ಸಂಗಾತಿಯ ಮಾನಹಾನಿ ಮಾಡುವುದು, ಗೌರವಕ್ಕೆ ಧಕ್ಕೆ ತರುವುದು ಮಾನಸಿಕ ಕ್ರೌರ್ಯ: ಸೇನಾಧಿಕಾರಿ ವಿಚ್ಛೇದನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ಉಲ್ಲೇಖ
ಸಹಿಸಿಕೊಳ್ಳುವ ಶಕ್ತಿ ಒಂದು ದಂಪತಿಯಿಂದ ಇನ್ನೊಂದು ದಂಪತಿಗೆ ವಿಭಿನ್ನವಾಗಿರುತ್ತದೆ. ಹಾಗಾಗಿ ಪ್ರತಿಯೊಂದು ವಿಚ್ಛೇದನ ಪ್ರಕರಣವನ್ನೂ, ಆ ದಂಪತಿಯ ನಡುವಿನ ಕಲಹ, ದೂರು-ಪ್ರತಿದೂರುಗಳನ್ನು ಸೂಕ್ಷ್ಮವಾಗಿ ನೋಡಿಕೊಂಡು ವಿಚಾರಣೆ ನಡೆಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ದೆಹಲಿ: ಸಂಗಾತಿಯ ಮಾನಹಾನಿ ಆಗುವಂತೆ ದೂರನ್ನು ನೀಡುವುದು ಮತ್ತು ಅವರ ಗೌರವಕ್ಕೆ ಧಕ್ಕೆ ತರುವಂಥದ್ದು ಮಾನಸಿಕ ಕ್ರೌರ್ಯ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಶುಕ್ರವಾರ ಸುಪ್ರೀಂಕೋರ್ಟ್ ತಿಳಿಸಿದೆ. ಸೇನಾ ಅಧಿಕಾರಿಯೊಬ್ಬರು, ತನ್ನ ಪತ್ನಿ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ನನಗೆ ವಿಚ್ಛೇದನ ಕೊಡಿಸಿ ಎಂದು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಪತ್ನಿ ಸರ್ಕಾರಿ ಪಿಜಿ ಕಾಲೇಜೊಂದರ ಅಧ್ಯಾಪಕಿ ಎಂಬುದನ್ನೂ ಅವರು ಹೇಳಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರಸ್ತುತ ಪ್ರಕರಣ ಖಂಡಿತ ವಿಚ್ಛೇದನಾ ಯೋಗ್ಯವಾಗಿದೆ ಎಂದು ಹೇಳಿದೆ. ಅದರೊಂದಿಗೆ, ವೈವಾಹಿಕ ಜೀವನ ಮತ್ತೆ ಆರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಮಾಡಿದೆ.
ಈ ಸೇನಾಧಿಕಾರಿ ಮದುವೆ ಉತ್ತರಾಖಂಡ್ದ ಡೆಹ್ರಾಡೂನ್ನಲ್ಲಿ 2006ರಲ್ಲಿ ನಡೆದಿತ್ತು. ಆದರೆ ಅವರು ಚೆನ್ನಾಗಿ ಸಂಸಾರ ಮಾಡಿದ್ದು ಕೆಲವೇ ತಿಂಗಳು. ಬರುಬರುತ್ತ ಅವರಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿ 2007ರಿಂದ ಬೇರೆಬೇರೆಯಾಗಿ ವಾಸಿಸಲು ಪ್ರಾರಂಭಿಸಿದ್ದರು. ಮಹಿಳೆ ತನ್ನ ತಂದೆ-ತಾಯಿ ಜತೆ ವಾಸಿಸಲು ಪ್ರಾರಂಭಿಸಿದ್ದರು. ಆಕೆ ಇಷ್ಟಕ್ಕೇ ಸುಮ್ಮನಾಗದೆ ಪತಿಯ ವಿರುದ್ಧ ವರದಕ್ಷಿಣೆ, ವಂಚನೆ, ನಂಬಿಸಿ ಸರಿಯಾಗಿ ಪಾಲನೆ ಮಾಡಲಿಲ್ಲ ಎಂಬಿತ್ಯಾದಿ ಪ್ರಕರಣಗಳಡಿ ಎಫ್ಐಆರ್ ದಾಖಲು ಮಾಡಿದ್ದರು. ಮಹಿಳಾ ಪರ ಸಂಘಟನೆಗಳು, ರಾಜ್ಯ ಮಹಿಳಾ ಆಯೋಗ, ಪತಿಯ ಮೇಲಧಿಕಾರಿಗಳಿಗೂ ಈ ದೂರುಗಳನ್ನು ಕಳಿಸಿದ್ದರು. ಅತ್ತ ಸೇನಾಧಿಕಾರಿ ಪತ್ನಿ ವಿರುದ್ಧ ಕೌರ್ಯದ ದೂರನ್ನು ನೀಡಿದ್ದರು. ಅಷ್ಟೇ ಅಲ್ಲ, ನನ್ನನ್ನು ಬಿಟ್ಟು ಹೋದ ಆಕೆಯಿಂದ ವಿಚ್ಛೇದನ ಬೇಕು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಶಾಖಪಟ್ಟಣಂ ನ್ಯಾಯಾಲಯ 2009ರಲ್ಲಿ ಸೇನಾಧಿಕಾರಿಗೆ ವಿಚ್ಛೇದನ ನೀಡಿತ್ತು. ಆದರೆ 2011ರಲ್ಲಿ ಅವರ ಪತ್ನಿ ತನಗೆ ವಿಚ್ಛೇದನ ಬೇಡ, ಮತ್ತೆ ಅವರೊಂದಿಗೆ ದಾಂಪತ್ಯ ಜೀವನ ಮುಂದುವರಿಸಲು ಅನುಮತಿ ಕೊಡಿ ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂಕೋರ್ಟ್ ಒಮ್ಮೆಲೇ ವಿಚಾರಣೆ ನಡೆಸದೆ, ಸೇನಾಧಿಕಾರಿ ಬಳಿ ನಿಮ್ಮ ಪತ್ನಿಯ ಹುಟ್ಟೂರಾಗಿರುವ ಡೆಹ್ರಾಡೂನ್ ಕೌಟುಂಬಿಕ ನ್ಯಾಯಾಲಯದಲ್ಲಿ ಹೊಸದಾಗಿ ವಿಚ್ಛೇದನಾ ಅರ್ಜಿ ಹಾಕಿ. ಅಲ್ಲಿ ವಿಚಾರಣೆ ನಡೆಯಲಿ ಎಂದೂ ಹೇಳಿತ್ತು. ಅಲ್ಲೂ ಕೂಡ ಇದೇ ರಿಪೀಟ್ ಆಯಿತು. ಪತಿಗೆ ವಿಚ್ಛೇದನ ಸಿಕ್ಕಿದರೂ, ಪತ್ನಿ ಮತ್ತೆ ಉತ್ತರಾಖಂಡ್ ಹೈಕೋರ್ಟ್ಗೆ ದಾಂಪತ್ಯ ಮುಂದುವರಿಸಲು ಅವಕಾಶ ಕೊಡುವಂತೆ ಮೇಲ್ಮನವಿ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ವಿಚ್ಛೇದನ ನೀಡದೆ, ಮಧ್ಯಮ ವರ್ಗದ ಕುಟುಂಬಗಳಲ್ಲಿ ಸಂಬಂಧಗಳಲ್ಲಿ ಜಗಳ, ಮುರಿದುಬೀಳುವುದು ಎಲ್ಲ ತೀರ ಸಹಜ ಪ್ರಕ್ರಿಯೆಗಳು ಎಂದು ಹೇಳಿತ್ತು.
ಆದರೆ ಈ ತೀರ್ಪಿನ ವಿರುದ್ಧ ಸೇನಾಧಿಕಾರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಎಲ್ಲ ಕೋರ್ಟ್ಗಳ ತೀರ್ಪನ್ನೂ ಪರಿಶೀಲನೆ ಮಾಡಿದ ಸುಪ್ರೀಂಕೋರ್ಟ್ನ ಎಸ್.ಕೆ.ಕೌಲ್ ನೇತೃತ್ವದ ಪೀಠ, ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಪ್ಪಾಗಿ ಉಲ್ಲೇಖ ಮಾಡಿದೆ. ಪ್ರಸ್ತುತ ಪ್ರಕರಣದ ವಿಚ್ಛೇದನಾಯೋಗ್ಯವಾಗಿದೆ. ಮಹಿಳೆ ಪತಿಯ ವಿರುದ್ಧ ಆತನ ಮೇಲಧಿಕಾರಿಗಳು, ಮಹಿಳಾ ಆಯೋಗಗಳಿಗೆಲ್ಲ ದೂರು ನೀಡಿದ್ದು ಅವರ ಗೌರವಕ್ಕೆ ಧಕ್ಕೆ ತಂದೆ. ಇದೂ ಮಾನಹಾನಿ ಮಾಡಿದಂತೆಯೇ ಆಗಲಿದೆ. ಈ ದೂರುಗಳಿಂದಾಗಿ ಅವರ ವೃತ್ತಿ ಜೀವನ, ವೈಯಕ್ತಿಕ ಗೌರವಕ್ಕೆ ಅಪಾರ ಧಕ್ಕೆಯಾಯಿತು. ಇದೂ ಕೂಡ ಮಾನಸಿಕ ಕ್ರೌರ್ಯ ಎಂದೇ ಪರಿಗಣಿಸಲ್ಪಡುತ್ತದೆ ಎಂದು ಹೇಳಿದೆ.
ಸಹಿಸಿಕೊಳ್ಳುವ ಶಕ್ತಿ ಒಂದು ದಂಪತಿಯಿಂದ ಇನ್ನೊಂದು ದಂಪತಿಗೆ ವಿಭಿನ್ನವಾಗಿರುತ್ತದೆ. ಹಾಗಾಗಿ ಪ್ರತಿಯೊಂದು ವಿಚ್ಛೇದನ ಪ್ರಕರಣವನ್ನೂ, ಆ ದಂಪತಿಯ ನಡುವಿನ ಕಲಹ, ದೂರು-ಪ್ರತಿದೂರುಗಳನ್ನು ಸೂಕ್ಷ್ಮವಾಗಿ ನೋಡಿಕೊಂಡು ವಿಚಾರಣೆ ನಡೆಸಬೇಕಾಗುತ್ತದೆ. ಗೌರವ ಮತ್ತು ವೃತ್ತಿಯನ್ನು ಹಾಳುಮಾಡಿದ ಪತ್ನಿ ಜತೆ ಬದುಕಿ ಎಂದು ಈ ಸೇನಾ ಅಧಿಕಾರಿಗಳಿಗೆ ಹೇಳಲು ಸಾಧ್ಯವಿಲ್ಲ ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ.
ಇದನ್ನೂ ಓದಿ: ಚಾಲಕರನ್ನು ನೌಕರರು ಎಂದು ಪರಿಗಣಿಸಿ: ಊಬರ್ಗೆ ಲಂಡನ್ ಸುಪ್ರೀಂಕೋರ್ಟ್ ನಿರ್ದೇಶನ
ರೈತರ ಅಹವಾಲು ಆಲಿಸಲು ನೇಮಿಸಿದ್ದ ಸಮಿತಿಗೆ ಅವಹೇಳನ: ಸುಪ್ರೀಂಕೋರ್ಟ್ ಕೆಂಡಾಮಂಡಲ
Published On - 2:55 pm, Sat, 27 February 21