
ಪಾಟ್ನಾ, ಅಕ್ಟೋಬರ್ 19: ಬಿಹಾರ ವಿಧಾನಸಭಾ ಚುನಾವಣೆ(Bihar Assembly Election)ಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡ ಮಾಜಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಪುತ್ರ ಅರ್ಜಿತ್ ಶಾಶ್ವತ್ ಚೌಬೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಹೋಗಿ ವಾಪಸಾಗಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಅರ್ಜಿತ್ ನಾಪಪತ್ರ ಸಲ್ಲಿಸಲು ಹೋದಾಗ ಅವರಿಗೆ ಬಂದ ಒಂದೇ ಒಂದು ಕರೆ ಪೂರ್ಣ ನಿರ್ಧಾರವನ್ನೇ ಬದಲಿಸಿತು.
ಅಭ್ಯರ್ಥಿಯು ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ತಲುಪುತ್ತಿದ್ದಂತೆ ಕರೆ ಬಂದಿತ್ತು. ಬೆಂಬಲಿಗರು ಅವರನ್ನು ಹಾರ ಹಾಕಿ ಪ್ರೋತ್ಸಾಹಿಸಿದ್ದರು. ಬಳಿಕ ಫೋನ್ ರಿಂಗಾಗಿತ್ತು. ಅವರೊಂದಿಗೆ ಮಾತನಾಡಲು ಕಾಯುತ್ತಿದ್ದ ವರದಿಗಾರರ ಮುಂದೆ ಅವರು ಕರೆ ಸ್ವೀಕರಿಸಿದರು.
ಸ್ವಲ್ಪ ಸಮಯದ ಬಳಿಕ ಅಭ್ಯರ್ಥಿ ದಾಖಲೆಗಳನ್ನು ಸಲ್ಲಿಸದೆ ಹಿಂದಿರುಗಿದ್ದಾರೆ. ತನ್ನ ತಂದೆ ಅಶ್ವಿನಿ ಚೌಬೆ ಅವರು ಕರೆ ಮಾಡಿ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾಗಿ ಅವರು ಹೇಳಿದರು. ನೀವು ಬಿಜೆಪಿಯಲ್ಲಿದ್ದೀರಿ ಮತ್ತು ಬಿಜೆಪಿಯಲ್ಲಿಯೇ ಇರುತ್ತೀರಿ ಎಂದು ತಂದೆ ಹೇಳಿರುವ ಬಗ್ಗೆ ಮಾತನಾಡಿದರು.
ಮತ್ತಷ್ಟು ಓದಿ: Bihar Election 2025 Schedule: ಬಿಹಾರದಲ್ಲಿ ನವೆಂಬರ್ 6, 11ರಂದು 2 ಹಂತದಲ್ಲಿ ವಿಧಾನಸಭಾ ಚುನಾವಣೆ
ತಮ್ಮ ತಂದೆಯ ಆಶಯಗಳನ್ನು ಗೌರವಿಸಿ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಘೋಷಿಸಿದಾಗಿನಿಂದ ಬಿಜೆಪಿಯ ಉನ್ನತ ನಾಯಕತ್ವದಿಂದ ಅವರು ನಿರಂತರ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಚೌಬೆ ಹೇಳಿದರು. ಇಂದು, ನನ್ನ ತಂದೆ ಮತ್ತು ನನ್ನ ತಾಯಿ ಕೂಡ ನನ್ನೊಂದಿಗೆ ಮಾತನಾಡಿದರು.
ಇದು ಬಿಜೆಪಿಯ ಉನ್ನತ ನಾಯಕತ್ವದ ಸೂಚನೆಯಾಗಿತ್ತು.ನಾನು ಅವರಿಗೆ ಹೇಗೆ ಇಲ್ಲ ಎಂದು ಹೇಳಲು ಸಾಧ್ಯ, ನನ್ನ ಪಕ್ಷ ಮತ್ತು ದೇಶದ ವಿರುದ್ಧ ನಾನು ದಂಗೆ ಏಳಲು ಅಥವಾ ಅವರನ್ನು ವಿರೋಧಿಸಲು ಸಾಧ್ಯವಿಲ್ಲ ಎಂದರು.
ಗುರುವಾರ ಬಿಜೆಪಿ ಪಕ್ಷವು ರೋಹಿತ್ ಪಾಂಡೆ ಅವರನ್ನು ಮತ್ತೆ ಅಭ್ಯರ್ಥಿಯನ್ನಾಗಿ ಹೆಸರಿಸಿದ ನಂತರ ಅದರಲ್ಲಿ ಗೊಂದಲ ಉಂಟಾಯಿತು. ಅರ್ಜಿತ್ ಚೌಬೆ ಅವರು 1995 ರಿಂದ 2010 ರವರೆಗೆ ತಮ್ಮ ತಂದೆ ಪ್ರತಿನಿಧಿಸಿದ್ದ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತವನ್ನು ಘೋಷಿಸಿದ್ದರು. ಕಳೆದ ಮೂರು ಅವಧಿಗಳಿಂದ, ಕಾಂಗ್ರೆಸ್‌ನ ಅಜೀತ್ ಶರ್ಮಾ ರಾಜ್ಯ ವಿಧಾನಸಭೆಯಲ್ಲಿ ಆಗ್ನೇಯ ಬಿಹಾರದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಟಿಕೆಟ್ ಪಡೆದು ಹಿಂತಿರುಗಿದ ನಂತರ, ರೋಹಿತ್ ಪಾಂಡೆ ಮೊದಲು ಅಶ್ವಿನಿ ಚೌಬೆ ಅವರೊಂದಿಗೆ ಮಾತನಾಡಿ ಅವರ ಆಶೀರ್ವಾದ ಪಡೆದರು. ಚೌಬೆ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಭರವಸೆ ನೀಡಿದರು. ಇದರ ನಂತರ, ಬಿಜೆಪಿ ಚೌಬೆಯನ್ನು ತನ್ನ ಸ್ಟಾರ್ ಪ್ರಚಾರಕ ಎಂದು ಘೋಷಿಸಿತು. ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ