ರೈತರ ಅಹವಾಲು ಆಲಿಸಲು ನೇಮಿಸಿದ್ದ ಸಮಿತಿಗೆ ಅವಹೇಳನ: ಸುಪ್ರೀಂಕೋರ್ಟ್​ ಕೆಂಡಾಮಂಡಲ

‘ಸುಪ್ರೀಂಕೋರ್ಟ್ ಒಂದು ಸಮಿತಿಯನ್ನು ನೇಮಿಸುತ್ತದೆ, ನೀವು ಅದರ ಘನತೆಯನ್ನು ಹಾಳು ಮಾಡ್ತೀರಿ ಅಂದ್ರೆ ಏನರ್ಥ? ಒಮ್ಮೆ ಒಂದು ನಿಲುವು ತಳೆದಿದ್ದ ಸಮಿತಿಯ ಸದಸ್ಯರು ನಂತರದ ದಿನಗಳಲ್ಲಿ ರೈತರ ನೆಲೆಗಟ್ಟಿನಿಂದ ಯೋಚಿಸಿ ತಮ್ಮ ನಿಲುವು ಬದಲಿಸಿಕೊಂಡಿರಲಾರರೆ?’

ರೈತರ ಅಹವಾಲು ಆಲಿಸಲು ನೇಮಿಸಿದ್ದ ಸಮಿತಿಗೆ ಅವಹೇಳನ: ಸುಪ್ರೀಂಕೋರ್ಟ್​ ಕೆಂಡಾಮಂಡಲ
ಸುಪ್ರೀಂ ಕೋರ್ಟ್​
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jan 20, 2021 | 9:31 PM

ದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಅಹವಾಲು ಆಲಿಸಲು ತಾನು ನೇಮಿಸಿದ್ದ ಸಮಿತಿಯ ಸದಸ್ಯರ ಬಗ್ಗೆ ನಡೆಯುತ್ತಿರುವ ಅವಹೇಳನವನ್ನು ಸುಪ್ರೀಂಕೋರ್ಟ್ ಬುಧವಾರ ಕಟು ಪದಗಳಲ್ಲಿ ಖಂಡಿಸಿತು. ರಾಜಸ್ಥಾನದ ರೈತ ಸಂಘಟನೆಯೊಂದು ಸಲ್ಲಿಸಿರುವ ಅರ್ಜಿಯನ್ನು ಆಧರಿಸಿ ಸಮಿತಿಯನ್ನು ಮರುರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನೂ ನೀಡಿತು.

ಸಮಿತಿಯಲ್ಲಿರುವ ನಾಲ್ವರೂ ಸದಸ್ಯರು ಹಿಂದೊಮ್ಮೆ ಕೃಷಿ ಸುಧಾರಣಾ ಕಾಯ್ದೆಗಳ ಪರ ಮಾತನಾಡಿದ್ದಾರೆ ಎಂಬ ಕಾರಣವನ್ನೇ ದೊಡ್ಡದಾಗಿಸಿ ನಡೆಸುತ್ತಿರುವ ಅವಹೇಳನಕ್ಕೆ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಸಮಿತಿಯ ಎದುರು ಹಾಜರಾಗಲು ನಿಮಗೆ ಇಷ್ಟವಿಲ್ಲದರೆ ಬರಬೇಡಿ, ನಾವೇನು ಇದನ್ನು ಕಡ್ಡಾಯ ಎಂದು ಹೇಳುತ್ತಿಲ್ಲ. ಆದರೆ ನ್ಯಾಯಾಲಯ ಮತ್ತು ಸಮಿತಿ ಸದಸ್ಯರನ್ನು ಹೀಗೆ ಅವಮಾನ ಮಾಡುವುದು ತಪ್ಪು. ಜನರನ್ನು ಹೀಗೇಕೆ ಬ್ರಾಂಡ್ ಮಾಡ್ತೀರಿ ಎಂದು ಎಂಟು ಕೃಷಿ ಸಂಘಟನೆಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಪ್ರಶಾಂತ್ ಭೂಷಣ್ ಮತ್ತು ದುಷ್ಯಂತ್ ದವೆ ಅವರನ್ನು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ಪ್ರಶ್ನಿಸಿದರು.

ಸುಪ್ರೀಂಕೋರ್ಟ್​ ನೇಮಿಸಿರುವ ತಜ್ಞರ ಸಮಿತಿಯ ಸದಸ್ಯರು ಕಾಯ್ದೆಯ ಪರವಾಗಿದ್ದಾರೆ ಎಂದು ಕೆಲ ವಿರೋಧ ಪಕ್ಷಗಳು ಮತ್ತು ಪ್ರತಿಭಟನಾನಿರತರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿ ಸದಸ್ಯರಾಗಿದ್ದ ನಂತರ ಭಾರತೀಯ ಕಿಸಾನ್ ಯೂನಿಯನ್​ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಕಳೆದ ವಾರ ಸಮಿತಿಯಿಂದ ಹಿಂದೆ ಸರಿದಿದ್ದರು.

ಸಮಿತಿಯಲ್ಲಿದ್ದ ಎಲ್ಲಾ ನಾಲ್ವರು ಸದಸ್ಯರೂ ಕೃಷಿ ಕ್ಷೇತ್ರದ ಬುದ್ಧಿವಂತರು. ಈ ಹಿಂದೆ ಕಾಯ್ದೆಯ ಪರವಾಗಿ ಮಾತನಾಡಿದ್ದರು ಎಂಬ ಕಾರಣಕ್ಕೆ ಅವರನ್ನು ಅನರ್ಹಗೊಳಿಸಬೇಕು ಎಂದೇನಿಲ್ಲ. ಸುಪ್ರೀಂಕೋರ್ಟ್ ಒಂದು ಸಮಿತಿಯನ್ನು ನೇಮಿಸುತ್ತದೆ, ನೀವು ಅದರ ಘನತೆಯನ್ನು ಹಾಳು ಮಾಡ್ತೀರಿ ಅಂದ್ರೆ ಏನರ್ಥ? ಒಮ್ಮೆ ಒಂದು ನಿಲುವು ತಳೆದಿದ್ದ ಸಮಿತಿಯ ಸದಸ್ಯರು ನಂತರದ ದಿನಗಳಲ್ಲಿ ಪರಿಸ್ಥಿತಿ ಬದಲಾದಂತೆ ರೈತರ ನೆಲೆಗಟ್ಟಿನಿಂದ ಯೋಚಿಸಿ ತಮ್ಮ ನಿಲುವು ಬದಲಿಸಿಕೊಂಡಿರಲಾರರೆ? ಸಮಿತಿಗೆ ನ್ಯಾಯಾಲಯವು ಯಾವುದೇ ಅಧಿಕಾರ ಕೊಟ್ಟಿರಲಿಲ್ಲ. ರೈತರ ಅಹವಾಲು ಆಲಿಸಿ ನಮಗೆ ವರದಿಕೊಡುವುದಷ್ಟಕ್ಕೇ ಅವರ ಬಾಧ್ಯತೆ ಸೀಮಿತವಾಗಿತ್ತು. ಈ ವಿಚಾರದಲ್ಲಿ ಪೂರ್ವಗ್ರಹದ ಮಾತು ಎಲ್ಲಿಂದ ಬಂತು ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.

ಭೂಪಿಂದರ್ ಸಿಂಗ್ ಮಾನ್ ಸಮಿತಿಯಿಂದ ಹಿಂದೆ ಸರಿದುಕೊಂಡ ಕಾರಣ ಸಮಿತಿಯನ್ನು ಪುನರ್​ ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲು ನ್ಯಾಯಾಲಯ ನಿರ್ಧರಿಸಿತು.

ರೈತರ ಅಹವಾಲು ಆಲಿಸಿ ವರದಿ ಸಲ್ಲಿಸಲು ಸುಪ್ರೀಂಕೋರ್ಟ್​ ರಚಿಸಿದ್ದ ತಜ್ಞರ ಸಮಿತಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮತ್ತು ಅಖಿಲ ಭಾರತ ರೈತ ಸಂಯೋಜನಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್, ಕೃಷಿ ಅರ್ಥಶಾಸ್ತ್ರಜ್ಞ ಮತ್ತು ವಿಶ್ವ ಆಹಾರ ನೀತಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾ ವಲಯ ನಿರ್ದೇಶಕ ಡಾ.ಪ್ರಮೋದ್ ಕುಮಾರ್ ಜೋಶಿ, ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಅಶೋಕ್ ಗುಲಾಟಿ, ಶೇತ್ಕರಿ ಸಂಘಟನಾದ ಮುಖ್ಯಸ್ಥ ಅನಿಲ್ ಘನ್​ವಾತ್ ಅವರಿದ್ದರು.

ಸಮಿತಿ ಸದಸ್ಯರು ಪೂರ್ವಗ್ರಹ ಪೀಡಿತರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಭೂಪಿಂದ್ ಸಿಂಗ್​ ಮಾನ್ ಸಮಿತಿಯ ಜವಾಬ್ದಾರಿಯಿಂದ ನಿವೃತ್ತರಾಗಿದ್ದರು.

Delhi Chalo | ಪಟ್ಟು ಸಡಿಲಿಸದ ಕೇಂದ್ರ-ರೈತ ಸಂಘಟನೆಗಳು; 10ನೇ ಸುತ್ತಿನ ಮಾತುಕತೆಯೂ ವಿಫಲ

Published On - 9:19 pm, Wed, 20 January 21