ಬಾಲಾಕೋಟ್ ದಾಳಿಗೆ 2 ವರ್ಷ: ಭಾರತ-ಪಾಕ್ ನಡುವೆ ಹೊಸ ಕದನವಿರಾಮ ಒಪ್ಪಂದ; ಬದ್ಧವಾಗಿರುವುದೇ ಪಾಕ್?

ಬಾಲಾಕೋಟ್ ದಾಳಿಗೆ 2 ವರ್ಷ: ಭಾರತ-ಪಾಕ್ ನಡುವೆ ಹೊಸ ಕದನವಿರಾಮ ಒಪ್ಪಂದ; ಬದ್ಧವಾಗಿರುವುದೇ ಪಾಕ್?
ಭಾರತ-ಪಾಕಿಸ್ತಾನ

ಹೊಸ ಕದನವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಉಭಯ ರಾಷ್ಟ್ರಗಳ ನಡುವೆ ಕದನವಿರಾಮ ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಹಾಗೆಂದು ಪಾಕಿಸ್ತಾನ ನಡೆ ಬದಲಿಸದೇ ಇರುತ್ತದೆಯೇ? ಕದನವಿರಾಮಕ್ಕೆ ಬದ್ಧವಾಗಿ ಉಳಿಯುತ್ತದೆಯೇ?

TV9kannada Web Team

| Edited By: ganapathi bhat

Apr 06, 2022 | 7:41 PM

ಭಾರತ-ಪಾಕಿಸ್ತಾನ ನಡುವೆ ಗುರುವಾರ (ಫೆ.25) ಬಹುಮುಖ್ಯ ಶಾಂತಿ ಒಪ್ಪಂದ ಜಾರಿಗೆ ಬಂತು. ಗಡಿನಿಯಂತ್ರಣ ರೇಖೆಯಲ್ಲಿ (LOC) ಪರಸ್ಪರರ ವಿರುದ್ಧ ಗುಂಡು ಹಾರಿಸುವುದಿಲ್ಲ ಎಂದು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಕದನವಿರಾಮ ಒಪ್ಪಂದ ಮಾಡಿಕೊಂಡರು. ಎರಡೂ ದೇಶಗಳ ನಡುವೆ ಗಡಿ ಅತಿ ಉದ್ವಿಗ್ನವಾಗುತ್ತಿದ್ದ ಸಂದರ್ಭದಲ್ಲಿಯೇ ಇಂಥದ್ದೊಂದು ಒಪ್ಪಂದ ಘೋಷಣೆಯಾಗಿರುವುದು ಶಾಂತಿಪ್ರಿಯರಲ್ಲಿ ನೆಮ್ಮದಿ ಮೂಡಿಸಿದೆ. Talk Talk Fight Fight (ಮಾತಾಡ್ತಾ ಮಾತಾಡ್ತಾ ಹೊಡೀತಿರು) ಎನ್ನುವುದನ್ನು ಸೇನಾ ಕಾರ್ಯಪದ್ಧತಿಯನ್ನಾಗಿಯೇ ಮಾಡಿಸಿಕೊಂಡಿರುವ ಪಾಕಿಸ್ತಾನ ಈ ಒಪ್ಪಂದಕ್ಕೆ ಬದ್ಧವಾಗಿರುವುದೇ ಎಂಬ ಬಗ್ಗೆ ಎಂದಿನಂತೆ ಅನುಮಾನಗಳು ಮೂಡಿವೆ. ಪಾಕಿಸ್ತಾನದ ಎಲ್ಲ ನಡೆಯನ್ನೂ Trust but Verify (ನಂಬು ಆದ್ರೆ ಪರಾಮರ್ಶಿಸು) ಎಂಬ ನಿಲುವಿನಿಂದಲೇ ಗಮನಿಸುವ ಭಾರತ ಈಗೇಕೆ ಇಂಥದ್ದೊಂದು ಒಪ್ಪಂದ ಮಾಡಿಕೊಂಡಿತು ಎಂಬ ಬಗ್ಗೆ ರಕ್ಷಣಾ ವ್ಯವಹಾರಗಳನ್ನು ನಿಯಮಿತವಾಗಿ ಗಮನಿಸುವವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಅದರಲ್ಲೂ ಬಾಲಾಕೋಟ್​ ಕಾರ್ಯಾಚರಣೆ ನಡೆದ 2ನೇ ವರ್ಷದಂದೇ ಈ ಒಪ್ಪಂದ ಚಾಲ್ತಿಗೆ ಬಂದಿರುವುದು ಮಹತ್ವದ ವಿದ್ಯಮಾನ ಎನಿಸಿದೆ.

ಈ ಜಂಟಿ ಹೇಳಿಕೆ ಹೊರಬಿದ್ದಿರುವುದು ನಿನ್ನೆ ಅಂದರೆ ಫೆ.25. ಈ ಘೋಷಣೆ ಹೊರಬೀಳುವುದಕ್ಕೂ ಒಂದು ದಿನ ಮೊದಲು ಅಂದರೆ ಫೆ.24ರಂದು ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ನೀಡಿದ ಹೇಳಿಕೆಯನ್ನು ಈ ಒಪ್ಪಂದದೊಂದಿಗೆ ಜೋಡಿಸಿಕೊಂಡು ನೋಡಿದರೆ ಈ ಒಪ್ಪಂದ ಹೊರಬಿದ್ದ ಕಾಲಘಟ್ಟದ ಅನಿವಾರ್ಯತೆಗಳು ಮನವರಿಯಾಗುತ್ತವೆ.

ಭಾರತ ಸರ್ಕಾರಕ್ಕೆ ರಕ್ಷಣಾ ವ್ಯವಹಾರಗಳ ವಿಚಾರದಲ್ಲಿ ಮಾರ್ಗದರ್ಶನ ಮಾಡುವ ಚಿಂತಕರ ಚಾವಡಿ ಎನಿಸಿದ ದೆಹಲಿಯ ವಿವೇಕಾನಂದ ಇಂಟರ್​ನ್ಯಾಷನಲ್ ಫೌಂಡೇಷನ್​ನಲ್ಲಿ ಬುಧವಾರ (ಫೆ.24) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರಲ್ ನರವಾಣೆ ‘ಯಾವುದೇ ದೇಶವು ಏಕಕಾಲಕ್ಕೆ ಎರಡು ದೇಶಗಳಗೊಂದಿಗೆ ಕದನ ನಡೆಸಲು ಬಯಸುವುದಿಲ್ಲ. ಬಹುಕಾಲದ ಉದ್ವಿಗ್ನ ಗಡಿಯೂ ಯಾವುದೇ ದೇಶಕ್ಕೆ ಶ್ರೇಯಸ್ಕರವಲ್ಲ’ ಎಂದು ಹೇಳಿದ್ದರು. ಇದರ ಬೆನ್ನಿಗೇ ‘ಚೀನಾ ಗಡಿಯಿಂದ ಭಾರತ ಮತ್ತು ಚೀನಾ ಸೇನೆಗಳು ಪರಸ್ಪರ ಹಿಂದೆ ಸರಿಯುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟಿದ್ದರು.

ಇದಾದ ಮಾರನೇ ದಿನವೇ ಪಾಕಿಸ್ತಾನ-ಭಾರತ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಕದನ ವಿರಾಮ ಒಪ್ಪಂದದ ಬಗ್ಗೆ ಜಂಟಿ ಹೇಳಿಕೆ ಹೊರಡಿಸಿದರು. ಭೂಸೇನೆ ಮುಖ್ಯಸ್ಥರು ಸಾರ್ವಜನಿಕ ಭಾಷಣಗಳಲ್ಲಿ ಸಾಮಾನ್ಯವಾಗಿ ಸರ್ಕಾರದ ನಿಲುವುಗಳನ್ನೇ ಪ್ರತಿಪಾದಿಸುತ್ತಾರೆ. ಈ ಹಿನ್ನೆಲೆಯಿಂದ ಗಮನಿಸಿದರೆ, ಭಾರತ ಸರ್ಕಾರವೂ ಚೀನಾ ಗಡಿಯ ಬೆಳವಣಿಗೆಗಳ ಕಡೆಗೆ ತನ್ನ ಗಮನ ಕೇಂದ್ರೀಕರಿಸುವ ದೃಷ್ಟಿಯಿಂದ ಪಾಕಿಸ್ತಾನದೊಂದಿಗೆ ಶಾಂತಿ ಬಯಸುತ್ತಿರಬಹುದು ಎಂಬ ಸೂಚನೆಗಳು ಸಿಗುತ್ತವೆ.

ಆರ್ಥಿಕವಾಗಿ ಜರ್ಝರಿತವಾಗಿರುವ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೊರೊನಾ ಸಂಕಷ್ಟದಿಂದ ಸೇನಾ ವೆಚ್ಚವನ್ನೂ ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಪಾಕಿಸ್ತಾನದ ಪಶ್ಚಿಮ ಗಡಿಯಾದ ಇರಾನ್ ಮತ್ತು ಅಫ್ಗಾನಿಸ್ತಾನಗಳ ಜೊತೆಗೂ ಪಾಕಿಸ್ತಾನದ ಸಂಬಂಧ ಹಳಸಿದೆ. ಸದ್ಯದ ಸಂದರ್ಭದಲ್ಲಿ ಪಾಕಿಸ್ತಾನಕ್ಕೂ ಎರಡು ಉದ್ವಿಗ್ನ ಗಡಿಗಳ ಆತಂಕ ನಿವಾರಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿಯೇ ಪ್ರತಿ ಬಾರಿ ಮೇಜರ್​ ದರ್ಜೆಯ ಅಧಿಕಾರಿಗಳ ಜೊತೆಗೆ ನಡೆಯುತ್ತಿದ್ದ ಮಾತುಕತೆ ಇದೀಗ ಉಪಸೇನಾ ಮುಖ್ಯಸ್ಥರ (ಲೆಫ್ಟಿನೆಂಟ್ ಜನರಲ್) ಮಟ್ಟದಲ್ಲಿ ನಡೆದು, ಈ ಮಹತ್ವದ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಯಿತು.

ಬಾಲಾಕೋಟ್ ಉಗ್ರನೆಲೆ ಧ್ವಂಸ ಕಾರ್ಯಾಚರಣೆ ನಡೆದು ಇಂದಿಗೆ ಎರಡು ವರ್ಷ. ಇದೇ ಸಂದರ್ಭದಲ್ಲಿ ಭಾರತ-ಪಾಕ್ ನಡುವೆ ಶಾಂತಿ ಮಾತುಕತೆಯೊಂದು ನಡೆದಿದೆ. ಹೊಸ ಕದನವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಉಭಯ ರಾಷ್ಟ್ರಗಳ ನಡುವೆ ಕದನವಿರಾಮ ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಹಾಗೆಂದು ಪಾಕಿಸ್ತಾನ ನಡೆ ಬದಲಿಸದೇ ಇರುತ್ತದೆಯೇ? ಕದನವಿರಾಮಕ್ಕೆ ಬದ್ಧವಾಗಿ ಉಳಿಯುತ್ತದೆಯೇ? ಈ ಪ್ರಶ್ನೆಯ ಹಿನ್ನೆಲೆಯಲ್ಲಿ ಕೊಂಚ ಅವಲೋಕನ ಅನಿವಾರ್ಯ.

ಕದನವಿರಾಮ ಒಪ್ಪಂದಕ್ಕೆ ಬದ್ಧವಾಗಿರುತ್ತದೆಯೇ ಪಾಕಿಸ್ತಾನ? ಭಾರತ ಮತ್ತು ಪಾಕಿಸ್ತಾನ ನಡುವೆ ನವೆಂಬರ್ 25-26, 2003ರಲ್ಲಿ ಒಂದು ಬಾರಿ ಕದನವಿರಾಮ ಒಪ್ಪಂದವಾಗಿತ್ತು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಅಣ್ವಸ್ತ್ರ ಹೊಂದಿರುವ ಉಭಯ ರಾಷ್ಟ್ರಗಳ ನಡುವೆ ಹಲವು ಬಾರಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಯಿತು. 2019-20ರಲ್ಲಿ ಅತಿ ಹೆಚ್ಚು ಬಾರಿ ಕದನವಿರಾಮ ಉಲ್ಲಂಘನೆಯಾಯಿತು. 2003ರ ಒಪ್ಪಂದದ ಬಳಿಕವೂ ಕದನವಿರಾಮ ಉಲ್ಲಂಘನೆಗೆ ಭಾರತ-ಪಾಕ್ ಸಾಕ್ಷಿಯಾಯಿತು.

2003ರ ಕದನವಿರಾಮ ಒಪ್ಪಂದದ ಬಗ್ಗೆ ಮಾತುಕತೆ ಆಗುವುದು ಇದೇ ಮೊದಲೇನಲ್ಲ. 2018ರಲ್ಲಿ ಕೂಡ ಎರಡೂ ದೇಶಗಳ ಮಿಲಿಟರಿ ಕಮಾಂಡರ್​ಗಳು 2003ರ ಕದನವಿರಾಮ ಒಪ್ಪಂದವನ್ನು ಚಾಚೂತಪ್ಪದೆ ಪಾಲಿಸುವುದಾಗಿ ತಿಳಿಸಿದ್ದರು. ಆದರೆ, 2018ರ ಬಳಿಕ ಕದನವಿರಾಮ ಉಲ್ಲಂಘನೆ ಹೆಚ್ಚಾಯಿತೇ ಹೊರತು ಬೇರೇನೂ ಉಪಯೋಗವಾಗಲಿಲ್ಲ. ಈ ವರ್ಷದ ಅವಧಿಯಲ್ಲಿ 591 ಬಾರಿ ಕದನವಿರಾಮ ಉಲ್ಲಂಘನೆಯ ಘಟನಾವಳಿಗಳು ಪಾಕಿಸ್ತಾನದಿಂದ ನಡೆದವು. ಈ ವೇಳೆ ಕಳೆದೊಂದು ವರ್ಷದಲ್ಲಿ 46 ನಾಗರಿಕರು ಮೃತಪಟ್ಟಿದ್ದಾರೆ. ಮೂರು ವರ್ಷಗಳ ಅವಧಿಯಲ್ಲಿ 73 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಒಟ್ಟು 14,155 ಬಾರಿ ಕದನವಿರಾಮ ಉಲ್ಲಂಘನೆ 2003ರಲ್ಲಿ ನಡೆದ ಕದನವಿರಾಮ ಒಪ್ಪಂದವು ಮುಂದಿನ ಮೂರು ವರ್ಷಗಳ ಕಾಲ ಸುಸೂತ್ರವಾಗಿ ಜಾರಿಯಲ್ಲಿತ್ತು. 2004ರಿಂದ 2006ರವರೆಗೆ ಯಾವುದೇ ಕದನವಿರಾಮ ಉಲ್ಲಂಘನೆಯ ಘಟನೆಗಳು ನಡೆದಿರಲಿಲ್ಲ. ಆದರೆ, ನಂತರದ 14 ವರ್ಷದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಒಟ್ಟು 14,155 ಬಾರಿ ವಿವಿಧ ರೂಪದಲ್ಲಿ ಕದನವಿರಾಮ ಉಲ್ಲಂಘನೆಯಾಗಿದೆ.

ಈ ವಿವರಗಳನ್ನು ಗಮನಿಸಿದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನವಿರಾಮ ಉಲ್ಲಂಘನೆ ಹೊಸ ಒಪ್ಪಂದ ಹೇಗೆ ಸಾಗಲಿದೆ ಎಂಬ ಪ್ರಶ್ನೆ ಮೂಡುತ್ತದೆ. ಭಾರತವನ್ನು ಕೆಣಕುವ ಕಾರ್ಯಕ್ಕೆ ಪಾಕ್ ಅಥವಾ ಪಾಕ್​ನ ಉಗ್ರರು ಇತಿಶ್ರೀ ಹಾಡುತ್ತಾರಾ ಎಂದು ಕಾದುನೋಡಬೇಕಿದೆ. ಉಭಯ ರಾಷ್ಟ್ರಗಳು ಕದನವಿರಾಮವನ್ನು ಪಾಲಿಸಿ, ಸಾವು ನೋವು ಕಡಿಮೆ ಮಾಡಿಕೊಂಡು, ಶಾಂತಿಯುತ ದಿನಗಳನ್ನು ಕೊಟ್ಟರೆ ಎಲ್ಲರಿಗೂ ಒಳ್ಳೆಯದು.

ಬಾಲಾಕೋಟ್ ದಾಳಿಯಂದು ಏನಾಗಿತ್ತು? ಬಾಲಾಕೋಟ್. ಈ ಹೆಸರನ್ನು ಕೇಳದವರು ಇರಲಾರರೇನೋ. ಪಾಕ್ ಉಗ್ರರ ದುಷ್ಕೃತ್ಯಗಳ ಮೂಲವನ್ನೇ ಹುಟ್ಟಡಗಿಸಿದ ಭಾರತೀಯ ಯೋಧರ ಯಶಸ್ವಿ ಕಾರ್ಯವಿದು. (Balakot Air Strike) 2019ರ ಫೆಬ್ರವರಿ 14ರಂದು ಪಾಕ್ ಉಗ್ರನೊಬ್ಬ ಜಮ್ಮು-ಕಾಶ್ಮೀರದ ಪುಲ್ವಾಮ (Pulwama) ಜಿಲ್ಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ. ಹೆದ್ದಾರಿ ಮೇಲೆ ಸಾಗುತ್ತಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ವಾಹನಗಳನ್ನು ಗುರಿಯಾಗಿಸಿ ಉಗ್ರ ದಾಳಿ ಮಾಡಿದ್ದ. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಈ ದಾಳಿಯಲ್ಲಿ 40 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಉಗ್ರರ ಈ ದುಷ್ಕೃತ್ಯಕ್ಕೆ ತಿರುಗೇಟು ನೀಡಿದ ಭಾರತ, ಫೆ. 26ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ತೆರಳಿ ಉಗ್ರರ ಶಿಬಿರಗಳನ್ನು ಹೇಳಹೆಸರಿಲ್ಲದಂತೆ ಮಾಡಿತ್ತು. ಇಂದಿಗೆ ಘಟನೆ ನಡೆದು 2 ವರ್ಷಗಳಾಯಿತು.

ಸ್ವತಃ ಜೈಷ್​-ಎ-ಮೊಹಮ್ಮದ್ ಉಗ್ರ​ ಸಂಘಟನೆ ಪುಲ್ವಾಮ ದಾಳಿಯ ಹೊಣೆ ಹೊತ್ತಿದ್ದರೂ, ಪಾಕಿಸ್ತಾನ ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡಿತ್ತು. ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ಗುಟ್ಟಾಗಿ ಸಿದ್ಧತೆ ಮಾಡಿಕೊಂಡಿತ್ತು. ಭಾರತೀಯ ವಾಯುಸೇನೆಗೆ ದಾಳಿಯ ಹೊಣೆ ವಹಿಸಲಾಯಿತು. ಎಲ್ಲವೂ ಅಂದುಕೊಂಡಂತೆ ನಡೆಯಿತು. ಪಾಕಿಸ್ತಾನದ ಬಾಲಾಕೋಟ್ ಎಂಬಲ್ಲಿ, ಭಾರತೀಯ ಸೈನಿಕರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಸುಮಾರು 300 ಉಗ್ರರು ನಾಶವಾಗಿದ್ದರು. ಫೆಬ್ರವರಿ 26ರ ಮುಂಜಾನೆ ಪಾಕಿಸ್ತಾನಕ್ಕೆ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಭಾರತೀಯ ವಾಯುಪಡೆ ಉಗ್ರರ ನೆಲೆಯನ್ನು ನಾಶ ಮಾಡಿ ಬಂದಿತ್ತು.

ಇದನ್ನೂ ಓದಿ: ಬಾಲಾಕೋಟ್​ ದಾಳಿಗೆ 2 ವರ್ಷ: ವೈರಿ ನೆಲದಲ್ಲೂ ಮುಗುಳ್ನಗುತ್ತಿದ್ದ ಧೀರ ಅಭಿನಂದನ್​ ವರ್ಧಮಾನ್

ಇದನ್ನೂ ಓದಿ: ಆ 12 ದಿನಗಳು.. ಪುಲ್ವಾಮಾ ಸ್ಫೋಟದಿಂದ ಬಾಲಾಕೋಟ್​ ವಾಯುದಾಳಿಯವರೆಗೆ

Follow us on

Most Read Stories

Click on your DTH Provider to Add TV9 Kannada