Air India: ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ: ಸರ್ಕಾರದಿಂದ ಅಧಿಕೃತ ಘೋಷಣೆ

Tata Sons: ಟಾಟಾ ಸನ್ಸ್​ ಕಂಪನಿಯು ಏರ್​ ಇಂಡಿಯಾ ಖರೀದಿಗೆ ಸಲ್ಲಿಸಿದ್ದ ಟೆಂಡರ್​ ಒಪ್ಪಿಗೆಯಾಗಿರುವುದನ್ನು ಘೋಷಿಸಿದರು.

Air India: ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ: ಸರ್ಕಾರದಿಂದ ಅಧಿಕೃತ ಘೋಷಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 08, 2021 | 4:45 PM

ದೆಹಲಿ: ಸರ್ಕಾರದ ಅಧೀನದಲ್ಲಿರುವ ಏರ್ ಇಂಡಿಯಾ ಕಂಪನಿಯು ಯಾರ ಪಾಲಾಗಲಿದೆ ಎಂಬ ಬಗ್ಗೆ ಬಹುನಿರೀಕ್ಷಿತ ಪ್ರಶ್ನೆಗೆ ಇದೀಗ ಉತ್ತರ ದೊರೆತಿದೆ. ಬಂಡವಾಳ ಹಿಂಪಡೆತ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಕಾರ್ಯದರ್ಶಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಾಟಾ ಸನ್ಸ್​ ಕಂಪನಿಯು ಏರ್​ ಇಂಡಿಯಾ ಖರೀದಿಗೆ ಸಲ್ಲಿಸಿದ್ದ ಟೆಂಡರ್​ ಒಪ್ಪಿಗೆಯಾಗಿರುವುದನ್ನು ಘೋಷಿಸಿದರು.

ಬಂಡವಾಳ ಹಿಂಪಡೆತ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕಂಪನಿಯೊಂದು ಏರ್​ಇಂಡಿಯಾ ಖರೀದಿಗೆ ಟೆಂಡರ್​ ಬಿಡ್ ಸಲ್ಲಿಸಿದ ನಂತರ, ಸರ್ಕಾರ ಅದನ್ನು ಒಪ್ಪಿಕೊಂಡ ನಂತರದಲ್ಲಿ ನಂತರದಲ್ಲಿ ಯಾವುದೇ ಚರ್ಚೆಗೆ ಅವಕಾಶ ಇರುವುದಿಲ್ಲ. ಈ ಕುರಿತು ವಿವಿಧ ಇಲಾಖೆಗಳ ಸಚಿವರು ಮತ್ತು ಉನ್ನತ ಅಧಿಕಾರಿಗಳು ಒಂದು ನಿರ್ಣಯಕ್ಕೆ ಬಂದಿದ್ದಾರೆ.

ಟಾಟಾ ಸನ್ಸ್​ ಪ್ರೈವೇಟ್ ಲಿಮಿಟೆಡ್​ 18,000 ಕೋಟಿಗೆ ಇವಿ ಕೋಟ್ ಸಲ್ಲಿಸಿತ್ತು. ಏರ್​ ಇಂಡಿಯಾ ಕಂಪನಿಯ ಬಿಡಿಂಗ್​ನಲ್ಲಿ ಟಾಟಾ ಸನ್ಸ್​ ಗೆಲುವು ಸಾಧಿಸಿದೆ ಎಂದು ಅವರು ತಿಳಿಸಿದರು.

ಭಾರತ ಸರ್ಕಾರವು ತನ್ನ ಅಧೀನದಲ್ಲಿರುವ ಏರ್​ ಇಂಡಿಯಾದ ಶೇ 100ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಒಪ್ಪಿಕೊಂಡಿದ್ದು, ಏರ್​ ಇಂಡಿಯಾ ಖಾಸಗೀಕರಣದ ಕುರಿತು ಇಷ್ಟು ವರ್ಷ ಕೇಳಿಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತಿದೆ.

ಏರ್​ ಇಂಡಿಯಾ ಖರೀದಿಗೆ ಒಟ್ಟು ಏಳು ಸಂಸ್ಥೆಗಳು ಆಸಕ್ತಿ ತೋರಿದ್ದವು (Expression of Interest – EOI). ಈ ಸಂಸ್ಥೆಗಳ ಪ್ರಸ್ತಾವವನ್ನು ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ರೂಪಿಸಿದ್ದ ಏರ್​ ಇಂಡಿಯಾ ಉದ್ದೇಶಿತ ಪರ್ಯಾಯ ಕಾರ್ಯನಿರ್ವಹಣೆ ವ್ಯವಸ್ಥೆ (Air India Specific Alternative Mechanism – AISAM) ತಂಡ ಪರಿಶೀಲಿಸಿತ್ತು. ಇದೀಗ ಇದೇ ತಂಡವು ಯಾರಿಗೆ ಏರ್ ಇಂಡಿಯಾ ಹಸ್ತಾಂತರಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಂಡಿದೆ. ಈ ಪೈಕಿ ಐದು ಪ್ರಸ್ತಾವಗಳು ನಿರ್ಧಾರಿತ ಮಾನದಂಡಗಳನ್ನು ಪೂರೈಸಿಲ್ಲ ಎನ್ನುವ ಕಾರಣಕ್ಕೆ ತಿರಸ್ಕೃತಗೊಂಡಿದ್ದವು ಎಂದು ಬಂಡವಾಳ ಹಿಂತೆಗೆತ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದರು.

ಟಾಟಾ ಸನ್ಸ್​ ಕಂಪನಿಯು ಏರ್​ ಇಂಡಿಯಾ ಖರೀದಿಗಾಗಿ ₹ 18,000 ಕೋಟಿಗೆ ಟೆಂಡರ್​ ಬಿಡ್ ಸಲ್ಲಿಸಿತ್ತು. ಬಿಡ್​ ವಿಜೇತ ಕಂಪನಿಯು ₹ 15,300 ಕೋಟಿ ಸಾಲದ ಭಾರವನ್ನು ಹೊರಬೇಕಾಗುತ್ತದೆ. ಉಳಿದ ಸಾಲವನ್ನು ಭಾರತ ಸರ್ಕಾರ ಮನ್ನಾ ಮಾಡಲಿದೆ ಎಂದು ಅವರು ತಿಳಿಸಿದರು.

ಏರ್ ಇಂಡಿಯಾ ಕಂಪನಿಯ ಮೇಲಿರುವ ಒಟ್ಟು ಸಾಲದ ಹೊರೆ ₹ 61,562 ಕೋಟಿ. ಈ ಪೈಕಿ ಬಿಡ್ ವಿಜೇತ ಟಾಟಾ ಸನ್ಸ್​ ಕಂಪನಿಯು ₹ 15,300 ಕೋಟಿ ಸಾಲದ ಹೊರೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಬಾಕಿ ₹ 46,262 ಕೋಟಿ ಸಾಲ ತೀರುವಳಿ ಜವಾಬ್ದಾರಿಯನ್ನು ಸರ್ಕಾರವು ತನ್ನಲ್ಲೇ ಉಳಿಸಿಕೊಳ್ಳಲಿದೆ. ಈ ಸಾಲವು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಕಂಪನಿಯ ಭಾಗವಾಗಿಯೇ ಉಳಿದುಕೊಳ್ಳಲಿದೆ ಎಂದು ತುಹಿನ್ ಕಾಂತ ಪಾಂಡೆ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ವಿವರಿಸಿದರು.

ಕಳೆದ 2009-10ರ ಆರ್ಥಿಕ ವರ್ಷದಿಂದೀಚೆಗೆ ಏರ್​ ಇಂಡಿಯಾಗಾಗಿ ಕೇಂದ್ರ ಸರ್ಕಾರವು ₹ 1,10,276 ಕೋಟಿ ಖರ್ಚು ಮಾಡಿದೆ. ಏರ್​ ಇಂಡಿಯಾ ಖರೀದಿಸುತ್ತಿರುವ ಟಾಟಾ ಕಂಪನಿಯು ಏರ್ ಇಂಡಿಯಾದ ಎಲ್ಲಾ ಉದ್ಯೋಗಿಗಳನ್ನು ಒಂದು ವರ್ಷದ ಅವಧಿಗೆ ಉಳಿಸಿಕೊಳ್ಳಲಿದೆ. ಎರಡನೇ ವರ್ಷದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಿದೆ. ಈ ವೇಳೆ ಸ್ವಯಂ ನಿವೃತ್ತಿ ಯೋಜನೆಯನ್ನೂ (Voluntary Retirement Scheme – VRS) ಪ್ರಕಟಿಸಲು ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ‘ಮೇ ತಿಂಗಳ ಅಂತ್ಯದೊಳಗೆ ಏರ್​ ಇಂಡಿಯಾ ಖಾಸಗೀಕರಣ ನಿಶ್ಚಿತ.. ಇಲ್ಲದಿದ್ದರೆ ಮುಚ್ಚಬೇಕಾಗುತ್ತದೆ’-ಸಚಿವ ಹರ್ದೀಪ್​ ಸಿಂಗ್ ಪುರಿ

ಇದನ್ನೂ ಓದಿ: Air India: ಕಳೆದ 10 ವರ್ಷಗಳಲ್ಲಿ ನೀವು ಏರ್​ ಇಂಡಿಯಾಗೆ ಖಾಸಗಿ ವಿವರ ನೀಡಿದ್ದರೆ, ಆ ಮಾಹಿತಿ ಸೋರಿಕೆಯಾಗಿದೆ ಎಚ್ಚರಾ!

Published On - 4:09 pm, Fri, 8 October 21