ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕೇಂದ್ರದ ಪರಮಾಧಿಕಾರ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

Supreme Court: ಐಪಿಎಸ್ ಅಧಿಕಾರಗಳ ನಿಯೋಜನೆ, ವರ್ಗಾವಣೆಗೆ ಸಂಬಂಧಿಸಿ ರಾಜ್ಯ ಸರ್ಕಾರಗಳ ಮೇಲೆ ಪರಮಾಧಿಕಾರ ನಡೆಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುವ ನಿಯಮವನ್ನು ರದ್ದು ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕೇಂದ್ರದ ಪರಮಾಧಿಕಾರ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್​
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 01, 2021 | 6:35 PM

ನವದೆಹಲಿ: ಐಪಿಎಸ್ (ಕೇಡರ್) ನಿಯಮ 1954ರ ನಿಯಮ 6 (1)ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಮೂಲದ ನ್ಯಾಯವಾದಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಐಪಿಎಸ್ (ಕೇಡರ್) ನಿಯಮವು ಐಪಿಎಸ್ ಅಧಿಕಾರಿಗಳ ನಿಯೋಜನೆ, ವರ್ಗಾವಣೆ ವಿಷಯದಲ್ಲಿ ರಾಜ್ಯ ಸರ್ಕಾರದ ಮೇಲೆ ಸವಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುತ್ತದೆ ಎಂದು ಅರ್ಜಿದಾರರು ದೂರಿದ್ದರು.

ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರಿದ್ದ ನ್ಯಾಯಪೀಠವು, ನ್ಯಾಯವಾದಿ ಅಬು ಸೊಹೇಲ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ನಾವು ಈ ಅರ್ಜಿಯನ್ನು ತಿರಸ್ಕರಿಸುತ್ತೇವೆ. ಈ ಅರ್ಜಿಯಲ್ಲಿ ಒಪ್ಪತಕ್ಕಂಥ ಯಾವುದೇ ವಿಷಯ ನಮಗೆ ಸಿಕ್ಕಿಲ್ಲ ಎಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾವ್ ಹೇಳಿದ್ದಾರೆ.

ಅರ್ಜಿಯಲ್ಲಿ ಏನಿತ್ತು? ಐಪಿಎಸ್ ಅಧಿಕಾರಗಳ ನಿಯೋಜನೆ, ವರ್ಗಾವಣೆಗೆ ಸಂಬಂಧಿಸಿ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುವ 6(1) ನಿಯಮವನ್ನು ರದ್ದು ಮಾಡಬೇಕು ಎಂದು ಕೋರಿ ನ್ಯಾಯವಾದಿ , ಅರ್ಜಿದಾರ ಸೊಹೇಲ್ ಪಿಐಎಲ್ ಸಲ್ಲಿಸಿದ್ದರು. ಈ ನಿಯಮದಿಂದಾಗಿ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ನಿರಂಕುಶ ಪ್ರಭುತ್ವವನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

6 (1) ನಿಯಮದಲ್ಲೇನಿದೆ? ಕೇಡರ್ ಅಧಿಕಾರಿಗಳ ನಿಯೋಜನೆ: 6(1) ಕೇಡರ್ ಅಧಿಕಾರಿ ರಾಜ್ಯ ಸರ್ಕಾರದ ಅಥವಾ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟ, ಕೇಂದ್ರ ಸರ್ಕಾರದ ಸಮ್ಮಿತಿಯಿಂದ ಕೇಂದ್ರ ಸರ್ಕಾರ ಅಥವಾ ಇನ್ನೊಂದು ರಾಜ್ಯ ಸರ್ಕಾರ ಅಥವಾ ಸಂಸ್ಥೆಯೊಂದರ ಕೆಳಗೆ ನಿಯೋಜನೆ ಮಾಡಬಹುದು. ಇದು ಸಂಪೂರ್ಣವಾಗಿ ಅಥವಾ ಗಣನೀಯವಾಗಿ ಕೇಂದ್ರ ಸರ್ಕಾರದಿಂದ ಅಥವಾ ಇನ್ನೊಂದು ರಾಜ್ಯ ಸರ್ಕಾರದಿಂದ ಒಡೆತನದಲ್ಲಿದೆ ಅಥವಾ ನಿಯಂತ್ರಿಸಲ್ಪಡುತ್ತದೆ.

ಈ ವಿಷಯದಲ್ಲಿ ಯಾವುದೇ ಅಭಿಪ್ರಾಯ ವ್ಯತ್ಯಾಸಗಳಿದ್ದರೆ, ಅದನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಸಂಸ್ಥೆಯು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಈ ಸಂಘರ್ಷವು ನಮ್ಮ ಸಂವಿಧಾನದ ಫೆಡರಲ್ ವ್ಯವಸ್ಥೆಗೆ ಬೆದರಿಕೆಯನ್ನೊಡಿದೆ ಎಂದು ಅಬು ಸೊಹೇಲ್ ವಾದಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾದ ನಡುವಿನ ತಿಕ್ಕಾಟವು ರಾಜ್ಯ ಸರ್ಕಾರದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಈ ನಿಯಮವು ಅಸಮರ್ಥನೀಯ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಬಂಧವನ್ನು ಇದು ಹಾಳುಮಾಡುತ್ತದೆ. 2001ರಲ್ಲಿ ತಮಿಳುನಾಡಿನಿಂದ ಮೂವರು ಐಪಿಎಸ್ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡದ್ದಕ್ಕಾಗಿ ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ನಡುವೆ ಇದೇ ರೀತಿಯ ತಿಕ್ಕಾಟ ನಡೆದಿತ್ತು . ಇತ್ತೀಚೆಗೆ ಪಶ್ಚಿಮ ಬಂಗಾಳದಿಂದ ಮೂವರು ಐಪಿಎಸ್ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತ್ತು ಎಂದು ಸೊಹೇಲ್ ಉಲ್ಲೇಖಿಸಿದ್ದಾರೆ.

ಐಪಿಎಸ್ (ಕೇಡರ್) ನಿಯಮ 1954ರ ನಿಯಮ 5 (1) ಮತ್ತು 6 (1) ನಡುವೆ ದ್ವಂದ್ವವಿದೆ. ರಾಜ್ಯ ಸರ್ಕಾರದ ಸಮ್ಮತಿಯೊಂದಿಗೆ ಅಧಿಕಾರಿಗಳನ್ನು ನಿಯೋಜನೆ ಮಾಡುವ ಅಧಿಕಾರವನ್ನು 5 (1) ನಿಯಮ  ನೀಡುತ್ತದೆ. ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಕೇಂದ್ರಕ್ಕೆ 6 (1) ನಿಯಮ ಹೆಚ್ಚಿನ ಅಧಿಕಾರ ನೀಡುತ್ತದೆ.

 ಇದನ್ನೂ ಓದಿ: ಸಂಗಾತಿಯ ಮಾನಹಾನಿ ಮಾಡುವುದು, ಗೌರವಕ್ಕೆ ಧಕ್ಕೆ ತರುವುದು ಮಾನಸಿಕ ಕ್ರೌರ್ಯ: ಸೇನಾಧಿಕಾರಿ ವಿಚ್ಛೇದನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ಉಲ್ಲೇಖ​