‘ರವೀಂದ್ರನಾಥ ಟಾಗೋರ್ ಚಿಕ್ಕವರಿದ್ದಾಗ ಅವರ ತಾಯಿಯೇ ಎತ್ತಿಕೊಳ್ಳುತ್ತಿರಲಿಲ್ಲ, ಯಾಕೆಂದರೆ..’-ಬಹುದೊಡ್ಡ ವಿವಾದ ಸೃಷ್ಟಿಸಿದ ಕೇಂದ್ರ ಸಚಿವ
ಸುಭಾಷ್ ಸರ್ಕಾರ್ ಅವರು ರವೀಂದ್ರನಾಥ ಟಾಗೋರ್ ಬಗ್ಗೆ ಆಡಿದ ಮಾತುಗಳಿಗೆ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಟು ಪ್ರತಿಕ್ರಿಯೆ ನೀಡಿದ್ದಾರೆ. ಸುಭಾಷ್ ಸರ್ಕಾರ್ಗೆ ಇತಿಹಾಸದ ಬಗ್ಗೆ ಸ್ವಲ್ಪವೂ ಅರಿವಿಲ್ಲ ಎಂದಿದ್ದಾರೆ.
ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟಾಗೋರರ ಬಗ್ಗೆ ಒಂದು ಹೇಳಿಕೆ ನೀಡಿ ದೊಡ್ಡದೊಂದು ವಿವಾದವನ್ನೇ ಸೃಷ್ಟಿಸಿದ್ದಾರೆ ಕೇಂದ್ರ ಸಚಿವ ಸುಭಾಷ್ ಸರ್ಕಾರ್. ಕೇಂದ್ರ ಶಿಕ್ಷಣ ಇಲಾಖೆ ರಾಜ್ಯ ಸಚಿವರಾಗಿರುವ ಸುಭಾಷ್, ಪಶ್ಚಿಮ ಬಂಗಾಳದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಟಾಗೋರರ ಕುರಿತು ಮಾತನಾಡಿದರು. ಆದರೆ ಈ ವೇಳೆ ಟಾಗೋರರು ಮೈಬಣ್ಣ, ರೂಪದ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ರವೀಂದ್ರನಾಥ ಟಾಗೋರರು ತುಂಬ ಕಪ್ಪಗಿದ್ದರು. ಇದೇ ಕಾರಣಕ್ಕೆ, ಅವರು ಚಿಕ್ಕವರಿದ್ದಾಗ ಸ್ವತಃ ತಮ್ಮ ತಾಯಿಯಿಂದಲೇ ತಾರತಮ್ಯಕ್ಕೆ ಒಳಗಾಗಬೇಕಾಯಿತು. ಕಪ್ಪು ಮೈಬಣ್ಣದಿಂದ ಕೂಡಿದ್ದ ಟಾಗೋರರನ್ನು ಅವರ ಅಮ್ಮ ಎತ್ತಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ, ಹತ್ತಿರದ ಸಂಬಂಧಿಗಳೂ ಕೂಡ ಅವರನ್ನು ಮುಟ್ಟುತ್ತಿರಲಿಲ್ಲ. ಟಾಗೋರರ ಕುಟುಂಬದಲ್ಲಿ ಇನ್ಯಾರೂ ಅಷ್ಟು ಕಪ್ಪಾಗಿ ಇರಲಿಲ್ಲ ಎಂದು ಸುಭಾಷ್ ಸರ್ಕಾರ್ ಹೇಳಿದ್ದಾರೆ.
ಟಾಗೋರ್ರಿಂದ ಸ್ಥಾಪಿತವಾದ ವಿಶ್ವವಿದ್ಯಾಲಯದಲ್ಲಿ ನೆರೆದಿದ್ದ ಪ್ರೇಕ್ಷಕರ ಎದುರು ಮಾತನಾಡಿದ ಸುಭಾಷ್ ಸರ್ಕಾರ್, ಶ್ವೇತವರ್ಣದ ಚರ್ಮ ಹೊಂದಿರುವವರಲ್ಲೇ ಎರಡು ವಿಧ ಇರುತ್ತದೆ. ಅದರಲ್ಲಿ ಕೆಲವರು ಹಳದಿ ಛಾಯೆಯುಳ್ಳ ಬಿಳಿ ಬಣ್ಣದ ಚರ್ಮ ಹೊಂದಿರುತ್ತಾರೆ. ಆದರೆ ಇನ್ನು ಒಂದಷ್ಟು ಜನ ಕೆಂಪು ಛಾಯೆಯಿರುವ ಬಿಳಿಬಣ್ಣ ಹೊಂದಿರುತ್ತಾರೆ. ಇಂಥವರ ಬಣ್ಣ ಕಪ್ಪಾಗಿಯೇ ಕಾಣುತ್ತದೆ. ರವೀಂದ್ರನಾಥ ಟಾಗೋರರು ಎರಡನೇ ವರ್ಗಕ್ಕೆ ಸೇರಿದ್ದರು. ರವೀಂದ್ರನಾಥರು ಅಂದವಲ್ಲದ ಮೈಬಣ್ಣ ಹೊಂದಿದ್ದ ಕಾರಣಕ್ಕೆ ಅವರ ತಾಯಿ ಮತ್ತು ಕುಟುಂಬದ ಅನೇಕರು ರವೀಂದ್ರನಾಥರನ್ನು ಎತ್ತಿಕೊಳ್ಳುತ್ತಿರಲಿಲ್ಲ..ತಮ್ಮ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದರು.
ಕೇಂದ್ರ ಸಚಿವರ ಈ ಮಾತುಗಳಿಂದ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಆಕ್ರೋಶಗೊಂಡಿದೆ. ನಮ್ಮ ರಾಜ್ಯದ ಐಕಾನ್ ಆಗಿರುವ ರವೀಂದ್ರನಾಥ ಟಾಗೋರರಿಗೆ ದೊಡ್ಡ ಅವಮಾನವಾಗಿದೆ ಎಂದು ಹೇಳಿದೆ. ಅಷ್ಟಾಗ್ಯೂ ಬಿಜೆಪಿ, ಕೇಂದ್ರ ಸಚಿವರ ಮಾತುಗಳನ್ನು ಸಮರ್ಥಿಸಿಕೊಂಡಿದೆ. ವರ್ಣಭೇದ ನೀತಿಯ ವಿರುದ್ಧ ಅರಿವು ಮೂಡಿಸುವಾಗ ಸುಭಾಷ್ ಸರ್ಕಾರ್ ಹೀಗೊಂದು ಉದಾಹರಣೆ ಮೂಲಕ ವಿವರಿಸಿದ್ದಷ್ಟೇ ಎಂದೂ ಹೇಳಿಕೊಂಡಿದೆ.
ಅಭಿಷೇಕ್ ಬ್ಯಾನರ್ಜಿ ಕಟು ತಿರುಗೇಟು ಸುಭಾಷ್ ಸರ್ಕಾರ್ ಅವರು ರವೀಂದ್ರನಾಥ ಟಾಗೋರ್ ಬಗ್ಗೆ ಆಡಿದ ಮಾತುಗಳಿಗೆ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಟು ಪ್ರತಿಕ್ರಿಯೆ ನೀಡಿದ್ದಾರೆ. ಸುಭಾಷ್ ಸರ್ಕಾರ್ಗೆ ಇತಿಹಾಸದ ಬಗ್ಗೆ ಸ್ವಲ್ಪವೂ ಅರಿವಿಲ್ಲ. ರವೀಂದ್ರನಾಥ ಟಾಗೋರರು ಯಾವ ಬಣ್ಣದಲ್ಲಿದ್ದರು..ಅವರೆಷ್ಟು ಬಿಳಿಯಾಗಿದ್ದರು ಎಂಬುದು ಎಲ್ಲರಿಗೂ ಗೊತ್ತು. ಅದರಾಚೆಗೂ ಕೇಂದ್ರ ಸಚಿವರು ಜನಾಂಗೀಯ ನಿಂದನೆ ಮಾಡಿದ್ದಾರೆ. ವಿಶ್ವ ಭಾರತಿ ಯೂನಿವರ್ಸಿಟಿಗೆ ಇನ್ಯಾವತ್ತೂ ಸುಭಾಷ್ ಸರ್ಕಾರ್ಗೆ ಪ್ರವೇಶಿಸಲು ಬಿಡಬಾರದು ಎಂದು ಹೇಳಿದ್ದಾರೆ.
ಶಿಕ್ಷಣತಜ್ಞರಿಂದಲೂ ಆಕ್ಷೇಪ ಶಿಕ್ಷಣ ಸಚಿವ ಸುಭಾಷ್ ಸರ್ಕಾರ್ ಮಾತಿನಿಂದ ಕೇವಲ ಟಿಎಂಸಿಯಷ್ಟೇ ಅಲ್ಲ, ಕೆಲವು ಶಿಕ್ಷಣತಜ್ಞರು, ಬೇರೆ ರಾಜಕಾರಣಿಗಳೂ ಸಹ ಅಸಮಾಧಾನಗೊಂಡಿದ್ದಾರೆ. ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರತಿಭಾ ಸರ್ಕಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸಚಿವರು ಯಾವ ಆಧಾರದ ಮೇಲೆ ಈ ರೀತಿಯ ಕಾಮೆಂಟ್ಗಳನ್ನು ಕೊಟ್ಟಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ರವೀಂದ್ರನಾಥ ಟಾಗೋರರ ಆತ್ಮಚರಿತ್ರೆಯನ್ನು ಅವರು ಓದಿದ್ದಾರೋ ಗೊತ್ತಿಲ್ಲ. ಓದಿಕೊಂಡಿದ್ದರೂ ಅದರಲ್ಲಿನ ಅಂಶಗಳು ಸಚಿವರಿಗೆ ಸರಿಯಾಗಿ ಅರ್ಥವಾಗಿಲ್ಲವೆನ್ನಿಸುತ್ತದೆ. ರವೀಂದ್ರನಾಥರು ಕಪ್ಪು ಬಣ್ಣದವರಾಗಿರಲಿಲ್ಲ. ಆದರೂ ಅವರ ಅಕ್ಕ ಪ್ರೀತಿಯಿಂದ, ರಾಬಿ..ನನ್ನ ಕಡುಬಣ್ಣದ ಹುಡುಗ ಎಂದು ಕರೆಯುತ್ತಿದ್ದರು. ಅದೊಂದು ಉತ್ಪ್ರೇಕ್ಷೆಯಷ್ಟೇ ಎಂದು ವಿವರಿಸಿದ್ದಾರೆ.
ಬಿಜೆಪಿ ಸಮರ್ಥನೆ ಇಷ್ಟೆಲ್ಲ ಆದಮೇಲೆ ಬಿಜೆಪಿ ನಾಯಕ, ತ್ರಿಪುರಾದ ಮಾಜಿ ರಾಜ್ಯಪಾಲ ತಥಾಗತ ರಾಯ್ ಅವರು ಸುಭಾಷ್ ಸರ್ಕಾರ್ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ಸಚಿವರ ಹೇಳಿಕೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನೀವು ಪಶ್ಚಿಮ ಬಂಗಾಳದಲ್ಲಿ ಪತ್ರಿಕೆಗಳಲ್ಲಿ ಬರುವ ವಧು-ವರರ ವೇದಿಕೆ ಜಾಹೀರಾತನ್ನು ಗಮನಿಸಿ. ಅದರಲ್ಲಿ ವಧುವಿನ ಕಡೆಯವಾರಗಲಿ-ವರನ ಕಡೆಯವರಾಗಲಿ ಜಾಹೀರಾತು ಕೊಡುವಾಗ, ಬಿಳಿ ಮೈಬಣ್ಣದವರು ಬೇಕು ಎಂದೇ ಉಲ್ಲೇಖ ಮಾಡಿರುತ್ತಾರೆ. ಸಮಾಜದಲ್ಲಿರುವ ಅಂಥ ಮನೋಭಾವ ಬದಲಾಗಬೇಕು ಎಂಬ ಆಶಯದಲ್ಲಿ, ಅರಿವು ಮೂಡಿಸಲು ಸುಭಾಷ್ ಸರ್ಕಾರ್ ಒಂದು ಉದಾಹರಣೆ ಕೊಟ್ಟಿದ್ದಾರೆ ಎಂದು ರಾಯ್ ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಆಡಳಿತ ಇರುವುದಿಲ್ಲ; ತಾಲಿಬಾನ್ ನಾಯಕ ಹೇಳಿದ್ದೇನು?
ಮೇಘನಾ ರಾಜ್ ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರು ಜೊತೆ ಅರ್ಜುನ್ ಸರ್ಜಾ ಫೋಟೋ ವೈರಲ್
(Subhas Sarkar courted controversy with his remarks of Rabindranath Tagore’s skin colour)