ಕೇಂದ್ರದ ಯೋಜನೆ ವಿಫಲಗೊಳಿಸಿದ್ದೇವೆ ಎಂದಿದ್ದ ಕೇಜ್ರಿವಾಲ್ಗೆ ಗೃಹ ಬಂಧನ -ಪೊಲೀಸರು ಹೇಳೋದೇನು?
ದೆಹಲಿ ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಯಾವುದೇ ರೀತಿಯ ಘರ್ಷಣೆ, ಅವಘಡ ತಡೆಯುವ ನಿಟ್ಟಿನಲ್ಲಿ ಸಿಎಂ ನಿವಾಸದ ಸುತ್ತ ಸೇರಿ, ಹಲವು ಕಡೆಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ ಹೊರತು, ಮುಖ್ಯಮಂತ್ರಿಯನ್ನು ಗೃಹ ಬಂಧನದಲ್ಲಿ ಇರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ಕೊಡುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ.
ಸಿಂಗು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ನಿನ್ನೆ ಅರವಿಂದ ಕೇಜ್ರಿವಾಲ್ ಭೇಟಿಯಾಗಿ, ಮಾತುಕತೆ ನಡೆಸಿದ್ದರು. ಅಲ್ಲಿಂದ ವಾಪಸ್ ಬಂದ ನಂತರ ಅವರನ್ನು ಮನೆಯಲ್ಲೇ ಬಂಧಿಸಿಡಲಾಗಿದೆ. ಸಿಎಂ ಮನೆಗೆ ಪ್ರವೇಶ ಅವಕಾಶ ಕೊಡುತ್ತಿಲ್ಲ.. ಯಾರನ್ನೂ ಒಳಗೆ ಬಿಡುತ್ತಿಲ್ಲ ಎಂದು ಆಪ್ ಟ್ವೀಟ್ ಮೂಲಕ ತಿಳಿಸಿದೆ.
ಹಾಗೇ ಆಪ್ ಮುಖಂಡ ಸೌರಭ್ ಭಾರದ್ವಾಜ್ ಸುದ್ದಿಗೋಷ್ಠಿ ನಡೆಸಿ, ಸಿಎಂ ನಿವಾಸದ ಸುತ್ತಲೂ ಎಲ್ಲ ಕಡೆಯಲ್ಲೂ ಬ್ಯಾರಿಕೇಡ್ ಹಾಕಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಅವರನ್ನು ಮನೆಯಲ್ಲಿ ಕೂಡಿಹಾಕಿದ್ದಾರೆ ಎಂದು ದೂರಿದ್ದರು. ಅಷ್ಟೇ ಅಲ್ಲ, ನಮ್ಮ ಶಾಸಕರಿಗೂ ಪೊಲೀಸರು ಥಳಿಸಿದ್ದಾರೆ ಎಂದಿದ್ದರು.
ಆದರೆ ದೆಹಲಿ ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಯಾವುದೇ ರೀತಿಯ ಘರ್ಷಣೆ, ಅವಘಡ ತಡೆಯುವ ನಿಟ್ಟಿನಲ್ಲಿ ಸಿಎಂ ನಿವಾಸದ ಸುತ್ತ ಸೇರಿ, ಹಲವು ಕಡೆಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ ಹೊರತು, ಮುಖ್ಯಮಂತ್ರಿಯನ್ನು ಗೃಹ ಬಂಧನದಲ್ಲಿ ಇರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಬಲ ಘೋಷಿಸಿದ್ದ ಸಿಎಂ ನಿನ್ನೆ ಸಿಂಗು ಗಡಿಗೆ ಭೇಟಿ ಕೊಟ್ಟಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೈತರು ಕರೆ ನೀಡಿರುವ ಭಾರತ್ ಬಂದ್ಗೆ ಬೆಂಬಲ ಘೋಷಿಸಿದ್ದರು. ಕೇಂದ್ರ ಸರ್ಕಾರ ರೈತರಿಗೆ ದೆಹಲಿಯೊಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು ನಂತರ ಸ್ಟೇಡಿಯಂ ಜೈಲಿನಲ್ಲಿ ಇಡಲು ಯೋಜನೆ ರೂಪಿಸಿತ್ತು. ಆದರೆ ನಮ್ಮ ದೆಹಲಿ ಸರ್ಕಾರ ಆ ಪ್ಲ್ಯಾನ್ ವಿಫಲಗೊಳಿಸಿದೆ. ಸ್ಟೇಡಿಯಂನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸಲು ನಮ್ಮ ಸರ್ಕಾರದ ಮೇಲೆ ತುಂಬ ಒತ್ತಡ ತಂದಿದ್ದರು. ಆದರೆ ನಾವು ಅದಕ್ಕೆ ಅನುಮತಿ ನೀಡಲಿಲ್ಲ ಎಂದು ಹೇಳಿದ್ದರು.
Published On - 12:55 pm, Tue, 8 December 20