ಸುಪ್ರೀಂಕೋರ್ಟ್(Supreme Court) ನ ಕಲಾಪದ ನೇರ ಪ್ರಸಾರದ ಸಂದರ್ಭದಲ್ಲಿ ವಾದ ವಿವಾದಗಳನ್ನು ಸ್ಕ್ರಿಪ್ಟ್ಗೆ ರೂಪಾಂತರಿಸುವ ಕೃತಕ ಬುದ್ಧಿಮತ್ತೆ(AI)ತಂತ್ರಜ್ಞಾನದ ಹಿಂದೆ ಮೂವರು ಬೆಂಗಳೂರಿಗರ ಸಾಹಸ ಅಡಗಿದೆ. ಬೆಂಗಳೂರಿನ ತಂತ್ರಜ್ಞರಾದ ವಿಕಾಸ್ ಮಹೀಂದ್ರಾ, ವಿನಯ್ ಮಹೀಂದ್ರಾ, ಬದರಿ ವಿಕಾಸ್ ಕಿನ್ಹಾಲ್ ಅವರ TERES( Technology Enabled Resolution) ನೆರವಿನಿಂದ ಸದ್ಯಕ್ಕೆ ಸುಪ್ರೀಂಕೋರ್ಟ್ ಸಂವಿಧಾನ ಪೀಠದ ವಿಚಾರಣೆಯ ನೇರ ಪ್ರಸಾರದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಹಾಗೂ ವಕೀಲರ ಸಂಭಾಷಣೆ ಟ್ರಾನ್ಸ್ಸ್ಕ್ರಿಪ್ಟ್ ಅನ್ನು ಜತೆ ಜತೆಗೆ ಪ್ರಸಾರ ಮಾಡಲಾಗುತ್ತಿದೆ.
ದಿನದ ಕೊನೆಗೆ ಈ ಟ್ರಾನ್ಸ್ಸ್ಕ್ರಿಪ್ಟ್ ಅನ್ನು ಸುಪ್ರೀಂಕೋರ್ಟ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಗೆ ಹೊಸ ದಿಶೆಯನ್ನು ಕೊಡಬಲ್ಲಂತಹ ಈ ತಂತ್ರಜ್ಞಾನವನ್ನು ಈಗ ಪ್ರಾಯೋಗಿಕವಾಗಿ ಸುಪ್ರೀಂಕೋರ್ಟ್ನಲ್ಲಿ ಬಳಸಲಾಗುತ್ತದೆ.
ಐದು ವರ್ಷಗಳ ಹಿಂದೆ ನಾನು ಹಾಗೂ ವಿನಯ್ ಮತ್ತು ಕಿನ್ಹಾಲ್ ಊಟ ಮಾಡುತ್ತಾ ಕುಳಿತಾಗ ಈ ತಂತ್ರಜ್ಞಾನವನ್ನು ಪರಿಚಯಿಸುವ ಅಗತ್ಯತೆಗಳ ಬಗ್ಗೆ ಚರ್ಚಿಸಿದ್ದೆವು. ಆಗ ಈ TERES ಹುಟ್ಟಿಕೊಂಡಿತು. ನಾವು ಎಐನ ನೈಸರ್ಗಿಕ ಭಾಷಾ ಸಂಸ್ಕರಣಾ ಸಾಮರ್ಥ್ಯವನ್ನು ಬಳಸಿಕೊಂಡು ಕಲಾಪವನ್ನು ಪಠ್ಯವಾಗಿ ಪರಿವರ್ತಿಸಿದ್ದೇವೆ.
ಇವರಲ್ಲಿ ವಿನಯ್ ಹಾಗೂ ವಿಕಾಸ್ ಸಹೋದರರಾಗಿದ್ದಾರೆ, ಬದರಿ ಭಾವ. ವಿನಯ್ ಬೆಂಗಳೂರಿನ ಆರ್ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಪಯಣ ಹೇಗೆ?
ಕಳೆದ ಫೆಬ್ರವರಿ 16 ರಿಂದ 19ರವರೆಗೆ ನ್ಯಾಯಾಂಗದ ಕುರಿತ ಒಂದು ಸಮಾವೇಶದಲ್ಲಿ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ವಿಕಾಸ್, ವಿನಯ್ ಕೂಡ ಭಾಗಿಯಾಗಿದ್ದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಟ್ರಾನ್ಸ್ಕ್ರಿಪ್ಟ್ ಸೇವೆಗಳ ಬಗ್ಗೆ ಒತ್ತು ನೀಡಬೇಕು ಎನ್ನುವುದು ಚಂದ್ರಚೂಡ್ ಅವರ ವಾದವಾಗಿತ್ತು. ಕಾಕತಾಳೀಯ ಎನ್ನುವಂತೆ ಆ ಕಾರ್ಯಕ್ರಮದ ನೇರ ಪ್ರಸಾರದ ಸಂದರ್ಭದಲ್ಲಿ ಈ ಯುವಕರು ಟ್ರಾನ್ಸ್ಕ್ರಿಪ್ಟ್ ಸೇವೆಯನ್ನು ಒದಗಿಸುತ್ತಿದ್ದರು. ಇದನ್ನು ಕಂಡು ಅಚ್ಚರಿಗೊಳಗಾದ ಚಂದ್ರಚೂಡ್ ಸುಪ್ರೀಂಕೋರ್ಟ್ನಲ್ಲಿಯೂ ಇಂತಹ ವ್ಯವಸ್ಥೆಯನ್ನು ಜಾರಿಮಾಡಬಹುದೇ ಎಂದು ಈ ಯುವಕರನ್ನು ಪ್ರಶ್ನಿಸಿದರು.
ಇದರ ಪರಿಣಾಮವಾಗಿಯೇ ಶಿವಸೇನಾ ಪಕ್ಷದ ಚಿಹ್ನೆ ಹಾಗೂ ಅಧಿಕೃತ ಸ್ಥಾನಮಾನದ ಕುರಿತ ವಿಚಾರಣೆಯ ನೇರ ಪ್ರಸಾರವನ್ನು ಟ್ರಾನ್ಸ್ಕ್ರಿಪ್ಟ್ ರೂಪದಲ್ಲಿ ನೀಡಲು ಸಹಾಯವಾಯಿತು.
ಸಿಜೆಐ ಮನವಿ ಬಳಿಕ ಬೆಂಗಳೂರಿಗೆ ಹಿಂದಿರುಗುವುದನ್ನು ರದ್ದುಪಡಿಸಿ ದೆಹಲಿಯಲ್ಲಿಯೇ ಉಳಿದು, ಇದಕ್ಕೆ ಬೇಖಾದ ಅಗತ್ಯಗಳನ್ನು ತಯಾರಿಸಿಕೊಂಡು ಪ್ರಸಾರ ಮಾಡಲಾಯಿತು. ಸುಪ್ರೀಂಕೋರ್ಟ್ನ ಈ ಪ್ರಯೋಗದ ಬಳಿಕ ಕರ್ನಾಟಕ, ಒಡಿಶಾ, ಕೇರಳ ಹೈಕೋರ್ಟ್ಗಳು ಕೂಡ ತಂತ್ರಜ್ಞಾನ ಬಳಕೆಗೆ ಒಲವು ತೋರಿಸಿದೆ.
ಇದರಿಂದ ಕೋರ್ಟ್ ಕಲಾಪಗಳ ಗುಣಮಟ್ಟವೂ ವೃದ್ಧಿಸುವ ಸಾಧ್ಯತೆಯೂ ಹೆಚ್ಚಿರುತ್ತದೆ. ಮೊದಲನೆಯದಾಗಿ ವಕೀಲರು ಅಥವಾ ನ್ಯಾಯಮೂರ್ತಿಗಳು ಅಗತ್ಯಕ್ಕಿಂತ ಹೆಚ್ಚಿನ ವಿಚಾರಗಳನ್ನು ಪ್ರಸ್ತಾಪಿಸಲು ಹಿಂಜರಿಯುತ್ತಾರೆ, ಅನಗತ್ಯ ವಿವಾದಗಳಿಂದ ದೂರವಿರಬಹುದು.
ಇನ್ನೊಂದೆಡೆ ಕೋರ್ಟ್ ಕಲಾಪದಲ್ಲಿ ಏನಾಗಿದೆ ಎನ್ನುವ ನಿಖರ ವಿವರವು ಕಕ್ಷಿದಾರರಿಗೆ ತಿಳಿಯಲಿದೆ. ಇದರಿಂದ ನ್ಯಾಯಾಂಗದಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ಬರುತ್ತದೆ. ಇನ್ನೊಂದೆಡೆ ತನ್ನ ವಾದವನ್ನು ನ್ಯಾಯಪೀಠ ಪರಿಗಣಿಸಿಲ್ಲ ಎಂದು ವಕೀಲರು ಮಾಡುವ ಆರೋಪಗಳು ಕೂಡ ದೂರವಾಗಲಿವೆ.ಹಾಗೆಯೇ ಕೋರ್ಟ್ ಕಲಾಪವನ್ನು ಅಧ್ಯಯನವನ್ನು ಮಾಡುವ ನ್ಯಾಯಾಂಗ ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ