ಟಿಬೆಟ್ ಪ್ರಸ್ಥಭೂಮಿಯಲ್ಲಿ ಚೀನಾ ಸೇನೆಯ ತಾಲೀಮು: ಉದ್ದೇಶದ ಬಗ್ಗೆ ಮೂಡಿವೆ ಹಲವು ಪ್ರಶ್ನೆಗಳು
ಲಡಾಖ್ಗೆ ಹೊಂದಿಕೊಂಡಂತೆ ಇರುವ ಟಿಬೆಟ್ ಗಡಿಯಲ್ಲಿ ಮಿಲಿಟರಿ ತಾಲೀಮು ನಡೆಸಿರುವ ಉದ್ದೇಶದ ಬಗ್ಗೆ ಭಾರತದಲ್ಲಿ ಹಲವು ಬಗೆಯ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.
ಬೀಚಿಂಗ್: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (People’s Liberation Army – PLA) ಟಿಬಿಟ್ ಮಿಲಿಟರಿ ಕಮಾಂಡ್ ಇತ್ತೀಚೆಗೆ ದೊಡ್ಡಮಟ್ಟ ಜಂಟಿ ಕಾರ್ಯಾಚರಣೆಯನ್ನು ಟಿಬೆಟ್ ಪ್ರಸ್ಥಭೂಮಿಯಲ್ಲಿ ನಡೆಸಿದೆ. ಬಹುಆಯಾಮದ ಯುದ್ಧತಂತ್ರಗಳ ಜೊತೆಗೆ ನಿರ್ದಿಷ್ಟ ಗುರಿಯನ್ನು ಧ್ವಂಸ ಮಾಡುವ ಕಾರ್ಯಾಚರಣೆಗಳನ್ನೂ ಚೀನಾ ಸೇನೆಯು ಈ ತಾಲೀಮಿನ ವೇಳೆ ಅಭ್ಯಾಸ ಮಾಡಿತು. ಸ್ನೋಫೀಲ್ಡ್ ಡ್ಯೂಟಿ-2021 ಗೂಢನಾಮದ ಈ ಸೇನಾ ತಾಲೀಮು ಸಮುದ್ರಮಟ್ಟದಿಂದ 4,500 ಮೀಟರ್ ಎತ್ತರದಲ್ಲಿ ನಡೆದಿದೆ ಎನ್ನುವುದು ವಿಶೇಷ.
ಪಿಎಲ್ಎ ಟಿಬೆಟ್ ಕಮಾಂಡ್ನ ಕನಿಷ್ಠ 10 ಬ್ರಿಗೇಡ್ಗಳು ಅಂದರೆ ಸುಮಾರು 50,000 ಯೋಧರು ತಾಲೀಮಿನಲ್ಲಿ ಪಾಲ್ಗೊಂಡಿದ್ದರು. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪರಣಗಳನ್ನು ತಾಲೀಮಿನಲ್ಲಿ ಬಳಸಲಾಯಿತು. ಲಡಾಖ್ಗೆ ಹೊಂದಿಕೊಂಡಂತೆ ಇರುವ ಟಿಬೆಟ್ ಗಡಿಯಲ್ಲಿ ಮಿಲಿಟರಿ ತಾಲೀಮು ನಡೆಸಿರುವ ಉದ್ದೇಶದ ಬಗ್ಗೆ ಭಾರತದಲ್ಲಿ ಹಲವು ಬಗೆಯ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.
ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಕತ್ತಲಿನಲ್ಲಿ ಕಾರ್ಯಾಚರಣೆ ನಡೆಸುವ ತಾಲೀಮನ್ನು ಪಿಎಲ್ಎ ನಡೆಸಿತು. ಮುಂಚೂಣಿ ದಾಳಿಯ ಕಾರ್ಯಾಚರಣೆ ಮಧ್ಯರಾತ್ರಿಯಲ್ಲಿ ನಡೆಯಿತು. ಆರ್ಟಿಲರಿ ಫಿರಂಗಿಗಳು ಮತ್ತು ರಾಕೆಟ್ ಲಾಂಚರ್ಗಳನ್ನು ತಾಲೀಮಿನಲ್ಲಿ ಬಳಸಲಾಯಿತು. ಸಂವಹನ ಕೇಂದ್ರ, ಹೆಲಿಕಾಪ್ಟರ್ ಪ್ಯಾಡ್ಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆಯನ್ನೂ ಪಿಎಲ್ಎ ಅಭ್ಯಾಸ ಮಾಡಿತು ಎಂದು ಚೀನಾದ ದೈನಿಕ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಇಂಥ ತಾಲೀಮುಗಳನ್ನು ಈ ಹಿಂದೆಯೂ ನಡೆಸಲಾಗಿದೆ. ಸಾಮಾನ್ಯವಾಗಿ ಹಗಲು ಬೆಳಕಿನಲ್ಲಿ ಇಂಥ ಅಭ್ಯಾಸಗಳನ್ನು ಸೇನೆ ಮಾಡಿಕೊಳ್ಳುತ್ತಿತ್ತು. ಈ ಹಿಂದೆ ಒಮ್ಮೆ 6,100 ಮೀಟರ್ ಎತ್ತರದಲ್ಲಿಯೂ ಇಂಥ ತಾಲೀಮು ನಡೆದಿದೆ ಎಂದು ವರದಿಯು ತಿಳಿಸಿದೆ.
ಈ ಬಾರಿ ನಡೆದ ತಾಲೀಮಿನಲ್ಲಿ ಪಿಎಲ್ಎ ವಿಮಾನ ನಿರೋಧಕ ಕ್ಷಿಪಣಿಗಳು, ಟ್ಯಾಂಕ್ಗಳು, ಭೂಸೇನೆಯ ಸಶಸ್ತ್ರ ದಾಳಿ ವಾಹನಗಳು, ದಾಳಿ ಹೆಲಿಕಾಪ್ಟರ್ಗಳನ್ನು ಬಳಸಲಾಗಿತ್ತು. ಸೇನೆಯ ಸಂಚಾರಕ್ಕೆ ಇರುವ ಅಡೆತಡೆಗಳನ್ನು ತೆರವುಗೊಳಿಸುವ ಮತ್ತು ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವ ಅಭ್ಯಾಸವನ್ನೂ ಚೀನಾ ಸೇನೆ ನಡೆಸಿತು. ತಾಲೀಮಿನ ವೇಳೆ ಟೈಪ್ 15 ಲಘು ಟ್ಯಾಂಕ್ಗಳನ್ನು ಚೀನಾ ಸೇನೆ ಬಳಸಿದೆ ಎಂದು ವರದಿಯು ಹೇಳಿದೆ.
(China People Liberation Army Conducts large scale military drills in Tibet plateau)