ದೆಹಲಿಯಲ್ಲಿ ಮಾತ್ರ ಆಡಳಿತದಲ್ಲಿದ್ದ ಆಮ್ ಆದ್ಮಿ ಪಕ್ಷ ಇದೀಗ ಪಂಜಾಬ್ನಲ್ಲೂ ಸರ್ಕಾರ ರಚನೆ ಮಾಡುತ್ತಿದೆ. ಪಂಜಾಬ್ನಲ್ಲಿ ಅಧಿಕಾರದಲ್ಲಿದ್ದ ಒಂದು ರಾಷ್ಟ್ರೀಯ ಪಕ್ಷವನ್ನು ಸೋಲಿಸಿ, ಜಯ ಸಾಧಿಸಿದ್ದು ಸಾಧನೆಯಲ್ಲದೆ ಇನ್ನೇನೂ ಅಲ್ಲ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಈ ಗೆಲುವಿನ ಬೆನ್ನಲ್ಲೇ ಆಪ್ ನಾಯಕ ರಾಘವ್ ಚಡ್ಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಆಮ್ ಆದ್ಮಿ ಪಕ್ಷ, ಪ್ರಾದೇಶಿಕ ಪಕ್ಷವಾಗಿ ಉಳಿದಿಲ್ಲ. ಅದೀಗ ರಾಷ್ಟ್ರೀಯ ಪಕ್ಷವಾಗಿ ಮಾರ್ಪಾಡಾಗಿದೆ. ಅತಿ ಶೀಘ್ರದಲ್ಲಿಯೇ ಕಾಂಗ್ರೆಸ್ನ್ನು ಹಿಂದಿಕ್ಕಿ, ಅತಿದೊಡ್ಡ ಮತ್ತು ಪ್ರಭಾವಿ ಪ್ರತಿಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಮುಂದೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಖಂಡಿತವಾಗಿಯೂ ಒಂದಲ್ಲ ಒಂದು ದಿನ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದೂ ಪ್ರತಿಪಾದಿಸಿದ್ದಾರೆ.
ಆಪ್ ಪಾಲಿಗೆ ಇಂದು ಅದ್ಭುತವಾದ ದಿನ. ಯಾಕೆಂದರೆ ನಮ್ಮ ಪಕ್ಷ ಒಂದು ರಾಷ್ಟ್ರೀಯ ಪಕ್ಷವೆಂದು ಇಂದು ಸಾಬೀತಾಯ್ತು. ದೇವರು ನಮಗೆ ಆಶೀರ್ವಾದ ಮಾಡಿದ್ದಾನೆ. ಕೇಜ್ರಿವಾಲ್ ಸರ್ಕಾರದ ಆಡಳಿತ ದೆಹಲಿಯಲ್ಲಿ ಹೇಗಿದೆ ಎಂಬುದನ್ನು ಪಂಜಾಬ್ ಜನರು ನೋಡಿದ್ದಾರೆ. ಅದೇ ಮಾದರಿಯ ಸರ್ಕಾರ ಬೇಕು ಎಂದು ಇಲ್ಲಿಯೂ ಆಪ್ನ್ನು ಗೆಲ್ಲಿಸಿದ್ದಾರೆ. 5ವರ್ಷಗಳಿಂದ ಪಂಜಾಬ್ ಜನರನ್ನು ಸೌಲಭ್ಯ ವಂಚಿತರನ್ನಾಗಿಸಿದವರನ್ನು, ನಾವು ಪಂಜಾಬ್ನ್ನು ಸದಾ ಆಳುತ್ತೇವೆ ಎಂಬ ಭ್ರಮೆಯಲ್ಲಿ ಇದ್ದವರನ್ನು ಇಲ್ಲಿನ ಜನರು ಓಡಿಸಿದ್ದಾರೆ. ಅವರಿಗೆ ತಕ್ಕ ಪಾಠವನ್ನು ಇಲ್ಲಿನ ಮತದಾರರು ಕಲಿಸಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.
ಪಂಜಾಬ್ನ ಆರ್ಥಿಕತೆ ಸುಧಾರಣೆಯನ್ನು ಪುನರುಜ್ಜೀವನಗೊಳಿಸಿ, ಇಲ್ಲಿನ ವೈಭವನ್ನು ಮರುಸ್ಥಾಪಿಸಲು ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಈ ವಿಜಯ ನಮ್ಮ ಪಾಲಿಗೆ ಎಷ್ಟು ಮುಖ್ಯ ಎಂಬುದು ನಮಗೇ ಗೊತ್ತು. ನಮಗೆ ಈ ಗೆಲುವಿನ ಬೆಲೆ ಗೊತ್ತು. 2017ರಲ್ಲಿಯೇ ನಮಗೆ ಇಲ್ಲಿ ಗೆಲುವಿನ ಭರವಸೆ ಇತ್ತು. ಆದರೆ ಆ ವರ್ಷ ಕೈತಪ್ಪಿದ್ದು, ಈಗ ಕೈ ಹಿಡಿಯಿತು ಎಂದಿದ್ದಾರೆ. ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಆಪ್ ಅಧಿಕಾರ ಗದ್ದುಗೆಗೆ ಏರಿದೆ. ಭಗವಂತ್ ಮಾನ್ ಅಲ್ಲಿನ ಮುಂದಿನ ಮುಖ್ಯಮಂತ್ರಿಯಾಗಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಎಂ-ವೈ ಸಮೀಕರಣ; ಭರವಸೆಗಳು ಜನಮನ ಗೆದ್ದದ್ದು ಹೇಗೆ?
Published On - 5:23 pm, Thu, 10 March 22