ದೆಹಲಿ ಸರ್ಕಾರದ ಅಧಿಕಾರ ಮೊಟಕುಗೊಳಿಸುವ ಮಸೂದೆಗೆ ರಾಜ್ಯಸಭೆ ಅಂಗೀಕಾರ; ಇದು ಕರಾಳ ದಿನ ಎಂದ ಅರವಿಂದ್ ಕೇಜ್ರಿವಾಲ್
The Government of National Capital Territory of Delhi (Amendment) Bill: ದೆಹಲಿ ಸರ್ಕಾರವು ಆಡಳಿತಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಲೆಫ್ಟಿನೆಂಟ್ ಜನರಲ್ ಅಭಿಪ್ರಾಯ ತೆಗೆದುಕೊಳ್ಳುವುದನ್ನು ಈ ಮಸೂದೆ ಕಡ್ಡಾಯಗೊಳಿಸುತ್ತದೆ.
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಆಡಳಿತ ನಿರ್ವಹಣೆಯಲ್ಲಿ ಚುನಾಯಿತ ಸರ್ಕಾರಕ್ಕಿಂತಲೂ ಲೆಫ್ಟಿನೆಂಟ್ ಗವರ್ನರ್ಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆಗೆ ರಾಜ್ಯಸಭೆಯಲ್ಲಿಯೂ ಅಂಗೀಕಾರ ದೊರೆತಿದೆ. ಮಸೂದೆ ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ರಾಜ್ಯಸಭೆ ಕಲಾಪದಿಂದ ಸಭಾತ್ಯಾಗ ಮಾಡಿದವು. ದೆಹಲಿಯಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಸದಸ್ಯರೂ ಸಭಾತ್ಯಾಗ ಮಾಡಿದ್ದರು.
ಈ ಮಸೂದೆಯು ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ (ಆಪ್) ದೊಡ್ಡ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. 2013ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಆಪ್ ಸರ್ಕಾರವು ಪದೇಪದೆ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಸಂಘರ್ಷ ಮಾಡಿಕೊಳ್ಳುತ್ತಿತ್ತು.
ಜಿಎನ್ಸಿಟಿಡಿ (ತಿದ್ದುಪಡಿ) ಮಸೂದೆ (The Government of National Capital Territory of Delhi (Amendment) Bill – GNCTD) ಎಂದೇ ಕರೆಯಲಾಗಿರುವ ಈ ಮಸೂದೆಯು ದೆಹಲಿಯಲ್ಲಿ ಸರ್ಕಾರ ಎಂದರೆ ಲೆಫ್ಟಿನೆಂಟ್ ಗವರ್ನರ್ ಎಂದು ವ್ಯಾಖ್ಯಾನಿಸುತ್ತದೆ. ದೆಹಲಿ ಸರ್ಕಾರವು ಆಡಳಿತಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಲೆಫ್ಟಿನೆಂಟ್ ಜನರಲ್ ಅಭಿಪ್ರಾಯ ತೆಗೆದುಕೊಳ್ಳುವುದು ಕಡ್ಡಾಯಗೊಳಿಸುತ್ತದೆ.
ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿರುವ ಬಗ್ಗೆ ಟ್ವೀಟ್ಮಾಡಿ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್, ‘ರಾಜ್ಯಸಭೆಯಲ್ಲಿ ಜಿಎನ್ಸಿಟಿಡಿ ಮಸೂದೆ ಅಂಗೀಕಾರಗೊಂಡಿದೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಕರಾಳ ದಿನ. ಜನರಿಗೆ ಅವರ ಹಕ್ಕು ಸಿಗುವಂತೆ ಮಾಡಲು ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ. ಎಂಥದ್ದೇ ಅಡೆತಡೆಗಳು ಬಂದರೂ ಸರಿ, ನಮ್ಮ ಒಳ್ಳೆಯ ಕೆಲಸಗಳನ್ನು ಮುಂದುವರಿಸುತ್ತೇವೆ. ನಮ್ಮ ಕೆಲಸಗಳು ನಿಲ್ಲುವುದೂ ಇಲ್ಲ, ತಡವಾಗುವುದೂ ಇಲ್ಲ’ ಎಂದು ಹೇಳಿದ್ದಾರೆ.
ಎರಡು ದಿನಗಳ ಚರ್ಚೆ, ವಾಗ್ವಾದಗಳ ನಂತರ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಈ ಮಸೂದೆಯು ಪ್ರಜಾಪ್ರಭುತ್ವವನ್ನು ನಾಶಪಡಿಸಲಿದೆ ಎಂದು ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಮಸೂದೆಯನ್ನು ಉನ್ನತ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು.
ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ಸದನದಲ್ಲಿದ್ದ ಒಟ್ಟು ಸದಸ್ಯರ ಪೈಕಿ 83 ಮಂದಿ ಮಸೂದೆಯ ಪರವಾಗಿ ಮತ್ತು 45 ಮಂದಿ ವಿರುದ್ಧವಾಗಿ ಮತಚಲಾಯಿಸಿದರು. ಮಸೂದೆ ಅಂಗೀಕಾರಗೊಳ್ಳುವ ಕೆಲವೇ ನಿಮಿಷಗಳ ಮೊದಲು ಕಾಂಗ್ರೆಸ್ ಸದನದಿಂದ ಹೊರನಡೆಯಿತು.
‘ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಒಳಗಾದ ಗತಿಯೇ ಇಂದು ಸಂವಿಧಾನಕ್ಕೆ ಆಗಿದೆ. ದೇಶದ ಸಂವಿಧಾನವನ್ನು ತಿದ್ದುಪಡಿಯೇ ಇಲ್ಲದೆ ಬದಲಿಸಲಾಗಿದೆ’ ಎಂದು ಆಪ್ನ ಸಂಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
ಈ ಮಸೂದೆಯನ್ನು ಜನರು ಒಪ್ಪಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ರೈತ ಚಳವಳಿಯ ಮಾದರಿಯಲ್ಲಿಯೇ ತೀವ್ರ ಪ್ರತಿಭಟನೆಗಳು ನಡೆಯಲಿವೆ ಎಂದು ಆಪ್ ಸದಸ್ಯರು ಎಚ್ಚರಿಸಿದರು. ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಜನತಾದಳ, ಶಿವಸೇನಾ, ಜನತಾ ದಳ, ವೈಎಸ್ಆರ್ ಕಾಂಗ್ರೆಸ್ ಮತ್ತು ಅಕಾಲಿದಳ ಪಕ್ಷಗಳೂ ಈ ಮಸೂದೆಯನ್ನು ವಿರೋಧಿಸಿವೆ.
ಇದನ್ನೂ ಓದಿ: Explainer | ದೆಹಲಿ ಸರ್ಕಾರ ಎಂದರೆ ಯಾರು? ಎನ್ಸಿಟಿಡಿ ಮಸೂದೆ ಅಸಂವಿಧಾನಿಕ ಎಂದು ಕೇಜ್ರಿವಾಲ್ ವಾದಿಸುತ್ತಿರುವುದೇಕೆ?
ಇದನ್ನೂ ಓದಿ: ದೆಹಲಿ ಆಡಳಿತದ ಮೇಲೆ ಕೇಂದ್ರ ಸರ್ಕಾರಕ್ಕೆ ಹತೋಟಿ ಕೊಡುವ ಮಸೂದೆಗೆ ಲೋಕಸಭೆ ಅಸ್ತು