AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್ ಆಫ್ ಬರೋಡಾದಲ್ಲಿ 1,100 ಹುದ್ದೆಗಳ ಬಂಪರ್ ನೇಮಕಾತಿ: ಅರ್ಜಿ ಸಲ್ಲಿಸಲು ಸುವರ್ಣಾವಕಾಶ

ಬ್ಯಾಂಕ್ ಆಫ್ ಬರೋಡಾ 1100 ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ, 22-33 ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಕರ್ಷಕ ವೇತನ ಶ್ರೇಣಿ ಮತ್ತು ಭತ್ಯೆಗಳು ಲಭ್ಯವಿವೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 24 ಕೊನೆಯ ದಿನಾಂಕವಾಗಿದೆ. ಆಸಕ್ತರು ಈ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಬ್ಯಾಂಕ್ ಆಫ್ ಬರೋಡಾದಲ್ಲಿ 1,100 ಹುದ್ದೆಗಳ ಬಂಪರ್ ನೇಮಕಾತಿ: ಅರ್ಜಿ ಸಲ್ಲಿಸಲು ಸುವರ್ಣಾವಕಾಶ
ಬ್ಯಾಂಕ್ ಆಫ್ ಬರೋಡಾ
ಅಕ್ಷತಾ ವರ್ಕಾಡಿ
|

Updated on: Sep 13, 2026 | 4:15 PM

Share

ಬ್ಯಾಂಕಿಂಗ್ ವಲಯದಲ್ಲಿ ಆಕರ್ಷಕ ವೇತನದೊಂದಿಗೆ ಸ್ಥಿರ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ ಉತ್ತಮ ಅವಕಾಶವನ್ನು ಕಲ್ಪಿಸಿದೆ. ಬ್ಯಾಂಕಿನ ವೆಲ್ತ್ ಮ್ಯಾನೇಜ್ಮೆಂಟ್ ಸೇವೆಗಳು ಹಾಗೂ ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 1,100 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ಹುದ್ದೆಗಳಲ್ಲಿ 1,000 ವೆಲ್ತ್ ಎಕ್ಸಿಕ್ಯೂಟಿವ್ (JMG/S-I) ಹುದ್ದೆಗಳು ಹಾಗೂ 100 ಕ್ರೆಡಿಟ್ ಅನಾಲಿಸ್ಟ್ (MMG/S-II) ಹುದ್ದೆಗಳು ಸೇರಿವೆ.

ಶೈಕ್ಷಣಿಕ ಅರ್ಹತೆಗಳು ಮತ್ತು ಅಗತ್ಯ ವೃತ್ತಿ ಅನುಭವ:

ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಭಾಗದಲ್ಲಿ ಪದವಿ ಮತ್ತು ಸಂಬಂಧಿತ ಪ್ರಮಾಣೀಕರಣವನ್ನು ಹೊಂದಿರಬೇಕು ಹಾಗೂ ವೆಲ್ತ್ ಪ್ರಾಡಕ್ಟ್ಸ್ ಮಾರಾಟ ವಿಭಾಗದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವುದು ಕಡ್ಡಾಯವಾಗಿದೆ. ಹಾಗೆಯೇ, ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳಿಗೆ ಪದವಿಯ ಜೊತೆಗೆ 2 ವರ್ಷಗಳ ಪೂರ್ಣಾವಧಿ ಸ್ನಾತಕೋತ್ತರ ಪದವಿ/ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಅಥವಾ ಹಣಕಾಸು, ಮಾರ್ಕೆಟಿಂಗ್ ಅಥವಾ ಬ್ಯಾಂಕಿಂಗ್ ವಿಭಾಗದಲ್ಲಿ MBA ಮಾಡಿರಬೇಕು. ಇದರೊಂದಿಗೆ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕಿನಲ್ಲಿ ಕನಿಷ್ಠ 1 ವರ್ಷದ ಬ್ಯಾಂಕಿಂಗ್ ಅನುಭವ ಇರುವುದು ಅವಶ್ಯಕವಾಗಿದೆ.

ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!

ವಯೋಮಿತಿ ಮತ್ತು ಆಕರ್ಷಕ ವೇತನ ಶ್ರೇಣಿ:

ಸೆಪ್ಟೆಂಬರ್ 1, 2026 ರ ಅನ್ವಯ ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 22 ರಿಂದ 32 ವರ್ಷ ಹಾಗೂ ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳಿಗೆ 21 ರಿಂದ 33 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾವಳಿಗಳಂತೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮತಿಯಲ್ಲಿ ಸಡಿಲಿಕೆ ಸಿಗಲಿದೆ. ವೇತನಕ್ಕೆ ಸಂಬಂಧಿಸಿದಂತೆ ಕ್ರೆಡಿಟ್ ಅನಾಲಿಸ್ಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ Rs. 64,820 ರಿಂದ Rs. 93,960 ವರೆಗೆ ಹಾಗೂ ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗೆ ತಿಂಗಳಿಗೆ 48,480 ರಿಂದ 85,920ರೂ. ವರೆಗೆ ವೇತನ ದೊರೆಯಲಿದ್ದು, ನಿಯಮಾನುಸಾರ ಇತರ ಭತ್ಯೆಗಳೂ ಲಭ್ಯವಿರಲಿವೆ.

ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು:

ಅಭ್ಯರ್ಥಿಗಳ ಆನ್‌ಲೈನ್ ಅರ್ಜಿ ಪರಿಶೀಲನೆ, 120 ಅಂಕಗಳಿಗೆ ನಡೆಯುವ ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ ಹಾಗೂ ಗುಂಪು ಚರ್ಚೆ ಅಥವಾ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಶುಲ್ಕವು ಸಾಮಾನ್ಯ, OBC ಹಾಗೂ EWS ಅಭ್ಯರ್ಥಿಗಳಿಗೆ 850ರೂ. ಇದ್ದು, SC, ST, ದಿವ್ಯಾಂಗ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 175 ರೂ. ನಿಗದಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಸೆಪ್ಟೆಂಬರ್ 4 ರಿಂದ ಆರಂಭವಾಗಿರುವ ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 24ಕೊನೆಯ ದಿನಾಂಕವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us