಿ ಇರಲಿಲ್ಲ.

ಇದೇ ಹೊತ್ತಿಗೆ ಪಾಕಿಸ್ತಾನವು ಹೊಸ ಟ್ಯಾಂಕ್​​ ಹಾಗೂ ಯುದ್ಧ ವಿಮಾನಗಳ ಬಲದಿಂದ ಬೀಗುತ್ತಿತ್ತು. ಸಂಕಷ್ಟದಲ್ಲಿರುವ ಭಾರತವನ್ನು ಹಣಿಯಬೇಕೆಂಬ ಆಸೆ ಅಲ್ಲಿನ ಸರ್ಕಾರ ಹಾಗೂ ಸೇನಾ ನಾಯಕತ್ವದ ಚುಕ್ಕಾಣಿ ಹಿಡಿದವರಲ್ಲಿ ಮೊಳೆತಿತ್ತು. ಇದಕ್ಕೆ ತಕ್ಕ ತಂತ್ರಗಳನ್ನು ಹೂಡುತ್ತಿದ್ದ ಪಾಕಿಸ್ತಾನ ಏಕಾಏಕಿ ಭಾರತದ ಮೇಲೆ ಆಕ್ರಮಣ ಮಾಡಿತ್ತು. ಆದರೆ ಪಾಕಿಸ್ತಾನದ ಯೋಚನೆಯಲ್ಲಿದ್ದ ಒಂದೇ ಒಂದು ಲೋಪವೆಂದರೆ ಅದು ಭಾರತೀಯ ಯೋಧರ ಹೋರಾಟದ ಕೆಚ್ಚನ್ನು ಸರಿಯಾಗಿ ಅಂದಾಜು ಮಾಡಿರಲಿಲ್ಲ. ಎಂಥದ್ದೇ ಅತ್ಯಾಧುನಿಕ ಉಪಕರಣಗಳಿದ್ದರೂ ಯುದ್ಧಗಳಲ್ಲಿ ಗೆಲುವು ನಿರ್ಣಯಿಸುವುದು ರಣತಂತ್ರ ರೂಪಿಸುವ ಸೇನಾ ನಾಯಕರ ಬುದ್ಧಿವಂತಿಕೆ ಮತ್ತು ಕದನಕಣದಲ್ಲಿ ನಿಂತು ಹೋರಾಡುವ ಯೋಧರ ಸ್ಥೈರ್ಯ ಮತ್ತು ಧೈರ್ಯ.

1965ರ ಭಾರತ-ಪಾಕ್ ಯುದ್ಧದ ನಿರ್ಣಾಯಕ ಕ್ಷಣಗಳಲ್ಲಿ ದೃಢವಾಗಿ ನಿಂತ ಭಾರತೀಯ ಸೇನೆಯ ಸ್ಥೈರ್ಯದ ನೆನಪಿಗೆ ಐತಿಹಾಸಿಕ ಸಾಕ್ಷಿಯಾಗಿದೆ ಅಸಲ್ ಉತ್ತರ್. ಈ ಯುದ್ಧದಲ್ಲಿ ಸೇನೆಯ ಯುದ್ಧೋತ್ಸಾಹ ಹೆಚ್ಚಿಸಿದ್ದು 4ನೇ ಗ್ರೇನೇಡಿಯರ್ಸ್​ನ ಕಂಪನಿ ಕ್ವಾರ್ಟರ್ ಮಾಸ್ಟರ್ ಹವಾಲ್ದಾರ್ (Company Quarter Master Havildar – CQMH) ಅಬ್ದುಲ್ ಹಮೀದ್ ಅವರ ಕೆಚ್ಚಿನ ಹೋರಾಟ. ಪ್ಯಾಟನ್ ಟ್ಯಾಂಕ್​ಗಳಂಥ ಅತ್ಯಾಧುನಿಕ ಯುದ್ಧಯಂತ್ರಗಳ ಎದುರು ಇವರ ತೆಗೆದುಕೊಂಡು ಹೋಗಿದ್ದ ಜೀಪ್ ಮೌಂಟ್ ಗನ್ ಒಂದು ಆಟಿಕೆಯಂತಿತ್ತು. ಕಬ್ಬಿನಗದ್ದೆಯಲ್ಲಿ ವ್ಯೂಹಕಟ್ಟಿಕೊಂಡು ನಿಂತಿದ್ದ ಟ್ಯಾಂಕ್​ಗಳಿಗೆ ಎದೆಯೊಡ್ಡಿ ನಡೆಸಿದ ಏಕಾಂಗಿ ಹೋರಾಟದಲ್ಲಿ 7 ಪ್ಯಾಟನ್ ಟ್ಯಾಂಕ್​ಗಳನ್ನು ನಾಶಪಡಿಸಿ ಭಾರತದ ಗೆಲುವಿಗೆ ತಮ್ಮ ಬಲಿದಾನದಿಂದಲೇ ದಿಟ್ಟ ಮುನ್ನುಡಿ ಬರೆದರು. ಒಂದು ದೇಶದ ಟ್ಯಾಂಕ್ ಪಡೆಯು ವ್ಯೂಹ ಕಟ್ಟಿಕೊಂಡು ಹೋರಾಡಿದಾಗ ಎದುರಾಳಿ ಸೇನೆಯ ಟ್ಯಾಂಕ್​ಗಳನ್ನು ನಾಶಪಡಿಸುವಷ್ಟು ಟ್ಯಾಂಕ್​ಗಳನ್ನು ಇವು ಓಬಿರಾಯನ ಕಾಲದ ಜೀಪ್​ಮೌಂಟ್ ಗನ್ ಹಿಡಿದು ಸುಟ್ಟು ಹಾಕಿದ್ದರು.

ಹಮೀದ್ ಅವರ ಸಾಧನೆಯನ್ನು ಗೌರವಿಸಿ ಭಾರತ ಸರ್ಕಾರವು ಅವರಿಗೆ ಮರಣೋತ್ತರ ಪರಮವೀರ ಚಕ್ರ ಪುರಸ್ಕಾರ ನೀಡಿ ಗೌರವಿಸಿತ್ತು. ಅವರ ಸಮಾಧಿ ಅಸಲ್ ಉತ್ತರ್​ನಲ್ಲಿಯೇ ಇದೆ. ಇಡೀ ಜಗತ್ತು ನಿಬ್ಬೆರಗಾಗಿ ನೋಡಿದ ಭಾರತೀಯ ಸೇನೆಯ ಮಹತ್ವದ ಗೆಲುವಿಗೆ ಮುನ್ನುಡಿ ಬರೆದ ಅವರ ಹೋರಾಟದ ಕಥೆಯನ್ನು ಸುಂದರ ಸ್ವಾರಕದ ಮೂಲಕ ಸೇನೆಯು ಅಜರಾಮರಗೊಳಿಸಿದೆ.

ಇದನ್ನೂ ಓದಿ: ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಯುದ್ಧನೌಕೆ ವಿಕ್ರಾಂತ್​

Abdul-Hameed

ದೆಹಲಿ ಯುದ್ಧ ಸ್ಮಾರಕದಲ್ಲಿರುವ ಅಬ್ದುಲ್ ಹಮೀದ್​ ಅವರ ಕಂಚಿನ ಪುತ್ಥಳಿ (ಎಡಚಿತ್ರ) ಮತ್ತು ಪಂಜಾಬ್​ನ ಅಸಲ್ ಉತ್ತರ್​ನಲ್ಲಿ ಸ್ಮಾರಕದ ಮಾಹಿತಿ ಫಲಕ

1965ರ ಯುದ್ಧದ ಮತ್ತು ಅದರಲ್ಲಿ ಅಬ್ದುಲ್ ಹಮೀದ್ ವಹಿಸಿದ ಪಾತ್ರವೇನು? ಇಲ್ಲಿದೆ ವಿವರ…

ಪಂಜಾಬ್​ನ ತರ್ನ್​ ತಾರನ್ ಜಿಲ್ಲೆಯ ಖೆಕರನ್-ಭಿಕ್ಕಿವಿಂಡ್ ರಸ್ತೆಯ ಚೀಮಾ ಗ್ರಾಮದ ಹೊರವಲಯದಲ್ಲಿ ಸಿಕ್ಯುಎಂಎಚ್ ಅಬ್ದುಲ್ ಹಮೀದ್ ಅವರ ಸಮಾಧಿ ಮತ್ತು ಅಸಲ್ ಉತ್ತರ್ ಯುದ್ಧ ಸ್ಮಾರಕ ಇದೆ. ಭಾರತದ ಗಡಿ ಠಾಣೆಗಳನ್ನು ನಾಶಪಡಿಸಿದ್ದ ಪಾಕಿಸ್ತಾನ ಸೇನೆಯು ಇದೇ ಪ್ರದೇಶದಿಂದ ತನ್ನ ಸಶಸ್ತ್ರ ತುಕಡಿಗಳನ್ನು ನುಗ್ಗಿಸಿ, ದೊಡ್ಡ ಮಟ್ಟದ ಭೂಪ್ರದೇಶ ವಶಪಡಿಸಿಕೊಳ್ಳಲು ಯತ್ನಿಸಿತ್ತು. ಹಠಾತ್ತನೆ ಮುಂದೊತ್ತಿ ಬಂದ ಪಾಕಿಸ್ತಾನದ ಪಡೆಗಳ ಎದುರು ಭಾರತೀಯ ಪಡೆಗಳು ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ದೃಢವಾಗಿ ನಿಂತು ಕಾದಾಡಿದವು. ಭಾರತವನ್ನು ಗೆಲ್ಲಲೆಂದು ತಂದಿದ್ದ ಟ್ಯಾಂಕ್​ಗಳನ್ನೂ ಇಲ್ಲಿಯೇ ಬಿಟ್ಟು ಪಾಕಿಸ್ತಾನಿ ಸೈನಿಕರು ಓಡಿ ಹೋದರು. ಅಂದಿನ ಕಾಲಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದ, ಯಾವುದೇ ಸೇನೆಯ ಮಹತ್ವದ ಶಕ್ತಿ ಎಂದು ಪರಿಗಣಿಸುತ್ತಿದ್ದ ಪ್ಯಾಟನ್ ಟ್ಯಾಂಕ್​ಗಳ ಭಾರತದ ವಶವಾದವು. ಜೊತೆಗೆ ಪಾಕಿಸ್ತಾನಿ ಸೇನೆಯ ಅಧಿಕಾರಿಗಳು ಮತ್ತು ಸೈನಿಕರು ದೊಡ್ಡಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೆರೆ ಸಿಕ್ಕರು.

ಈ ಯುದ್ಧದಲ್ಲಿ ಭಾರತಕ್ಕೆ ಗೆಲುವು ಒಲಿಯಲು ಮುಖ್ಯ ಕಾರಣರಾದ ಅಬ್ದುಲ್ ಹಮೀದ್ ಅವರ ಸಮಾಧಿಯನ್ನು ಸೇನೆಯ 7ನೇ ಇನ್​​ಫೆಂಟ್ರಿ ಡಿವಿಷನ್ ನಿರ್ವಹಿಸುತ್ತಿದೆ. ವರ್ಷಕ್ಕೊಮ್ಮೆ ಸರಳ ಸಮಾರಂಭದ ಮೂಲಕ ರಣಕಲಿಯನ್ನು ನೆನಯಲಾಗುತ್ತದೆ. ಈ ವರ್ಷವೂ ಈಚೆಗಷ್ಟೇ ಅಂಥದ್ದೊಂದು ಸಮಾರಂಭ ಸಮಾರಂಭ ನಡೆಯಿತು. ಯುದ್ಧ ನಡೆಯುವ ಮೊದಲೂ ಈ ಪ್ರದೇಶದಲ್ಲಿ ‘ಅಸಲ್ ಉತಾಡ್’ ಹೆಸರಿನ ಹಳ್ಳಿಯೊಂದು ಇತ್ತು. ಯುದ್ಧದ ನಂತರ ಆ ಹಳ್ಳಿಯ ಹೆಸರು ‘ಅಸಲ್ ಉತ್ತರ್’ (ನಿಜವಾದ ಉತ್ತರ) ಎಂದೇ ಜನಜನಿತವಾಯಿತು.

ಅಬ್ದುಲ್ ಹಮೀದ್​ರ ಸಾಧನೆ ಸಾರುವ ಫಲಕ

ಅಸಲ್ ಉತ್ತರ್ ಕದನ ಅಷ್ಟೇಕೆ ಜನಜನಿತವಾಯ್ತು? 1965ರ ಯುದ್ಧದ ಆರಂಭದ ದಿನಗಳವು. ಸೆಪ್ಟೆಂಬರ್ 6ರಂದು ಜಮ್ಮು ಮತ್ತು ಕಾಶ್ಮೀರದ ಚಾಂಬ್ ವಲಯದಲ್ಲಿ ಭಾರತೀಯ ಸೇನೆ ನಡೆಸಿದ ಹಠಾತ್ ದಾಳಿಯಿಂದ ಪಾಕಿಸ್ತಾನಕ್ಕೆ ಅಚ್ಚರಿಯಾಗಿತ್ತು. ಖೇಮ್​ಕರನ್ ವಲಯದ ಹಲವು ಠಾಣೆಗಳಿಂದ ಪಾಕಿಸ್ತಾನ ಸೇನೆಯು ಹಿಂದೆ ಸರಿಯಬೇಕಾಯಿತು. ಆದರೆ ಚುರುಕಾಗಿ ಮರುಸಂಘಟನೆಗೊಂಡ ಪಾಕ್ ಸೇನೆ, ತನ್ನ 1ನೇ ಸಶಸ್ತ್ರ ಡಿವಿಷನ್​ ಅನ್ನು ಪ್ರತಿದಾಳಿಗೆ ನಿಯೋಜಿಸಿತು. ಪಂಜಾಬ್​ ಪ್ರಾಂತ್ಯದ ರಾಯ ಮತ್ತು ಬಿಯಾಸ್ ಪಟ್ಟಣಗಳನ್ನು ವಶಪಡಿಸಿಕೊಳ್ಳುವ ಮೂಲಕ ಬಿಯಾಸ್ ಸೇತುವೆಯ ಹಿಡಿತ ಸಾಧಿಸುವುದು ಈ ಡಿವಿಷನ್​ಗೆ ಕೊಟ್ಟಿದ್ದ ಗುರಿ. ಒಮ್ಮೆ ಈ ಸೇತುವೆಯ ಮೇಲೆ ಪಾಕ್ ಸೇನೆಗೆ ಹಿಡಿತ ಸಿಕ್ಕಿದ್ದರೆ ಪಂಜಾಬ್​ ರಾಜ್ಯದ ಅರ್ಧಕ್ಕೂ ಹೆಚ್ಚಿನ ಭೂ ಪ್ರದೇಶವು ಭಾರತದೊಂದಿಗೆ ಸಂಬಂಧ ಕಡಿತುಕೊಳ್ಳುತ್ತಿತ್ತು.

ಪಾಕ್​ಸೇನೆಯ ಚುರುಕಿನ ಮರುಸಂಘಟನೆ ಮತ್ತು ಕ್ಷಿಪ್ರಗತಿಯಲ್ಲಿ ಅವರು ಮಾಡಿದ ದಾಳಿಯನ್ನು ಎದುರಿಸಲು ಗಡಿಯಲ್ಲಿ ಕಾವಲಿದ್ದ ಭಾರತದ 4ನೇ ಮೌಂಟೇನ್ ಡಿವಿಷನ್ ಸೈನಿಕರು ಸಿದ್ಧರಿರಲಿಲ್ಲ. ಗಡಿಯಿಂದ 5 ಕಿಮೀ ದೂರದಲ್ಲಿರುವ ಖೇಮ್ ಕರನ್ ಮತ್ತು 7 ಕಿಮೀ ದೂರದಲ್ಲಿರುವ ಅಸಲ್ ಉತ್ತರ್ ಹಳ್ಳಿಗಳು ಪಾಕಿಸ್ತಾನ ಸೇನೆಯ ವಶವಾದವು. ಸೆಪ್ಟೆಂಬರ್ 8ರಿಂದ 10ರವರೆಗೆ ನಡೆದ ಕದನದಲ್ಲಿ ಪಾಕಿಸ್ತಾನದ ದಾಳಿಯನ್ನು ದೃಢವಾಗಿ ಹಿಮ್ಮೆಟ್ಟಿಸಲಾಯಿತು. ಖೇಮ್​ಕರನ್​ವರೆಗೂ ಪಾಕಿಸ್ತಾನದ ಸೈನಿಕರು ಭಾರತೀಯ ಸೈನಿಕರು ಬೆನ್ನಟ್ಟಿ ಹೋಗಿದ್ದರು.

ಆ ಕಾಲದಲ್ಲಿ ಪಾಕಿಸ್ತಾನ ಸೇನೆಯ ಅತಿದೊಡ್ಡ ಶಕ್ತಿಯೆನಿಸಿದ್ದ ಅಮೆರಿಕ ನಿರ್ಮಿತ 97 ಪ್ಯಾಟನ್​ ಟ್ಯಾಂಕ್​ಗಳನ್ನು ಪಾಕಿಸ್ತಾನ ಸೇನೆಯು ಭಾರತದ ನೆಲದಲ್ಲಿ ಕಳೆದುಕೊಂಡಿತ್ತು. ಪಾಕ್ ಸೇನೆಯ ಒಂದಿಡೀ ರೆಜಿಮೆಂಟ್​ನಷ್ಟು ಸೈನಿಕರು ಭಾರತಕ್ಕೆ ಸೆರೆಸಿಕ್ಕರು ಅಥವಾ ಯುದ್ಧದಲ್ಲಿ ಹತರಾದರು. ವಶಪಡಿಸಿಕೊಂಡ ಟ್ಯಾಂಕ್​ಗಳನ್ನು ಯುದ್ಧದ ನಂತರ ಭಾರತೀಯ ಸೇನೆಯು ಭಿಕ್ಕಿವಿಂಡ್​ ಎಂಬಲ್ಲಿ ಪ್ರದರ್ಶಿಸಿತು. ಅಸಲ್ ಉತ್ತರ್ ಹಳ್ಳಿಗೆ 10 ಕಿಮೀ ದೂರದ ಈ ಸ್ಥಳವನ್ನು ನಂತರದ ದಿನಗಳಲ್ಲಿ ‘ಪ್ಯಾಟನ್ ನಗರ್’ ಎಂದೇ ಹೆಸರಿಸಲಾಯಿತು.

ಇದನ್ನೂ ಓದಿ: Explainer | Arjun Mark 1A Tank: ಭೂಸೇನೆಗೆ ಅರ್ಜುನ್​ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?

ಅಬ್ದುಲ್ ಹಮೀದ್ ಗೌರವಾರ್ಥ ಪ್ರಕಟಿಸಿರುವ ಅಂಚೆಚೀಟಿ

ಅಬ್ದುಲ್ ಹಮೀದ್ ಅವರ ಪಾತ್ರವೇನು? ಅಸಲ್ ಉತ್ತರ್ ಸುತ್ತಮುತ್ತಲು ಹರಡಿಕೊಂಡಿದ್ದ ಪಾಕಿಸ್ತಾನದ ಟ್ಯಾಂಕ್​ಗಳನ್ನು ಹುಡುಕಿ ಬೇಟೆಯಾಡಲೆಂದು ಅಬ್ದುಲ್ ಹಮೀದ್ ಅವರನ್ನು ಟ್ಯಾಂಕ್ ನಾಶಕ ಗನ್​ ಅಳವಡಿಸಿದ ಜೀಪ್​ನಲ್ಲಿ ಕಳುಹಿಸಲಾಗಿತ್ತು. ಈ ಪ್ರದೇಶದಲ್ಲಿ ಗಸ್ತು ತಿರುಗಲೆಂದು ಬಂದ ಪಾಕಿಸ್ತಾನದ ಕಮಾಂಡರ್​ಗಳ ಮೇಲೆ ಭಾರತೀಯ ಸೇನೆಯ 4ನೇ ಗ್ರೆನೇಡಿಯರ್ಸ್​ ಯೋಧರು ಗುಂಡು ಹಾರಿಸಿದರು. ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಪಾಕಿಸ್ತಾನ ಫಿರಂಗಿ ದಳದ ಕಮಾಂಡರ್ ಎ.ಆರ್.ಶಮಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಭಾರತೀಯ ಸೇನೆಯು ಸಕಲ ಮಿಲಿಟರಿ ಗೌರವದೊಂದಿಗೆ ನೆರವೇರಿಸಿತು.

ಸೆಪ್ಟೆಂಬರ್ 9 ಮತ್ತು 10ರಂದು ಸಾಕಷ್ಟು ಟ್ಯಾಂಕ್​ಗಳನ್ನು ಅಬ್ದುಲ್ ಹಮೀದ್ ನಾಶಪಡಿಸಿದರು. ಇಲ್ಲಿನ ಕಬ್ಬಿನ ಗದ್ದೆಗಳಲ್ಲಿದ್ದ ಪಾಕಿಸ್ತಾನ ಸೇನೆಯು ಟ್ಯಾಂಕ್​ಗಳನ್ನು ಗುರುತಿಸಿದರು. ಪಾಯಿಂಟ್ ಬ್ಲಾಂಕ್ ರೇಂಜ್​ನಿಂದ ಅಂದರೆ ಅತ್ಯಂತ ಸನಿಹದಿಂದ ಕ್ಷಿಪ್ರಗತಿಯಲ್ಲಿ ನಡೆಸಿದ ದಾಳಿಗೆ 4 ಪ್ಯಾಟನ್ ಟ್ಯಾಂಕ್​ಗಳು ನಾಶವಾದವು. ಮತ್ತೊಂದು ಟ್ಯಾಂಕ್ ನಿಷ್ಕ್ರಿಯಗೊಂಡಿತು. ಎರಡು ದಿನಗಳಲ್ಲಿ ಒಟ್ಟು 8 ಟ್ಯಾಂಕ್​ಗಳನ್ನು ಹಮೀದ್ ನಾಶಪಡಿಸಿದ್ದರು. ಇದೇ ವೇಳೆ ಪಾಕಿಸ್ತಾನದ ಟ್ಯಾಂಕ್​ ಒಂದು ಉಡಾಯಿಸಿದ ಶೆಲ್ ಅವರಿದ್ದ ಜೀಪ್​ಗೆ ನೇರವಾಗಿ ಅಪ್ಪಳಿಸಿದ್ದರಿಂದ ಜೀಪ್​ನೊಂದಿಗೆ ಅವರ ದೇಹವೂ ಛಿದ್ರವಾಯಿತು.

ಆ ಕಾಲದಲ್ಲಿ ಅಮೆರಿಕ ನಿರ್ಮಿತ ಪ್ಯಾಟನ್ ಟ್ಯಾಂಕ್​ಗಳು ಎಂದರೆ ಎಂದಿಗೂ ಸೋಲದ ಯುದ್ಧಯಂತ್ರಗಳು ಎಂಬ ಭಾವನೆ ಜಗತ್ತಿನ ಹಲವು ದೇಶಗಳ ಸೈನಿಕರಲ್ಲಿ ಮನೆಮಾಡಿತ್ತು. ತಮ್ಮ ಧೈರ್ಯ ಮತ್ತು ದಿಟ್ಟ ಹೋರಾಟದಿಂದ ಈ ಭ್ರಮೆಯನ್ನು ಕಳಚಿದವರು ಅಬ್ದುಲ್ ಹಮೀದ್. ಅವರಿಗೆ ಮರಣೋತ್ತರ ಪರಮವೀರ ಚಕ್ರ ಘೋಷಿಸುವ ಮೂಲಕ ಭಾರತ ಸರ್ಕಾರವು ಅವರ ಸ್ಥೈರ್ಯವನ್ನು ಗೌರವಿಸಿತು. ಅಸಲ್ ಉತ್ತರ್ ಯುದ್ಧ ಸ್ಮಾರಕದ ಪ್ರವೇಶ ದ್ವಾರದ ಸಮೀಪ ಇಂದಿಗೂ ಪಾಕ್ ಸೇನೆಯ ಟ್ಯಾಂಕ್ ಒಂದನ್ನು ಕಾವಲಿಗೆ ನಿಲ್ಲಿಸಲಾಗಿದೆ. ಅಂದು, ಅಂದರೆ 1965ರಲ್ಲಿ ಅಬ್ದುಲ್ ಹಮೀದ್​ರಂಥ ಸಾವಿರಾರು ಯೋಧರು ಪ್ಯಾಟನ್​ ಟ್ಯಾಂಕ್​ಗಳಿಗೆ ಹೆದರಿ ತುಸು ಹಿಂಜರಿದಿದ್ದರೂ ಇಂದು ಭಾರತದ ಭೂಪಟ ಹೀಗೆ ಇರುತ್ತಿರಲಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಂತೆ ಪಾಕ್ ಆಕ್ರಮಿತ ಪಂಜಾಬ್ ಎಂಬ ಮತ್ತೊಂದು ಪ್ರಾಂತ್ಯ ಪಾಕಿಸ್ತಾನದ ಭೂಪಟದಲ್ಲಿ ಸ್ಥಾನ ಪಡೆಯುತ್ತಿತ್ತು.

ಅಸಲ್ ಉತ್ತರ್ ಕದನ ಕಣ 1965ರ ಭಾರತ-ಪಾಕ್ ಕದನದಲ್ಲಿ ಭಾರತೀಯ ಸೇನೆಯನ್ನು ಲೆಫ್ಟಿನೆಂಟ್ ಜನರಲ್ ಹರ್​ಬಕ್ಷ್ ಸಿಂಗ್ ಮತ್ತು ಲೆಫ್ಟಿನೆಂಟ್ ಜನರಲ್ ಜೆ.ಎಸ್.ಧಿಲ್ಲನ್ ಮುನ್ನಡೆಸಿದ್ದರು. ಬ್ರಿಗೇಡಿಯರ್ ಥಾಮಸ್ ಕೆ.ತ್ಯಾಗರಾಜ್, ಮೇಜರ್ ಜನರಲ್ ಗುಬಕ್ಷ್ ಸಿಂಗ್ ಸೇನಾ ತಂತ್ರಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಭಾರತೀಯ ಸೇನೆಯು ಒಟ್ಟು 135 ಟ್ಯಾಂಕ್​ಗಳನ್ನು ಕದನಕ್ಕಿಳಿಸಿತ್ತು. ಬಹುತೇಕ ಟ್ಯಾಂಕ್​ಗಳು ನಿರ್ಮಾಣ ಮತ್ತು ತಂತ್ರಜ್ಞಾನದ ದೃಷ್ಟಿಯಿಂದ ತೀರಾ ಹಳೆಯದಾಗಿದ್ದವು, ಜೀವನಚಕ್ರದ ಕೊನೆಯ ಹಂತ ತಲುಪಿದ್ದವು.

ಪಾಕಿಸ್ತಾನ ಸೇನೆಯನ್ನು ಮೇಜರ್ ಜನರಲ್ ನಾಸಿರ್ ಖಾನ್ ಮತ್ತು ಬ್ರಿಗೇಡಿಯರ್ ಎ.ಆರ್.ಶಮಿ ಮುನ್ನಡೆಸಿದರು. ಒಟ್ಟು 264 ಟ್ಯಾಂಕ್​ಗಳನ್ನು ಪಾಕಿಸ್ತಾನದ ಕದನಕ್ಕೆ ತಂದಿತ್ತು. ಮೇಲ್ನೋಟಕ್ಕೆ ಪಾಕಿಸ್ತಾನವೇ ಯುದ್ಧದಲ್ಲಿ ಗೆಲ್ಲಬಹುದು ಎಂಬ ಭಾವನೆ ಮೂಡಿತ್ತು.

ಆದರೆ ಭಾರತೀಯ ಸೇನೆಯ ಕಮಾಂಡರ್​ಗಳು ರೂಪಿಸಿದ ನಿಖರ ಯುದ್ಧತಂತ್ರ ಮತ್ತು ಸೈನಿಕರು ತೋರಿದ ಸ್ಥೈರ್ಯ ಮತ್ತು ಸಾವಿನೆದುರು ದೃಢವಾಗಿ ನಿಂತು ಹೋರಾಡುವ ಮನೋಭಾವದಿಂದ ಭಾರತಕ್ಕೆ ಗೆಲುವು ದಕ್ಕಿತು. 1965ರ ಯುದ್ಧದಲ್ಲಿ ಪಾಕಿಸ್ತಾನ ಅನುಭವಿಸಿದ ಸಾಲುಸಾಲು ಸೋಲಿಗೆ ಅಸಲ್ ಉತ್ತರ್ ಮುನ್ನುಡಿ ಬರೆಯಿತು.

(Role of Indian Army Soldier Abdul Hamid in 1965 Battle of Asal Uttar Which Changed Fate of War)

ಇದನ್ನೂ ಓದಿ: ಟಿಬೆಟ್ ಪ್ರಸ್ಥಭೂಮಿಯಲ್ಲಿ ಚೀನಾ ಸೇನೆಯ ತಾಲೀಮು: ಉದ್ದೇಶದ ಬಗ್ಗೆ ಮೂಡಿವೆ ಹಲವು ಪ್ರಶ್ನೆಗಳು

ಇದನ್ನೂ ಓದಿ: ಭಾರತ-ಚೀನಾ ಸಂಬಂಧದ ಮೇಲೆ ಗಾಲ್ವಾನ್ ಸಂಘರ್ಷದ ಕರಿನೆರಳು; ಅಫ್ಘಾನ್ ಗೊಂದಲದ ನಡುವೆ ಚೀನಾ ಸಂಚು ನೆನಪಿಸಿಕೊಂಡ ವಿದೇಶಾಂಗ ಸಚಿವ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada