ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರದ್ದು ಆತ್ಮಹತ್ಯೆ: ದೆಹಲಿ ಪೊಲೀಸ್

Ram Swaroop Sharma: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ 1958ರಲ್ಲಿ ಜನಿಸಿದ ಶರ್ಮಾ 2014ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಎರಡನೇ ಬಾರಿ ಮಂಡಿ ಲೋಕಸಭಾ ಕ್ಷೇತ್ರದಿಂದಲೇ ಮತ್ತೊಮ್ಮೆ ಚುನಾವಣೆ ಗೆದ್ದಿದ್ದರು.

ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರದ್ದು ಆತ್ಮಹತ್ಯೆ: ದೆಹಲಿ ಪೊಲೀಸ್
ರಾಮ್ ಸ್ವರೂಪ್ ಶರ್ಮಾ
Follow us
ರಶ್ಮಿ ಕಲ್ಲಕಟ್ಟ
|

Updated on:Mar 30, 2021 | 11:23 AM

ದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರ ಮೃತದೇಹ ದೆಹಲಿಯ ನಾರ್ತ್ ಅವೆನ್ಯೂನಲ್ಲಿರುವ ಮನೆಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ದೆಹಲಿ ಪೊಲೀಸರು ಹೇಳಿರುವುದಾಗಿ ಇಂಡಿಯನ್  ಎಕ್ಸ್​ಪ್ರೆಸ್ ವರದಿ ಮಾಡಿದೆ. ಪ್ರಾಥಮಿಕ ವರದಿಗಳ ಪ್ರಕಾರ ಶರ್ಮಾ ಮೃತದೇಹದ ಬಳಿ ಆತ್ಮಹತ್ಯಾ ಟಿಪ್ಪಣಿ ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದ್ದು ಮರಣೋತ್ತರ ಪರೀಕ್ಷೆ ನಂತರವೇ ಸಾವಿಗೆ ಕಾರಣವಾದ ಅಂಶ ಏನೆಂಬುದು ಪತ್ತೆಯಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರ ಬೆಳಗ್ಗೆ 7.45ಕ್ಕೆ ಶರ್ಮಾ ಅವರ ನಿವಾಸದ ಬಾಗಿಲು ಬಡಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ಹೇಳಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದಿತ್ತು ಎಂದಿದ್ದಾರೆ ಪೊಲೀಸರು.

ಆದಾಗ್ಯೂ, ಶರ್ಮಾ ಅವರ ನಿಧನ ಸುದ್ದಿ ತಿಳಿದ ನಂತರ ಇಂದು ಬೆಳಗ್ಗೆ ನಡೆಯಬೇಕಿದ್ದ ಬಿಜೆಪಿ ಸಂಸದೀಯ ಸಭೆಯನ್ನು ರದ್ದು ಮಾಡಿದೆ. ಶರ್ಮಾ ನಿಧನಕ್ಕೆ ಸಂತಾಪ ಸೂಚಿಸಿ ಲೋಕಸಭಾ ಕಲಾಪಗಳನ್ನು ಮಧ್ಯಾಹ್ನ 1 ಗಂಟೆವರೆಗೆ ಮುಂದೂಡಲಾಗಿದೆ

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ 1958ರಲ್ಲಿ ಜನಿಸಿದ ಶರ್ಮಾ 2014ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಎರಡನೇ ಬಾರಿ ಮಂಡಿ ಲೋಕಸಭಾ ಕ್ಷೇತ್ರದಿಂದಲೇ ಮತ್ತೊಮ್ಮೆ ಚುನಾವಣೆ ಗೆದ್ದಿದ್ದರು. ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು ಶರ್ಮಾ. ಇವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಶರ್ಮಾ ಅವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ದೃಢಪಡಿಸಿದ್ದಾರೆ ಎಂದು ದೆಹಲಿ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ.

ಶರ್ಮಾ ಅವರು ಖಿನ್ನತೆಯಿಂದ ಬಳಲುತ್ತಿದ್ದು, ಕಳೆದ ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪತ್ನಿ ಚಾರ್ ಧಾಮ್ ತೀರ್ಥಯಾತ್ರೆಯಲ್ಲಿದ್ದು  ಶರ್ಮಾ ಒಬ್ಬರೇ ಮನೆಯಲ್ಲಿದ್ದರು ಎಂದು ಟ್ರಿಬ್ಯೂನ್ ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ.

ಶರ್ಮಾ ಅವರ ಸಾವಿನ ಸುದ್ದಿ ಬೆಳಗ್ಗೆ ಗೊತ್ತಾಯ್ತು. ನಾನು ಅವರೊಂದಿಗೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನಮಗೆ ಅತೀವ ದುಃಖವಾಗಿದೆ , ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮರಣೋತ್ತರ ಪರೀಕ್ಷೆಗಾಗಿ ಅವರ ಮೃತದೇಹ ಕಳುಹಿಸಿ ಕೊಡಲಾಗಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.

ಶ್ರೀ ರಾಮ್ ಸ್ವರೂಪ್ ಶರ್ಮಾ ಅವರು ಸಮರ್ಪಣಾ ಮನೋಭಾವದ ನಾಯಕರಾಗಿದ್ದು, ಅವರು ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದು. ಸಮಾಜದ ಒಳಿತಿಗಾಗಿ ಅವರು ಅವಿರತ ಕಾರ್ಯ ಮಾಡುತ್ತಿದ್ದು. ಅವರ ಅನಿರೀಕ್ಷಿತ ಸಾವು ನೋವು ತಂದಿದೆ. ಈ ಬೇಸರದ ಗಳಿಗೆಯಲ್ಲಿ ನನ್ನ ಪ್ರಾರ್ಥನೆ ಅವರ ಕುಟುಂಬದೊಂದಿಗೆ ಇದೆ. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ದಾದ್ರಾ ಮತ್ತು ನಾಗರ್ ಹವೇಲಿ (DNH) ಕೇಂದ್ರಾಡಳಿತ ಪ್ರದೇಶದ ಸಂಸದ 58ರ ಹರೆಯದ ಮೋಹನ್ ದೇಲ್ಕರ್ ಅವರ ಮೃತದೇಹ ಹೋಟೆಲ್​ವೊಂದರಲ್ಲಿ ಪತ್ತೆಯಾಗಿತ್ತು. ಗುಜರಾತಿಯಲ್ಲಿ ಬರೆದ ಆತ್ಮಹತ್ಯಾ ಟಿಪ್ಪಣಿ ದೇಲ್ಕರ್ ಅವರು ತಂಗಿದ್ದ ಕೋಣೆಯಿಂದ ಪತ್ತೆಯಾಗಿತ್ತು. ಅದರಲ್ಲಿ ಹಿರಿಯ ರಾಜಕಾರಣಿಗಳು ಸೇರಿದಂತೆ ಹಲವರ ಮೇಲೆ ಆರೋಪ ಹೊರಿಸಲಾಗಿತ್ತು.

ಇದನ್ನೂ ಓದಿ: Ram Swaroop Sharma ಬಿಜೆಪಿ ಸಂಸದ ರಾಮ್‌ಸ್ವರೂಪ್ ಶರ್ಮಾ ನಿಗೂಢ ಸಾವು.. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಉತ್ತರ ಪ್ರದೇಶದಲ್ಲಿ ಪ್ರೇಮ ಕಲಹ: ಮಾವ ಬಿಜೆಪಿ ಸಂಸದ -ಅತ್ತೆ ಶಾಸಕಿ! ಸೊಸೆಯಿಂದ ಆತ್ಮಹತ್ಯೆಗೆ ಯತ್ನ

Published On - 12:40 pm, Wed, 17 March 21