IPL 2025: ಹೈದರಾಬಾದ್ ವಿರುದ್ಧ ಸೋತು 3ನೇ ಸ್ಥಾನಕ್ಕೆ ಜಾರಿದ ಆರ್‌ಸಿಬಿ
IPL 2025, SRH vs RCB: ಲಕ್ನೋದಲ್ಲಿ ನಡೆದ ಐಪಿಎಲ್ 2025 ರ 65ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 42 ರನ್‌ಗಳಿಂದ ಸೋಲುಣಿಸಿತು. ಇಶಾನ್ ಕಿಶನ್ ಅವರ ಅದ್ಭುತ 94 ರನ್‌ಗಳ ಇನ್ನಿಂಗ್ಸ್‌ನಿಂದ SRH 231 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ವೈಫಲ್ಯ ಈ ಸೋಲಿಗೆ ಕಾರಣವಾಯಿತು. ಈ ಸೋಲು ಆರ್‌ಸಿಬಿಯನ್ನು ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ತಳ್ಳಿದೆ.

ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 (IPL 2025) ರ 65ನೇ ಪಂದ್ಯದಲ್ಲಿ ಸನ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs SRH) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 42 ರನ್‌ಗಳಿಂದ ಮಣಿಸಿದ ಹೈದರಾಬಾದ್ ಲೀಗ್ನಲ್ಲಿ 5ನೇ ಗೆಲುವು ದಾಖಲಿಸಿತು. ಈ ಗೆಲುವು ಹೈದರಾಬಾದ್ಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡದಿದ್ದರೂ ಆರ್‌ಸಿಬಿಗೆ ಮಾತ್ರ ದೊಡ್ಡ ಆಘಾತ ನೀಡಿತು. ಈ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿರುವ ಆರ್‌ಸಿಬಿ ಪ್ಲೇಆಫ್ನಲ್ಲಿ ಮೊದಲ ಎರಡನೇ ಸ್ಥಾನವನ್ನು ಪಡೆಯುವುದು ಕಷ್ಟಕರವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 231 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಮಧ್ಯಮ ಕ್ರಮಾಂಕದ ವೈಫಲ್ಯ ಸೋಲಿನ ಬೆಲೆ ತೆತ್ತವುಂತೆ ಮಾಡಿತು.
232 ರನ್‌ಗಳ ಬೃಹತ್ ಟಾರ್ಗೆಟ್
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಇಶಾನ್ ಕಿಶನ್ ಅವರ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ ಆರ್‌ಸಿಬಿಗೆ 232 ರನ್‌ಗಳ ಗುರಿಯನ್ನು ನೀಡಿತು. ಇಶಾನ್ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 94 ರನ್ ಗಳಿಸಿದರು. ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಎಸ್ಆರ್ಹೆಚ್ ಬ್ಯಾಟರ್ಗಳ ಅಬ್ಬರ
17 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 34 ರನ್ ಗಳಿಸಿದ ಅಭಿಷೇಕ್ ಅವರನ್ನು ಲುಂಗಿ ಎನ್‌ಗಿಡಿ ಔಟ್ ಮಾಡುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. ಇದಾದ ನಂತರ, ಭುವನೇಶ್ವರ್ ಕುಮಾರ್ ಟ್ರಾವಿಸ್ ಹೆಡ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದಾದ ನಂತರ, ಹೆನ್ರಿಕ್ ಕ್ಲಾಸೆನ್ ಮತ್ತು ಇಶಾನ್ ಕಿಶನ್ ಜವಾಬ್ದಾರಿ ವಹಿಸಿಕೊಂಡು ಮೂರನೇ ವಿಕೆಟ್‌ಗೆ 48 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ಈ ಜೊತೆಯಾಟವನ್ನು ಸುಯಾಶ್ ಶರ್ಮಾ ಅವರು 13 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 24 ರನ್ ಗಳಿಸಿದ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಮುರಿದರು.
ಆರ್‌ಸಿಬಿ ಕಳಪೆ ಬೌಲಿಂಗ್
ಇದಾದ ನಂತರ ಬಂದ ಅನಿಕೇತ್ ವರ್ಮಾ ಒಂಬತ್ತು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 26 ರನ್ ಗಳಿಸಿ ಔಟಾದರು. ಆ ಬಳಿಕ ಬಂದ ನಿತೀಶ್ ರೆಡ್ಡಿ ನಾಲ್ಕು ರನ್ ಬಾರಿಸಿ ರೊಮಾರಿಯೊ ಶೆಫರ್ಡ್ಗೆ ಬಲಿಯಾದರು.ಆದರೆ ಒಂದು ತುದಿಯಲ್ಲಿ ಅಮೋಘ ಇನ್ನಿಂಗ್ಸ್ ಕಟ್ಟಿದ ಕಿಶನ್ ಅವರ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ 230 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಆರ್‌ಸಿಬಿ ಪರ ಶೆಫರ್ಡ್ ಎರಡು ವಿಕೆಟ್ ಪಡೆದರೆ, ಭುವನೇಶ್ವರ್, ಎನ್‌ಗಿಡಿ, ಸುಯಾಶ್ ಮತ್ತು ಕೃನಾಲ್ ತಲಾ ಒಂದು ವಿಕೆಟ್ ಪಡೆದರು.
ಆರ್‌ಸಿಬಿಗೆ ಉತ್ತಮ ಆರಂಭ
ಈ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಕೊಹ್ಲಿ ಮತ್ತು ಸಾಲ್ಟ್ ಮೊದಲ ವಿಕೆಟ್‌ಗೆ 80 ರನ್ ಸೇರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಕೊಹ್ಲಿ ಔಟಾದ ನಂತರ, ಸಾಲ್ಟ್ ಜವಾಬ್ದಾರಿ ವಹಿಸಿಕೊಂಡು ಅರ್ಧಶತಕವನ್ನೂ ಗಳಿಸಿದರು. ಆದರೆ ಸಾಲ್ಟ್ ಔಟಾದ ನಂತರ, ಆರ್‌ಸಿಬಿ ಇನ್ನಿಂಗ್ಸ್ ಕುಂಟುತ್ತಾ ಹೋಯಿತು. ಅಲ್ಲದೆ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳಲು ಪ್ರಾರಂಭಿಸಿತು. ಪ್ಯಾಟ್ ಕಮ್ಮಿನ್ಸ್ ನಾಯಕತ್ವದಲ್ಲಿ ಬೌಲರ್‌ಗಳು ಬಲಿಷ್ಠ ಪುನರಾಗಮನ ಮಾಡಿದರು. ಇದರಲ್ಲಿ ದೊಡ್ಡ ಕೊಡುಗೆ ನೀಡಿದವರು ಇಶಾನ್ ಮಾಲಿಂಗ, ಅವರು ರೊಮಾರಿಯೊ ಶೆಫರ್ಡ್ ಮತ್ತು ಟಿಮ್ ಡೇವಿಡ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಪಡೆದರು.
IPL 2025: ಏಕೈಕ ವೇಗದ ಬೌಲರ್; ದಾಖಲೆ ಬರೆದ ಭುವನೇಶ್ವರ್ ಕುಮಾರ್
ಕೈಕೊಟ್ಟ ಮಧ್ಯಮ ಕ್ರಮಾಂಕ
ಆರ್‌ಸಿಬಿ ಪರ ಸಾಲ್ಟ್ 32 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಾಯದಿಂದ 62 ರನ್ ಗಳಿಸಿ ಔಟಾದರೆ, ಕೊಹ್ಲಿ 25 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳ ಸಹಾಯದಿಂದ 43 ರನ್ ಗಳಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ, ಬೇರೆ ಯಾರೂ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ರಜತ್ ಪಾಟಿದಾರ್ 18 ರನ್ ಮತ್ತು ಜಿತೇಶ್ ಶರ್ಮಾ 24 ರನ್ ಕೊಡುಗೆ ನೀಡಿದರು. ಆರ್‌ಸಿಬಿ ತಂಡದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನಿರಾಶಾದಾಯಕವಾಗಿತ್ತು. ನಾಲ್ವರು ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನು ತಲುಪಲು ಸಹ ಸಾಧ್ಯವಾಗಲಿಲ್ಲ, ಉಳಿದಂತೆ ಇಬ್ಬರಿಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಸನ್‌ರೈಸರ್ಸ್ ಪರ ಕಮ್ಮಿನ್ಸ್ ಮೂರು ವಿಕೆಟ್ ಪಡೆದರೆ, ಮಾಲಿಂಗ ಎರಡು ವಿಕೆಟ್ ಪಡೆದರು. ಇವರಿಬ್ಬರಲ್ಲದೆ, ಜಯದೇವ್ ಉನದ್ಕಟ್, ಹರ್ಷಲ್ ಪಟೇಲ್, ಹರ್ಷ್ ದುಬೆ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 pm, Fri, 23 May 25