ಕೇಜ್ರಿವಾಲ್ ಗೋವಾದ 7-ಸ್ಟಾರ್ ಹೋಟೆಲ್‌ನಲ್ಲಿ ಆರೋಪಿಗಳ ಖರ್ಚಿನಲ್ಲಿ ತಂಗಿದ್ದರು ಎಂಬುದಕ್ಕೆ ಸಾಕ್ಷ್ಯವಿದೆ: ಇಡಿ

|

Updated on: May 07, 2024 | 2:06 PM

ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಚರಣ್ ಪ್ರೀತ್ ಸಿಂಗ್ ಅವರು ಅಕ್ರಮ ಹಣ ಸ್ವೀಕರಿಸಿ ಅದನ್ನು ವಿನಿಯೋಗಿಸಿದ್ದರು ಎಂಬ ಆರೋಪವಿದೆ. ಗೋವಾ ವಿಧಾನಸಭಾ ಚುನಾವಣೆ ವೇಳೆ ಚರಣ್ ಪ್ರೀತ್ ಸಿಂಗ್ ಅವರ ವೆಚ್ಚದಲ್ಲಿ ದೆಹಲಿ ಸಿಎಂ 7 ಸ್ಟಾರ್ ಹೋಟೆಲ್​​ನಲ್ಲಿ ತಂಗಿದ್ದರು. ಅದರ ಸಾಕ್ಷ್ಯಗಳು ನಮ್ಮಲ್ಲಿವೆ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್​​​ಗೆ ತಿಳಿಸಿದೆ.

ಕೇಜ್ರಿವಾಲ್ ಗೋವಾದ 7-ಸ್ಟಾರ್ ಹೋಟೆಲ್‌ನಲ್ಲಿ ಆರೋಪಿಗಳ ಖರ್ಚಿನಲ್ಲಿ ತಂಗಿದ್ದರು ಎಂಬುದಕ್ಕೆ ಸಾಕ್ಷ್ಯವಿದೆ: ಇಡಿ
ಅರವಿಂದ್ ಕೇಜ್ರಿವಾಲ್
Follow us on

ದೆಹಲಿ ಮೇ 07: 2022 ಗೋವಾ ವಿಧಾನಸಭಾ ಚುನಾವಣೆ ವೇಳೆ ಚರಣ್ ಪ್ರೀತ್ ಸಿಂಗ್ ಎಂಬವರ ವೆಚ್ಚದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) 7 ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದರು ಎಂದು ಜಾರಿ ನಿರ್ದೇಶನಾಲಯ (ED) ಮಂಗಳವಾರ ಸುಪ್ರೀಂಕೋರ್ಟ್​​​ಗೆ ಹೇಳಿದೆ. ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಚರಣ್ ಪ್ರೀತ್ ಸಿಂಗ್ ಅವರು ಅಕ್ರಮ ಹಣ ಸ್ವೀಕರಿಸಿ ಅದನ್ನು ವಿನಿಯೋಗಿಸಿದ್ದರು ಎಂಬ ಆರೋಪವಿದೆ. ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿದ್ದ ಎಎಸ್‌ಜಿ ಎಸ್‌ವಿ ರಾಜು, ತನಿಖೆಯ ಸಮಯದಲ್ಲಿ ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥರನ್ನು ದೋಷಮುಕ್ತಗೊಳಿಸುವ ಒಂದೇ ಒಂದು ಹೇಳಿಕೆಯೂ ಇಲ್ಲ ಎಂದು ಪ್ರತಿಪಾದಿಸಿದರು.

ಅದೇ ವೇಳೆ, ಮದ್ಯ ನೀತಿ ಪ್ರಕರಣವು ರಾಜಕೀಯ ಪ್ರೇರಿತವಾಗಿಲ್ಲ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ. ನಾವು ರಾಜಕೀಯದ ಬಗ್ಗೆ ಹೇಳುತ್ತಿಲ್ಲ. ನಮ್ಮಲ್ಲಿರುವ ಪುರಾವೆಗಳನ್ನು ಆಧರಿಸಿ ಹೇಳುತ್ತಿದ್ದೇವೆ ಎಂದು ಇಡಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಅರವಿಂದ್ ಕೇಜ್ರಿವಾಲ್ ಬಂಧನವನ್ನು ಸಮರ್ಥಿಸಿಕೊಂಡ ರಾಜು, ಜಾಮೀನನ್ನು ವಿರೋಧಿಸಿದ್ದಾರೆ. ಗೋವಾ ಚುನಾವಣೆಯ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಹೊಟೇಲ್ ನಲ್ಲಿ ತಂಗಿದ್ದರು ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಅದು ಗೋವಾದ 7 ಸ್ಟಾರ್ ಗ್ರ್ಯಾಂಡ್ ಹಯಾತ್ ಹೋಟೆಲ್ ಆಗಿತ್ತು ಎಂದು ಅವರು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಹಿತಾಸಕ್ತಿಗಳಿಗೆ ಅನುಕೂಲಕರವಾದ ಮದ್ಯ ನೀತಿಯನ್ನು ರೂಪಿಸಲು ಉದ್ಯಮಿಗಳಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಸಾಬೀತುಪಡಿಸಲು ತನ್ನ ಬಳಿ ಸಾಕ್ಷ್ಯವಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆರಂಭದಲ್ಲಿ, ಅರವಿಂದ್ ಕೇಜ್ರಿವಾಲ್ ಅವರ ಆಪಾದಿತ ಪಾತ್ರದ ಮೇಲೆ ಸಂಸ್ಥೆ ಗಮನಹರಿಸಿರಲಿಲ್ಲ . ತನಿಖೆ ಮುಂದುವರಿದಾಗ ದೆಹಲಿ ಮುಖ್ಯಮಂತ್ರಿಯ ಆಪಾದಿತ ಪಾತ್ರ ಸ್ಪಷ್ಟವಾಯಿತು  ಎಂದು ವಕೀಲರು ಹೇಳಿದರು

ಇದಕ್ಕೂ ಮುನ್ನ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ, ಕೇಜ್ರಿವಾಲ್ ಅವರ ವಕೀಲರ ವಾದದ ಬಗ್ಗೆ ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿತ್ತು. ಯಾವುದೇ ತನಿಖಾ ಸಂಸ್ಥೆಗೆ ಪ್ರಕರಣವೊಂದರ ತನಿಖೆಗೆ ಎರಡು ವರ್ಷ ತೆಗೆದುಕೊಂಡಿರುವುದು ಒಳ್ಳೆಯದಲ್ಲ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದ್ದರು.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್​ಗೆ ಸುಪ್ರೀಂ ಕೋರ್ಟ್​ನಿಂದ ಮಧ್ಯಂತರ ಜಾಮೀನು ಸಾಧ್ಯತೆ

“ತನಿಖೆಗೆ ಏಕೆ ಇಷ್ಟು ಸಮಯ ತೆಗೆದುಕೊಂಡಿತು? ಏಕೆ ಪ್ರಶ್ನೆಗಳನ್ನು ಕೇಳಲಿಲ್ಲ ” ಎಂದು ನ್ಯಾಯಾಲಯ ಕೇಳಿದೆ. ತನಿಖಾಧಿಕಾರಿಗಳು ತಮ್ಮದೇ ಆದ ವೇಗಕ್ಕೆ ತಕ್ಕಂತೆ ಕೆಲಸ ಮಾಡುತ್ತಾರೆ ಎಂದು ಜಾರಿ ನಿರ್ದೇಶನಾಲಯದ ವಕೀಲರು ಈ ಪ್ರಶ್ನೆಗೆ ಉತ್ತರಿಸಿದ್ದರು. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಮಾರ್ಚ್ 21 ರಿಂದ ಜೈಲಿನಲ್ಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ