Weekly Horoscope in Kannada: ವಾರ ಭವಿಷ್ಯ: ನ 24 ರಿಂದ 30 ರವರೆಗೆ ವಾರ ಭವಿಷ್ಯ
ಇದು ನವೆಂಬರ್ ತಿಂಗಳ ಕೊನೆಯ ವಾರವಿದಾಗಿದೆ. 24-11-2024 ರಿಂದ 30-11-2024ರವರೆಗೆ ಇರಲಿದೆ. ಗ್ರಹಗಳು ಅಲ್ಪ ಬದಲಾವಣೆಯನ್ನು ಮಾಡುತ್ತವೆ. ಇದರಿಂದ ಜೀವನದ ಮೇಲೆ ಪರಿಣಾಮವೂ ಉಂಟಾಗಲಿದ್ದು ದೇವರ ಬಲದಿಂದ ತೊಂದರೆಗಳನ್ನು ಎದುರಿಸಬಹುದು.
ಇದು ನವೆಂಬರ್ ತಿಂಗಳ ಕೊನೆಯ ವಾರವಿದಾಗಿದೆ. 24-11-2024 ರಿಂದ 30-11-2024ರವರೆಗೆ ಇರಲಿದೆ. ಗ್ರಹಗಳು ಅಲ್ಪ ಬದಲಾವಣೆಯನ್ನು ಮಾಡುತ್ತವೆ. ಇದರಿಂದ ಜೀವನದ ಮೇಲೆ ಪರಿಣಾಮವೂ ಉಂಟಾಗಲಿದ್ದು ದೇವರ ಬಲದಿಂದ ತೊಂದರೆಗಳನ್ನು ಎದುರಿಸಬಹುದು.
ಮೇಷ ರಾಶಿ; ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ರಾಶಿಯ ಅಧಿಪತಿ ಕುಜನು ವ್ಯಯದಲ್ಲಿ ಚತುರ್ಥದಲ್ಲಿ ಇದ್ದಾನೆ. ಚಂದ್ರನ ಅಂಶವನ್ನು ಪಡೆದ ಕಾರಣ ಸಾಹಸ ಕಾರ್ಯಕ್ಕೆ ಧೈರ್ಯ ಸಾಲದು. ದೇಹ ಒಪ್ಪಿದರೂ ಮನಸ್ಸು ಒಪ್ಪದು. ದಯೆಯುಳ್ಳವರಾದ ನಿಮಗೆ, ಈ ಗುಣ ಬೇಡ, ಒಳ್ಳೆಯದಲ್ಲ ಎಂದು ಅನ್ನಿಸಬಹುದು. ಆದರೆ ಅದನ್ನು ಬಿಡುವುದು ಒಳ್ಳೆಯದಲ್ಲ. ಇಂದು ಗ್ರಹಗತಿಗಳ ಕಾರಣದಿಂದ ಹಾಗನ್ನಿಸಬಹುದು. ಅದು ನಿಮ್ಮನ್ನು ಸದಾ ಕಾಪಾಡುವ ದೈವೀಸಂಪತ್ತು. ಇತರರನ್ನು ಕಂಡು ಅಸೂಯೆ ಪಟ್ಟು ನಿಮ್ಮ ಅವನತಿಗೆ ಅಮಂಗಲವನ್ನು ಹಾಡಬೇಡಿ. ನಿಮ್ಮಲ್ಲೂ ಸಾಮರ್ಥ್ಯವಿದೆ, ಅದು ಸಕಲಾಕ್ಕೆ ಪ್ರಕಟವಾಗುತ್ತದೆ ಕೂಡ. ಕುಜನೇ ಬಲಹೀನನಾದುದರಿಂದ ಕಾರ್ತಿಕೇಯನನ್ನೇ ಶರಣಾಗಬೇಕು.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ತಿಂಗಳ ಕೊನೆಯ ವಾರದಲ್ಲಿ ರಾಶಿಯ ಅಧಿಪತಿ ಶುಕ್ರನಿಂದ ಮಿಶ್ರಫಲ. ವಾಗ್ವಾದ ನಡೆಯುವುದು. ನಿರ್ಧಾರಗಳ ವಿಚಾರಕ್ಕೆ ಅಸಮಾಧನ. ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ. ನಿಮ್ಮ ಕಾರ್ಯ, ಶ್ರಮ, ಸಮಯ, ಫಲ ಇವುಗಳ ಕುರಿತು ಒಮ್ಮೆ ಯೋಚಿಸಿ. ರಾಶಿಯಲ್ಲಿ ಗುರುವಿರುವ ಕಾರಣ ಯಾವುದೇ ದುರಂತವಾಗದೇ ಸಮಾಧಾನದಿಂದ ಮುಗಿಯುವುದು. ಆನಂದದ ನಿಟ್ಟುಸಿರನ್ನು ನೀವು ಬಿಡುತ್ತೀರಿ. ಶಿಸ್ತು ನಿಮ್ಮ ರಕ್ತಗತವಾಗಿ ಬಂದಿರುವುದು. ಅಶಿಸ್ತಿನಂತೆ ಕಂಡರೂ ಕೊಡವಿ ಎದ್ದು ನಿಮ್ಮ ಅಂತಸ್ಸತ್ತ್ವನ್ನು ತೋರಿಸುತ್ತೀರಿ. ಕಾರ್ಯದಲ್ಲಿ ಮಂದಗತಿಯು ಇರಲಿದೆ. ವಾದಕ್ಕೆ ಇಳಿದು ಮುಖಭಂಗವನ್ನು ಎದುರಿಸಬೇಕಾಗುವುದು. ದುರ್ಗಾರ್ತಿ ಪರಿಹಾರಣಿಯಾದ ದೇವಿಯ ಆರಾಧಿಸಿ.
ಮಿಥುನ ರಾಶಿ: ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ರಾಶಿಯ ಅಧಿಪತಿ ಬುಧನು ಷಷ್ಠದಲ್ಲಿ ಕುಜನ ರಾಶಿಯಲ್ಲಿ ಗುರುವಿನ ಅಂಶವನ್ನು ಪಡೆಯುವ ಕಾರಣ ಬಂಧುಗಳು ನಿಮಗೆ ಸಂತೋಷವನ್ನು ಕೊಡರು. ಅವರಿಂದ ಏನಾದರೂ ಸಲ್ಲದ ಮಾತು ಬರುತ್ತದೆ. ವಾಚಾಳಿಗಳಾದ ನೀವು ಅಸಂಬದ್ಧ ಮಾತುಗಳಿಗೆ ಅವಕಾಶಗಳನ್ನು ಕೊಡಬೇಡಿ. ಕಛೇರಿಯಲ್ಲಿ ಅದು ಸಹ್ಯವಾಗದು. ದುಃಖದ ವಿಚಾರಗಳು ನಿಮ್ಮ ಕಿವಿಗಳಿಗೆ ಬೀಳಬಹುದು. ಧೃತಿಗೆಡದೇ ಸಹಜವೆಂಬಂತೆ ಸ್ವೀಕರಿಸಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳಲು ಹೋಗಬೇಡಿ. ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಲಿ, ಜ್ವರಾದಿಗಳು ಬರಬಹುದು. ಗಣಪತಿಗೆ ಪ್ರಿಯವಾದ ದೂರ್ವೆಯ ಅರ್ಚನೆ ಮಾಡಿ.
ಕರ್ಕಾಟಕ ರಾಶಿ: ರಾಶಿಯ ಅಧಿಪತಿ ಚಂದ್ರನು ಈ ವಾರದಲ್ಲಿ ಶುಕ್ರ ಹಾಗು ಕುಜನ ರಾಶಿಯನ್ನು ಸಂಚರಿಸುವ ಕಾರಣ ಅಲಂಕಾರಿಕ ವಸ್ತುಗಳು ಅಥವಾ ಭೋಗ ವಸ್ತುಗಳಿಂದ ದುಃಖ. ಸಂಪಾದಿಸುವುದು ಕಷ್ಟ, ಕಳೆಯುವುದು ಸುಲಭ. ಕಾಲಿಗೆ ಆದ ಗಾಯವು ನಡೆಯಬೇಕೆಂದು ಕಲಿಸಿದರೆ, ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ. ನಿರೀಕ್ಷೆಯ ತೂಕ ಕಡಿಮೆಯಾದಂತೆ, ನೆಮ್ಮದಿಯ ತೂಕ ಹೆಚ್ಚಾಗುತ್ತದೆ. ನೀವು ನಿಮ್ಮ ಗುರಿಯನ್ನು ತಲುಪಲು ವಿಫಲರಾಗಿರಬಹುದು. ನಿಮ್ಮ ತಂತ್ರವನ್ನು ಬದಲಿಸಿಕೊಳ್ಳಿ. ಗುರಿಯನ್ನಲ್ಲ. ರಾಶಿಯಲ್ಲಿ ಕುಜನು ಇರುವ ಕಾರಣ ಸರಿಯಾದ ನಿರ್ಧಾರವನ್ನು ಮಾಡಲು ಕಷ್ಟ. ನಿಧಾನವಾಗಿ ಗೆದ್ದರೂ ಪರವಾಗಿಲ್ಲ, ನಿಯತ್ತಾಗಿ ಗೆಲ್ಲಬೇಕು. ಮಾತು ಸಂಧಾನಕ್ಕೆ ಕಾರಣವಾಗಬೇಕೇ ವಿನಃ ಸಂಘರ್ಷಕ್ಕಲ್ಲ ಎನ್ನುವುದು ಗೊತ್ತಿರಲಿ. ಶಾಂತದುರ್ಗೆಯನ್ನು ಪೂಜಿಸಿ.
ಸಿಂಹ ರಾಶಿ: ರಾಶಿಯ ಅಧಿಪತಿಯಾದ ಸೂರ್ಯನು ಈ ವಾರ ಕುಜನ ರಾಶಿಯಲ್ಲಿ ಕುಜನ ಅಂಶವನ್ನು ಪಡೆದಿರುವುದು ಕುಟುಂಬದಲ್ಲಿ ಸೌಹರ್ದತೆ, ವಿದೇಶದ ವ್ಯವಹಾರದಲ್ಲಿ ಉನ್ನತಿ ಕಾಣಿಸುವುದು. ನೇರಾನೇರ ವ್ಯಕ್ತಿ ಎಂದು ಏನನ್ನಾದರೂ ಮಾತನಾಡಬೇಡಿ. ಅದು ತಿರುಗುಬಾಣವಾಗಿ ನಿಮ್ಮನ್ನೇ ಚುಚ್ಚೀತು. ಕೆಲಸದ ಸ್ಥಳದಲ್ಲಿ ಆದಷ್ಟು ಅದಕ್ಕೇ ಗಮನಕೊಡಿ. ಒಳ್ಳೆಯ ಕೆಲಸಗಳು ಈ ವಾರ ನಿಮ್ಮಿಂದ ನಡಯಲಿದೆ. ಪೂಜ್ಯರನ್ನು ಗೌರವಿಸಿ. ಅಪರೂಪಕ್ಕೆ ಬಂದ ಅತಿಥಿಯನ್ನು ದೇವನೆಂದೇ ಸತ್ಕರಿಸಿ. ಹಿರಿಯರ ಕಾರ್ಯವನ್ನು ಶ್ರದ್ಧೆಯಿಂದ ಮಾಡಿ. ಅವರು ಹರಸಿದರೆ ದೈವವೇ ಹರಸಿದಂತೇ. ಶಿವ ಸ್ತೋತ್ರವನ್ನು ಪಠಿಸಿ.
ಕನ್ಯಾ ರಾಶಿ: ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ರಾಶಿಯ ಅಧಿಪತಿ ಬುಧನು ಕುಜನ ರಾಶಿಯಲ್ಲಿ ಇದ್ದರೂ ಗುರುವಿನ ಅಂಶವನ್ನು ಪಡೆದು ತೃತೀಯದಲ್ಲಿ ಇದ್ದಾನೆ. ಸಹೋದರರ ಬಂಧವು ಸುಧಾರಿಸುವುದು. ಬದಲಾವಣೆಯನ್ನು ಬಯಸುವ ನಿಮಗೆ ಅಷ್ಟು ಸುಲಭದಲ್ಲಿ ಅದು ಸಿಗಲಾಗದು. ಅತಿಥಿಗಳ ಅಥವಾ ಬಂಧುಗಳ ಅನಿರೀಕ್ಷಿತ ಅಗಮನ ನಿಮ್ಮ ಆಸೆಯನ್ನು ಪೂರ್ಣವಾಗಿಸದು. ವಿದ್ಯಾರ್ಥಿಗಳು ಓದಿನತ್ತ ಮನಸ್ಸು ಮಾಡುವರು. ಕೇತುವುದು ನಿಮ್ಮ ರಾಶಿಯಲ್ಲಿ ಗುರುವಿನ ಅಂಶವನ್ನು ಪಡೆದಿರುವುದು ತಪ್ಪು ಮಾರ್ಗದಲ್ಲಿ ನಡೆದರೂ ಅಂತ್ಯದಲ್ಲಿ ಶುಭವಾಗುವುದು. ನಿಮಗೆ ವಿರೋಧಿಗಳ ತೊಂದರೆ ಇದ್ದರೂ ಅದನ್ನು ಮಾತನಾಡಿಯೋ ಚರ್ಚೆ ಮಾಡಿಯೋ ಮುಕ್ತಾಯಮಾಡಲು ಹೋಗಬೇಡಿ. ಮಹಾವಿಷ್ಣುವಿಗೆ ಪ್ರಿಯವಾದ ಹೂವಿನ ಅಲಂಕಾರ ಮಾಡಿಸಿ.
ತುಲಾ ರಾಶಿ: ರಾಶಿಯ ಅಧಿಪತಿಯಾದ ಶುಕ್ರನು ಈ ವಾರ ತೃತೀಯ ಸ್ಥಾನದಲ್ಲಿ ಗುರುವಿನ ರಾಶಿಯಲ್ಲಿ ಗುರುವಿನ ಅಂಶವನ್ನು ಪಡೆದಿದ್ದಾನೆ. ಇವರ ನಡುವೆ ಪರಸ್ಪರ ಸಾಮ್ಯತೆ ಇಲ್ಲದ ಕಾರಣ ಸಹೋದರಿಯರ ಮಧ್ಯದಲ್ಲಿ ಕಲಹ, ವಾಗ್ವಾದ ಆಗುವುದು. ಆತನ ಅನುಗ್ರಹದಿಂದ ಸಾಫಲ್ಯವನ್ನು ಕಾಣಬೇಕಿದೆ. ಕಛೇರಿಯ ಕಾರ್ಯದ ಮೇಲೆ ಮನಸ್ಸು ಕೇಂದ್ರೀಕೃತವಾಗಲಿ. ಸ್ತ್ರೀಯರ ಜೊತೆ ಸಲ್ಲಾಪ ಕಡಿಮೆಯಾಗುವುದು. ಅಂಬಿಕೆಯನ್ನು ಪೂಜಿಸುವಿರಿ.
ವೃಶ್ಚಿಕ ರಾಶಿ: ಈ ವಾರದಲ್ಲಿ ರಾಶಿಯ ಅಧಿಪತಿ ಕುಜ ನೀವನಾಗಿದ್ದರೂ ಚಂದ್ರನ ರಾಶಿಯಲ್ಲಿ ಶುಕ್ರನ ಅಂಶವನ್ನು ಪಡೆದಿದ್ದಾನೆ. ಪ್ರೇಮವು ಗೊಂದಲಕ್ಕೆ ಸಿಲುಕುವುದು. ಸಂಬಂಧವು ಆತುರದಿಂದ ತಪ್ಪಿ ಹೋಗಬಹುದು. ಅವಘಡಕ್ಕೆ ಸಿಲುಕಬೇಡಿ. ಮಾನಸಿಕವಾಗಿ ಹೇಳಿಕೊಳ್ಳಲಾಗದ ಕಿರಿ ಕಿರಿಯನ್ನು ಅನುಭವಿಸುವಿರಿ. ಮಕ್ಕಳಿಂದ ಸಂತೋಷವನ್ನು ಪಡೆಯುವಿರಿ. ಕರಕುಶಲವೃತ್ತಿಯವರು ಅತ್ಯಂತ ಪರಿಶ್ರಮವಾಗಲಿದೆ. ಲಲಿತ ಕಲೆಗಳಿಗೆ ಪೂರ್ಣಪ್ರಮಾಣದ ಸಹಕಾರ ಸಿಗದು. ಸುಬ್ರಹ್ಮಣ್ಯನ ಉಪಾಸನೆ ಮಾಡಿ.
ಧನು ರಾಶಿ: ಈ ತಿಂಗಳ ಕೊನೆಯ ವಾರದಲ್ಲಿ ರಾಶಿಯ ಅಧಿಪತಿಯಾದ ಗುರುವು ಷಷ್ಠದಲ್ಲಿ ಶುಕ್ರನ ರಾಶಿಯಲ್ಲಿ ಇರುವನು. ಆದರೆ ಚಂದ್ರ ಅಂಶ ಪಡೆದ ಕಾರಣ ಸ್ತ್ರೀಯರ ಜೊತೆ ವೈಮನಸ್ಯ ಕಾಣಿಸುವುದು. ತಾತ್ಕಾಲಿಕ ದ್ವೇಷವೂ ಉಂಟಾಗಬಹುದು. ಹಿರಿಯಯರ ಅನುಗ್ರಹವನ್ನು ಪಡೆಯಿರಿ. ಯಾವುದಾದರೂ ಆಯುಧಗಳಿಂದ, ವಾಹನಗಳಿಂದ ಗಾಯವಾಗುವ ಸಾಧ್ಯತೆ ಇದೆ. ಸಮಾರಂಭಗಳಿಗೆ ಭಾಗವಹಿಸುವಿರಿ. ಆಪ್ತರ ಭೇಟಿಯಾಗಲಿದೆ. ಕಫದ ರೋಗವೂ ನಿಮ್ಮನ್ನು ಪೀಡಿಸಬಹುದು. ಇದಂ ನ ಮಮ ಎಂಬ ಭಾವದಿಂದ ಪ್ರಾಣಿಗಳಿಗೆ ಆಹಾರ, ನೀರನ್ನು ಕೊಡಿ.
ಮಕರ ರಾಶಿ: ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿ ದ್ವಿತೀಯದಲ್ಲಿ ಗುರುವಿನ ಅಂಶದಲ್ಲಿ ಇದ್ದಾನೆ. ಕೌಟುಂಬಿಕ ವಿಷಯವನ್ನು ಇತ್ಯರ್ಥ ಮಾಡಲಾಗದೇ ಸುಮ್ಮನಾಗುವಿರಿ. ಪ್ರಣಯಕಾರಕನು ನಿಮ್ಮ ಸಂಗಾತಿಯ ನಡುವೆ ಒಳ್ಳೆಯ ಸಂಗತಿಯನ್ನೂ ಆಲಿಸಲು ಬಿಡುವುದಿಲ್ಲ. ಅಪರಿಚಿತ ವ್ಯಕ್ತಿಗಳೊಂದಿಗೆ ಅತಿ ಸಲುಗೆ ಒಳ್ಳೆಯದಲ್ಲ. ಖರ್ಚಿನ ದಾರಿಯಲ್ಲಿ ಸಾಗಬೇಕಾದ ಸ್ಥಿತಿಯಿದೆ. ನಿಮ್ಮ ಅನುಭವಗಳು, ಹಿರಿಯರ ಮಾತು ಈ ಸಮಯದಲ್ಲಿ ಹಳೆಯ, ಸದಾಕಾಲ ರಿಪೆರಿಗೆ ಬರುವ ವಾಹನದಂತೆ. ಇದೇ ಸಮಯದಲ್ಲಿ ಕೈಕೊಡುತ್ತದೆ. ಹೂಡಿಕೆಗಳು ಸುಗಂಧ ಬೀರುವ ಹೂವಿನಂತೆ ಎಂದು ಭಾವಿಸುವುದು ವ್ಯರ್ಥ. ಈ ವಾರ ಮುಳ್ಳಾಗಿಯೂ ಚುಚ್ಚಬಹುದು. ಹನುಮಾನ್ ಚಾಲೀಸ್ ಪಠಿಸಿ.
ಕುಂಭ ರಾಶಿ: ಈ ತಿಂಗಳ ನಾಲ್ಕನೇ ವಾರದಲ್ಲಿ ರಾಶಿಯ ಅಧಿಪತಿ ಶನಿ ಇದೇ ರಾಶಿಯಲ್ಲಿ ಗುರುವಿನ ಅಂಶದಲ್ಲಿ ಇದ್ದು ಲೌಕಿಕ ವಿಚಾರದಲ್ಲಿ ವೈರಾಗ್ಯ ಬರುವಂತೆ ಮಾಡುವನು. ಒತ್ತಡದಿಂದ ಹೊರಬಂದು ಸ್ವಲ್ಪ ಆರಾಮಾಗಿರುತ್ತೀರಿ. ಎಲ್ಲರೊಂದಿಗೆ ಖುಷಿಯಿಂದ ಮಾತನಾಡಲು ಮನಸ್ಸಾಗದು. ನಿಮ್ಮ ಆರಾಮಕ್ಕೆ ಇನ್ನಷ್ಟು ಪುಷ್ಟಿ ಸಿಗುವುದು. ಖರೀದಿಯನ್ನು ಮುಂದೂಡಿ. ವೃಥಾ ಖರ್ಚಿಗೆ ದಾರಿಯನ್ನು ನೀವೇ ಮಾಡಿಕೊಳ್ಳುವಿರಿ. ಸಂಗೀತ, ಚಲನಚಿತ್ರಗಳನ್ನು ಮನೆಯಲ್ಲಿಯೇ ನೋಡಿ. ಹೆಂಡತಿಯ ಅಡುಗೆಯನ್ನು ಸವಿಯುತ್ತ ದಿನ ಕಳೆಯಿರಿ. ಸಾಡೆಸಾತ್ ನ ಮಧ್ಯದಲ್ಲಿ ನೀವಿದ್ದುದರಿಂದ ದಶರಥನ ಶನಿಯ ಸ್ತೋತ್ರವನ್ನು ಪಠಿಸಿ. ಆತ ಮಂದನಾದರೂ ಅಮಂದವಾಗಿ ಒಳ್ಳೆಯದನ್ನೇ ಮಾಡುತ್ತಾನೆ.
ಮೀನ ರಾಶಿ: ನವೆಂಬರ್ ತಿಂಗಳ ನಾಲ್ಕನೇ ವಾರದಲ್ಲಿ ರಾಶಿಯ ಅಧಿಪತಿ ಗುರುವು ಶುಕ್ರನ ರಾಶಿಯಲ್ಲಿ ಇದ್ದರೂ ಚಂದ್ರನ ಅಂಶದಲ್ಲಿ ಇರುವ ಶುಭವೇ. ಮೇಲ್ನೋಟಕ್ಕೆ ವಿರೋಧದಂತೆ ಕಂಡರೂ ಕೊನೆಗೆ ಸುಖಾಂತವಾಗಲಿದೆ. ನೀವು ಎಷ್ಟೇ ಹಿರಿಯರಾಗಿದ್ದರೂ ಇನ್ನೊಬ್ಬರಿಗೆ ಸಲಹೆ, ಸೂಚನೆಗಳನ್ನು ಕೊಡಲು ಮುಂದಾಗುವುದು ಬೇಡ. ಸುಮ್ನೇ ಅಪಮಾನಕ್ಕೆ ಒಳಗಾಗುತ್ತೀರಿ. ರಾಶಿಯಲ್ಲಿ ರಾಹುವಿದ್ದು ವಿದ್ಯಾಭ್ಯಾಸಕ್ಕೆ ಅಡೆತಡೆಗಳನ್ನು ಉಂಟುಮಾಡುವನು. ಮುಖ್ಯವಾದ ನಿರ್ಧಾರದಗಳನ್ನು ತೆಗೆದುಕೊಳ್ಳುವಾಗ ಅನುಭವಿಗಳ, ಹಿರಿಯರ ಸಲಹೆಯನ್ನೂ ಪಡೆಯಿರಿ. ಏಕಮುಖ ನಿರ್ಧಾರ ಒಳ್ಳೆಯದಲ್ಲ. ವೃತ್ತಿಪರರಿಗೆ ಕಾರ್ಯಗಳು ಸುಗಮವಾಗಿ ನಡೆಯಲಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಕುಲದೇವರನ್ನು ಮರೆಯಬೇಡಿ.
ಲೋಹಿತ ಹೆಬ್ಬಾರ್-8762924271 (what’s app only)