Bharat Bandh Tomorrow: ನಾಳೆ ಭಾರತ್ ಬಂದ್, ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ನಾಲ್ಕು ತಿಂಗಳು

ಮಾರ್ಚ್ 26ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಲ್ಲ ಸೇವೆಗಳನ್ನು ಬಂದ್ ಮಾಡಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಈ ಅವಧಿಯಲ್ಲಿ ದೇಶದಾದ್ಯಂತ ಎಲ್ಲ ಸಾರಿಗೆ, ರೈಲು, ಮಾರುಕಟ್ಟೆ ಮತ್ತು ಸಾರ್ವಜನಿಕ ಸ್ಥಳಗಳು ಬಂದ್ ಆಗಿರಲಿವೆ.

Bharat Bandh Tomorrow: ನಾಳೆ ಭಾರತ್ ಬಂದ್, ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ನಾಲ್ಕು ತಿಂಗಳು
ಪ್ರತಿಭಟನೆ ನಿರತ ರೈತರು (ಸಂಗ್ರಹ ಚಿತ್ರ)

Updated on: Mar 25, 2021 | 11:27 AM

ನವದೆಹಲಿ: ಕಳೆದ ನಾಲ್ಕು ತಿಂಗಳಿನಿಂದ ದೆಹಲಿಯ ಗಡಿಭಾಗದಲ್ಲಿ ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ರೈತರಿಗೆ ಬೆಂಬಲ ನೀಡಲು ನಾಳೆ (ಮಾರ್ಚ್ 26) ಭಾರತ್ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ ( SKM) ಕರೆ ನೀಡಿದೆ. ಪಿಟಿಐ ಸುದ್ದಿಸಂಸ್ಥೆಯ ವರದಿ ಪ್ರಕಾರ ಮಾರ್ಚ್ 26ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಲ್ಲ ಸೇವೆಗಳನ್ನು ಬಂದ್ ಮಾಡಲು ಎಸ್​ಕೆಎಂ ಕರೆ ನೀಡಿದೆ. ಈ ಅವಧಿಯಲ್ಲಿ ದೇಶದಾದ್ಯಂತ ಎಲ್ಲ ಸಾರಿಗೆ, ರೈಲು, ಮಾರುಕಟ್ಟೆ ಮತ್ತು ಸಾರ್ವಜನಿಕ ಸ್ಥಳಗಳು ಬಂದ್ ಆಗಿರಲಿವೆ. ಅನ್ನದಾತರಿಗೆ ಗೌರವ ಸೂಚಿಸಲು ಭಾರತ್ ಬಂದ್​ನ್ನು ಯಶಸ್ವಿ ಮಾಡಬೇಕು ಎಂದು ನಾನು ದೇಶದ ನಾಗರಿಕರಲ್ಲಿ ವಿನಂತಿಸುತ್ತೇನೆ ಎಂದು ರೈತ ನಾಯಕ ದರ್ಶನ್ ಪಾಲ್ ಹೇಳಿದ್ದಾರೆ.

ಪಂಜಾಬ್, ಹರ್ಯಾಣ, ಪಶ್ಚಿಮ ಉತ್ತರಪ್ರದೇಶದ ಸಾವಿರಾರು ರೈತರು ದೆಹಲಿ ಗಡಿಭಾಗವಾದ ಸಿಂಘು, ಟಿಕ್ರಿ ಮತ್ತು ಗಾಜೀಪುರ್ ನಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಪ್ರತಿಭಟನೆ ನಿರತರಾಗಿದ್ದು, ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಕಾನೂನು ಖಾತ್ರಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕೃಷಿ ಕಾಯ್ದೆ ವಿರುದ್ಧ ನಡೆಯುವ ರೈತರ ಹೋರಾಟ ನಾಲ್ಕು ತಿಂಗಳು ಪೂರೈಸುತ್ತಿರುವ ಹೊತ್ತಿನಲ್ಲಿ ಮಾರ್ಚ್ 26ರಂದು ನಾವು ಸಂಪೂರ್ಣ ಭಾರತ್ ಬಂದ್ ಮಾಡಲಿದ್ದೇವೆ. ಬೆಳಗ್ಗಿನಿಂದ ಸಂಜೆವರೆಗೆ ಶಾಂತಿಯುತ ರೀತಿಯಲ್ಲಿ ಬಂದ್ ಆಚರಿಸಲಾಗುವುದು ಎಂದು ರೈತ ನಾಯಕ ಬೂಟಾ ಸಿಂಗ್ ಬುರ್ಜ್ ಗಿಲ್ ಹೇಳಿದ್ದರು.

ಮಾರ್ಚ್ 28ರಂದು ಹೋಳಿಕಾ ದಹನ್ ವೇಳೆ ನೂತನ ಕೃಷಿ ಕಾಯ್ದೆಯ ಪ್ರತಿಗಳನ್ನು ಸುಟ್ಟು ಹಾಕಲಾಗುವುದು ಎಂದು ರೈತ ನಾಯಕರು ಹೇಳಿದ್ದಾರೆ.

ಭಾರತ್ ಬಂದ್​ಗೆ ವೈಎಸ್ಆರ್​ಸಿಪಿ ಬೆಂಬಲ
ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ ( YSRCP) ಭಾರತ್ ಬಂದ್ ಗೆ ಬೆಂಬಲ ಸೂಚಿಸಿದೆ. ವಿಶಾಖಪಟ್ಟಣಂ ಉಕ್ಕು ಘಟಕವನ್ನು (VSP) ಖಾಸಗೀಕರಣಗೊಳಿಸುವ  ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿದೆ.  ಈ ಬಗ್ಗೆ ಪ್ರತಿಕ್ರಿಯಿಸಿದ ಆಂಧ್ರ ಪ್ರದೇಶ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಪೆರ್ನಿ ವೆಂಕಟರಾಮಯ್ಯ ಅವರು ಉಕ್ಕು ಘಟಕವನ್ನು ಖಾಸಗೀಕರಣಗೊಳಿಸುವುದನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಶಾಂತಿಯುತ ರೀತಿಯಲ್ಲಿ ಬಂದ್ ಆಚರಿಸಿ ಎಂದು ಸಚಿವರು ರೈತರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.ಬಂದ್​ಗೆ ಬೆಂಬಲ ಘೋಷಿಸಿ ನಾಳೆ ಎಲ್ಲ ಸರ್ಕಾರಿ ಕಚೇರಿಗಳು ಮಧ್ಯಾಹ್ನ 1ಗಂಟೆಗೆ ತೆರೆಯಲಿದ್ದು, ಮಧ್ಯಾಹ್ನ ನಂತರ ಆರ್ ಟಿಸಿ ಬಸ್ ಗಳು ರಸ್ತೆಗಿಳಿಯಲಿವೆ. ಎಲ್ಲ ತುರ್ತು ಆರೋಗ್ಯ ಸೇವೆಗಳು ಎಂದಿನಂತೆ ಇರಲಿವೆ ಎಂದು ಸಚಿವರು ಹೇಳಿದ್ದಾರೆ.

ಅಂಗಡಿ ಬಂದ್ ಮಾಡುವ ವಿಚಾರ ವೈಯಕ್ತಿಕ

ರೈತ ಸಂಘಟನೆಗಳು ಕರೆ ನೀಡಿರುವ ಬಂದ್​ಗೆ ಬೆಂಬಲ ಘೋಷಿಸಿ ಗಾಜಿಯಾಬಾದ್​ನಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ತೆರೆಯುವ ಅಥವಾ ಮುಚ್ಚುವ ನಿರ್ಧಾರ ವೈಯಕ್ತಿಕವಾಗಿದೆ. ಭಾರತ್ ಬಂದ್ ಬಗ್ಗೆ ಮಹಾನಗರ್ ವ್ಯಾಪಾರ ಮಂಡಳಿ ತಟಸ್ಥ ನಿಲುವು ಸ್ವೀಕರಿಸಿದೆ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಚಾವ್ಲಾ ಹೇಳಿದ್ದಾರೆ. ಯಾರೊಬ್ಬರೂ ಅಂಗಡಿಗಳನ್ನು ತೆರೆಯಲು ಅಥವಾ ಮುಚ್ಚಲು ಬಲವಂತ ಮಾಡುವಂತಿಲ್ಲ. ಈ ನಿರ್ಧಾರ ಅಂಗಡಿ ಮಾಲೀಕರಿಗೆ ಬಿಟ್ಟಿದ್ದು ಎಂದು ಚಾವ್ಲಾ ಹೇಳಿದ್ದಾರೆ.

ಇದನ್ನೂ ಓದಿ:  Farmers Protest: ರೈತ ಹೋರಾಟ ಡಿಸೆಂಬರ್​ವರೆಗೂ ಮುಂದುವರಿಯಬಹುದು: ರೈತ ಮುಖಂಡ ರಾಕೇಶ್ ಟಿಕಾಯತ್

Published On - 11:03 am, Thu, 25 March 21