ಭಾರತ್ ಬಂದ್: ದೆಹಲಿ ಗಡಿಭಾಗದಲ್ಲಿ ಬಿಗಿ ಭದ್ರತೆ, ಪಶ್ಚಿಮ ಬಂಗಾಳದಲ್ಲಿ ರೈಲು ಸಂಚಾರಕ್ಕೆ ತಡೆ

ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ದೇಶದಾದ್ಯಂತ ಪ್ರತಿಭಟನೆ. ದೆಹಲಿ ಗಡಿಭಾಗದಲ್ಲಿ ಬಿಗಿ ಭದ್ರತೆ.

ಭಾರತ್ ಬಂದ್: ದೆಹಲಿ ಗಡಿಭಾಗದಲ್ಲಿ ಬಿಗಿ ಭದ್ರತೆ, ಪಶ್ಚಿಮ ಬಂಗಾಳದಲ್ಲಿ ರೈಲು ಸಂಚಾರಕ್ಕೆ ತಡೆ
ಬಿಹಾರದಲ್ಲಿ ಪ್ರತಿಭಟನೆ

Updated on: Dec 08, 2020 | 12:25 PM

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಕಳೆದ ಎರಡು ವಾರಗಳಿಂದ ಪ್ರತಿಭಟನೆ ಮಾಡುತ್ತಿರುವ ರೈತರು ತಮ್ಮ ಬೇಡಿಕೆಗಳನ್ನು ಅಂಗೀಕರಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಇಂದು ಕರೆ ನೀಡಿರುವ ಭಾರತ್ ಬಂದ್​​ಗೆ ಹಲವಾರು ರಾಜಕೀಯ ಪಕ್ಷಗಳು ಮತ್ತು 10 ಕಾರ್ಮಿಕ ಸಂಘಟನೆಗಳು ಬೆಂಬಲ ಘೋಷಿಸಿವೆ.

ರೈತರ ಸಂಘಟನೆಗಳು ಕರೆ ನೀಡಿರುವ ಬಂದ್ ವೇಳೆ ಪ್ರತಿಭಟನೆ ನಡೆಸುವಾಗ ಕೋವಿಡ್-19 ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗೃಹ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೇಳಿದೆ.

ಬಂದ್ ಮಾಡುವುದು ಸರಿ, ಹಿಂಸಾಚಾರ ಸಲ್ಲದು: ಕೇಂದ್ರ
ಭಾರತ್ ಬಂದ್ ವೇಳೆ ರಾಜ್ಯಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಿ, ಶಾಂತಿ ಕಾಪಾಡಿ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಸೋಮವಾರ ಹೇಳಿದ್ದಾರೆ. ಪ್ರಜಾತಂತ್ರ ರೀತಿಯಲ್ಲಿ ಭಾರತ್ ಬಂದ್ ಮಾಡುವುದು ಸರಿ. ಆದರೆ ಅಲ್ಲಿ ಅಹಿಂಸೆಗೆ ಸ್ಥಾನವಿಲ್ಲ. ಕೆಲವೊಂದು ರಾಜಕೀಯ ಪಕ್ಷಗಳು ರೈತರಿಗೆ ಅಪಖ್ಯಾತಿ ತರಲು ಹುನ್ನಾರ ಮಾಡುತ್ತಿವೆ ಎಂದು ರೆಡ್ಡಿ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಭಾರತ್ ಬಂದ್​​ಗೆ ಕಾಂಗ್ರೆಸ್, ಎನ್​​ಸಿಪಿ, ಎಎಪಿ, ಟಿಆರ್​​ಎಸ್, ಡಿಎಂಕೆ , ಸಮಾಜವಾದಿ ಪಕ್ಷ, ಎಡಪಕ್ಷಗಳು ಬೆಂಬಲ ನೀಡಿವೆ. ಅದೇ ವೇಳೆ  ಎಲ್ಲ ರಾಜಕೀಯ ಪಕ್ಷಗಳ ಕಚೇರಿ ಹೊರಗಡೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ಅಸ್ಸಾಂನಲ್ಲಿ ವಿರೋಧ ಪಕ್ಷಗಳು ಬಂದ್​​ಗೆ ಬೆಂಬಲ ನೀಡಿವೆ. ಒಡಿಶಾದಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಬಂದ್ ಆಗಿವೆ.

ಕಾಂಗ್ರೆಸ್, ಎನ್​​ಸಿಪಿ , ಶಿವಸೇನಾ, ಆಮ್‌ ಆದ್ಮಿ ಪಕ್ಷ, ಟಿಆರ್ ಎಸ್, ಆರ್ ಜೆಡಿ, ಟಿಎಂಸಿ, ಡಿಎಂಕೆ, ಸಮಾಜವಾದಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ, ಐಎನ್ಎಲ್ ಡಿ ಪಕ್ಷಗಳು ಇವತ್ತಿನ ಭಾರತ ಬಂದ್​​ಗೆ ಬೆಂಬಲ ನೀಡಿವೆ. ಜತೆಗೆ ಅಖಿಲ ಭಾರತ ರೈಲ್ವೆ ಸಿಬ್ಬಂದಿಗಳ ಸಂಘಟನೆ ಭಾರತ್ ಬಂದ್ ಗೆ ಬೆಂಬಲ ಸೂಚಿಸಿದೆ.

 

10 ಕಾರ್ಮಿಕ ಸಂಘಟನೆಗಳ ಬೆಂಬಲ
ಐಎನ್​​ಟಿಯುಸಿ, ಎಐಟಿಯುಸಿ, ಹಿಂದ್ ಮಜ್ದೂರ್ ಸಭಾ, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್ ಇ ಡಬ್ಲ್ಯುಎ, ಎಐಸಿಸಿಟಿಯು, ಎಲ್​​ಪಿಎಫ್, ಯುಟಿಯುಸಿ ಸಂಘಟನೆಗಳು ಬಂದ್​​ಗೆ ಬೆಂಬಲ ನೀಡಿವೆ. ಪ್ರತಿಭಟನೆ ನಿರತ ರೈತರಿಗೆ ಬೆಂಬಲ ಸೂಚಿಸಿರುವ ಬ್ಯಾಂಕ್ ಸಂಘಟನೆಗಳು, ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿವೆ.

ಆಜಾದ್​​ಪುರ್ ಮಂಡಿ ತೆರೆಯುವುದಿಲ್ಲ
ಭಾರತ್ ಬಂದ್ ಗೆ ಬೆಂಬಲ ಘೋಷಿಸಿ ದೆಹಲಿಯಲ್ಲಿರುವ ಆಜಾದ್​​ಪುರ್ ಮಂಡಿ ಬಂದ್ ಆಗಿದೆ. ಇಲ್ಲಿನ ಕನೌಟ್ ಪ್ಲೇಸ್, ಸರೋಜಿನಿನಗರದಲ್ಲಿ ಅಂಗಡಿಗಳು ತೆರೆಯಲಿವೆ. ಕನೌಟ್ ಮಾರುಕಟ್ಟೆ ಬಂದ್ ಆಗುವುದಿಲ್ಲ ಎಂದು ನವದೆಹಲಿಯ ಕಾರ್ಮಿಕ ಸಂಘಟನೆ ಎನ್​​ಡಿಟಿಎ ಹೇಳಿತ್ತು. ಭಾರತ್ ಬಂದ್ ವೇಳೆ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಮುಂಬೈನಲ್ಲಿ ಆಟೊ, ಕ್ಯಾಬ್, ಬೆಸ್ಟ್ ಬಸ್ ಗಳು ಸಂಚಾರ ನಡೆಸಿವೆ. ಮುಂಬೈ ಮತ್ತು ನವಿ ಮುಂಬೈನಲ್ಲಿರುವ ಗುರುದ್ವಾರಗಳು ಸಾರಿಗೆ ಸಿಬ್ಬಂದಿ ಸಂಘಟನೆಗಳೊಂದಿಗೆ ಶಾಂತಿಯುತವಾಗಿ ಕಾರು ರ್ಯಾಲಿ ನಡೆಸಲಿವೆ. ಕಾರು ರ್ಯಾಲಿ ನಂತರ ಮರೀನ್ ಡ್ರೈವ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಜನರು ರೈತರಿಗೆ ಬೆಂಬಲ ಸೂಚಿಸಲಿದ್ದಾರೆ.

ಪಂಜಾಬ್ ನಲ್ಲಿ ರೆಸಾರ್ಟ್ ಬಂದ್. ಕರ್ನಾಟಕದಲ್ಲಿ 6 ಗಂಟೆ ಕಾಲ ಬಂದ್

ಪಂಜಾಬ್​​ನಲ್ಲಿ ಚಿಲ್ಲರೆ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದು ಹೋಟೆಲ್, ರೆಸಾರ್ಟ್​ಗಳು ಬಂದ್ ಆಗಿವೆ. ಗುಜರಾತಿನಲ್ಲಿ 23 ರೈತ ಸಂಘಟನೆಗಳು ಒಗ್ಗೂಡಿರುವ ಗುಜರಾತ್ ಖೇದತ್ ಸಂಘರ್ಷ್ ಸಮಿತಿ ಭಾರತ್ ಬಂದ್​​ನ್ನು ಬೆಂಬಲಿಸಿದೆ. ಕರ್ನಾಟಕದಲ್ಲಿ ಆಲ್ ಇಂಡಿಯಾ ಕಿಸಾನ್​ ಸಂಘರ್ಷ್ ಕೋ ಆರ್ಡಿನೇಷನ್ ಕಮಿಟಿ ( ಎಐಕೆಎಸ್ ಸಿಸಿ) 6 ಗಂಟೆಗಳ ಬಂದ್​​ಗೆ ಕರೆ ನೀಡಿದೆ.

ರೈತ ವಿರೋಧಿ ಕಾನೂನು ಜಾರಿ ಮಾಡಲ್ಲ: ಕೇರಳ

ಕೇಂದ್ರದ ಕೃಷಿ ಕಾನೂನು ವಿರುದ್ಧ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಲು ನಿರ್ಧರಿಸಿದೆ. ಕೇಂದ್ರದ ರೈತ ವಿರೋಧಿ ಕಾನೂನನ್ನು ನಾವು ಕೇರಳದಲ್ಲಿ ಜಾರಿಗೆ ತರುವ ಬದಲು ಪರ್ಯಾಯ ಕಾನೂನನ್ನು ಪರಿಗಣಿಸಲಾಗುವುದು ಎಂದು ಕೇರಳದ ಕೃಷಿ ಸಚಿವ ವಿ.ಎಸ್ ಸುನಿಲ್ ಕುಮಾರ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರೈಲು ತಡೆ

ಪಶ್ಚಿಮ ಬಂಗಾಳದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಪಶ್ಚಿಮ್ ಬಂಗಾ ಖೇತ್ ಮಜ್ದೂರ್ ಸಮಿತಿ 11 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದೆ.ದಕ್ಷಿಣ ಬಂಗಾಳದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ಕಾರ್ಯಕರ್ತರು ರೈಲು ಹಳಿಗಳಲ್ಲಿ ಪ್ರತಿಭಟನೆ ನಡೆಸಿದ್ದು, ಸಬ್ ಅರ್ಬನ್ ರೈಲು ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಇಡೀ ದೇಶ ಬಂದ್​.. ಆದ್ರೆ ಪ. ಬಂಗಾಳದಲ್ಲಿ ಬಿಜೆಪಿಯಿಂದಲೇ 12 ತಾಸು ಬಂದ್​ಗೆ ಕರೆ

ನೂತನ ಕೃಷಿ ಕಾಯ್ದೆ ವಿರೋಧಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಲು ಮುಂದಾದ ಕೇರಳ

Published On - 11:48 am, Tue, 8 December 20