ಅಸ್ಸಾಂನಲ್ಲಿ ಕ್ಯಾಬಿನೆಟ್ ವಿಸ್ತರಣೆ; ಹಿಮಂತ ಬಿಸ್ವ ಶರ್ಮಾ ಸಂಪುಟಕ್ಕೆ 12 ನೂತನ ಸಚಿವರ ಸೇರ್ಪಡೆ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಇಂದು (ಜೂನ್ 5) ನಡೆದ ಅಧಿಕೃತ ಸಮಾರಂಭದಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ಒಟ್ಟು 12 ಶಾಸಕರು ಹೊಸ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವಿಸ್ತರಣೆಯೊಂದಿಗೆ ಅಸ್ಸಾಂ ಸರ್ಕಾರದ ಒಟ್ಟು ಸಚಿವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಅಸ್ಸಾಂ ರಾಜಧಾನಿ ಗುವಾಹಟಿಯ 'ಜ್ಯೋತಿ-ಬಿಷ್ಣು ಅಂತಾರಾಷ್ಟ್ರೀಯ ಕಲಾ ಮಂದಿರ'ದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅಸ್ಸಾಂ ರಾಜ್ಯಪಾಲರಾದ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಅಸ್ಸಾಂನಲ್ಲಿ ಕ್ಯಾಬಿನೆಟ್ ವಿಸ್ತರಣೆ; ಹಿಮಂತ ಬಿಸ್ವ ಶರ್ಮಾ ಸಂಪುಟಕ್ಕೆ 12 ನೂತನ ಸಚಿವರ ಸೇರ್ಪಡೆ
Assam Cabinet
Image Credit source: x

Updated on: Jun 05, 2026 | 5:01 PM

ಗುವಾಹಟಿ, ಜೂನ್ 5: ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ನೇತೃತ್ವದ ಎನ್‌ಡಿಎ (NDA) ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು, ಒಟ್ಟು 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯ ಅಶ್ವಿನಿ ರಾಯ್ ಸರ್ಕಾರ್, ನಿಲಿಮಾ ದೇವಿ ಮತ್ತು ಸುಶಾಂತ ಬೊರ್ಗೊಹೈನ್ ಅವರಂತಹ ಹೊಸ ಮುಖಗಳಿಗೆ ಮೊದಲ ಬಾರಿಗೆ ಸಚಿವ ಸ್ಥಾನ ನೀಡಲಾಗಿದೆ. ಅಸ್ಸಾಂ ವಿಧಾನಸಭೆಯ ಮಾಜಿ ಸ್ಪೀಕರ್ ಬಿಸ್ವಜಿತ್ ದೈಮರಿ ಅವರು ಕೂಡ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಜೆಪಿಯ ಪ್ರಬಲ ಮೈತ್ರಿ ಪಕ್ಷವಾದ ಅಸೋಂ ಗಣ ಪರಿಷತ್ (AGP) ನಾಯಕ ಕೇಶಬ್ ಮಹಾಂತ ಅವರು ಮರಳಿ ಸಂಪುಟ ಸೇರಿದ್ದಾರೆ. 126 ಸದಸ್ಯರ ಬಲ ಹೊಂದಿರುವ ಅಸ್ಸಾಂ ವಿಧಾನಸಭೆಯಲ್ಲಿ ನಿಯಮಾವಳಿಗಳ ಪ್ರಕಾರ ಗರಿಷ್ಠ 19 ಸಚಿವರನ್ನು ಹೊಂದಲು ಅವಕಾಶವಿದೆ. ಮೇ 12ರಂದು ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಮತ್ತು ಇತರ ನಾಲ್ವರು ಸಚಿವರಾದ ಅತುಲ್ ಬೋರಾ, ಚರಣ್ ಬೋರೋ, ಅಜಂತಾ ನಿಯೋಗ್ ಮತ್ತು ರಾಮೇಶ್ವರ್ ತೇಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದಿನ 12 ಸಚಿವರ ಸೇರ್ಪಡೆಯೊಂದಿಗೆ ಸಂಪುಟದ ಒಟ್ಟು ಬಲ 17ಕ್ಕೆ ತಲುಪಿದ್ದು, ಇನ್ನೂ 2 ಸ್ಥಾನಗಳು ಬಾಕಿ ಉಳಿದಿವೆ.


ಇದನ್ನೂ ಓದಿ: ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ್​​ ಪ್ರಮಾಣ: ಸತತ ಎರಡು ಅವಧಿಗೆ ಕಾಂಗ್ರೆಸೇತರ ಮೊದಲ ಸಿಎಂ ಎಂಬ ಹೆಗ್ಗಳಿಕೆ

ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು 102 ಸ್ಥಾನಗಳನ್ನು (ಬಿಜೆಪಿ 82, ಎಜಿಪಿ 10, ಬಿಪಿಎಫ್ 10) ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಅಸ್ಸಾಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Fri, 5 June 26

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us