ಬಿಹಾರ ವಿಧಾನಸಭೆಗೆ ಬಾಂಬ್ ಬೆದರಿಕೆ; ತೀವ್ರ ಶೋಧ ಕಾರ್ಯಾಚರಣೆ ಆರಂಭ
ಬಿಹಾರ ವಿಧಾನಸಭೆ ಮತ್ತು ಪಾಟ್ನಾ ಸಿವಿಲ್ ನ್ಯಾಯಾಲಯವನ್ನು ಆರ್‌ಡಿಎಕ್ಸ್ ಬಳಸಿ ಸ್ಫೋಟಿಸುವ ಬೆದರಿಕೆ ಬಂದಿದೆ. ಇಮೇಲ್ ಮೂಲಕ ಈ ಬೆದರಿಕೆಯನ್ನು ಹಾಕಲಾಗಿದೆ. ಇದು ವ್ಯಾಪಕ ಭೀತಿಯನ್ನು ಉಂಟುಮಾಡಿದೆ. ಪಾಟ್ನಾ ಪೊಲೀಸರು, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ಇಡೀ ಆವರಣದಲ್ಲಿ ಶೋಧ ನಡೆಸುತ್ತಿದ್ದಾರೆ. ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.ಬಿಹಾರ ವಿಧಾನಸಭಾ ಕಟ್ಟಡದಲ್ಲಿ ಮಧ್ಯಾಹ್ನ 2:15ಕ್ಕೆ ಸರಿಯಾಗಿ 13 ಆರ್‌ಡಿಎಕ್ಸ್ ಐಇಡಿಗಳು ಸೈನೈಡ್ ಅನಿಲದೊಂದಿಗೆ ಬೆರೆಸಿ ಸ್ಫೋಟಗೊಳ್ಳಲು ಸಿದ್ಧವಾಗಿವೆ ಎಂದು ಇ-ಮೇಲ್‌ನಲ್ಲಿ ಬರೆಯಲಾಗಿತ್ತು.

ಪಾಟ್ನಾ, ಏಪ್ರಿಲ್ 10: ಬಿಹಾರ ವಿಧಾನಸಭೆಗೆ (Bihar Assembly) ಇಂದು ಇಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2 ದಿನಗಳ ಹಿಂದಷ್ಟೇ ದೆಹಲಿ ವಿಧಾನಸಭೆ ಆವರಣದೊಳಗೆ ಕಾರಿನಲ್ಲಿ ನುಗ್ಗಿದ್ದ ವ್ಯಕ್ತಿಯೊಬ್ಬ ಸ್ಪೀಕರ್ ಕಚೇರಿ ಬಳಿ ಹೂವಿನ ಬೊಕ್ಕೆ ಇಟ್ಟು ಹೋಗಿದ್ದ. ಆತನನ್ನು ಬಂಧಿಸಲಾಗಿತ್ತು. ದೆಹಲಿ ವಿಧಾನಸಭೆಗೂ ಬಾಂಬ್ ಬೆದರಿಕೆ ಬಂದಿತ್ತು. ಅದರ ಬೆನ್ನಲ್ಲೇ ಇದೀಗ ಬಿಹಾರ ವಿಧಾನಸಭೆಗೂ ಬಾಂಬ್ ಬೆದರಿಕೆ ಬಂದಿರುವುದರಿಂದ ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆದಿದೆ.
“ಬಿಹಾರ ವಿಧಾನಸಭೆ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಇರುವ ಇಮೇಲ್ ಬಂದಿದೆ ಎಂದು ನಮಗೆ ಮಾಹಿತಿ ಬಂದಿದೆ. ಪೊಲೀಸರು ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು
ಬಾಂಬ್ ಮತ್ತು ಶ್ವಾನ ದಳದ ತಂಡಗಳನ್ನು ನಿಯೋಜಿಸಲಾಗಿದ್ದು, ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಮಾರ್ಚ್ 13ರಂದು ಕೂಡ ವಿಧಾನಸಭೆಗೆ ಇದೇ ರೀತಿಯ ಬೆದರಿಕೆ ಬಂದಿತ್ತು. ಆದರೆ ಅದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿತ್ತು. ಗುರುವಾರ ದೆಹಲಿ ವಿಧಾನಸಭೆಗೆ ಕೂಡ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ಪ್ರಮುಖ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




