ಲಕ್ನೊ: ರಿಲಾಯನ್ಸ್ ಇಂಡಸ್ಟ್ರೀಸ್ ಕಾರ್ಯಕಾರಿ ನಿರ್ದೇಶಕಿ ನೀತಾ ಅಂಬಾನಿ ಅವರು ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ (BHU) ಸಂದರ್ಶಕ ಉಪನ್ಯಾಸಕಿಯಾಗಿ ಆಗಮಿಸುತ್ತಿರುವುನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಾರಣಾಸಿಯಲ್ಲಿ ಬಿಎಚ್ಯು ಉಪ ಕುಲಪತಿ ರಾಕೇಶ್ ಭಟ್ನಾಗರ್ ನಿವಾಸದ ಮುಂದೆ ಸುಮಾರು 40 ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಬಿಎಚ್ ಯುವಿನ ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ ಆ್ಯಂಡ್ ಡೆವಲಪ್ಮೆಂಟ್ ವಿಭಾಗಕ್ಕೆ ನೀತಾ ಅಂಬಾನಿ ಸಂದರ್ಶಕ ಉಪನ್ಯಾಸಕಿಯಾಗಿ ಬರುತ್ತಾರೆ ಎಂದು ಹೇಳಲಾಗಿತ್ತು.
ನೀತಾ ಅಂಬಾನಿ ಸೇರಿದಂತೆ ಇತರ ನಾಯಕಿಯರಿಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಂವಹನ ನಡೆಸಲು ಆಮಂತ್ರಣ ನೀಡಲಾಗಿದೆ. ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ್ದ ವಿಶ್ವವಿದ್ಯಾಲಯದ ಸಂಯೋಜಕಿ ನಿಧಿ ಶರ್ಮಾ, ನೀತಾ ಅಂಬಾನಿ ಅವರನ್ನು ಸಂದರ್ಶಕ ಉಪನ್ಯಾಸಕರನ್ನಾಗಿ ಮಾಡುವ ಪ್ರಸ್ತಾವವನ್ನು ಶಿಕ್ಷಣ ಸಂಸ್ಥೆಯ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ. ನೀತಾ ಅಂಬಾನಿ ಅವರು ಮಹಿಳಾ ಉದ್ಯಮಿ, ಅವರು ನಮ್ಮ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಅವರ ಅನುಭವವನ್ನು ನಮ್ಮ ಜತೆ ಹಂಚಲಿದ್ದು, ಪೂರ್ವಾಂಚಲದ ಮಹಿಳೆಯರಿಗೆ ಇದರ ಲಾಭ ಸಿಗಲಿದೆ ಎಂದಿದ್ದಾರೆ. ಆದಾಗ್ಯೂ, ಈ ಪ್ರಸ್ತಾವವನ್ನು ಹಲವಾರು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.
ಮಂಗಳವಾರ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿ ಶುಭಂ ತಿವಾರಿ, ನೀತಾ ಅಂಬಾನಿ ಅವರ ಬದಲು ಮಹಿಳಾ ಸಬಲೀಕರಣಕ್ಕೆ ಕಾರಣವಾದ ಮಹಿಳೆಯರನ್ನು ಆಹ್ವಾನಿಸಬಹುದಿತ್ತು ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ಪ್ರಸ್ತಾಪವನ್ನು ನೀತಾ ಅಂಬಾನಿಗೆ ಮಾತ್ರ ಕಳುಹಿಸಲಾಗಿದ್ದರೂ, ಅತಿ ಶ್ರೀಮಂತ ಉದ್ಯಮಿ ಗೌತಮ್ ಅದಾನಿಯವರ ಪತ್ನಿ ಪ್ರೀತಿ ಅದಾನಿ ಮತ್ತು ಬ್ರಿಟನ್ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಪತ್ನಿ ಉಷಾ ಮಿತ್ತಲ್ ಅವರನ್ನು ಕೂಡಾ ಸಂದರ್ಶಕ ಉಪನ್ಯಾಸಕಿಯರಾಗಿ ಪರಿಗಣಿಸಲಾಗಿದೆ. ಸುಮಾರು ಎರಡು ದಶಕಗಳ ಹಿಂದೆ ಸ್ಥಾಪಿಸಲಾದ ಸಾಮಾಜಿಕ ವಿಜ್ಞಾನ ವಿಭಾಗದ ಮಹಿಳಾ ಅಧ್ಯಯನ ಕೇಂದ್ರದಲ್ಲಿ ಸಂದರ್ಶಕ ಉಪನ್ಯಾಸಕಿಯರ ಮೂರು ಹುದ್ದೆಗಳು ಇವೆ.
ನಾವು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳನ್ನು ಮಾಡುತ್ತೇವೆ. ಜನಪ್ರೀತಿಯುಳ್ಳ ಕೈಗಾರಿಕೋದ್ಯಮಿಗಳನ್ನು ಒಳಗೊಳ್ಳುವ ಬಿಎಚ್ಯು ಸಂಪ್ರದಾಯವನ್ನು ಅನುಸರಿಸಿ, ನೀತಾ ಅಂಬಾನಿ ಅವರು ಮಹಿಳಾ ಅಧ್ಯಯನ ಕೇಂದ್ರಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಬರುವಂತೆ ನಾವು ರಿಲಯನ್ಸ್ ಫೌಂಡೇಶನ್‌ಗೆ ಪತ್ರವೊಂದನ್ನು ಕಳುಹಿಸಿದ್ದೇವೆ. ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ರಿಲಯನ್ಸ್ ಫೌಂಡೇಶನ್ ಸಾಕಷ್ಟು ಕೆಲಸ ಮಾಡಿರುವುದರಿಂದ ನಾವು ಇದನ್ನು ಮಾಡಿದ್ದೇವೆ ಎಂದು ಸಮಾಜ ವಿಜ್ಞಾನ ವಿಭಾಗದ ಡೀನ್ ಕೌಶಲ್ ಕಿಶೋರ್ ಮಿಶ್ರಾ ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನೀತಾ ಅಂಬಾನಿ ಬಿಎಚ್ಯು ಸಂದರ್ಶಕ ಉಪನ್ಯಾಸಕಿ ಎಂಬುದು ಸುಳ್ಳು ಸುದ್ದಿ
Reports that Nita Ambani (in pic) will be a visiting lecturer at Banaras Hindu University (BHU) are fake. She hasn’t received an invitation from BHU: Reliance Industries Limited spokesperson to ANI pic.twitter.com/dd8MUpER8T
— ANI (@ANI) March 17, 2021
ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ನೀತಾ ಅಂಬಾನಿ ಅವರು ಸಂದರ್ಶನ ಉಪನ್ಯಾಸಕರಾಗಿ ಹೋಗುತ್ತಾರೆ ಎಂಬ ಸುದ್ದಿ ಸುಳ್ಳು. ನೀತಾ ಅವರಿಗೆ ಬಿಎಚ್ಯುನಿಂದ ಯಾವುದೇ ಆಮಂತ್ರಣ ಸಿಕ್ಕಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ವಕ್ತಾರರು ಹೇಳಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ಇದನ್ನೂ ಓದಿ : ರಿಲಯನ್ಸ್ ಫೌಂಡೇಷನ್ನಿಂದ ಮಹಿಳೆಯರಿಗಾಗಿ ಡಿಜಿಟಲ್ ವೇದಿಕೆ; ಹರ್ ಸರ್ಕಲ್ನಲ್ಲಿ ಏನೇನಿದೆ?
Published On - 11:12 am, Wed, 17 March 21