Abhinandan Varthaman Video: ಅಭಿನಂದನ್ ವರ್ಧಮಾನ್ ಮಾತಾಡಿರುವ ವೀಡಿಯೋ ಹಂಚಿಕೊಂಡ ಪಾಕ್ ಮಾಧ್ಯಮ; ವೀಡಿಯೋದಲ್ಲಿ ಏನಿದೆ?

Abhinandan Varthaman Video: ಪಾಕ್​ನ ಇಬ್ಬರು ಸೈನಿಕರು ಬಂದು ನನ್ನನ್ನು ಹಿಡಿದರು. ರಕ್ಷಿಸಿದರು. ಆಸ್ಪತ್ರೆಗೆ ಕಳುಹಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ತನಿಖೆ ನಡೆಸಿದರು ಎಂದು ಅಂದಿನ ಘಟನಾವಳಿಗಳನ್ನು ಅಭಿನಂದನ್ ವರ್ಧಮಾನ್ ಹೇಳಿಕೊಂಡಿದ್ದಾರೆ.

Abhinandan Varthaman Video: ಅಭಿನಂದನ್ ವರ್ಧಮಾನ್ ಮಾತಾಡಿರುವ ವೀಡಿಯೋ ಹಂಚಿಕೊಂಡ ಪಾಕ್ ಮಾಧ್ಯಮ; ವೀಡಿಯೋದಲ್ಲಿ ಏನಿದೆ?
ಅಭಿನಂದನ್ ವರ್ಧಮಾನ್ ವೀಡಿಯೋ ಹಂಚಿಕೊಂಡ ಪಾಕಿಸ್ತಾನ
Follow us
TV9 Web
| Updated By: ganapathi bhat

Updated on:Apr 06, 2022 | 7:40 PM

ಇಸ್ಲಾಮಬಾದ್: ಪಾಕಿಸ್ತಾನ ಮತ್ತು ಭಾರತದ ವಾಯುಸೇನೆಗಳ ನಡುವಿನ ಕಾದಾಟದಲ್ಲಿ ಭಾರತದ ಮಿಗ್-21 ಯುದ್ಧ ವಿಮಾನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತು. ಅದರಿಂದಾಗಿ ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಗಡಿ ತಲುಪಿದರು. ಎರಡು ವರ್ಷಗಳ ಹಿಂದೆ (2019 ಫೆ.27) ಇದೇ ದಿನದಂದು ಅಭಿನಂದನ್ ವರ್ಧಮಾನ್ ಪಾಕ್ ಗಡಿ ಪ್ರವೇಶಿಸಿದ್ದರು. ಬಳಿಕ, ಎರಡು ದಿನಗಳು ಕಳೆದ ಮೇಲೆ ಅಭಿನಂದನ್​ರನ್ನು ಪಾಕಿಸ್ತಾನ ಬಿಡುಗಡೆಗೊಳಿಸಿತ್ತು. ಇದೀಗ ಘಟನೆ ನಡೆದು ಎರಡು ವರ್ಷಗಳ ಬಳಿಕ, ಪಾಕಿಸ್ತಾನ ಮಾಧ್ಯಮಗಳು ಹೊಸ ವೀಡಿಯೋ ಒಂದನ್ನು ಬಿಡುಗಡೆಗೊಳಿಸಿದೆ. ಈ ಮೊದಲು ಎಲ್ಲಿಯೂ ಕಾಣಸಿಗದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲೂ ಓಡಾಡುತ್ತಿದೆ.

ವೀಡಿಯೋದಲ್ಲಿ ಮಾತನಾಡಿರುವ ಅಭಿನಂದನ್ ವರ್ಧಮಾನ್, ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ನೆಲೆಗೊಳ್ಳುವ ಬಗ್ಗೆ ಹೇಳಿದ್ದಾರೆ. ಜತೆಗೆ, ಭಾರತ ಮತ್ತು ಪಾಕ್​ನ ನಡುವೆ ವ್ಯತ್ಯಾಸಗಳೇ ತಿಳಿಯುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಏನೇ ಆದರೂ, ಈ ವೀಡಿಯೋ ಹೊಸದೋ ಅಥವಾ ಹಳೆಯದೋ ಎಂದು ಖಚಿತ ಮಾಹಿತಿ ಲಭ್ಯವಾಗಿಲ್ಲ. ವೀಡಿಯೋ ಎಡಿಟ್ ಮಾಡಿರುವುದನ್ನು ಗಮನಿಸಿದರೆ ವೀಡಿಯೋ ಯಾವಾಗ ರೆಕಾರ್ಡ್ ಆಗಿರುವಂಥದ್ದು ಎಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ವೀಡಿಯೋದಲ್ಲಿ ಅಭಿನಂದನ್ ವರ್ಧಮಾನ್ ಏನು ಹೇಳಿದ್ದಾರೆ? ‘ಪ್ಯಾರಾಚೂಟ್​ನಿಂದ ಕೆಳಗಿಳಿಯುವ ವೇಳೆ ಎರಡೂ ದೇಶಗಳನ್ನು ನಾನು ನೋಡಿದೆ. ಎರಡು ದೇಶಗಳ ವ್ಯತ್ಯಾಸಗಳೇ ನನಗೆ ತಿಳಿಯಲಿಲ್ಲ. ಉಭಯ ದೇಶಗಳೂ ಸಮಾನ ಸುಂದರವಾಗಿದೆ. ನಾನು ಪ್ಯಾರಾಚೂಟ್​ನಿಂದ ಕೆಳಗಿಳಿದಾಗ ಭಾರತದಲ್ಲಿ ಇದ್ದೇನಾ ಅಥವಾ ಪಾಕಿಸ್ತಾನದಲ್ಲಿ ಇದ್ದೇನಾ ಎಂದು ತಿಳಿಯಲಿಲ್ಲ. ಎರಡೂ ದೇಶಗಳು ಒಂದೇ ರೀತಿಯಾಗಿ ಕಾಣುತ್ತದೆ. ನನಗೆ ಬಹಳ ನೋವಾಗಿತ್ತು. ಕದಲಲು ಆಗುತ್ತಿರಲಿಲ್ಲ. ನಾನು ಎಲ್ಲಿದ್ದೇನೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದೆ. ನಾನು ನನ್ನ ದೇಶದಲ್ಲಿ ಇಲ್ಲ ಎಂಬುದನ್ನು ತಿಳಿದುಕೊಂಡಾಗ, ಓಡಲು ಪ್ರಯತ್ನಿಸಿದೆ. ಆದರೆ, ನನ್ನ ಹಿಂದೆ ಜನರು ಓಡಿ ಬಂದರು. ನನ್ನನ್ನು ಹಿಡಿಯಲು ಅವರು ಬಹಳ ಉತ್ಸುಕರಾಗಿದ್ದರು.’ ಎಂದು ಭಾರತ ಮತ್ತು ಪಾಕಿಸ್ತಾನದ ಕುರಿತಾಗಿ ಅಭಿನಂದನ್ ಮಾತನಾಡಿದ್ದಾರೆ.

ಪಾಕ್​ನ ಇಬ್ಬರು ಸೈನಿಕರು ಬಂದು ನನ್ನನ್ನು ಹಿಡಿದರು. ರಕ್ಷಿಸಿದರು. ಆಸ್ಪತ್ರೆಗೆ ಕಳುಹಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ತನಿಖೆ ನಡೆಸಿದರು ಎಂದು ಅಂದಿನ ಘಟನಾವಳಿಗಳನ್ನು ಅಭಿನಂದನ್ ವರ್ಧಮಾನ್ ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿ ಅಭಿನಂದನ್ ವರ್ಧಮಾನ್, ಪಾಕ್ ಸೇನೆಯನ್ನು ಹೊಗಳಿದ್ದಾರೆ. ಜತೆಗೆ, ಉಭಯ ದೇಶಗಳಲ್ಲಿ ಶಾಂತಿ ನೆಲೆಸಬೇಕಿರುವ ಬಗ್ಗೆ ಮಾತಾಡಿದ್ದಾರೆ. ಪಾಕ್ ಸೇನೆ ವೃತ್ತಿಪರವಾಗಿದೆ. ಎರಡೂ ರಾಷ್ಟ್ರಗಳಲ್ಲಿ ಶಾಂತಿ ಇಲ್ಲದಾಗ ಯುದ್ಧವಾಗುತ್ತದೆ. ಶಾಂತಿ ನೆಲೆಗೊಳ್ಳಲು ಏನೇನು ಮಾಡಬಹುದು ಎಂದು ನನಗೆ ತಿಳಿದಿಲ್ಲ. ಆದರೆ, ಭಾರತ ಪಾಕ್ ನಡುವೆ ಶಾಂತಿ ನೆಲೆಸಬೇಕು ಎಂದು ಬಯಸುತ್ತೇನೆ ಎಂದು ವರ್ಧಮಾನ್ ತಿಳಿಸಿದ್ದಾರೆ. ಇದೀಗ, ಅಭಿನಂದನ್ ಮಾತನಾಡಿರುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿದೆ. ವೀಡಿಯೋ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಅಭಿನಂದನ್ ಮಾತನಾಡಿರುವ ವೀಡಿಯೋ:

ಫೆಬ್ರವರಿ 27ನೇ ತಾರೀಖಿನಂದು ಪಾಕಿಸ್ತಾನದ ವಾಯುಸೇನೆ ಜಮ್ಮು-ಕಾಶ್ಮೀರದ ಭೂ ಸೇನಾ ನೆಲೆಗಳ ಮೇಲೆ ದಾಳಿಗೆ ಪ್ರಯತ್ನಿಸಿತು. ಪಾಕಿಸ್ತಾನದಿಂದ ಅಂಥಾ ದಾಳಿ ಯತ್ನಗಳನ್ನು ಅಂದಾಜು ಮಾಡಿದ್ದ ಭಾರತದ ವಾಯು ಸೇನೆ ಸನ್ನದ್ಧ ಸ್ಥಿತಿಯಲ್ಲಿತ್ತು. ಪಾಕ್ ಮತ್ತು ಭಾರತದ ಈ ಕಾದಾಟದ ವೇಳೆ ಯುದ್ಧ ವಿಮಾನಗಳ ಮಧ್ಯೆ ‘ಡಾಗ್ ಫೈಟ್’ ನಡೆದು, ಮಿಗ್- 21ನಿಂದ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಯಿತು. ಇನ್ನು ಭಾರತದ ಮಿಗ್-21 ಯುದ್ಧ ವಿಮಾನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತು. ಅದರಲ್ಲಿದ್ದ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ಧಮಾನ್​​​ರನ್ನು ಪಾಕ್ ಸೇನೆ ವಶಕ್ಕೆ ಪಡೆದುಕೊಂಡಿತು.

ಮಾರ್ಚ್ 1ನೇ ತಾರೀಕಿನಂದು ಬಿಡುಗಡೆ ಸಹ ಮಾಡಲಾಯಿತು. ಅವರ ಪೊಗದಸ್ತಾದ ಮೀಸೆ ಮತ್ತು ಆತ್ಮವಿಶ್ವಾಸ ತುಳುಕಿಸಿದ್ದ ಮುಗುಳ್ನಗು ಎಲ್ಲರ ಗಮನ ಸೆಳೆದಿತ್ತು. ಅವರ ಮೀಸೆ ದೇಶದ ಯುವಜನರ ಪಾಲಿಗೆ ಫೇವರಿಟ್ ಫ್ಯಾಷನ್ ಸಹ ಆಗಿತ್ತು.

ಇದನ್ನೂ ಓದಿ: ಬಾಲಾಕೋಟ್​ ದಾಳಿಗೆ 2 ವರ್ಷ: ವೈರಿ ನೆಲದಲ್ಲೂ ಮುಗುಳ್ನಗುತ್ತಿದ್ದ ಧೀರ ಅಭಿನಂದನ್​ ವರ್ಧಮಾನ್

ಬಾಲಾಕೋಟ್ ದಾಳಿಗೆ 2 ವರ್ಷ: ಭಾರತ-ಪಾಕ್ ನಡುವೆ ಹೊಸ ಕದನವಿರಾಮ ಒಪ್ಪಂದ; ಬದ್ಧವಾಗಿರುವುದೇ ಪಾಕ್?

Published On - 1:24 pm, Sat, 27 February 21