West Bengal Assembly Elections 2021: ಬಿಜೆಪಿ ಕಾರ್ಯಕರ್ತನ ತಾಯಿ ಮೇಲೆ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆ ಆರೋಪ
West Bengal Assembly elections 2021: ಅವರು ನನ್ನ ಕುತ್ತಿಗೆ ಮತ್ತು ತಲೆಗೆ ಹೊಡೆದರು. ನನ್ನ ಮುಖಕ್ಕೂ ಗುದ್ದಿದರು. ನಂತರ, ಹೀಗೆ ಹೊಡೆದಿರುವುದನ್ನು ಯಾರಿಗೂ ಹೇಳಬೇಡ ಎಂದು ಹೆದರಿಸಿದರು. ನನ್ನ ಇಡೀ ದೇಹ ನೋವಿನಲ್ಲಿದೆ ಎಂದು ಹಲ್ಲೆಗೊಳಗಾದ ಉತ್ತರ 24 ಪರಗಣ ಪ್ರಾಂತ್ಯದ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜೂಮ್ದಾರ್ ಅವರ ತಾಯಿ ಶೋಲಾ ಮಜೂಮ್ದಾರ್ ಹೇಳಿಕೊಂಡಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ಕಣ ರಂಗೇರುತ್ತಿದೆ. ಈ ಮುಂಚಿನಿಂದಲೂ ಬಿಜೆಪಿ-ಟಿಎಂಸಿ ಪಕ್ಷಗಳ ನಡುವೆ ಪ್ರಬಲ ವಾಕ್ಸಮರದ ಜತೆಗೆ ಹಿಂಸಾಚಾರವೂ ನಡೆಯುತ್ತಿದೆ. ಪಶ್ಚಿಮ ಬಂಗಾಳದ ವಿವಿದ ಸ್ಥಳಗಳಲ್ಲಿ ಪದೇ ಪದೇ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಸುದ್ದಿಗಳು ಹೊರಬೀಳುತ್ತಲೇ ಇವೆ. ಇದೀಗ ಬಿಜೆಪಿ ಕಾರ್ಯಕರ್ತರೋರ್ವರು ಟಿಎಂಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಟಿಎಂಸಿ ಪಕ್ಷಕ್ಕೆ ಸೇರಿದ ಗೂಂಡಾಗಳು ತಮ್ಮ ಮನೆಗೆ ನುಗ್ಗಿ ತಮ್ಮ ವೃದ್ಧ ತಾಯಿ ಮತ್ತು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜೂಮ್ದಾರ್ ಆರೋಪಿಸಿದ್ದಾರೆ. ಅವರ ತಾಯಿ ಶೋಲಾ ಮಜೂಮ್ದಾರ್ ತಮ್ಮ ಮೇಲೆ ಹಲ್ಲೆ ನಡೆದ ಘಟನೆಯನ್ನು ವಿವರಿಸಿರುವ ವಿಡಿಯೋವನ್ನು ಪಶ್ಚಿಮ ಬಂಗಾಳದ ಬಿಜೆಪಿ ಘಟಕವು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
‘ಅವರು ನನ್ನ ಕುತ್ತಿಗೆ ಮತ್ತು ತಲೆಗೆ ಹೊಡೆದರು. ನನ್ನ ಮುಖಕ್ಕೂ ಗುದ್ದಿದರು. ನಂತರ, ಹೀಗೆ ಹೊಡೆದಿರುವುದನ್ನು ಯಾರಿಗೂ ಹೇಳಬೇಡ ಎಂದು ಹೆದರಿಸಿದರು. ನನ್ನ ಇಡೀ ದೇಹ ನೋವಿನಲ್ಲಿದೆ’ ಎಂದು ಹಲ್ಲೆಗೊಳಗಾದ ಉತ್ತರ 24 ಪರಗಣ ಪ್ರಾಂತ್ಯದ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜೂಮ್ದಾರ್ ಅವರ ತಾಯಿ ಶೋಲಾ ಮಜೂಮ್ದಾರ್ ಹೇಳಿಕೊಂಡಿದ್ದಾರೆ.
“They hit me on my head and neck and punched me. They hit me on my face too. I’m scared….”
Listen to the mother of a BJP karyakarta, Gopal Majumdar of 24 Paraganas, who was beaten mercilessly by TMC goons.
ममता दीदी, इस वृद्ध महिला के दर्द और आँसूओं का हिसाब आपको देना होगा। pic.twitter.com/kuxtgBwWYF
— BJP (@BJP4India) February 28, 2021
‘ಶನಿವಾರ ಟಿಎಂಸಿ ಪಕ್ಷದ ಮೂವರು ಕಾರ್ಯಕರ್ತರು ನನ್ನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ’ ಎಂದು ಗೋಪಾಲ್ ಮಜೂಮ್ದಾರ್ ಎಎನ್ಐಗೆ ತಿಳಿಸಿದ್ದಾರೆ. ಈ ಹಲ್ಲೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಬಿಜೆಪಿಯ ಈ ಆರೋಪವನ್ನು ತಳ್ಳಿಹಾಕಿರುವ ಟಿಎಂಸಿ ನಾಯಕ ಡೆರೆಕ್ ಓಬ್ರಿಯನ್, ‘ಟಿಎಂಸಿಯ ಧನಾತ್ಮಕ ಪರಿಣಾಮಕಾರಿ ಕ್ಯಾಂಪೇನ್ಗೆ ಹೆದರಿ ಬಿಜೆಪಿ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಟಿಎಂಸಿ ವಿರುದ್ಧ ಆರೋಪಿಸಲು ಯಾವುದೇ ತಿರುಳು ಸಿಗದೇ ಬಿಜೆಪಿ ಇಂತಹ ಸುಳ್ಳು ಆರೋಪ ಮಾಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
Trinamool is running a positive campaign. BJP desperate. They have no counter to @MamataOfficial on good governance and #BanglaNijerMeyekeiChay
So how low do they go ? Fabricate. Deceive. No one is spared. Not even senior citizens. #FakeNews factory. Exposed again.Pukeworthy
— Derek O’Brien | ডেরেক ও’ব্রায়েন (@derekobrienmp) February 28, 2021
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 294 ಸೀಟುಗಳಿರುವ ವಿಧಾನಸಭೆಗೆ ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ. ಈ ಚುನಾವಣೆಯಲ್ಲಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲು ಬಿಜೆಪಿ ಹವಣಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಟಿಎಂಸಿಯಿಂದ ಹಲವಾರು ಸದಸ್ಯರು ಬಿಜೆಪಿಗೆ ಸೇರಿರುವುದರಿಂದ ಮತ್ತು ಟಿಎಂಸಿ ನಾಯಕರ ಮೇಲೆ ಭ್ರಷ್ಟಾಚಾರ ಆರೋಪಗಳಿರುವುದರಿಂದ ಈ ಚುನಾವಣೆ ಟಿಎಂಸಿ ಪಾಲಿಗೆ ನಿರ್ಣಾಯಕವಾಗಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಪೈಪೋಟಿ ನಡೆಸುತ್ತಿದ್ದವು. ಆದರೆ ಈ ಬಾರಿ ಬಿಜೆಪಿ ಮತ್ತು ಟಿಎಂಸಿ ನಡುವಿನ ಸ್ಪರ್ಧೆ ಎಂದೇ ಪಶ್ಚಿಮ ಬಂಗಾಳ ಚುನಾವಣೆಯನ್ನು ಬಿಂಬಿಸಲಾಗುತ್ತದೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ಅಹಂಕಾರಕ್ಕೆ ಪಶ್ಚಿಮ ಬಂಗಾಳದ ಜನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ: ಅಬ್ಬಾಸ್ ಸಿದ್ದಿಕಿ
West Bengal Election Date 2021: ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ, ಮೇ 2ರಂದು ಫಲಿತಾಂಶ