‘ಅಫ್ಘಾನ್ನಲ್ಲಿ ಭಾರತದ ಹೂಡಿಕೆ ಮುಂದುವರಿಯಲಿದೆಯಾ’-ಅಮೆರಿಕ ಮಾಧ್ಯಮಗಳ ಈ ಪ್ರಶ್ನೆಗೆ ಎಸ್.ಜೈಶಂಕರ್ ಕೊಟ್ಟ ಚುಟುಕು ಉತ್ತರ ಹೀಗಿದೆ
ಅಫ್ಘಾನಿಸ್ತಾನದಲ್ಲಿರು ಭಾರತೀಯರು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಮರಳುವಂತೆ ಕ್ರಮ ಕೈಗೊಳ್ಳುವುದು ಮೊದಲ ಆದ್ಯತೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಮತ್ತೆ ತಾಲಿಬಾನಿಗಳ ವಶವಾಗಿರುವ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗಳಲ್ಲೂ ವಿಶ್ವದ ಪ್ರತಿರಾಷ್ಟ್ರಗಳೂ ಸೂಕ್ಷ್ಮವಾಗಿ ಗಮನಿಸುತ್ತಿವೆ. ಅದಕ್ಕೆ ಭಾರತವೂ ಹೊರತಾಗಿಲ್ಲ. ಅಫ್ಘಾನಿಸ್ತಾನದ ನಿರಾಶ್ರಿತರಿಗೆ ನೆರವು ನೀಡುವ ದೊಡ್ಡ ಮನಸನ್ನು ಬಹುತೇಕ ರಾಷ್ಟ್ರಗಳು ತೋರಿಸುತ್ತಿವೆ. ಈ ಮಧ್ಯೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಬ್ರಿಟನ್ ವಿದೇಶಾಂಗ ವ್ಯವಹಾರಗಳ ಸಚಿವ ಡೊಮಿನಿಕ್ ರಾಬ್ ಅಫ್ಘಾನ್ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದು, ಅಫ್ಘಾನಿಸ್ತಾನಕ್ಕೆ ನೆರವು ನೀಡಲು ಒಟ್ಟಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
ಅಫ್ಘಾನ್ ಭದ್ರತಾ ವ್ಯವಸ್ಥೆ ತೀವ್ರ ಅಪಾಯದಲ್ಲಿರುವುದರಿಂದ ಅಲ್ಲಿನ ಅನೇಕಾನೇಕರು ನಿರಾಶ್ರಿತರಾಗಿದ್ದಾರೆ. ಅಂಥ ನಿರಾಶ್ರಿತರಿಗೆ ನೆರವು ನೀಡಲು, ತೀವ್ರ ಸಂಕಷ್ಟದಲ್ಲಿರುವ ಸಾಮಾನ್ಯ ಜನರ ಬೆಂಬಲಕ್ಕೆ ನಿಲ್ಲಲು ಭಾರತ ಮತ್ತು ಬ್ರಿಟನ್ ಒಟ್ಟಾಗಿ ಕೆಲಸ ಮಾಡಲು ಎಸ್.ಜೈಶಂಕರ್ ಮತ್ತು ಡೊಮಿನಿಕ್ ಇಬ್ಬರೂ ಪರಸ್ಪರ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಂತ್ರಜ್ಞಾನ, ಶಾಂತಿಪಾಲನೆ ಮತ್ತು ಭಯೋತ್ಪಾದನೆ ನಿಗ್ರಹದ ಕುರಿತಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಲು ಜೈಶಂಕರ್ ಅವರು ಆಗಸ್ಟ್ 16ರಂದೇ ನ್ಯೂಯಾರ್ಕ್ಗೆ ತೆರಳಿದ್ದರು. ಈ ವೇಳೆ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಮತ್ತು ಇತರ ದೇಶಗಳ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ. ಸಭೆಯಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ, ಬೆಳವಣಿಗೆಗಳ ಬಗ್ಗೆಯೇ ಕೇಂದ್ರೀಕರಿಸಿ ಚರ್ಚೆಗಳು ನಡೆದಿವೆ. ಅದಾದ ಬಳಿಕ ಟ್ವೀಟ್ ಮಾಡಿರುವ ಬ್ರಿಟನ್ ವಿದೇಶಾಂಗ ಸಚಿವ ರಾಬ್, ಅಫ್ಘಾನಿಸ್ತಾನದ ಜನರ ಹಿತಾಸಕ್ತಿಯನ್ನು ಕಾಪಾಡಿ, ನಿರಾಶ್ರಿತರಿಗೆ ನೆರವು ನೀಡಲು ಭಾರತ ಮತ್ತು ಯುಕೆ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ.
ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸ್ತಿದ್ದೇವೆ.. ಸಭೆಯ ಬಳಿಕ ನ್ಯೂಯಾರ್ಕ್ನಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಎಸ್.ಜೈಶಂಕರ್, ನಾವು ಅಫ್ಘಾನಿಸ್ತಾನದ ಎಲ್ಲ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದೇವೆ. ಅಲ್ಲಿನ ಜನರಿಗೆ ಸಹಾಯ ಮಾಡಲು ಬದ್ಧರಿದ್ದೇವೆ. ಆದರೆ ಅಪಾಯದ ಪರಿಸ್ಥಿತಿಯಿರುವ ಅಫ್ಘಾನಿಸ್ತಾನದಿಂದ ಭಾರತೀಯರು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಮರಳುವಂತೆ ಕ್ರಮ ಕೈಗೊಳ್ಳುವುದು ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು ತಾಲಿಬಾನ್ ಜತೆ ಭಾರತದ ಸಂಬಂಧ ಹೇಗಿರಲಿದೆ? ಹೇಗೆ ವ್ಯವಹರಿಸಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಎಸ್.ಜೈಶಂಕರ್, ಮುಂದೆ ನೋಡೋಣ..ಈಗಿನ್ನೂ ತಾಲಿಬಾನಿಗಳ ಆಡಳಿತ ಶುರುವಾಗಿದೆ ಎಂದಷ್ಟೇ ಹೇಳಿ ಬಿಟ್ಟರು. ತಾಲಿಬಾನ್ ಜತೆ ಭಾರತ ಸಂಪರ್ಕ ಹೊಂದಲಿದೆಯಾ? ಇಲ್ಲವಾ ಎಂಬುದನ್ನೂ ಸ್ಪಷ್ಟವಾಗಿ ಹೇಳಿಲ್ಲ.
ಹೂಡಿಕೆ ಮುಂದುವರಿಯಲಿದೆಯಾ? ಇನ್ನು ಅಮೆರಿಕ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿಯೇ ಉತ್ತರ ನೀಡುತ್ತ ಬಂದ ಎಸ್.ಜೈಶಂಕರ್ ಮತ್ತೊಂದು ಪ್ರಶ್ನೆಗೂ ಹಾಗೇ ಮಾಡಿದರು. ತಾಲಿಬಾನ್ ಉಗ್ರರ ಆಡಳಿತ ಶುರುವಾಗಿದೆ. ಹೀಗಿದ್ದಾಗ್ಯೂ ಕೂಡ ಮುಂದೆ ಭಾರತ ಅಫ್ಘಾನಿಸ್ತಾನದಲ್ಲಿ ವಿವಿಧ ಯೋಜನೆಗಳಿಗೆ ಹೂಡಿಕೆ ಮಾಡುವುದನ್ನು ಮುಂದುವರಿಸಲಿದೆಯಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಅಫ್ಘಾನಿಸ್ತಾನದ ಜನರೊಂದಿಗೆ ಇರುವ ಐತಿಹಾಸಿಕ ಸಂಬಂಧ ಮುಂದುವರಿಯಲಿದೆ ಎಂದಷ್ಟೇ ಉತ್ತರಿಸಿದರು. ತಾಲಿಬಾನ್ಗೆ ಸಂಬಂಧಿತ ಯಾವುದೇ ಪ್ರಶ್ನೆಗಳಿದ್ದರೂ ಇದು ಉತ್ತರ ನೀಡುವ ಸಮಯವಲ್ಲ. ಯಾಕೆಂದರೆ ಇನ್ನೂ ಮೂರ್ನಾಲ್ಕು ದಿನಗಳಷ್ಟೇ ಆಗಿದೆ ಎಂದು ಹೇಳಿದರು.
(Historical relationship with the Afghan people will Continue Says S Jaishankar)
Published On - 1:04 pm, Thu, 19 August 21