ದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ (SKM) ಸೋಮವಾರ ಭಾರತ್ ಬಂದ್‌ಗೆ (Bharat bandh) ಕರೆ ನೀಡಿದ್ದು, ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ರಾಷ್ಟ್ರಪತಿಗಳ ಒಪ್ಪಿಗೆ ಒಂದನೇ ವರ್ಷದ ನಿಮಿತ್ತ ಈ ಬಂದ್ ನಡೆಯಲಿದೆ. ಈ ಬಂದ್ ರಾಜಕೀಯ ಪಕ್ಷಗಳು ಸೇರಿದಂತೆ ಸಮಾಜದ ಎಲ್ಲಾ ವಿಭಾಗಗಳಿಂದ ಬೆಂಬಲವನ್ನು ಗಳಿಸಿದೆ. ಅನೇಕ ವಿರೋಧ ಪಕ್ಷಗಳು ಬಂದ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ. ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಬಂದ್‌ಗೆ ಬೆಂಬಲ ನೀಡಿದ್ದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳು ಕೂಡ ದೇಶವ್ಯಾಪಿ ಮುಷ್ಕರಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿವೆ. ಕಾಂಗ್ರೆಸ್ ಕೂಡ ಸೋಮವಾರ ಪ್ರತಿಭಟನೆಗೆ ಸೇರಲಿದೆ ಎಂದು ಹೇಳಿದೆ.
ಭಾರತ್ ಬಂದ್ ಸಮಯ
ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಬಂದ್ ನಡೆಯಲಿದ್ದು, ಈ ಸಮಯದಲ್ಲಿ ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಶೈಕ್ಷಣಿಕ ಮತ್ತು ಇತರ ಸಂಸ್ಥೆಗಳು, ಅಂಗಡಿಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಮುಚ್ಚಿರಲಿದ್ದು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವುದಿಲ್ಲ. ಆದಾಗ್ಯೂ, ಆಸ್ಪತ್ರೆಗಳು, ವೈದ್ಯಕೀಯ ಅಂಗಡಿಗಳು, ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಮತ್ತು ವೈಯಕ್ತಿಕ ತುರ್ತುಸ್ಥಿತಿಗಳಿಗೆ ಹಾಜರಾಗುವ ಜನರು ಸೇರಿದಂತೆ ಎಲ್ಲಾ ತುರ್ತು ಸಂಸ್ಥೆಗಳು ಮತ್ತು ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗುತ್ತದೆ. ಬಂದ್ ಅನ್ನು ಸ್ವಯಂಪ್ರೇರಿತ ಮತ್ತು ಶಾಂತಿಯುತವಾಗಿ ನಡೆಸಲಾಗುವುದು ಎಂದು ಎಸ್ಕೆಎಂ ಭರವಸೆ ನೀಡಿದೆ.
ರೈತರಿಗೆ ಆಂಧ್ರಪ್ರದೇಶ ಸರ್ಕಾರ ಬೆಂಬಲ
ಆಂಧ್ರಪ್ರದೇಶ ಸರ್ಕಾರವು ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆಯ ಕಾರ್ಮಿಕರಿಗೂ ಸಹ ರಾಜ್ಯ ಬೆಂಬಲ ಮತ್ತು ಸಾರಿಗೆ ಸಚಿವ ಪೆರ್ನಿ ವೆಂಕಟರಾಮಯ್ಯ (ನಾನಿ) ಶನಿವಾರ ತಿಳಿಸಿದ್ದಾರೆ. ಸೆಪ್ಟೆಂಬರ್ 26 ಮಧ್ಯರಾತ್ರಿಯಿಂದ ಸೆಪ್ಟೆಂಬರ್ 27 ಮಧ್ಯಾಹ್ನದವರೆಗೆ ರಾಜ್ಯಾದ್ಯಂತ ಎಪಿಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ನಾನಿ ಸುದ್ದಿಗಾರರಿಗೆ ತಿಳಿಸಿದರು.
‘ಭಾರತ್ ಬಂದ್’ಗೆ ಡಿಎಂಕೆ ಕರೆ
ಆಡಳಿತಾರೂಢ ಡಿಎಂಕೆ ಜನತೆ, ರೈತರು, ಕೃಷಿ ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ಸೆಪ್ಟೆಂಬರ್ 27 ರಂದು ರೈತ ಸಂಘಗಳು ನಡೆಸಲಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗವಹಿಸುವಂತೆ ಮನವಿ ಮಾಡಿದೆ. ತಮಿಳುನಾಡಿನಲ್ಲಿ “ಭಾರತ್ ಬಂದ್” ಅನ್ನು ಯಶಸ್ವಿಗೊಳಿಸುವಂತೆ ಅದರ ಕಾರ್ಯಕರ್ತರಿಗೆ ಮನವಿ ಮಾಡಿದೆ.
ಕೃಷಿ ಕಾನೂನುಗಳ ವಿರುದ್ಧ ದೆಹಲಿ ಮತ್ತು ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಪಕ್ಷವು ನಿಂತಿದೆ, ಡಿಎಂಕೆ ರಾಜ್ಯ ಕೃಷಿ ವಿಭಾಗದ ಮುಖ್ಯಸ್ಥ ಎನ್. ಕೆ.ಕೆ ಪೆರಿಯಸಾಮಿ ಕೇಂದ್ರವು ನಿರಂಕುಶವಾಗಿದೆ ಮತ್ತು ಅವರಿಗೆ ಎಂದಿಗೂ ಗಮನ ಕೊಡುವುದಿಲ್ಲ ಎಂದು ಹೇಳಿದರು. ತಮಿಳುನಾಡಿನ ರೈತರು, ಕೃಷಿ ಕಾರ್ಮಿಕರು, ಸಾರ್ವಜನಿಕರು, ವ್ಯಾಪಾರಿಗಳು ಮತ್ತು ಎಲ್ಲಾ ಸಾಮಾಜಿಕ ಸಂಘಟನೆಗಳು ಬಂದ್‌ನಲ್ಲಿ ಭಾಗವಹಿಸಬೇಕು ಮತ್ತು ಸಂಪೂರ್ಣ ಯಶಸ್ವಿಯಾಗಬೇಕು ಎಂದು ಅವರು ವಿನಂತಿಸಿದರು.
ಕೇರಳ: ಬಂದ್‌ಗೆ ಕರೆ ನೀಡಿದ ಆಡಳಿತಾರೂಢ ಎಲ್‌ಡಿಎಫ್
ಕೇರಳದ ಆಡಳಿತಾರೂಢ ಎಲ್‌ಡಿಎಫ್ ಕೂಡ ರೈತರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಹರತಾಳಕ್ಕೆ ಕರೆ ನೀಡಿದೆ. ತಿರುವನಂತಪುರಂನಲ್ಲಿ ಆಡಳಿತ ಪಕ್ಷದ ಮೈತ್ರಿಕೂಟದ ನಾಯಕರ ಸಭೆಯ ನಂತರ ಈ ಕರೆಯನ್ನು ಎಲ್‌ಡಿಎಫ್ ಕನ್ವೀನರ್ ಮತ್ತು ಸಿಪಿಐ (ಎಂ) ಹಂಗಾಮಿ ಕಾರ್ಯದರ್ಶಿ ಎ ವಿಜಯರಾಘವನ್ ಘೋಷಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯರಾಘವನ್, ಪ್ರತಿಭಟನೆಯಲ್ಲಿ ಐದು ಲಕ್ಷ ಜನರು ಭಾಗವಹಿಸಲಿದ್ದಾರೆ. ಮೋಟಾರ್ ಸಾರಿಗೆ ಕಾರ್ಮಿಕರು, ಬ್ಯಾಂಕ್ ಉದ್ಯೋಗಿಗಳು ಮತ್ತು ರೈತ ಸಂಘಟನೆಗಳು ಸೇರಿದಂತೆ 100 ಕ್ಕೂ ಹೆಚ್ಚು ಸಂಘಟನೆಗಳು ಎಲ್‌ಡಿಎಫ್ ರೈತ ಚಳವಳಿಗೆ ತಮ್ಮ ಬೆಂಬಲವನ್ನು ನೀಡಿವೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಬೆಂಬಲ
ಸಂಸತ್ತಿನಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಅಂಗೀಕಾರದ ಮೊದಲ ವಾರ್ಷಿಕೋತ್ಸವದ ನಿಮಿತ್ತ ಕಾಂಗ್ರೆಸ್ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಸೆಪ್ಟೆಂಬರ್ 27 ರ ಭಾರತ್ ಬಂದ್‌ಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಪಕ್ಷದ ವಕ್ತಾರ ಗೌರವ ವಲ್ಲಭ್ ಮಾತನಾಡಿ, ಕಳೆದ ಏಳು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರವು ಕೃಷಿ ಕ್ಷೇತ್ರದ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿದೆ. 2014 ರ ಆರಂಭದಲ್ಲಿ, ಮೋದಿ ಸರ್ಕಾರವು ಭೂ ಸ್ವಾಧೀನ ಸುಗ್ರೀವಾಜ್ಞೆಯನ್ನು ಕಾರ್ಯತಂತ್ರದ ವಲಯಗಳ ಹೆಸರಿನಲ್ಲಿ ಕೃಷಿ ಭೂಮಿಯನ್ನು ಕಬಳಿಸಲು ತಂದಿತು ಆದರೆ ಸರ್ಕಾರವು ಈ ಮಸೂದೆಯನ್ನು ಕೈಬಿಡಬೇಕಾಯಿತು ಎಂದು ಅವರು ಹೇಳಿದರು. “ಕೃಷಿ ಕ್ಷೇತ್ರದ ಸರ್ವತೋಮುಖ ನಾಶಕ್ಕೆ ಮೋದಿ ಸರ್ಕಾರ ಕಾರಣವಾಗಿದೆ. ಮತ್ತು ಈಗ ಅವರು ದೆಹಲಿ ಗಡಿಯಲ್ಲಿ ಒಂಬತ್ತು ತಿಂಗಳುಗಳಿಂದ ಪ್ರತಿಭಟಿಸುತ್ತಿದ್ದ ರೈತರ ಕಡೆಗೆ ಕಣ್ಣು ಮುಚ್ಚಿ ನೋಡುತ್ತಿದ್ದಾರೆ. ಈ ಆಂದೋಲನದಲ್ಲಿ 600 ರೈತರು ಸಾವನ್ನಪ್ಪಿದ್ದಾರೆ ಆದರೆ ಸರ್ಕಾರ ಇನ್ನೂ ಕೃಷಿ ಕಾನೂನುಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಒತ್ತಾಯಿಸುತ್ತದೆ ಎಂದು ವಲ್ಲಭ್ ಹೇಳಿದರು.
ಭಾರತ್ ಬಂದ್‌ನಲ್ಲಿ ಭಾಗವಹಿಸಲಿದ್ದಾರೆ ತೇಜಸ್ವಿ ಯಾದವ್
ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಕೂಡ ಭಾರತ್ ಬಂದ್‌ಗೆ ರೈತರ ಕರೆಗೆ ಬೆಂಬಲವನ್ನು ನೀಡಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ಸಂಘ ಬೆಂಬಲ
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಸೋಮವಾರ ಬಂದ್‌ಗೆ ತನ್ನ ಬೆಂಬಲವನ್ನು ಸೂಚಿಸಿದೆ. ರೈತರ ಬೇಡಿಕೆಗಳ ಕುರಿತು ಸಂವಾದ ನಡೆಸಬೇಕು ಮತ್ತು ಕೇಂದ್ರದ ಮೂರು ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದೆ. ಒಕ್ಕೂಟವು ಅದರ ಅಂಗಸಂಸ್ಥೆಗಳು ಮತ್ತು ರಾಜ್ಯ ಘಟಕಗಳು ಸೋಮವಾರ ದೇಶದಾದ್ಯಂತ ರೈತರ ಪ್ರತಿಭಟನೆ ಬೆಂಬಲ ಸೂಚಿಸಿವೆ.
ಇದನ್ನೂ ಓದಿ: Bharat Bandh: ಭಾರತ್ ಬಂದ್ ದಿನ ನಡೆಯಬೇಕಿದ್ದ ಬೆಂಗಳೂರು ನಗರ ವಿವಿಯ ಎಲ್ಲ ಪರೀಕ್ಷೆ ಮುಂದೂಡಿಕೆ
ಇದನ್ನೂ ಓದಿ: Bharat Bandh: ಬೆಂಗಳೂರಿನಾದ್ಯಂತ ಪೊಲೀಸರ ಹೈಅಲರ್ಟ್; ಟ್ರಾಫಿಕ್ ಜಾಮ್ ಸಾಧ್ಯತೆ- ವಿವರ ಇಲ್ಲಿದೆ
(Bharat bandh has garnered support from all sections of the society political parties across India)