Explainer | ದೆಹಲಿ ಸರ್ಕಾರ ಎಂದರೆ ಯಾರು? ಎನ್ಸಿಟಿಡಿ ಮಸೂದೆ ಅಸಂವಿಧಾನಿಕ ಎಂದು ಕೇಜ್ರಿವಾಲ್ ವಾದಿಸುತ್ತಿರುವುದೇಕೆ?
Centre vs Delhi Government: 1993ರಲ್ಲಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ನಾಯಕ ಮದನ್ಲಾಲ್ ಖುರಾನಾ ಸಹ ದೆಹಲಿ ಸರ್ಕಾರದ ಸ್ವಾತಂತ್ರ್ಯದ ಬಗ್ಗೆ ದೊಡ್ಡದನಿಯಲ್ಲಿ ಪ್ರಸ್ತಾಪಿಸಿದ್ದರು. ಈಗ ಆಪ್ ಪಕ್ಷವು ಅದೇ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದೆ. ಈ ಮಸೂದೆಯ ದೂರಗಾಮಿ ಪರಿಣಾಮಗಳ ಬಗ್ಗೆ ದೇಶವ್ಯಾಪಿ ಚರ್ಚೆ ಆರಂಭವಾಗಿದೆ.
ಕೇಂದ್ರ ಸರ್ಕಾರವು ಸೋಮವಾರ (ಮಾರ್ಚ್ ರಾಷ್ಟ್ರ ರಾಜಧಾನಿ ದೆಹಲಿ ಭೂಪ್ರದೇಶ (ತಿದ್ದುಪಡಿ) ಮಸೂದೆಯನ್ನು (National Capital Territory of Delhi (Amendment) Bill) ಲೋಕಸಭೆಯಲ್ಲಿ ಮಂಡಿಸಿತು. ಈ ಮಸೂದೆ ಮಂಡನೆಯ ನಂತರ ಚುನಾಯಿತ ಸರ್ಕಾರ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಡುವಣ ಅಧಿಕಾರ ವ್ಯಾಪ್ತಿಯ ಚರ್ಚೆಗೆ ಮತ್ತೆ ಗರಿಗೆದರಿದೆ. ಕೇಂದ್ರದ ಬಿಜೆಪಿ ಸರ್ಕಾರ ಮತ್ತು ದೆಹಲಿಯ ಆಮ್ ಆದ್ಮಿ ಪಕ್ಷದ (ಆಪ್) ಸರ್ಕಾರದ ನಡುವೆ ಹಲವು ಬಾರಿ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಸಂಘರ್ಷಗಳು ನಡೆದಿದ್ದವು. ಈ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆದು, ಜುಲೈ 4, 2018ರಲ್ಲಿ ತೀರ್ಪು ಸಹ ಹೊರಬಿದ್ದಿದೆ. ಈ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಚುನಾಯಿತ ಸರ್ಕಾರದ ಪರವಾಗಿಯೇ ನಿಲುವು ತಳೆದಿತ್ತು.
ಇದೀಗ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಿರುವುದು ಸಹಜವಾಗಿಯೇ ದೆಹಲಿ ಮುಖ್ಯಮಂತ್ರಿಯೂ ಆಗಿರುವ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಇತರರ ಕೆಂಗಣ್ಣಿಗೆ ಗುರಿಯಾಗಿದೆ. ‘ಚುನಾವಣೆಯಲ್ಲಿ ಅಧಿಕಾರ ದಕ್ಕಿಸಿಕೊಳ್ಳದ ಬಿಜೆಪಿಯು ಹಿಂಬಾಗಿಲ ಮೂಲಕ ಅಧಿಕಾರ ಪಡೆದುಕೊಳ್ಳಲು ಯತ್ನಿಸುತ್ತಿದೆ’ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.
ಮಸೂದೆ ಏನು ಹೇಳುತ್ತೆ? ದೆಹಲಿಯ ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಜನರಲ್ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸಮರ್ಪಕವಾಗಿ ವ್ಯಾಖ್ಯಾನಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಈ ಮಸೂದೆಯ ‘ಉದ್ದೇಶಗಳು ಮತ್ತು ಕಾರಣಗಳು’ ವಿಭಾಗದಲ್ಲಿ ಹೇಳಿದೆ. ‘ಶಾಸಕಾಂಗ ರೂಪಿಸುವ ಯಾವುದೇ ಕಾನೂನಿನ ಪ್ರಕಾರ ಸರ್ಕಾರ ಎಂದರೆ ಅದು ಲೆಫ್ಟಿನೆಂಟ್ ಜನರಲ್’ ಎಂದು ನೇರವಾಗಿ ತಿಳಿಸಿದೆ. 2015ರಲ್ಲಿ ಲೆಫ್ಟಿನೆಂಟ್ ಜನರಲ್ ನಜೀಬ್ ಜಂಗ್ ಸಹ ಇದೇ ಮಾತು ಹೇಳಿದ್ದರು. ‘ಸರ್ಕಾರ ಎಂದರೆ ದೆಹಲಿಯ ರಾಷ್ಟ್ರಪತಿಯ ಮೂಲಕ ಸಂವಿಧಾನದ 239ನೇ ಪರಿಚ್ಛೇದದ ಅನ್ವಯ ನೇಮಕಗೊಂಡ ಲೆಫ್ಟಿನೆಂಟ್ ಜನರಲ್’ ಎಂದು ನಜೀಬ್ ಜಂಗ್ ಹೇಳಿಕೊಂಡಿದ್ದರು. ದೆಹಲಿ ಚುನಾಯಿತ ಸರ್ಕಾರ, ಸಚಿವ ಸಂಪುಟವು ಯಾವುದೇ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರುವ ಮೊದಲು ಲೆಫ್ಟಿನೆಂಟ್ ಜನರಲ್ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಈ ಮಸೂದೆಯೂ ಸ್ಪಷ್ಟಪಡಿಸುತ್ತದೆ.
ಇದನ್ನೂ ಓದಿ: ನಾನು ರಾಮ ಮತ್ತು ಹನುಮನ ಭಕ್ತ; ರಾಮ ರಾಜ್ಯದಿಂದ ಸ್ಫೂರ್ತಿ ಪಡೆದ 10 ಅಂಶ ಪಟ್ಟಿ ಮಾಡಿದ ಅರವಿಂದ್ ಕೇಜ್ರಿವಾಲ್
1991ರ ಕಾಯ್ದೆಯನ್ನು ಯಾವ ಉದ್ದೇಶದಿಂದ ಜಾರಿಗೆ ತರಲಾಗಿತ್ತು? ದೆಹಲಿಯು ಪ್ರಸ್ತುತ ಶಾಸಕಾಂಗ ಸಹಿತ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಹೊಂದಿದೆ. ಸಂವಿಧಾನದ 239 ಎಎ ಮತ್ತು 239 ಬಿಬಿ ಪರಿಚ್ಛೇದಗಳಿಗೆ ತಿದ್ದುಪಡಿ ತರುವ ಮೂಲಕ ಈ ಸ್ಥಾನಮಾನ ನೀಡಲಾಗಿದೆ. ಜಿಎನ್ಸಿಟಿಡಿ (Government of National Capital Territory of Delhi – GNCTD) ಕಾಯ್ದೆಯು ವಿಧಾನಸಭೆಯ ಅಧಿಕಾರ ಮಿತಿ ಮತ್ತು ಲೆಫ್ಟಿನೆಂಟ್ ಜನರಲ್ಗೆ ಇರುವ ವಿವೇಚನಾಧಿಕಾರಗಳು ಮತ್ತು ಲೆಫ್ಟಿನೆಂಟ್ ಜನರಲ್ಗೆ ಮಾಹಿತಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆಯೂ ಈ ಕಾಯ್ದೆ ವಿವರಣೆ ನೀಡುತ್ತದೆ.
2018ರಲ್ಲಿ ಸುಪ್ರೀಂಕೋರ್ಟ್ ಏನು ಹೇಳಿತ್ತು? 2018ರಲ್ಲಿ ಸುಪ್ರೀಂಕೋರ್ಟ್ನ ಐವರು ಸದಸ್ಯರ ನ್ಯಾಯಪೀಠವು ಪೊಲೀಸ್ ಆಡಳಿತ, ಕಾನೂನು ಸುವ್ಯವಸ್ಥೆ ಮತ್ತು ಭೂವ್ಯವಹಾರಗಳಿಗೆ ಹೊರತುಪಡಿಸಿದ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಣಯಗಳನ್ನು ಮುಂಚಿತವಾಗಿ ಲೆಫ್ಟಿನೆಂಟ್ ಜನರಲ್ಗೆ ತಿಳಿಸಿ, ಒಪ್ಪಿಗೆ ಪಡೆಯಬೇಕಿಲ್ಲ ಎಂದು ಹೇಳಿತ್ತು. ಆದರೆ ಒಮ್ಮೆ ತೆಗೆದುಕೊಂಡ ನಿರ್ಣಯವನ್ನು ಲೆಫ್ಟಿನೆಂಟ್ ಜನರಲ್ಗೆ ತಿಳಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ನ ಸಂವಿಧಾನ ಪೀಠ ಹೇಳಿತ್ತು.
ನ್ಯಾಯಪೀಠದಲ್ಲಿ ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಂ.ಖಾನ್ವಿಲ್ಕಾರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಇದ್ದರು. ಮೂರು ಪ್ರತ್ಯೇಕ ತೀರ್ಪು ನೀಡಿದ್ದ ನ್ಯಾಯಪೀಠವು ‘ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸ್ಥಾನಮಾನವು ಇತರ ರಾಜ್ಯಗಳ ರಾಜ್ಯಪಾಲರಿಗೆ ಸರಿಸಮವಾದುದಲ್ಲ. ಒಂದು ಮಿತಿಯೊಳಗೆ ಅವರು ಆಡಳಿತಾಧಿಕಾರ ಹೊಂದಿರುತ್ತಾರೆ. ಚುನಾಯಿತ ಸರ್ಕಾರವೂ ದೆಹಲಿ ಒಂದು ಪೂರ್ಣ ಪ್ರಮಾಣದ ರಾಜ್ಯವಲ್ಲ (ಕೇಂದ್ರಾಡಳಿತ ಪ್ರದೇಶ) ಎಂಬ ವಿಚಾರವನ್ನು ಪ್ರಜ್ಞೆಯಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿತ್ತು.
ಲೋಕಸಭೆಯು ಮಸೂದೆಯನ್ನು ಅಂಗೀಕರಿಸಿದರೆ ಏನಾಗುತ್ತದೆ? ಸುಪ್ರೀಂಕೋರ್ಟ್ ತೀರ್ಪಿನ ನಂತರ ದೆಹಲಿ ಸರ್ಕಾರವು ಯಾವುದೇ ನಿರ್ಣಯದ ಅನುಷ್ಠಾನಕ್ಕೆ ಮೊದಲು ಲೆಫ್ಟಿನೆಂಟ್ ಜನರಲ್ ಕಚೇರಿಗೆ ಕಡತಗಳನ್ನು ಕಳಿಸುವುದನ್ನು ನಿಲ್ಲಿಸಿತ್ತು. ಆದರೆ ಇದೀಗ ಲೋಕಸಭೆಯಲ್ಲಿ ಈ ಮಸೂದೆ ಆಂಗೀಕಾರವಾದರೆ ಮುಂದಿನ ದಿನಗಳಲ್ಲಿ ದೆಹಲಿ ಸರ್ಕಾರ ತನ್ನ ವರ್ತನೆಯನ್ನು ಬದಲಿಸಿಕೊಳ್ಳಬೇಕಾಗುತ್ತದೆ.
ಜಿಎನ್ಸಿಟಿಡಿ ಮೂಲ ಕಾಯ್ದೆಗೆ ಹೊಸದಾಗಿ ಒಂದು ನಿಯಮ ಸೇರಿಸಲು ಈ ಮಸೂದೆ ಮುಂದಾಗಿದೆ. ಈ ನಿಯಮದ ಅನ್ವಯ ದೆಹಲಿ ವಿಧಾನಸಭೆ ಅಥವಾ ಅದರ ಅಧೀನದಲ್ಲಿರುವ ಯಾವುದೇ ಸಮಿತಿಯು ದಿನನಿತ್ಯದ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ಬಗ್ಗೆ ನಿಯಮಗಳನ್ನು ರೂಪಿಸುವುದು, ವಿಚಾರಣೆ ನಡೆಸುವಂತಿಲ್ಲ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಆಪ್ 62 ಸದಸ್ಯರನ್ನು ಹೊಂದಿದೆ. ದೆಹಲಿ ಹಿಂಸಾಚಾರ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಸೇರಿದಂತೆ ಹಲವು ಸಮಿತಿಗಳಲ್ಲಿ ಆಪ್ ಶಾಸಕರೇ ಬಹುಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಗಮನಿಸಿದರೆ ಮಸೂದೆಯ ಬಗ್ಗೆ ಆಪ್ಗೆ ಏಕಿಷ್ಟು ಆತಂಕ ಎಂಬುದು ಅರ್ಥವಾಗುತ್ತೆ.
ಹೊಸ ಮಸೂದೆಯ ಪ್ರಕಾರ ಲೆಫ್ಟಿನೆಂಟ್ ಜನರಲ್ ವಿವೇಚನಾಧಿಕಾರ ಹೆಚ್ಚಾಗುತ್ತದೆಯೇ? ಸಂವಿಧಾನದ 239ಎಎ (4) ಪರಿಚ್ಛೇದದ ಅನ್ವಯ ದೆಹಲಿ ಸರ್ಕಾರ (ವಿಧಾನಸಭೆ, ಸಚಿವ ಸಂಪುಟ) ತೆಗೆದುಕೊಂಡ ಯಾವುದೇ ನಿರ್ಧಾರ ತನಗೆ ಸರಿಕಾಣಿಸದಿದ್ದರೆ, ಲೆಫ್ಟಿನೆಂಟ್ ಜನರಲ್ ಅಂಥ ವಿಚಾರಗಳನ್ನು ರಾಷ್ಟ್ರಪತಿಗಳ ಗಮನಕ್ಕೆ ತರಬಹುದು. ಲೆಫ್ಟಿನೆಂಟ್ ಜನರಲ್ ಮತ್ತು ರಾಷ್ಟ್ರಪತಿಗಳ ಮೂಲಕ ಕೇಂದ್ರ ಸರ್ಕಾರ ತನ್ನ ನಿರ್ಣಯಗಳನ್ನು ದೆಹಲಿಯಲ್ಲಿ ಜಾರಿಗೆ ತರಲು ಈ ಸೌಕರ್ಯ ಬಳಸಿಕೊಳ್ಳಬಹುದಾಗಿದೆ. ಸುಪ್ರೀಂಕೋರ್ಟ್ನ 2018ರ ತೀರ್ಪಿನ ನಂತರ ದೆಹಲಿ ಸರ್ಕಾರ ಸ್ವತಂತ್ರವಾಗಿ ವರ್ತಿಸಲು ಆರಂಭಿಸಿತ್ತು. ಇದು ತಪ್ಪು ಎಂದು 2019ರಲ್ಲಿ ದೆಹಲಿ ಸರ್ಕಾರ ಕಾನೂನು ಇಲಾಖೆ ಕಾರ್ಯದರ್ಶಿ ಇಲಾಖಾ ಟಿಪ್ಪಣಿ ಬರೆದು ಎಚ್ಚರಿಸಿದ್ದರು. ಈ ಟಿಪ್ಪಣಿಯ ಅಂಶಗಳಿಗೆ ಇದೀಗ ಮತ್ತೆ ಜೀವ ಬರುವ ಸಾಧ್ಯತೆಗಳು ನಿಚ್ಚಳವಾಗಿದೆ.
ಇದನ್ನೂ ಓದಿ: ರೈತರು ದೇಶದ್ರೋಹಿಗಳಲ್ಲ, ಕೆಂಪುಕೋಟೆ ಹಿಂಸಾಚಾರಕ್ಕೆ ಕೇಂದ್ರದ ಷಡ್ಯಂತ್ರವೂ ಕಾರಣ: ಅರವಿಂದ ಕೇಜ್ರಿವಾಲ್
ದೆಹಲಿ ಸರ್ಕಾರದ ಆತಂಕಗಳೇನು? 2015ರಿಂದ 2018ರ ನಡುವೆ ದೆಹಲಿಯ ಆಪ್ ಸರ್ಕಾರವು ನೀತಿ ನಿರೂಪಣೆ ಮತ್ತು ಅಧಿಕಾರ ವ್ಯಾಪ್ತಿಯ ಬಗ್ಗೆ ಲೆಫ್ಟಿನೆಂಟ್ ಜನರಲ್ ಜೊತೆಗೆ ಸಂಘರ್ಷ ಮಾಡಿಕೊಳ್ಳುತ್ತಲೇ ಇತ್ತು. 2018ರಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ನಂತರ ಆಪ್ ಸರ್ಕಾರಕ್ಕೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಂತೆ ಆಗಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಬೆಂಬಲದಿಂದಲೇ ದೆಹಲಿ ಸರ್ಕಾರವು ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಕರ್ಯ ಮತ್ತು ಮನೆಬಾಗಿಲಿಗೆ ಪಡಿತರ ವಿತರಣೆಯಂಥ ಜನಪ್ರಿಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಯಿತು ಎಂದು ದೆಹಲಿ ಸರ್ಕಾರದ ಉನ್ನತ ಮೂಲಗಳು ಹೇಳುತ್ತವೆ.
ಇದೀಗ ಜಿಎನ್ಸಿಟಿಡಿ ಕಾಯ್ದೆಯ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ದೆಹಲಿ ಆಡಳಿತದಲ್ಲಿ ಹಲವು ದೂರಗಾಮಿ ಪರಿಣಾಮಗಳು ಉಂಟಾಗುತ್ತವೆ. ಇದು ಕೇವಲ ಆಪ್-ಬಿಜೆಪಿ ಸಂಘರ್ಷವಾಗಿ ಉಳಿಯುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರಗಳಲ್ಲಿ ಬಹುಮತ ಪಡೆದ ಪಕ್ಷಗಳು ಬದಲಾಗಬಹುದು. ಆದರೆ ಮಸೂದೆಯ ನಿಯಮಗಳಿಂದ ಸಿಕ್ಕ ಅಧಿಕಾರ ಬಿಟ್ಟುಕೊಡಲು ಯಾರೂ ಒಪ್ಪದಿರಬಹುದು. ದೆಹಲಿಗೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ಕೊಡಿಸುವುದಾಗಿ ಕಳೆದ ಹಲವು ಚುನಾವಣೆಗಳಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ಭರವಸೆ ನೀಡಿದ್ದರು. ಇದೀಗ ದೈನಂದಿನ ಆಡಳಿತದ ಕಡತಗಳೂ ಲೆಫ್ಟಿನೆಂಟ್ ಕಚೇರಿಯ ಮೂಲಕವೇ ಹಾದುಬರಬೇಕೆಂಬ ನಿಯಮ ಜಾರಿಯಾದರೆ ದೆಹಲಿ ಸರ್ಕಾರ ಇದೀಗ ಅನುಭವಿಸುತ್ತಿರುವ ಅಷ್ಟೋಇಷ್ಟೋ ಸ್ವಾತಂತ್ರ್ಯವೂ ಹರಣವಾದಂತೆ ಆಗುತ್ತದೆ. 1993ರಲ್ಲಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ನಾಯಕ ಮದನ್ಲಾಲ್ ಖುರಾನಾ ಸಹ ದೆಹಲಿ ಸರ್ಕಾರದ ಸ್ವಾತಂತ್ರ್ಯದ ಬಗ್ಗೆ ದೊಡ್ಡದನಿಯಲ್ಲಿ ಪ್ರಸ್ತಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಆಪ್ ಪಕ್ಷವು ಅದೇ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದೆ. ಆದರೆ ಬಿಜೆಪಿ???
ಕೇಂದ್ರದ ವಿರುದ್ಧ ಹರಿಹಾಯ್ದ ಆಪ್, ಕಾಂಗ್ರೆಸ್ ನಾಯಕರು
ವಿಧಾನಸಭೆ ಮತ್ತು ದೆಹಲಿ ನಗರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲಲಾರದ ಬಿಜೆಪಿ ಹಿಂಬಾಗಿಲ ಮೂಲಕ ದೆಹಲಿ ಅಡಳಿತವನ್ನು ಸುಪರ್ದಿಗೆ ತೆಗೆದುಕೊಳ್ಳಲು ಹವಣಿಸುತ್ತಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿ ಟೀಕಿಸಿದ್ದರು.
After being rejected by ppl of Del (8 seats in Assembly, 0 in MCD bypolls), BJP seeks to drastically curtail powers of elected govt thro a Bill in LS today. Bill is contrary to Constitution Bench judgement. We strongly condemn BJP’s unconstitutional n anti-democracy move
— Arvind Kejriwal (@ArvindKejriwal) March 15, 2021
ಈ ಮಸೂದೆಯು ಕೇಂದ್ರ ಸರ್ಕಾರದ ಅಧಿಕಾರ ಮದಕ್ಕೆ ಉತ್ತಮ ಉದಾಹರಣೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟೀಕಿಸಿದ್ದರು.
After being rejected by ppl of Del (8 seats in Assembly, 0 in MCD bypolls), BJP seeks to drastically curtail powers of elected govt thro a Bill in LS today. Bill is contrary to Constitution Bench judgement. We strongly condemn BJP’s unconstitutional n anti-democracy move
— Arvind Kejriwal (@ArvindKejriwal) March 15, 2021
ಇದನ್ನೂ ಓದಿ: ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕೇಂದ್ರದ ಪರಮಾಧಿಕಾರ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್