
ಕೋಲ್ಕತಾ, ಡಿಸೆಂಬರ್ 21: ಬಂಗಾಳಿ ಸಿನಿಮಾವೊಂದರ ಭಕ್ತಿ ಗೀತೆಯನ್ನು ಹಾಡಿದ್ದಕ್ಕೆ ಗಾಯಕಿ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಪೂರ್ಬ ಮೇದಿನಿಪುರ್ನ ಭಾಗಬನ್ಪುರ್ ಎಂಬಲ್ಲಿನ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಖ್ಯಾತ ಬಂಗಾಳಿ ಗಾಯಕಿ ಲಗ್ನಜಿತಾ ಚಕ್ರಬರ್ತಿ (Lagnajita Chakraborty) ಎಂಬಾಕೆಯನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ ಆರೋಪ ಹೊತ್ತು ಬಂಧಿತರಾಗಿರುವ ವ್ಯಕ್ತಿಯು ಆ ಶಾಲೆಯ ಒಬ್ಬ ಸಹ-ಮಾಲೀಕ ಎನ್ನಲಾಗಿದೆ.
ಭಾಗಬನ್ಪುರ್ನಲ್ಲಿರುವ ಸೌತ್ ಪಾಯಿಂಟ್ ಪಬ್ಲಿಕ್ ಸ್ಕೂಲ್ನಲ್ಲಿ ಶನಿವಾರ ಸಂಜೆ 7ಕ್ಕೆ ಲಗ್ನಿಜಿತಾ ಚಕ್ರಬರ್ತಿ ಅವರ ಗಾಯನ ಕಾರ್ಯಕ್ರಮ ಶುರುವಾಗಿದೆ. ಮೊದಲ 45 ನಿಮಿಷ ಅವರು ವಿವಿಧ ಹಾಡುಗಳನ್ನು ಹಾಡಿದ್ದಾರೆ. ನಂತರ, ಸನ್ಮಾನ ಕಾರ್ಯಕ್ರಮವೂ ಸರಾಗವಾಗಿ ನಡೆದಿದೆ. ಅವರ ಏಳನೇ ಹಾಡು ದೇಬಿ ಚೌಧುರಾಣಿ ಎನ್ನುವ ಬಂಗಾಳಿ ಸಿನಿಮಾದ ‘ಜಾಗೋ ಮಾ’ ಆಗಿತ್ತು.
ಇದನ್ನೂ ಓದಿ: ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ
ಹಿಂದೂ ದೇವತೆಯನ್ನು ಸ್ತುತಿಸುವ ಈ ಹಾಡನ್ನು ಹಾಡಿದ ಬಳಿಕ ಲಗ್ನಜಿತಾ ಅವರು ಸಭಿಕರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ, ವೇದಿಕೆಗೆ ಏರಿ ಹೋದ ಮೆಹಬೂಬ್ ಮಲ್ಲಿಕ್ ಎನ್ನುವ ವ್ಯಕ್ತಿ, ಲಗ್ನಜಿತಾ ಅವರನ್ನು ನಿಂದಿಸಿ ಹೊಡೆಯಲು ಯತ್ನಿಸಿದ್ದಾನೆ. ‘ಜಾಗೋ ಮಾ ಹಾಡಿದ್ದು ಸಾಕು. ಈಗ ಏನಾದರೂ ಸೆಕ್ಯೂಲರ್ನಂಥದ್ದು ಹಾಡು’ ಎಂದು ಮಲ್ಲಿಕ್ ಜಬರ್ದಸ್ ಮಾಡಿದ್ದು ಮೈಕ್ನಲ್ಲಿ ಎಲ್ಲರಿಗೂ ಕೇಳಿಸಿದೆ. ಈತ ವೇದಿಕೆ ಮೇಲೆ ಏರಿ ಹೋಗಿ ಲಗ್ನಜಿತಾ ಮೇಲೆ ಹಲ್ಲೆಗೆ ಮುಂದಾಗುತ್ತಿರುವಂತೆಯೇ ಕೆಲವರು ಓಡಿ ಬಂದು ತಡೆದಿದ್ದಾರೆ.
ಈ ಘಟನೆ ಬಳಿಕ ಲಗ್ನಜಿತಾ ಅವರು ಕಾರ್ಯಕ್ರಮವನ್ನು ಅಲ್ಲಿಗೇ ಇಳಿಸಿ ಹೊರಟು ಹೋಗಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಇದಾದ ಬಳಿಕ ಪೊಲೀಸರು ಮೆಹಬೂಬಾ ಮಲ್ಲಿಕ್ರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಸೌತ್ ಆಫ್ರಿಕಾದಲ್ಲಿ ಭೀಕರ ಶೂಟೌಟ್; ಒಂಬತ್ತು ಮಂದಿ ಬಲಿ, 10 ಜನರಿಗೆ ಗಾಯ
ಕಳೆದ ವರ್ಷದ (2024) ದುರ್ಗಾ ಪೂಜೆಯಂದು ಬಿಡುಗಡೆಯಾದ ದೇಬಿ ಚೌಧುರಾಣಿ ಸಿನಿಮಾದ ಹಿಟ್ ಹಾಡು ‘ಜಾಗೋ ಮಾ’. ಇದನ್ನು ಸಿನಿಮಾಗೆ ಹಾಡಿದವರು ಇದೇ ಗಾಯಕಿ ಲಗ್ನಜಿತಾ ಚಕ್ರಬರ್ತಿ. ಈಕೆಯ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿರುವ ಮೆಹಬೂಬ್ ಮಲ್ಲಿಕ್ ಅವರು ಕಾರ್ಯಕ್ರಮ ನಡೆದ ಶಾಲೆಯ ಸಹ-ಮಾಲೀಕರಲ್ಲಿ ಒಬ್ಬರಾಗಿದ್ದಾರೆ. ಆ ಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ