ಪೊಲೀಸ್ ಪಡೆ ಧರ್ಮ, ಜಾತಿಗಳ ಹೆಸರಲ್ಲಿ ಇಲಾಖೆಯ ಶಿಸ್ತು ಮೀರುವಂತಿಲ್ಲ. ಪೊಲೀಸ್ ಪಡೆ ಜಾತ್ಯಾತೀತವಾಗಿರಬೇಕು. ಹೀಗಾಗಿ, ಧರ್ಮದ ಹೆಸರಲ್ಲಿ ಗಡ್ಡ ಬಿಡುವುದನ್ನು (beard grooming) ಮೂಲಭೂತ ಹಕ್ಕು (fundamental right) ಎನ್ನಲಾಗದು ಎಂದು ಅಲಹಾಬಾದ್ ಹೈಕೋರ್ಟ್ (allahabad high court) ಆದೇಶಿಸಿದೆ.
ಹಿರಿಯ ಅಧಿಕಾರಿಗಳ ಸೂಚನೆಯ ಹೊರತಾಗಿಯೂ ತನ್ನ ಗಡ್ಡ ತೆಗೆಯಲು ನಿರಾಕರಿಸಿದ್ದ ಉತ್ತರ ಪ್ರದೇಶದ ಪೊಲೀಸ್ ಪೇದೆ ಮೊಹಮ್ಮದ್ ಫರ್ಮಾನ್ ಅಲಹಾಬಾದ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸ್ ಪಡೆಯಂತಹ ಶಿಸ್ತಿನ ಇಲಾಖೆಯಲ್ಲಿ ಗಡ್ಡ ಬಿಡುವುದು ಮೂಲಭೂತ ಹಕ್ಕಲ್ಲ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಾಲಯ ತನ್ನ ಆದೇಶದಲ್ಲಿ, ಸಂವಿಧಾನದ ವಿಧಿ 25 ಯಾವುದೇ ವ್ಯಕ್ತಿಗೆ ತನ್ನಿಚ್ಚೆಯಂತೆ ಬದುಕಲು, ವೃತ್ತಿ ಮಾಡಲು ಹಾಗೂ ಇಷ್ಟದ ಧರ್ಮ ಅನುಸರಿಸಲು ಹಕ್ಕು ನೀಡುತ್ತದೆ. ಹಾಗೆಂದು ಈ ವಿಧಿಯು ಎಲ್ಲ ಸಂದರ್ಭಗಳಲ್ಲಿಯೂ ಸಂಪೂರ್ಣ ಹಕ್ಕು ನೀಡುವುದಿಲ್ಲ. ಹಕ್ಕುಗಳ ಜತೆಗೇ ಅಂತರ್ಗತವಾದ ನಿರ್ಬಂಧಗಳು ಇರುತ್ತವೆ. ಶಿಸ್ತಿನ ಇಲಾಖೆಯಲ್ಲಿ ಕೆಲಸ ಮಾಡುವಾಗ ಗಡ್ಡ ಬಿಡುವುದು ತನ್ನ ಹಕ್ಕು ಎಂದು ವಾದಿಸಲಾಗದು. ಸಂವಿಧಾನ ನೀಡಿರುವ ಹಕ್ಕುಗಳನ್ನು ಅವುಗಳ ಮೂಲ ಉದ್ದೇಶದೊಂದಿಗೇ ಪರಿಗಣಿಸಬೇಕಾಗುತ್ತದೆ. ಹೀಗಾಗಿ ಅರ್ಜಿದಾರರ ವಾದ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಅಲ್ಲದೇ, ಪೊಲೀಸ್ ಪಡೆಯಲ್ಲಿ ಶಿಸ್ತು ಜಾರಿಗೊಳಿಸುವ ಉದ್ದೇಶದಿಂದ ಮೇಲಧಿಕಾರಿಗಳು ಪೇದೆಗೆ ಗಡ್ಡ ತೆಗೆಯಲು ನಿರ್ದೇಶಿಸಿದ್ದಾರೆ. ಅರ್ಜಿದಾರ ಪೇದೆ ಕಾನೂನು ರೀತಿ ಅಧಿಕಾರಿಗಳ ಸೂಚನೆ ಪಾಲಿಸಬೇಕಿತ್ತು. ಶಿಸ್ತಿನ ಇಲಾಖೆಯಾದ ಪೊಲೀಸ್ ಪಡೆಯಲ್ಲಿ ಜಾತ್ಯಾತೀತತೆ ಕಾಯ್ದುಕೊಳ್ಳುವುದು ಅತ್ಯಗತ್ಯ. ಇದರಿಂದ ರಾಷ್ಟ್ರದ ಐಕ್ಯತೆಯೂ ಬಲಗೊಳ್ಳುತ್ತದೆ.
ಆದರೆ, ಹಿರಿಯ ಅಧಿಕಾರಿಗಳ ಸುತ್ತೋಲೆಗೆ ವಿರುದ್ಧವಾಗಿ ಗಡ್ಡ ತೆಗೆಯದೇ ಇರುವುದು ಪೇದೆಯ ದುರ್ವರ್ತನೆಯಾಗಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಇಲಾಖೆಯಲ್ಲಿ ಶಿಸ್ತು ಕಾಪಾಡಿಕೊಳ್ಳಲು ಯಾವುದೇ ಹಸ್ತಕ್ಷೇಪ ಇರಬಾರದು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2020ರ ಅಕ್ಟೋಬರ್ 26ರಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕರು ಪೊಲೀಸ್ ಪಡೆಗೆ ಕೆಲ ನಿರ್ದೇಶನಗಳನ್ನು ನೀಡಿ ಸುತ್ತೋಲೆ ಹೊರಡಿಸಿದ್ದರು. ಅದರಲ್ಲಿ ಸೂಕ್ತ ಸಮವಸ್ತ್ರ ಹಾಗೂ ಮುಖಚರ್ಯೆ ಹೊಂದಿರುವ ಕುರಿತಂತೆ ತಿಳಿಸಿ, ಗಡ್ಡ ತೆಗೆಯುವಂತೆಯೂ ಸೂಚಿಸಿದ್ದರು. ಆದರೆ ಪೇದೆ ಮೊಹಮ್ಮದ್ ಫರ್ಮಾನ್ ಗಡ್ಡ ತೆಗೆಯಲು ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ಗ್ರಾಮೀಣ ಭಾಗದ ಎಸ್ಪಿ, ಪೇದೆ ಫರ್ಮಾನ್ ಅವರನ್ನು ಅಮಾನತು ಮಾಡಿದ್ದರು. ಇದನ್ನು ಪ್ರಶ್ನಿಸಿ ಪೇದೆ ಅಲಹಾಬಾದ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ಸಂವಿಧಾನದ ವಿಧಿ 25ರ ಅಡಿ ತನಗೆ ಧರ್ಮದ ಅನುಸಾರ ಗಡ್ಡ ಬಿಡುವ ಹಕ್ಕಿದೆ. ಹೀಗಾಗಿ ಪೊಲೀಸ್ ಇಲಾಖೆಯ ಸುತ್ತೋಲೆ ಹಾಗೂ ಅಮಾನತು ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. (ಕೃಪೆ: lawtime.in)