ನವದೆಹಲಿ, ಏಪ್ರಿಲ್ 9: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಡಿಯಿಂದ ತಮ್ಮನ್ನು ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ಮಂಗಳವಾರ ವಜಾಗೊಳಿಸಿದೆ. ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಅವ್ಯವಹಾರ ಆಗಿದೆ ಎನ್ನುವ ಆರೋಪ ಮುಖ್ಯಮಂತ್ರಿಗಳ ಮೇಲಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ತಮ್ಮನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಹೈಕೋರ್ಟ್ನಲ್ಲಿ ಕೇಜ್ರಿವಾಲ್ ಪ್ರಶ್ನೆ ಮಾಡಿದ್ದರು. ಇಡಿ ಕಸ್ಟಡಿಗೆ ಒಪ್ಪಿಸಿದ ಟ್ರಯಲ್ ಕೋರ್ಟ್ ತೀರ್ಪನ್ನೂ ಅವರು ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ದೆಹಲಿ ಉಚ್ಚ ನ್ಯಾಯಾಲಯ, ಈ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎನ್ನುವ ಅರೋಪದಲ್ಲಿ ಹುರುಳಿದೆ. ಬಂಧನದ ಕ್ರಮವೂ ಕಾನೂನು ಪ್ರಕಾರವೇ ಇದೆ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾಗೊಳಿಸಲು ನಿರ್ಧರಿಸಿತು.
ಅರವಿಂದ್ ಕೇಜ್ರಿವಾಲ್ ಜಾಮೀನಿಗಾಗಿ ಮನವಿ ಮಾಡಿದ್ದಲ್ಲ. ಇಡಿ ಬಂಧನ ಕಾನೂನು ಸಮ್ಮತವಲ್ಲ, ಅಕ್ರಮವಾಗಿ ತಮ್ಮನ್ನು ಬಂಧಿಸಿಟ್ಟುಕೊಳ್ಳಲಾಗಿದೆ ಎಂದು ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮನ್ನು ಬಂಧಿಸಲಾಗಿದೆ. ರಾಜಕೀಯ ಲಾಭಕ್ಕೆ ಈ ಕೆಲಸ ಮಾಡಲಾಗಿದೆ ಎನ್ನುವ ಸಿಎಂ ವಾದವನ್ನೂ ಕೋರ್ಟ್ ಒಪ್ಪಲಿಲ್ಲ.
ಇದನ್ನೂ ಓದಿ: ಮದ್ಯನೀತಿ ಹಗರಣ: ಬಿಆರ್ಎಸ್ ನಾಯಕಿ ಕೆ ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ
ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಅಕ್ರಮದಲ್ಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಪಾತ್ರ ಗುರುತರವಾಗಿದೆ ಎನ್ನುವುದಕ್ಕೆ, ಮತ್ತು ಅಕ್ರಮದಿಂದ ಬಂದ ಲಾಭವನ್ನು ಮರೆಮಾಚುವ ಪ್ರಯತ್ನ ಮಾಡಿದ್ದರು ಎನ್ನುವುದಕ್ಕೆ ಇಡಿ ಬಲವಾದ ದಾಖಲೆಗಳನ್ನು ಹೊಂದಿದೆ. ಈ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ವೈಯಕ್ತಿಕವಾಗಿಯೂ ಮತ್ತು ಎಎಪಿ ಪಕ್ಷದ ಸಂಚಾಲಕರಾಗಿಯೂ ಭಾಗಿಯಾಗಿದ್ದರು ಎಂಬುದು ತಿಳಿದುಬರುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಲಾಭಕ್ಕೋಸ್ಕರ ಬಂಧಿಸಲಾಗಿದೆ ಎನ್ನುವ ಕೇಜ್ರಿವಾಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕೋರ್ಟ್, ‘ಅರ್ಜಿದಾರರು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಚುನಾವಣಾ ಕಾಲವೋ ಇಲ್ಲವೋ ಆದರೆ, ಕಾನೂನು ಪ್ರಕಾರ ಅವರ ಬಂಧನ ಆಗಿದೆ ಎನ್ನುವುದನ್ನು ಮಾತ್ರ ಕೋರ್ಟ್ ಪರಿಗಣಿಸುತ್ತದೆ,’ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Tue, 9 April 24