ಕಳೆದ ಕೆಲವು ತಿಂಗಳುಗಳಿಂದ ದೆಹಲಿ (Delhi) ಸರ್ಕಾರ ನಡೆಸುತ್ತಿರುವ ತ್ಯಾಗರಾಜ್ ಸ್ಟೇಡಿಯಂನಲ್ಲಿ (Thyagraj Stadium) ಕ್ರೀಡಾಪಟುಗಳು ಮತ್ತು ತರಬೇತುದಾರರಲ್ಲಿ ಸಾಮಾನ್ಯ ಹೊತ್ತಿಗಿಂತ ಮುಂಚಿತವಾಗಿ ಅಂದರೆ ಸಂಜೆ 7 ಗಂಟೆಗೆ ಮುನ್ನ ಅಲ್ಲಿಂದ ಹೊರಟು ಬಿಡಬೇಕು ಎಂದು ಒತ್ತಾಯಿಸಲಾಗಿದೆ. ಇದಕ್ಕೆ ಕಾರಣ ಏನೆಂದರೆ ದೆಹಲಿಯ ಪ್ರಧಾನ ಕಾರ್ಯದರ್ಶಿ (ಕಂದಾಯ) ಸಂಜೀವ್ ಖಿರ್ವಾರ್ (Sanjeev Khirwar) ಸುಮಾರು ಅರ್ಧ ಘಂಟೆಯ ನಂತರ ಅವರ ನಾಯಿ ಜತೆ ಇಲ್ಲಿ ವಾಕಿಂಗ್ ಮಾಡುತ್ತಾರೆ!. ನಾವು ಇಲ್ಲಿ ರಾತ್ರಿ 8-8.30 ರವರೆಗೆ ತರಬೇತಿ ನೀಡುತ್ತಿದ್ದೆವು. ಆದರೆ ಈಗ ಅಧಿಕಾರಿಯು ತನ್ನ ನಾಯಿಯನ್ನು ಕರೆದುಕೊಂಡು ಬಂದು ವಾಕಿಂಗ್ ಮಾಡುವುದರಿಂದ ಸಂಜೆ 7 ಗಂಟೆಗೆ ಮೈದಾನದಿಂದ ಹೊರಡಲು ಕೇಳಲಾಗುತ್ತದೆ. ನಮ್ಮ ತರಬೇತಿ ಮತ್ತು ಅಭ್ಯಾಸದ ದಿನಚರಿ ಅಸ್ತವ್ಯಸ್ತಗೊಂಡಿದೆ ಎಂದು ತರಬೇತುದಾರರೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಈ ಬಗ್ಗೆ 1994 ಬ್ಯಾಚ್ ಐಎಎಸ್ ಅಧಿಕಾರಿ ಖಿರ್ವಾರ್ ಅವರಲ್ಲಿ ಕೇಳಿದಾಗ ಈ ಆರೋಪಗಳೆಲ್ಲವೂ ನಿರಾಧಾರ ಎಂದು ಹೇಳಿದ್ದಾರೆ. ನಾನು ಕೆಲವೊಮ್ಮೆ ನಾಯಿ ಜತೆ ವಾಕಿಂಗ್ ಮಾಡುತ್ತೇನೆ. ಆದರೆ ಅಥ್ಲೀಟ್ಗಳ ದಿನನಿತ್ಯದ ಪ್ರಾಕ್ಟೀಸ್ಗೆ ಅಡ್ಡಿಯಾಗಿಲ್ಲ ಎಂದಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಕಳೆದ ಏಳು ದಿನಗಳಲ್ಲಿ ಮೂರು ಸಂಜೆ ಕ್ರೀಡಾಂಗಣಕ್ಕೆ ಭೇಟಿ ನೀಡಿತು. ಆಗ ಸ್ಟೇಡಿಯಂ ಗಾರ್ಡ್‌ಗಳು ಸಂಜೆ 6.30 ರ ಸುಮಾರಿಗೆ ಟ್ರ್ಯಾಕ್‌ನತ್ತ ನಡೆದುಕೊಂಡು ಹೋಗಿ ವಿಶಿಲ್ ಊದಿ 7 ಗಂಟೆಗೆ ಸ್ಟೇಡಿಯಂ ಖಾಲಿಯಾಗುವುದನ್ನು ಖಚಿತಪಡಿಸಿಕೊಂಡರು. 2010 ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾದ ಕೇಂದ್ರೀಯ ಕ್ರೀಡಾ ಸಂಕೀರ್ಣವು ರಾಷ್ಟ್ರೀಯ , ರಾಜ್ಯ ಕ್ರೀಡಾಪಟುಗಳು ಮತ್ತು ಫುಟ್‌ಬಾಲ್ ಆಟಗಾರರನ್ನು ಆಕರ್ಷಿಸುತ್ತದೆ. ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಸ್ಟೇಡಿಯಂ ನಿರ್ವಾಹಕ ಅಜಿತ್ ಚೌಧರಿ, ಸಂಜೆಯ ಅಧಿಕೃತ ಸಮಯ 4-6 ಗಂಟೆ. ಆದರೆ ಬಿಸಿಲಿನ ಕಾರಣ ಕ್ರೀಡಾಪಟುಗಳಿಗೆ ಸಂಜೆ 7 ರವರೆಗೆ ತರಬೇತಿ ನೀಡಲು ಅವಕಾಶ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆದಾಗ್ಯೂ, ಚೌಧರಿ ಅವರು ಸಮಯವನ್ನು ನಿರ್ದಿಷ್ಟಪಡಿಸುವ ಯಾವುದೇ ಅಧಿಕೃತ ಆದೇಶವನ್ನು ಹಂಚಿಕೊಂಡಿಲ್ಲ. ಅದೇ ವೇಳೆ ಸಂಜೆ 7 ಗಂಟೆಯ ನಂತರ ಯಾವುದೇ ಸರ್ಕಾರಿ ಅಧಿಕಾರಿಗಳು ಸೌಲಭ್ಯಗಳನ್ನು ಬಳಸುತ್ತಿರುವ ಬಗ್ಗೆ ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು.
“ನಾವು ಸಂಜೆ 7 ಗಂಟೆಗೆ ಮುಚ್ಚಬೇಕು. ನೀವು ಸರ್ಕಾರಿ ಕಚೇರಿಯ ಸಮಯವನ್ನು ಎಲ್ಲಿ ಬೇಕಾದರೂ ಕಾಣಬಹುದು. ಇದು (ಕ್ರೀಡಾಂಗಣ) ದೆಹಲಿ ಸರ್ಕಾರದ ಅಡಿಯಲ್ಲಿ ಸರ್ಕಾರಿ ಕಚೇರಿಯಾಗಿದೆ. ಅಂತಹ ಯಾವುದೇ ವಿಷಯದ ಬಗ್ಗೆ ನನಗೆ ತಿಳಿದಿಲ್ಲ. ನಾನು ಸಂಜೆ 7 ಗಂಟೆಗೆ ಕ್ರೀಡಾಂಗಣದಿಂದ ಹೊರಡುತ್ತೇನೆ. ಈ ಬಗ್ಗೆ ನನಗೇನೂ ತಿಳಿದಿಲ್ಲ ಎಂದು ಚೌಧರಿ ಹೇಳಿದರು.
ಮಂಗಳವಾರ ಖಿರ್ವಾರ್ ರಾತ್ರಿ 7.30 ರ ನಂತರ ತನ್ನ ನಾಯಿಯೊಂದಿಗೆ ಕ್ರೀಡಾಂಗಣವನ್ನು ಬಂದಿರುವುದನ್ನು ಇಂಡಿಯನ್ ಎಕ್ಸ್ ಪ್ರೆಸ್ ನೋಡಿದೆ. ಸೆಕ್ಯುರಿಟಿ ಗಾರ್ಡ್‌ಗಳು ಕಾವಲು ಕಾಯುತ್ತಿದ್ದರೂ ಆ ನಾಯಿ ಟ್ರ್ಯಾಕ್ ಮತ್ತು ಫುಟ್‌ಬಾಲ್ ಮೈದಾನದ ಸುತ್ತಲೂ ತಿರುಗಾಡುವುದನ್ನು ಕಾಣಬಹುದು. “ನಾನು ಕ್ರೀಡಾಪಟುಗಳಿಗೆ ಸೇರಿದ ಕ್ರೀಡಾಂಗಣವನ್ನು ಅವರು ಬಿಟ್ಟು ಹೋಗಲಿ ಎಂದು ಹೇಳುವುದಿಲ್ಲ. ನಾನು ಹೋಗುವುದಿದ್ದರೂ ಸ್ಟೇಡಿಯಂ ಮುಚ್ಚುವ ಹೊತ್ತಿಗೆ ಹೋಗುತ್ತೇನೆ. ಹೋದರೂ ನಾಯಿಯನ್ನು ಟ್ರ್ಯಾಕ್‌ನಲ್ಲಿ ಬಿಡುವುದಿಲ್ಲ…ಸುತ್ತಲೂ ಯಾರೂ ಇಲ್ಲದಿದ್ದಾಗ ನಾವು ಅವನನ್ನು ಬಿಟ್ಟು ಹೋಗುವುದಿಲ್ಲ.. ಏನಾದರೂ ಆಕ್ಷೇಪಾರ್ಹವಾಗಿದ್ದರೆ, ನಾನು ಅದನ್ನು ನಿಲ್ಲಿಸುತ್ತೇನೆ ಎಂದು ಖಿರ್ವಾರ್ ಹೇಳಿದ್ದಾರೆ.
News reports have brought to our notice that certain sports facilities are being closed early causing inconvenience to sportsmen who wish to play till late nite. CM @ArvindKejriwal has directed that all Delhi Govt sports facilities to stay open for sportsmen till 10pm pic.twitter.com/LG7ucovFbZ
— Manish Sisodia (@msisodia) May 26, 2022
ತರಬೇತಿ ಪಡೆಯುತ್ತಿರುವ ಕ್ರೀಡಾಪಟುವಿನ ಪೋಷಕರು ಇದು ಸರಿಯಲ್ಲ ಎಂದು ಹೇಳಿದ್ದಾರೆ. “ನನ್ನ ಮಗುವಿನ ತರಬೇತಿಗೆ ತೊಂದರೆ ಆಗುತ್ತಿದೆ. ಅವರು ತಡರಾತ್ರಿಯಲ್ಲಿ ಈ ಕ್ರೀಡಾಂಗಣವನ್ನು ಬಳಸುತ್ತಾರೆ ಎಂದು ಹೇಳಿದರೂ ನಾಯಿಯನ್ನು ನಡೆದಾಡಿಸಲು ಸರ್ಕಾರಿ ಸ್ವಾಮ್ಯದ ಕ್ರೀಡಾಂಗಣವನ್ನು ಬಳಸುವುದನ್ನು ನೀವು ಸಮರ್ಥಿಸಬಹುದೇ? ಇದು ಅಧಿಕಾರದ ಸಂಪೂರ್ಣ ದುರುಪಯೋಗವಾಗಿದೆ ಎಂದಿದ್ದಾರೆ.
ತರಬೇತುದಾರರು ಮತ್ತು ಕ್ರೀಡಾಪಟುಗಳು ತರಬೇತಿಯನ್ನು ಮುಂಚಿತವಾಗಿ ಮುಗಿಸಬೇಕು ಎಂದರೆ ಬಿಸಿಲಿನಲ್ಲಿಯೇ ತರಬೇತಿ ಪಡೆಯಬೇಕಾಗುತ್ತದೆ. “ಮೊದಲು, ನಾವು ರಾತ್ರಿ 8.30 ರವರೆಗೆ ಮತ್ತು ಕೆಲವೊಮ್ಮೆ 9 ಗಂಟೆಯವರೆಗೆ ತರಬೇತಿಯನ್ನು ಮುಂದುವರೆಸಿದ್ದೇವೆ. ಆದರೆ ಈಗ ನಮಗೆ ಯಾವುದೇ ಆಯ್ಕೆಯಿಲ್ಲ. ಹಿಂದೆ, ನಾನು ಪ್ರತಿ ಅರ್ಧಗಂಟೆಗೆ ನೀರು ಕುಡಿಯಲು ಬ್ರೇಕ್ ತೆಗೆದುಕೊಳ್ಳುತ್ತಿದ್ದೆ. ಈಗ ಪ್ರತಿ ಐದು ನಿಮಿಷಗಳಿಗೊಮ್ಮೆ ನೀರು ಕುಡಿಯಬೇಕು”ಎಂದು ಜೂನಿಯರ್ ಅಥ್ಲೀಟ್ ಹೇಳಿದರು.
ಈ ಸಮಸ್ಯೆಯಿಂದಾಗಿ ಹಲವಾರು ಅಥ್ಲೀಟ್‌ಗಳು ತಮ್ಮ ತರಬೇತಿಯನ್ನು ಕೇವಲ 3 ಕಿಮೀ ದೂರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ಬದಲಾಯಿಸಿದ್ದಾರೆ ಎಂದು ಹೇಳಿದರು, ಅಲ್ಲಿ ರಾತ್ರಿ 7.30 ರ ನಂತರ ಫ್ಲಡ್‌ಲೈಟ್‌ಗಳು ಆನ್ ಆಗಿರುತ್ತವೆ. “ಮಕ್ಕಳು ಇಲ್ಲಿ ರಾತ್ರಿ 8.30 ರವರೆಗೆ ದೀಪಗಳ ಅಡಿಯಲ್ಲಿ ತರಬೇತಿ ನೀಡುತ್ತಾರೆ. ಈಗ, ಬೇಸಿಗೆ ವಿರಾಮದ ಸಮಯದಲ್ಲಿ, ಮುಖ್ಯ ಕ್ರೀಡಾಂಗಣದ ಟ್ರ್ಯಾಕ್ ಇನ್ನೂ ನವೀಕರಣದ ಹಂತದಲ್ಲಿರುವುದರಿಂದ ಅಲ್ಲಿ ನಮಗೆ ಸ್ಥಳಾವಕಾಶವಿಲ್ಲ ”ಎಂದು ಜೆಎಲ್‌ಎನ್ ಕ್ರೀಡಾಂಗಣದ ತರಬೇತುದಾರರೊಬ್ಬರು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 3:58 pm, Thu, 26 May 22