ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಣೆ: ಕರ್ನಾಟಕದಿಂದ ಆಯ್ಕೆ ಆದವರು ಯಾರು? ಇಲ್ಲಿದೆ ವಿವರ
BJP: 80 ಸಾಮಾನ್ಯ ಸದಸ್ಯರಲ್ಲದೆ, ಕಾರ್ಯಕಾರಣಿಯಲ್ಲಿ 50 ವಿಶೇಷ ಆಹ್ವಾನಿತರು ಮತ್ತು 179 ಖಾಯಂ ಆಹ್ವಾನಿತರು ಇರುತ್ತಾರೆ. 80 ಸದಸ್ಯರಲ್ಲಿ 37 ಮಂದಿ ಕೇಂದ್ರ ಸಚಿವರು ಮತ್ತು ರಾಜ್ಯದ ಹಲವಾರು ಸಚಿವರು ಸಮಿತಿಯ ಭಾಗವಾಗಿದ್ದಾರೆ.
ದೆಹಲಿ: ಬಿಜೆಪಿ ಗುರುವಾರ 80 ಸದಸ್ಯರ ಹೊಸ ರಾಷ್ಟ್ರೀಯ ಕಾರ್ಯಕಾರಿಣಿ (National Executive) ಸಮಿತಿಯನ್ನು ರಚಿಸಿದೆ. ಸಮಿತಿಯ ಸದಸ್ಯರ ಹೆಸರನ್ನು ಕೂಡ ಘೋಷಿಸಿದೆ. ಸಮಿತಿಯ ಸದಸ್ಯರ ಪೈಕಿ ಕರ್ನಾಟಕದಿಂದ ಬಿಜೆಪಿಯ ಹಲವು ಪ್ರಮುಖ ನಾಯಕರು ಕಾರ್ಯಕಾರಿಣಿ ಸಮಿತಿಗೆ ಆಯ್ಕೆ ಆಗಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದ ಗೌಡ ಕಾರ್ಯಕಾರಿಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳ ಕಾರ್ಯಕಾರಿಣಿ ಸಮಿತಿಯ ಭಾಗವಾಗಿದ್ದಾರೆ. ಇಬ್ಬರು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ನಿರ್ಮಲಾ ಸೀತಾರಾಮನ್, ವಿಶೇಷ ಆಹ್ವಾನಿತರಾಗಿ ಕಲಬುರ್ಗಿ ಎಂಪಿ ಡಾ. ಉಮೇಶ್ ಜಾಧವ್, ಯುವ ಮೋರ್ಚಾದ ಪರವಾಗಿ ತೇಜಸ್ವಿ ಯಾದವ್, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಡಿ.ಕೆ. ಅರುಣಾ ಆಯ್ಕೆ ಆಗಿದ್ದಾರೆ.
ಬಿಜೆಪಿ ಕಾರ್ಯಕಾರಿಣಿಯಿಂದ ಇಬ್ಬರು ಪ್ರಮುಖ ನಾಯಕರನ್ನು ಕೈಬಿಟ್ಟಿದೆ. ಈ ಕಾರ್ಯಕಾರಿ ಸಮಿತಿಯಲ್ಲಿ ಪಕ್ಷದ ಸಂಸದ ವರುಣ್ ಗಾಂಧಿ ಮತ್ತು ಮಾಜಿ ಕೇಂದ್ರ ಸಚಿವ ಚೌಧರಿ ಬೀರೇಂದ್ರ ಸಿಂಗ್ ಅವರನ್ನು ಕೈಬಿಟ್ಟಿದ್ದು ಇವರಿಬ್ಬರೂ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಟೀಕಿಸಿದವರಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರನ್ನು ಒಳಗೊಂಡಂತೆ,ಪಕ್ಷದ ಹಿರಿಯರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸದಸ್ಯರಾಗಿದ್ದಾರೆ.
80 ಸಾಮಾನ್ಯ ಸದಸ್ಯರಲ್ಲದೆ, ಕಾರ್ಯಕಾರಣಿಯಲ್ಲಿ 50 ವಿಶೇಷ ಆಹ್ವಾನಿತರು ಮತ್ತು 179 ಖಾಯಂ ಆಹ್ವಾನಿತರು ಇರುತ್ತಾರೆ. 80 ಸದಸ್ಯರಲ್ಲಿ 37 ಮಂದಿ ಕೇಂದ್ರ ಸಚಿವರು ಮತ್ತು ರಾಜ್ಯದ ಹಲವಾರು ಸಚಿವರು ಸಮಿತಿಯ ಭಾಗವಾಗಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಹೊಸ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಣೆ: ವರುಣ್ ಗಾಂಧಿ ಕೈಬಿಟ್ಟ ಪಕ್ಷ