ನವದೆಹಲಿ: ಮುಂದಿನ ವರ್ಷ ಅಂದರೆ 2022ರ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಉತ್ತರ ಪ್ರದೇಶ, ಮಣಿಪುರ, ಗೋವಾ ಮತ್ತು ಉತ್ತರಾಖಂಡದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಎಬಿಪಿ ಸಿ-ವೋಟರ್ ಇತ್ತೀಚಿನ ಸಮೀಕ್ಷೆ ಭವಿಷ್ಯ ನುಡಿದಿದೆ. ಈ ಸಮೀಕ್ಷೆಯ ಪ್ರಕಾರ, ಪಂಜಾಬ್ ಚುನಾವಣೆಯಲ್ಲಿ ಯಾರಿಗೂ ಬಹುಮತ ಬರದೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಾಗಿದ್ದು, ಆಮ್ ಆದ್ಮಿ ಪಾರ್ಟಿ (ಎಎಪಿ) ಉತ್ತರ ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪಂಜಾಬ್, ಗೋವಾ ಹಾಗೂ ಉತ್ತರಾಖಂಡದಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಸ್ಪರ್ಧೆ ನೀಡಲಿದೆ. ಪಂಜಾಬ್ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಒಳಜಗಳದಿಂದಲೇ ಆ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಕಳೆದ ತಿಂಗಳು ನಡೆಸಿದ ಎಬಿಪಿ-ಸಿ ಮತದಾರರ ಸಮೀಕ್ಷೆ ತಿಳಿಸಿದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ರಾಜಕೀಯವಾಗಿ ನಿರ್ಣಾಯಕ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಶೇ. 41.3ರಷ್ಟು ಮತ ಪಡೆಯಬಹುದು. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಶೇ .32, ಬಹುಜನ ಸಮಾಜ ಪಕ್ಷಕ್ಕೆ ಶೇ .15, ಕಾಂಗ್ರೆಸ್ಗೆ ಶೇ .6ರಷ್ಟು ಮತಗಳು ಬರಬಹುದು. ಈ ರಾಜ್ಯದಲ್ಲಿ ಬಿಜೆಪಿ ಶೇ.41ರಷ್ಟು ಮತಗಳನ್ನು ನಿರಂತರವಾಗಿ ಕಾಯ್ದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂದರೆ 2017ರಲ್ಲಿ ಆಡಳಿತ ಪಕ್ಷ ಬಿಜೆಪಿ ರಾಜ್ಯದಲ್ಲಿ 41.4ರಷ್ಟು ಮತಗಳನ್ನು ಗಳಿಸಿತ್ತು. ಈ ಬಾರಿ ಕೂಡ ಬಿಜೆಪಿ 241ರಿಂದ 249 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಸಮಾಜವಾದಿ ಪಕ್ಷ 130ರಿಂದ 138 ಸ್ಥಾನಗಳನ್ನು ಪಡೆಯಬಹುದು. ಸಮೀಕ್ಷೆಯ ಪ್ರಕಾರ ಮಾಯಾವತಿಯವರ ಬಿಎಸ್ಪಿ ಸ್ಥಾನಗಳು 15 ರಿಂದ 19ಕ್ಕೆ ಕುಸಿಯಬಹುದು. ಕಾಂಗ್ರೆಸ್ 3 ರಿಂದ 7 ಸ್ಥಾನಗಳನ್ನು ಪಡೆಯಬಹುದು.
ABP ಸಿ- ವೋಟರ್ ಸಮೀಕ್ಷೆಯು ಪಂಜಾಬ್ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ. ಪಂಜಾಬ್ ನಲ್ಲಿ 117 ಸದಸ್ಯರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಎಎಪಿ ದೊಡ್ಡ ಅನುಕೂಲವನ್ನು ಪಡೆಯಬಹುದು. ಎಎಪಿ ಶೇ. 36 ರಷ್ಟು, ಕಾಂಗ್ರೆಸ್ ಶೇ. 32, ಶಿರೋಮಣಿ ಅಕಾಲಿ ದಳ (ಎಸ್ ಎಡಿ) ಶೇ. 22, ಬಿಜೆಪಿ ಶೇ.4 ಮತ್ತು ಇತರರು ಶೇ. 6 ಸ್ಥಾನಗಳನ್ನು ಪಡೆಯಬಹುದು. ಸೀಟುಗಳ ವಿಷಯಕ್ಕೆ ಬಂದರೆ ಆಮ್ ಆದ್ಮಿ ಪಕ್ಷ 49 ರಿಂದ 55, ಕಾಂಗ್ರೆಸ್ 30 ರಿಂದ 47, ಅಕಾಲಿದಳ 17 ರಿಂದ 25, ಬಿಜೆಪಿ 0-1 ಮತ್ತು ಇತರರು 0-1 ಸ್ಥಾನಗಳನ್ನು ಪಡೆಯಬಹುದು.
ಮುಂದಿನ ವರ್ಷ ನಡೆಯಲಿರುವ ಉತ್ತರಾಖಂಡ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬಹುದು. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಶೇ. 34, ಬಿಜೆಪಿ ಶೇ .45, ಆಮ್ ಆದ್ಮಿ ಪಕ್ಷ ಶೇ .15 ಮತ್ತು ಇತರರು ಶೇ .6 ರಷ್ಟು ಮತ ಪಡೆಯಬಹುದು. ಕಾಂಗ್ರೆಸ್ ಪಕ್ಷವು 21-25 ಸ್ಥಾನಗಳನ್ನು, ಬಿಜೆಪಿ 42-46 ಸ್ಥಾನಗಳನ್ನು, ಆಮ್ ಆದ್ಮಿ ಪಕ್ಷ 0-4 ಸ್ಥಾನಗಳನ್ನು ಮತ್ತು ಇತರರು 0-2 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯ ಪ್ರಕಾರ, ಕರಾವಳಿ ರಾಜ್ಯದಲ್ಲಿ 40 ಸದಸ್ಯರ ವಿಧಾನಸಭೆಯಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳೊಂದಿಗೆ ಗೋವಾದಲ್ಲಿ ಬಿಜೆಪಿ ಮತ್ತೊಮ್ಮೆ ತನ್ನ ಸರ್ಕಾರವನ್ನು ರಚಿಸಬಹುದು. ಸಮೀಕ್ಷೆಯ ಪ್ರಕಾರ, ಗೋವಾದಲ್ಲಿ ಬಿಜೆಪಿ 24 ರಿಂದ 28 ಸ್ಥಾನಗಳನ್ನು ಪಡೆಯಬಹುದು, ಕಾಂಗ್ರೆಸ್ ಕೇವಲ 1 ರಿಂದ 5 ಸ್ಥಾನಗಳನ್ನು, ಆಮ್ ಆದ್ಮಿ ಪಕ್ಷ 3 ರಿಂದ 7 ಮತ್ತು ಇತರರು 4 ರಿಂದ 8 ಸ್ಥಾನಗಳನ್ನು ಪಡೆಯಬಹುದು. ಬಿಜೆಪಿ ಶೇ .38 ರಷ್ಟು ಮತ ಹಂಚಿಕೊಳ್ಳಬಹುದು. ಕಾಂಗ್ರೆಸ್ ಶೇ.18, ಎಎಪಿ ಶೇ.23 ಮತ್ತು ಇತರರು ಶೇ. 21ರಷ್ಟು ಮತ ಗಳಿಸಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಕಾಂಗ್ರೆಸ್ಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.
ಮಣಿಪುರದಲ್ಲಿ ಬಿಜೆಪಿ 21 ರಿಂದ 25 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆಯು ತಿಳಿಸಿದೆ. ಇದರ ಹೊರತಾಗಿ ಕಾಂಗ್ರೆಸ್ 18 ರಿಂದ 22 ಸ್ಥಾನಗಳನ್ನು, ಪ್ರಾದೇಶಿಕ ನಾಗಾ ಪೀಪಲ್ಸ್ ಫ್ರಂಟ್ (NPF) 4 ರಿಂದ 8 ಮತ್ತು ಇತರರು 1 ರಿಂದ 5 ಸ್ಥಾನಗಳನ್ನು ಪಡೆಯಬಹುದು. ಆದಾಗ್ಯೂ, ಈಶಾನ್ಯ ರಾಜ್ಯದಲ್ಲಿ ಸರ್ಕಾರ ರಚಿಸಲು ಕನಿಷ್ಠ 31 ಸ್ಥಾನಗಳ ಅಗತ್ಯವಿದೆ. ಮಣಿಪುರ ಚುನಾವಣೆಯಲ್ಲಿ ಬಿಜೆಪಿ ಶೇ. 36ರಷ್ಟು ಮತಗಳನ್ನು ಪಡೆಯಬಹುದು. ಕಾಂಗ್ರೆಸ್ ಶೇ. 34, ಎನ್ ಪಿ ಎಫ್ 9 ಮತ್ತು ಇತರರು ಶೇ. 21ರಷ್ಟು ಮತಗಳನ್ನು ಪಡೆಯಬಹುದು.
ಇದನ್ನೂ ಓದಿ: ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಣೆ: ಕರ್ನಾಟಕದಿಂದ ಆಯ್ಕೆ ಆದವರು ಯಾರು? ಇಲ್ಲಿದೆ ವಿವರ
2024ರ ಚುನಾವಣೆಯಲ್ಲೂ ಗೆಲ್ಲುತ್ತೇವೆ, ನರೇಂದ್ರ ಮೋದಿಯವರೇ ಪ್ರಧಾನಿಯಾಗುತ್ತಾರೆ: ಅಮಿತ್ ಶಾ
Published On - 4:34 pm, Sat, 9 October 21