ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಆಶೀಶ್​ ಮಿಶ್ರಾಗೆ ಪೊಲೀಸರಿಂದ ಸಮನ್ಸ್​

| Updated By: Lakshmi Hegde

Updated on: Oct 07, 2021 | 5:44 PM

ಲಖಿಂಪುರ ಖೇರಿಯಲ್ಲಿ ರೈತರತ್ತ ಕಾರು ಹರಿದ ಪ್ರಕರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಆಶೀಶ್​ ಮಿಶ್ರಾ ಹೇಳಿಕೊಂಡಿದ್ದಾರೆ. ನಾನು ಘಟನೆ ನಡೆದಾಗ ಲಖಿಂಪುರದಲ್ಲಿ ಇರಲಿಲ್ಲ ಎಂದೂ ಹೇಳಿದ್ದಾರೆ.

ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಆಶೀಶ್​ ಮಿಶ್ರಾಗೆ ಪೊಲೀಸರಿಂದ ಸಮನ್ಸ್​
ಆಶೀಶ್​ ಮಿಶ್ರಾ
Follow us on

ಲಖಿಂಪುರ ಖೇರಿ ಹಿಂಸಾಚಾರ (Lakhimpur Kheri violence) ಪ್ರಕರಣದಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ (Ashish Mishra)ರಿಗೆ ಉತ್ತರಪ್ರದೇಶ ಪೊಲೀಸರು ಇಂದು ಸಮನ್ಸ್​ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.  ಇನ್ನು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಈಗಾಗಲೇ ಆಶೀಶ್​ ಮಿಶ್ರಾ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಅಂದು ರೈತರಿಗೆ ಡಿಕ್ಕಿ ಹೊಡೆದ ಬೆಂಗಾವಲು ವಾಹನದಲ್ಲಿ ಇದ್ದ ಆಶೀಶ್​ ಪಾಂಡೆ ಮತ್ತು ಲವಕುಶ್​ ಎಂಬುವರನ್ನು ಇಂದು ಬಂಧಿಸಲಾಗಿದೆ. ಇವರಿಬ್ಬರೂ ಆಶೀಶ್​ ಮಿಶ್ರಾ ಆಪ್ತರೂ ಹೌದು ಎಂದು ಲಖನೌ ರೇಂಜ್​​ನ ಐಜಿ ಲಕ್ಷ್ಮೀ ಸಿಂಗ್​ ತಿಳಿಸಿದ್ದಾರೆ.  

ರೈತರಿಗೆ ವಾಹನಗಳು ಡಿಕ್ಕಿ ಹೊಡೆದ ಸ್ಥಳದಿಂದ ಕಿಯೋಸ್ಕ್​ ಯಂತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅದಕ್ಕೆ ಸಂಬಂಧಪಟ್ಟ ವಿಧಿವಿಜ್ಞಾನ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಆಶೀಶ್​ ಮಿಶ್ರಾ ನಾಪತ್ತೆಯಾಗಿದ್ದು, ಅವರನ್ನು ಹುಡುಕುವ ಕೆಲಸ ಆಗುತ್ತಿದೆ ಎಂದೂ ಲಕ್ಷ್ಮೀ ಸಿಂಗ್​ ಮಾಹಿತಿ ನೀಡಿದ್ದಾರೆ. ರೈತರಿಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಆಶೀಶ್​ ಮಿಶ್ರಾ ಇದ್ದರು ಮತ್ತು ಅವರು ರೈತರತ್ತ ಗುಂಡನ್ನೂ ಹಾರಿಸಿದ್ದಾರೆ ಎಂಬುದು ಎಫ್​ಐಆರ್​ನಲ್ಲಿ ದಾಖಲಾಗಿದೆ. ಸದ್ಯಕ್ಕಂತೂ ಅವರು ಕಾಣಿಸುತ್ತಿಲ್ಲ. ಶೋಧ ಮುಂದುವರಿಸುತ್ತೇವೆ ಎಂದೂ ಲಕ್ಷ್ಮೀಸಿಂಗ್​ ಹೇಳಿದ್ದಾರೆ.

ಆರೋಪ ನಿರಾಕರಿಸಿರುವ ಆಶೀಶ್​ ಮಿಶ್ರಾ
ಲಖಿಂಪುರ ಖೇರಿಯಲ್ಲಿ ರೈತರತ್ತ ಕಾರು ಹರಿದ ಪ್ರಕರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಆಶೀಶ್​ ಮಿಶ್ರಾ ಹೇಳಿಕೊಂಡಿದ್ದಾರೆ. ನಾನು ಘಟನೆ ನಡೆದಾಗ ಲಖಿಂಪುರ ಖೇರಿಯಲ್ಲಿ ಇರಲಿಲ್ಲ.  ಬೆಳಗ್ಗೆ 9ಗಂಟೆಯಿಂದಲೂ ಬೇರೆ ಒಂದು ಕಾರ್ಯಕ್ರಮದಲ್ಲಿ ಇದ್ದೆ ಎಂದಿದ್ದಾರೆ. ಹಾಗೇ, ಕೇಂದ್ರ ಸಚಿವ ಅಜಯ್​ ಮಿಶ್ರಾ ಕೂಡ ಇದನ್ನೇ ಹೇಳಿದ್ದಾರೆ. ಹಾಗೂ ಒಮ್ಮೆ ನನ್ನ ಪುತ್ರ ಇರುವುದು ಸಾಬೀತಾದರೆ ತಾವು ರಾಜೀನಾಮೆ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹರ್ಯಾಣದಲ್ಲೂ ಪ್ರತಿಭಟನಾ ನಿರತ ರೈತರತ್ತ ನುಗ್ಗಿದ ಕಾರು; ಪೊಲೀಸರಿಗೆ ದೂರು ನೀಡಿದ ಗಾಯಾಳು ರೈತ

ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವರ ಪುತ್ರನ ಆಪ್ತರಿಬ್ಬರ ಬಂಧನ !

Published On - 5:34 pm, Thu, 7 October 21