ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದಿಲ್ಲವೆಂದ ಪಂಜಾಬ್ ಹೊಸ ಸಿಎಂ ಭಗವಂತ್ ಮಾನ್; ಮತ್ತೆಲ್ಲಿ?
ಸರ್ಕಾರಿ ಕಚೇರಿಗಳಲ್ಲಿ ಮುಖ್ಯಮಂತ್ರಿಗಳ ಫೋಟೋ ಇರುವುದಿಲ್ಲ. ಅದರ ಬದಲಿಗೆ ಭಗತ್ ಸಿಂಗ್ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಫೋಟೋ ಇರಬೇಕು ಎಂದೂ ಭಗವಂತ್ ಮಾನ್ ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (Aam Aadmi Party) ಸರ್ಕಾರ ರಚನೆ ಮಾಡಲಿದ್ದು, ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಆಯಾ ರಾಜ್ಯಗಳ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಸಂಪ್ರದಾಯ. ಆದರೆ ಭಗವಂತ್ ಮಾನ್ ತಾವು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಬದಲಿಗೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರು ವಾಸವಾಗಿದ್ದ ಗ್ರಾಮ, ನವಾನ್‌ಶಹರ್ ಜಿಲ್ಲೆಯ ಖಟ್ಕರ್‌ಕಾಲನ್‌ನಲ್ಲಿ ಈ ಸಮಾರಂಭ ನಡೆಸುವುದಾಗಿ ತಿಳಿಸಿದ್ದಾರೆ.
ಧುರಿ ವಿಧಾನಸಭಾ ಕ್ಷೇತ್ರದಿಂದ ಸುಮಾರು 58 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಬಳಿಕ ಮಾತನಾಡಿದ ಅವರು, ಈ ಸಲ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವುದಿಲ್ಲ. ಖಟ್ಕರ್‌ಕಾಲನ್‌ನಲ್ಲಿ ಆಯೋಜಿಸಲಾಗುವುದು. ಹಾಗೇ, ಸರ್ಕಾರಿ ಕಚೇರಿಗಳಲ್ಲಿ ಮುಖ್ಯಮಂತ್ರಿಗಳ ಫೋಟೋ ಇರುವುದಿಲ್ಲ. ಅದರ ಬದಲಿಗೆ ಭಗತ್ ಸಿಂಗ್ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಫೋಟೋ ಇರಬೇಕು ಎಂದೂ ತಿಳಿಸಿದ್ದಾರೆ.
ಹಾಗೇ, ಚುನಾವಣೆಯಲ್ಲಿ ಸೋತ ರಾಜಕೀಯ ಧುರೀಣರ ಹೆಸರುಗಳನ್ನು ಉಲ್ಲೇಖಿಸಿದ ಮಾನ್, ಪ್ರಕಾಶ್ ಸಿಂಗ್ ಬಾದಲ್, ಸುಖ್ಬೀರ್ ಸಿಂಗ್ ಬಾದಲ್ ಸೋತರು, ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಟಿಯಾಲಾದಲ್ಲಿ ಸೋತರು. ಸಿಧು, ಮಜಿಥಾ, ಚರಣ್ಜಿತ್ ಸಿಂಗ್ ಛನ್ನಿಯೂ ಸೋತಿದ್ದಾರೆ. ಇವರಲ್ಲೆರನ್ನೂ ಹಿಂದಿಕ್ಕಿ ನಮ್ಮ ಪಕ್ಷ ಗೆದ್ದಿದೆ ಎಂದು ಹೇಳಿದರು. ಇನ್ನು ತಾವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲು ಮಾಡುವ ಕೆಲಸವೆಂದರೆ, ಶಾಲೆ, ಆರೋಗ್ಯ ಕ್ಷೇತ್ರ, ಉದ್ಯಮ, ಕೃಷಿ ಕ್ಷೇತ್ರಗಳನ್ನು ಲಾಭದಾಯಕಗೊಳಿಸುವುದು ಮತ್ತು ಮಹಿಳೆಯರ ಸುರಕ್ಷತೆ, ಕ್ರೀಡಾಕ್ಷೇತ್ರದ ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸುವುದು ಎಂದು ತಿಳಿಸಿದರು.
ಎಲ್ಲರೂ ಒಟ್ಟಾಗಿ ಪಂಜಾಬ್ಗಾಗಿ ಕೆಲಸ ಮಾಡೋಣ. ಒಂದೇ ತಿಂಗಳಲ್ಲಿ ನಿಮಗೆಲ್ಲ ಪಂಜಾಬ್ನಲ್ಲಿ ಆದ ಬದಲಾವಣೆ ಗಮನಕ್ಕೆ ಬರಲು ಶುರುವಾಗುತ್ತದೆ. ಇದೀಗ ಆಪ್ ಪಕ್ಷಕ್ಕೆ ಯಾರೆಲ್ಲ ಮತ ಹಾಕಿಲ್ಲವೋ ಅವರೇನೂ ಚಿಂತಿಸುವುದು ಬೇಡ. ನಮ್ಮ ಸರ್ಕಾರ ಎಲ್ಲ ವರ್ಗದ ಜನರಿಗೂ ಒಂದೇ ತೆರನಾದ ಅವಕಾಶ, ಅನುಕೂಲ ನೀಡುತ್ತದೆ. ತಾರತಮ್ಯ ಮಾಡುವುದಿಲ್ಲ ಎಂದು ಭಗವಂತ್ ಮಾನ್ ಭರವಸೆ ಕೊಟ್ಟಿದ್ದಾರೆ. ಅಂದಹಾಗೇ, ಪಂಜಾಬ್ನ 117 ಕ್ಷೇತ್ರಗಳಲ್ಲಿ ಆಪ್ ಬರೋಬ್ಬರಿ 91 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಸ್ಪಷ್ಟ ಬಹುಮತದ ಸರ್ಕಾರ ರಚನೆ ಮಾಡುತ್ತಿದೆ. ಗೆಲುವು ಸ್ಪಷ್ಟವಾಗುತ್ತಿದ್ದಂತೆ ಅಲ್ಲಿನ ಜನರಿಗೆ ಅರವಿಂದ್ ಕೇಜ್ರಿವಾಲ್ ಅಭಿನಂದನೆ, ವಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಆಪ್ ಈಗ ರಾಷ್ಟ್ರೀಯ ಪಕ್ಷ, ಅರವಿಂದ್ ಕೇಜ್ರಿವಾಲ್ ಪ್ರಧಾನಿಯಾಗಲಿದ್ದಾರೆ: ರಾಘವ್ ಚಡ್ಡಾ