ಭಾರತ-ಚೀನಾ ಸಂಬಂಧದ ಮೇಲೆ ಗಾಲ್ವಾನ್ ಸಂಘರ್ಷದ ಕರಿನೆರಳು; ಅಫ್ಘಾನ್ ಗೊಂದಲದ ನಡುವೆ ಚೀನಾ ಸಂಚು ನೆನಪಿಸಿಕೊಂಡ ವಿದೇಶಾಂಗ ಸಚಿವ
ಗಾಲ್ವಾನ್ ಸಂಘರ್ಷದ ನಂತರ ಎರಡೂ ದೇಶಗಳ ಸಂಬಂಧ ಸಂಪೂರ್ಣ ಬೇರೆಯೇ ದಿಕ್ಕಿನತ್ತ ಹೆಜ್ಜೆ ಹಾಕಿತು ಎಂದು ಜೈಶಂಕರ್ ಹೇಳಿದರು
ಕ್ಯಾನ್ಬೆರಾ: ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುವ ಸಂಸ್ಥೆಗಳು ಸುಧಾರಣೆಗೆ ಹಿಂಜರಿಯುತ್ತಿರುವ ಹೊತ್ತಿನಲ್ಲಿ ಕ್ವಾಡ್ (QUAD) ಸಂಘಟನೆಯು ಒಂದು ಅನುಕರಣೀಯ ಮಾದರಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು. ಏಕಸ್ವಾಮ್ಯದ ದಿನಗಳು ಮುಗಿದಿವೆ. ದ್ವಿಪಕ್ಷೀಯ ಒಪ್ಪಂದಗಳು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಬಹುಪಕ್ಷೀಯ ವ್ಯವಸ್ಥೆ (multilateralism) ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಜೆಜಿ ಕ್ರಾಫ್ಫೋರ್ಡ್ ಸ್ಮರಣೆಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಕ್ಷಿಪ್ರಗತಿಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೈಶಂಕರ್ ಅವರ ಹೇಳಿಕೆಗಳು ಮಹತ್ವ ಪಡೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 23ರಂದು ಅಮೆರಿಕ ರಾಜಧಾನಿ ವಾಷಿಂಗ್ಟನ್ನಲ್ಲಿ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿಯಾಗಲಿದ್ದಾರೆ. ಸೆಪ್ಟೆಂಬರ್ 24ರಂದು ಕ್ವಾಡ್ ಸಹಭಾಗಿಗಳನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಮಹಾಧಿವೇಷನದಲ್ಲಿ ಪಾಲ್ಗೊಂಡು, ಭಾಷಣ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ನಿಗದಿಯಾಗಿರುವ ಈ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಜೈಶಂಕರ್ ಅವರ ಹೇಳಿಕೆಯು ಮಹತ್ವ ಪಡೆದಿದೆ.
ಜಾಗತಿಕ ರಕ್ಷಣಾ ಸವಾಲುಗಳು ಮತ್ತು ಕೊರೊನಾ ವೈರಸ್ ಸೋಂಕಿನಿಂದ ಉಂಟಾದ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಡೊ-ಪೆಸಿಫಿಕ್ ಮತ್ತು ಭಾರತ-ಆಸ್ಟ್ರೇಲಿಯಾ ಸಂಬಂಧಗಳ ಬಗ್ಗೆ ಮಾತನಾಡಿದ ಜೈಶಂಕರ್, ಏಷ್ಯಾ ಮತ್ತು ಇಂಡೊ-ಪೆಸಿಫಿಕ್ ವಲಯ ವಿಸ್ತಾರವಾಗಿದೆ. ಇಲ್ಲಿ ವೈವಿಧ್ಯತೆ ಹೇರಳವಾಗಿದ್ದು, ಏಕಸ್ವಾಮ್ಯತೆಗೆ ಅವಕಾಶ ಕಡಿಮೆ ಎಂದರು.
ಏಷ್ಯಾದ ದೇಶಗಳು ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಹೆಚ್ಚು ಒತ್ತು ನೀಡಿದವು. ಈ ಆರ್ಥಿಕ ಬೆಳವಣಿಗೆಯ ಪಯಣದಲ್ಲಿ ರಾಯಕೀಯ ಸಹಭಾಗಿತ್ವಕ್ಕಾಗಿ ಹೆಚ್ಚು ಗಮನ ಕೊಡಲಿಲ್ಲ. ಕ್ವಾಡ್ ಅಥವಾ ಕ್ವಾಡ್ರಿಲೇಟ್ರಲ್ ಸೆಕ್ಯುರಿಟಿ ಡೈಲಾಗ್ ಎನ್ನುವುದು ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತ ದೇಶಗಳು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಿಕೊಂಡಿರುವ ಒಪ್ಪಂದವಾಗಿದೆ. 2007ರಿಂದಲೇ ಈ ಒಪ್ಪಂದ ಚಾಲ್ತಿಯಲ್ಲಿತ್ತು. ಆದರೆ ಇಂಡೊ-ಪೆಸಿಫಿಕ್ ವಲಯದಲ್ಲಿ ಚೀನಾದ ಪ್ರಭಾವ ಹೆಚ್ಚಾದ ನಂತರ ಕ್ವಾಡ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.
ಮುಂದಿನ ಬೆಳವಣಿಗೆಗಳನ್ನು ಗುರುತಿಸಲು ನಾವು ಯತ್ನಿಸುತ್ತಿದ್ದೇವೆ. ಈ ಯತ್ನದಲ್ಲಿ ಇಂಡೊ-ಪೆಸಿಫಿಕ್ ವಲಯವು ಮುಂಚೂಣಿಯಲ್ಲಿರುತ್ತದೆ. ಕಳೆದ ಕೆಲ ದಶಕಗಳಿಂದೀಚೆಗೆ ಏಷ್ಯಾದಲ್ಲಿ ಯೂರೋಪ್ಗಿಂತಲೂ ಹೆಚ್ಚು ಬದಲಾವಣೆಗಳು ಕಂಡುಬಂದಿವೆ. ಇದರ ಪ್ರಾದೇಶಿಕ ಸಂಸ್ಕೃತಿ ಹೆಚ್ಚು ಸಾಂಪ್ರದಾಯಿಕವಾದುದು ಎಂದು ಜೈಶಂಕರ್ ತಿಳಿಸಿದರು.
ಏಷ್ಯಾ-ಪೆಸಿಫಿಕ್ ವಲಯದ ಭದ್ರತಾ ಆತಂಕಗಳ ಬಗ್ಗೆ ಪ್ರಸ್ತಾಪಿಸಿದ ಜೈಶಂಕರ್, ಅಮೆರಿಕವು ತನ್ನ ಸಾಮರ್ಥ್ಯ ನಿರೂಪಿಸಲು ಯತ್ನಿಸುತ್ತಿದೆ. ಈ ಬೆಳವಣಿಗೆಯು ಹಿಂದಿನ ನ್ಯೂನತೆಗಳ ಸಹಿತವಾಗಿಯೇ ಸಮಕಾಲೀನ ಆತಂಕ ಮತ್ತು ಸ್ಪರ್ಧೆ ಎದುರಿಸಲು ಅಮೆರಿಕ ಮಾಡಿಕೊಳ್ಳುತ್ತಿರುವ ಸಿದ್ಧತೆಯ ಭಾಗವಾಗಿದೆ ಎಂದು ಜೈಶಂಕರ್ ಹೇಳಿದರು.
ಎಲ್ಲೆಡೆ ಚೀನಾದ ಪುನರುತ್ಥಾನದ ಪ್ರಭಾವ ಅನುಭವಕ್ಕೆ ಬರುತ್ತಿದೆ. ಅದು ಎಷ್ಟೇ ದೊಡ್ಡದಾಗಿದ್ದರೂ ಸರಿ, ಇದು ಮತ್ತೊಂದು ಶಕ್ತಿ ಉದಯವಷ್ಟೇ ಅಲ್ಲ. ಇದರಲ್ಲಿ ಗಮನಿಸಬೇಕಾದ ಹಲವು ಅಂಶಗಳಿವೆ ಎಂದು ಹೇಳಿದರು.
ಭಾರತ-ಚೀನಾ ಸಂಬಂಧಗಳ ಬಗ್ಗೆ ಮಾತನಾಡಿದ ಜೈಶಂಕರ್, ಭಾರತದ ಹಿಂದಿನ ಪ್ರಧಾನಿ ರಾಜೀವ್ ಗಾಂಧಿ 1988ರಲ್ಲಿ ಚೀನಾಕ್ಕೆ ಭೇಟಿ ನೀಡಿದ್ದ ವಿಚಾರ ಪ್ರಸ್ತಾಪಿಸಿದರು. ಭಾರತವು ಸದಾ ಚೀನಾದೊಂದಿಗೆ ಶಾಂತಿಯುತ ಸಂಬಂಧ ಹೊಂದಲು ಬಯಸುತ್ತದೆ. ಗಡಿಗಳಿಂದ ಸೇನೆ ದೂರ ಇರಬೇಕು ಎಂಬ ಕಾರಣಕ್ಕಾಗಿಯೇ ವಿಶ್ವಾಸವೃದ್ಧಿಯ ಹಲವು ಒಪ್ಪಂದಗಳು ಎರಡೂ ದೇಶಗಳು ನಡುವೆ ಆಗಿದೆ ಎಂದು ಜೈಶಂಕರ್ ಹೇಳಿದರು.
1975ರ ನಂತರ ಭಾರತ-ಚೀನಾ ನಡುವೆ ಹೆಚ್ಚು ಸಂಘರ್ಷಗಳು ಇರಲಿಲ್ಲ. ಗಡಿಯಲ್ಲಿ ಭಾರತಕ್ಕೆ ಸೇರಿದ ಪ್ರದೇಶಗಳಲ್ಲಿ ಹೆಚ್ಚು ಸೌಲಭ್ಯಗಳೂ ಇರಲಿಲ್ಲ. ಆದರೂ ಕಳೆದ ವರ್ಷ ಏನಾಯಿತು ಎಂಬುದು ಜಗತ್ತಿಗೆ ಗೊತ್ತಾಗಿದೆ. ಗಡಿಯಲ್ಲಿ ಚೀನಾ ಸೇನೆಯು ಸಂಪೂರ್ಣ ಕಾರ್ಯಾಚರಣೆಗೆ ಸನ್ನದ್ಧವಾದ ಸ್ಥಿತಿಯಲ್ಲಿಯೇ ಇತ್ತು. ಇದಕ್ಕೆ ಅಂಥ ಒಳ್ಳೆಯ ಕಾರಣಗಳೂ ಇರಲಿಲ್ಲ ಎಂದು ಜೈಶಂಕರ್ ನುಡಿದರು.
ಕಳೆದ ವರ್ಷ ಜೂನ್ ತಿಂಗಳಲ್ಲಿ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಅದ ಸಂಘರ್ಷವು ವಾಸ್ತವ ನಿಯಂತ್ರಣ ರೇಖೆಯ ಎರಡೂ ಬದಿಯಲ್ಲಿ ಹಲವು ಜೀವನಷ್ಟಕ್ಕೆ ಕಾರಣವಾಯಿತು. ಎರಡೂ ದೇಶಗಳ ಸಂಬಂಧ ಅನಂತರ ಸಂಪೂರ್ಣ ಬೇರೆಯೇ ದಿಕ್ಕಿನತ್ತ ಹೆಜ್ಜೆ ಹಾಕಿತು ಎಂದು ಜೈಶಂಕರ್ ಹೇಳಿದರು. ಚೀನಾದೊಂದಿಗನ ಸಂಬಂಧವನ್ನು ಹೇಗೆ ನಿರ್ವಹಿಸಬೇಕು ಎಂಬ ವಿಚಾರವು ಭಾರತದಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ ಎಂದು ಹೇಳಿದರು.
ಕ್ವಾಡ್ ರಕ್ಷಣಾ ಸಂವಾದವನ್ನು ಚೀನಾ ಇಂದಿಗೂ ಗೌರವಿಸುತ್ತಿಲ್ಲ. ನ್ಯಾಟೊ ನೆರಳಲ್ಲಿ ಚೀನಾ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದೇ ಚೀನಾ ಹೇಳುತ್ತಿದೆ. ಆದರೆ ಕ್ವಾಡ್ ಸದಸ್ಯ ರಾಷ್ಟ್ರಗಳು ಚೀನಾ ಬೆದರಿಕೆಯಿಂದಾಚೆಗೂ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತವೆ. ಆರೋಗ್ಯ, ವಿಪತ್ತು ನಿರ್ವಹಣೆ, ಸಾಗರ ಮಾರ್ಗಗಳ ರಕ್ಷಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಕ್ವಾಡ್ ಉಪಯುಕ್ತ ಎಂದು ಸದಸ್ಯ ರಾಷ್ಟ್ರಗಳು ಹೇಳುತ್ತಿವೆ.
(External affairs minister Jaishankar recounts Galwan tension amid Afghanistan Taliban tension)
ಇದನ್ನೂ ಓದಿ: ಅಫ್ಘಾನಿಸ್ತಾನದ ವಿಚಾರದಲ್ಲಿ ಭಾರತವು ಅಮೆರಿಕದೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್
Published On - 10:17 pm, Mon, 6 September 21