20 ನಿಮಿಷಗಳವರೆಗೆ ಯಾವುದೇ ದನಿ ಕೇಳಿಸಿಲ್ಲ; ಲೋಕಸಭೆಯಲ್ಲಿ ಮೈಕ್ ಬಂದ್ ಮಾಡಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್

|

Updated on: Mar 17, 2023 | 3:00 PM

ಮೊದಲು ಮೈಕ್‌ಗಳು ಮಾತ್ರ ಆಫ್ ಆಗಿದ್ದವು, ಇಂದು ಸದನದ ಕಲಾಪಗಳನ್ನು ಮ್ಯೂಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ನೇಹಿತನಿಗಾಗಿ, ಲೋಕಸಭೆ ಮ್ಯೂಟ್ ಆಗಿದೆ ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ.

20 ನಿಮಿಷಗಳವರೆಗೆ ಯಾವುದೇ ದನಿ ಕೇಳಿಸಿಲ್ಲ; ಲೋಕಸಭೆಯಲ್ಲಿ ಮೈಕ್ ಬಂದ್ ಮಾಡಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್
ಲೋಕಸಭೆ
Follow us on

ದೆಹಲಿ: ಸರ್ಕಾರದ ವಿರುದ್ಧದ ಪ್ರತಿಭಟನೆಯ ದನಿ ಅಡಗಿಸಲು ಸಂಸತ್ತಿನಲ್ಲಿ (Parliament) ಆಡಿಯೊ ಮ್ಯೂಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಇಂದು ಆರೋಪಿಸಿದೆ. ವಿಡಿಯೊ ಕ್ಲಿಪ್ ಟ್ವೀಟ್ ಮಾಡಿದ ಕಾಂಗ್ರೆಸ್(Congress) ಲೋಕಸಭೆಯಲ್ಲಿ ಕಲಾಪ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಪ್ರತಿಪಕ್ಷಗಳ ಪ್ರತಿಭಟನೆಯ ಸಮಯದಲ್ಲಿ ಆಡಿಯೊ ಮ್ಯೂಟ್ ಆಗಿದೆ ಎಂದು ಹೇಳಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ(Om Birla) ಅವರ ಕುರ್ಚಿಯ ಬಳಿ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾಗಸುಮಾರು 20 ನಿಮಿಷಗಳ ಕಾಲ ಯಾವುದೇ ಆಡಿಯೋ ಇರಲಿಲ್ಲ. ಸಭಾಧ್ಯಕ್ಷರು ಮಾತನಾಡಿ, ಮೊದಲು ಸದಸ್ಯರನ್ನು ಘೋಷಣೆ ಕೂಗುವುದನ್ನು ನಿಲ್ಲಿಸಿ ಎಂದಿದ್ದುನಂತರ ಸದನವನ್ನು ದಿನದ ಮಟ್ಟಿಗೆ ಮುಂದೂಡುವಂತೆ ಒತ್ತಾಯಿಸಿದಾಗ ಮಾತ್ರ ಆಡಿಯೊ ಕೇಳಿಸಿತ್ತು ಎಂದು ಕಾಂಗ್ರೆಸ್ ಹೇಳಿದೆ.

ಲೋಕಸಭೆಯಲ್ಲಿ ಯಾಕೆ ದನಿ ಕೇಳಿಸಿಲ್ಲ ಎಂಬುದರ ಬಗ್ಗೆ ಸರ್ಕಾರ ವಿವರಣೆ ನೀಡಿಲ್ಲ.

ಮೊದಲು ಮೈಕ್‌ಗಳು ಮಾತ್ರ ಆಫ್ ಆಗಿದ್ದವು, ಇಂದು ಸದನದ ಕಲಾಪಗಳನ್ನು ಮ್ಯೂಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ನೇಹಿತನಿಗಾಗಿ, ಲೋಕಸಭೆ ಮ್ಯೂಟ್ ಆಗಿದೆ ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ.

ಅದಾನಿ-ಹಿಂಡೆನ್‌ಬರ್ಗ್ ವಿವಾದಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ವಿರೋಧ ಪಕ್ಷದ ಬೇಡಿಕೆಗಳನ್ನು ಮೌನಗೊಳಿಸಲು ಮೈಕ್‌ಗಳನ್ನು ಮ್ಯೂಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.


ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದಿರಲು ಆಡಳಿತಾರೂಢ ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷ ಆರೋಪಿಸಿದೆ.
ಲಂಡನ್‌ನಲ್ಲಿ ರಾಹುಲ್ ಗಾಂಧಿ “ಪ್ರಜಾಪ್ರಭುತ್ವ ದಾಳಿಗೆ ಒಳಗಾಗಿದೆ” ಎಂಬ ಹೇಳಿಕೆ ನೀಡಿದ್ದು, ಇದಕ್ಕೆ ಕ್ಷಮೆಯಾಚಿಸದ ಹೊರತು ಮಾತನಾಡಲು ಬಿಡದಿರಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಅವರು ಕಳೆದ ತಿಂಗಳು ರಾಜ್ಯಸಭೆಯಲ್ಲಿ ಮಾಡಿದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ವಿಶೇಷ ಹಕ್ಕು ಮಂಡಿಸಿದರು.ಗಾಂಧಿಯವರು ನೆಹರು ಎಂಬ ಉಪನಾಮವನ್ನು ಏಕೆ ಆರಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಪ್ರಶ್ನಿಸಿದ್ದರು.

“ಪ್ರಧಾನಿ ಪ್ರಶ್ನೆಯೇ ಅಸಂಬದ್ಧವಾಗಿದೆ. ತಂದೆಯ ಸರ್​​ನೇಮ್​​ನ್ನು ಮಗಳು ತೆಗೆದುಕೊಳ್ಳುವುದಿಲ್ಲ ಎಂದು ಪ್ರಧಾನಿಗೆ ಚೆನ್ನಾಗಿ ತಿಳಿದಿತ್ತು. ಅದು ತಿಳಿದಿದ್ದರೂ, ಅವರು ಉದ್ದೇಶಪೂರ್ವಕವಾಗಿ ಅವರು ಹಾಗೆ ಹೇಳಿದರು ಎಂದು ವೇಣುಗೋಪಾಲ್ ಅವರ ವಿಶೇಷಾಧಿಕಾರದ ನೋಟಿಸ್ ನಲ್ಲಿ ಹೇಳಿದ್ದು, ಮೋದಿ ಹೇಳಿಕೆಯ ಧ್ವನಿ ಮತ್ತು ಪದವು “ಅವಮಾನಕರ ಮತ್ತು ಅವಹೇಳನಕಾರಿ” ಎಂದು ಆರೋಪಿಸಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಹೊರಹಾಕಲು ಸಾಧ್ಯವೆ? ಅವರು ಯಾವ ನಿಯಮಗಳನ್ನು ಉಲ್ಲಂಘಿಸಿದ್ದಾರೆ?

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಬ್ರಿಟನ್‌ನಲ್ಲಿ ಕಾಂಗ್ರೆಸ್ ಸಂಸದರು ನೀಡಿದ ಹೇಳಿಕೆ ಕುರಿತು ಮಾತನಾಡಿದ್ದು, ಲೋಕಸಭೆಯಲ್ಲಿ ಅವರ ಸದಸ್ಯತ್ವವನ್ನು ವಜಾಗೊಳಿಸುವಂತೆ ಕೋರಿದ ನಂತರ ಈ ನೋಟಿಸ್ ಬಂದಿದೆ.

ಸೋಮವಾರದಿಂದ ಬಜೆಟ್ ಅಧಿವೇಶನ ಪುನರಾರಂಭಗೊಂಡಾಗಿನಿಂದ ಸಂಸತ್ತು ಕಾರ್ಯನಿರ್ವಹಿಸಲಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ಕಾನೂನು ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವಾರು ಕೇಂದ್ರ ಸಚಿವರು ಕಾಂಗ್ರೆಸ್ ಸಂಸದರನ್ನು ಟೀಕಿಸಿದ್ದು ರಾಹುಲ್ ರಾಷ್ಟ್ರವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾರತದ ಪ್ರಜಾಪ್ರಭುತ್ವದ ರಚನೆಗಳು ದಾಳಿಗೆ ಒಳಗಾಗುತ್ತಿವೆ ಮತ್ತು ದೇಶದ ಸಂಸ್ಥೆಗಳ ಮೇಲೆ “ಪೂರ್ಣ ಪ್ರಮಾಣದ ದಾಳಿ” ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಲಂಡನ್‌ನಲ್ಲಿ ಆರೋಪಿಸಿದ್ದರು. ರಾಹುಲ್ ಗಾಂಧಿ ಅವರು ವಿದೇಶಿ ನೆಲದಲ್ಲಿ ಭಾರತವನ್ನು ಅವಮಾನಿಸಿದ್ದು ಮತ್ತು ವಿದೇಶಿ ಹಸ್ತಕ್ಷೇಪವನ್ನು ಬಯಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದ್ದಂತೆ, ಪ್ರಧಾನಿ ಮೋದಿ ವಿದೇಶದಲ್ಲಿ ಆಂತರಿಕ ರಾಜಕೀಯವನ್ನು ಎತ್ತುತ್ತಿರುವ ಉದಾಹರಣೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ತಿರುಗೇಟು ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ