ಮುಂಬೈ: ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯವೆದ್ದ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವು ಶಿವಸೇನೆಯ ಶಾಸಕ ದಿವಂಗತ ರಮೇಶ್ ಲಟ್ಕೆ ಪ್ರತಿನಿಧಿಸುತ್ತಿದ್ದ ಮುಂಬೈನ ಅಂಧೇರಿ (ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ತನ್ನ ಮೊದಲ ಜನಭಿಪ್ರಾಯದ ಪರೀಕ್ಷೆಯನ್ನು ಎದುರಿಸಲಿದೆ.
ಶಿವಸೇನೆಯ ಎರಡೂ ಬಣಗಳು ಶಿವಸೇನೆಯ “ಬಿಲ್ಲು ಮತ್ತು ಬಾಣ” ಗುರುತಿನಲ್ಲಿ ಸ್ಪರ್ಧಿಸುತ್ತಿರುವುದರಿಂದ, ಈಗ ಮಹಾರಾಷ್ಟ್ರದ ಉಪಚುನಾವಣೆ ಸ್ಪರ್ಧೆಯು ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ. ಯಾರಿಗೆ ಈ ಚುನಾವಣೆಯ ಗೆಲ್ಲುವು ಎಂಬುದನ್ನು ಕಾದುನೋಡಬೇಕಿದೆ. ಈಗಾಗಲೇ ಎರಡು ಪಕ್ಷದ ಗುರುತಿಗಾಗಿ ಕಿತ್ತಾಟ ನಡೆಯುತ್ತಿದೆ. ಈ ವಿಚಾರದ ಬಗ್ಗೆ ಚುನಾವಣಾ ಆಯೋಗವು ಪ್ರಸ್ತುತ ಮನವಿಗಳನ್ನು ಆಲಿಸುತ್ತಿದೆ.
ಚುನಾವಣಾ ಆಯೋಗ ಇಂದು ( ಸೋಮವಾರ) ಉಪಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನವೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ. ಸತತ ಎರಡು ಬಾರಿ ಗೆದ್ದಿದ್ದ ಲಟ್ಕೆ ಅವರ ನಿಧನದ ನಂತರ ಅಂಧೇರಿ (ಪೂರ್ವ) ಸ್ಥಾನವು ಮೇ ತಿಂಗಳಲ್ಲಿ ತೆರವಾಗಿತ್ತು.
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿಂಧೆ ಬಣವು ಮುಂಬೈ ನಾಗರಿಕ ಸಂಸ್ಥೆಯ ಮಾಜಿ ಕಾರ್ಪೊರೇಟರ್ ಮುರ್ಜಿ ಪಟೇಲ್ ಅವರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ದಿವಂಗತ ಲಟ್ಕೆ ಅವರ ಪತ್ನಿ ರುತುಜಾ ಲಟ್ಕೆ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಸೋಮವಾರ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಉಪಚುನಾವಣೆಯಲ್ಲಿ ತಮ್ಮ ಪಕ್ಷವು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದೆ.
ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಅವರು ಉಪನಗರ ಅಂಧೇರಿಯಲ್ಲಿ ಉಪಚುನಾವಣೆಯ ಪಕ್ಷದ ಕೇಂದ್ರ ಕಚೇರಿಯನ್ನು ಭಾನುವಾರ ಉದ್ಘಾಟಿಸಿದರು. ಮುರ್ಜಿ ಪಟೇಲ್ ಸ್ಥಳೀಯ ಜನರಲ್ಲಿ ಹೆಚ್ಚಿನ ಬೆಂಬಲವನ್ನು ಹೊಂದಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ನವೆಂಬರ್ 3ರಂದು ಆರು ರಾಜ್ಯಗಳ ವಿಧಾನಸಭಾ ಉಪಚುನಾವಣೆ , ನ.6ರಂದು ಫಲಿತಾಂಶ ಪ್ರಕಟ
ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರವು ಮುಂಬೈ ಉಪನಗರ ಜಿಲ್ಲೆಯಲ್ಲಿರುವ 26 ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ದಿವಂಗತ ಲಟ್ಕೆ ಅವರು 2014 ರಲ್ಲಿ ಕಾಂಗ್ರೆಸ್‌ನಿಂದ ಸ್ಥಾನವನ್ನು ಪಡೆದುಕೊಂಡಿದ್ದು. 2009 ರಲ್ಲಿ ಕಾಂಗ್ರೆಸ್‌ನ ಸುರೇಶ್ ಶೆಟ್ಟಿ ಪ್ರತಿನಿಧಿಸಿದ್ದರು.
Published On - 5:50 pm, Mon, 3 October 22