ಪಾಟ್ನಾ: ಬಿಹಾರದಲ್ಲಿ ಇಂದು ಸಚಿವ ಸಂಪುಟ (Bihar Cabinet Expansion) ವಿಸ್ತರಣೆಯಾಗಲಿದೆ. ಸದ್ಯಕ್ಕೆ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashvi Yadav) ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಿಎಂ ನಿತೀಶ್ ಕುಮಾರ್ ಇಂದು ತಮ್ಮ ದ್ವಿಸದಸ್ಯ ಸಚಿವ ಸಂಪುಟವನ್ನು ವಿಸ್ತರಿಸಲಿದ್ದು, ತಮ್ಮ ಮೈತ್ರಿ ಪಕ್ಷವಾದ ಆರ್‌ಜೆಡಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯಿದೆ. ಇಂದು ಒಟ್ಟು 31 ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಆರ್‌ಜೆಡಿ, ಕಾಂಗ್ರೆಸ್ ಮತ್ತು ಜಿತನ್ ರಾಮ್ ಮಾಂಝಿ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಸೇರಿದಂತೆ ಮಹಾಘಟಬಂಧನ್ (ಮಹಾಮೈತ್ರಿಕೂಟ) ಭಾಗವಾಗಿರುವ ವಿವಿಧ ಪಕ್ಷಗಳಿಂದ ಒಟ್ಟು 31 ಸಚಿವರು ಇಂದು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಪಾಟ್ನಾದ ರಾಜಭವನದಲ್ಲಿ ಇಂದು ಬೆಳಗ್ಗೆ 11.30ರ ಸುಮಾರಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಇಂದು ಸಚಿವ ಸಂಪುಟಕ್ಕೆ ವಿಜಯ್ ಕುಮಾರ್ ಚೌಧರಿ, ಅಶೋಕ್ ಚೌಧರಿ, ಸಂಜಯ್ ಝಾ, ಮದನ್ ಸಾಹ್ನಿ, ಜಯಂತ್ ರಾಜ್, ಶೀಲಾ ಮಂಡಲ್, ಬಿಜೇಂದ್ರ ಯಾದವ್, ಶ್ರವಣ್ ಕುಮಾರ್, ಸುನಿಲ್ ಕುಮಾರ್ ಮತ್ತು ಜಮಾ ಖಾನ್ ಸೇರಿದಂತೆ ಜೆಡಿಯು ಪಕ್ಷದ ಎಲ್ಲಾ ಸಚಿವರನ್ನು ನಿತೀಶ್ ಕುಮಾರ್ ಸಂಪುಟದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಆರ್‌ಜೆಡಿಯಿಂದ ತೇಜ್ ಪ್ರತಾಪ್ ಯಾದವ್, ಸುರೇಂದ್ರ ಯಾದವ್, ಲಲಿತ್ ಯಾದವ್, ಕುಮಾರ್ ಸರ್ವಜೀತ್, ಸುರೇಂದ್ರ ರಾಮ್, ಶಹನವಾಜ್ ಆಲಂ, ಸಮೀರ್ ಮಹಾಸೇತ್, ಭಾರತ್ ಮಂಡಲ್, ಅನಿತಾ ದೇವಿ ಮತ್ತು ಸುಧಾಕರ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: ನಿತೀಶ್ ಕುಮಾರ್ನ್ನು ಉಪರಾಷ್ಟ್ರಪತಿ ಮಾಡಿ ಎಂದಿದ್ದರು ಜೆಡಿಯು ನಾಯಕರು: ಬಿಜೆಪಿ
ಕಾಂಗ್ರೆಸ್‌ನಿಂದ ಅಫಾಕ್ ಆಲಂ ಮತ್ತು ಮುರಾರಿ ಲಾಲ್ ಗೌತಮ್ ಮತ್ತು ಎಚ್‌ಎಎಂನಿಂದ ಸಂತೋಷ್ ಸುಮನ್ ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏಕೈಕ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಿತ್ ಕುಮಾರ್ ಸಿಂಗ್ ಕೂಡ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಮುಂದಿನ ಸಂಪುಟ ವಿಸ್ತರಣೆಗಾಗಿ ಕೆಲವು ಸಚಿವ ಸ್ಥಾನಗಳನ್ನು ಖಾಲಿ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ. ನಿತೀಶ್ ಕುಮಾರ್ ಬಿಜೆಪಿಯಿಂದ ಬೇರ್ಪಟ್ಟು ಈ ತಿಂಗಳ ಆರಂಭದಲ್ಲಿ ಆರ್‌ಜೆಡಿ ಮತ್ತು ಇತರ ಪಕ್ಷಗಳೊಂದಿಗೆ ಸರ್ಕಾರ ರಚಿಸಿದ್ದರು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಉಪಮುಖ್ಯಮಂತ್ರಿಯಾಗಿ ಆರ್‌ಜೆಡಿಯ ತೇಜಸ್ವಿ ಯಾದವ್ ಆ. 10ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.
ಆಗಸ್ಟ್ 10ರಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ದಾಖಲೆಯ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಎಲ್ಲ ಪ್ರಮುಖ ಗೃಹ ಖಾತೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ, ಆರ್‌ಜೆಡಿ ಹೆಚ್ಚಿನ ಖಾತೆಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಹಾರ ವಿಧಾನಸಭೆಯಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಆರ್‌ಜೆಡಿ 16 ಸಚಿವ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಜೆಡಿಯು 11 ಸ್ಥಾನಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: 10 ಲಕ್ಷ ಉದ್ಯೋಗ, 20 ಲಕ್ಷ ಉದ್ಯೋಗಾವಕಾಶ: ಬಿಹಾರ ಸಿಎಂ ನಿತೀಶ್ ಕುಮಾರ್ ಘೋಷಣೆ
2013ರಲ್ಲಿ ನರೇಂದ್ರ ಮೋದಿ ಸಮ್ಮಿಶ್ರ ಸರ್ಕಾರದ ಪ್ರಧಾನಿ ಅಭ್ಯರ್ಥಿಯಾದ ನಂತರ ಸಿಎಂ ನಿತೀಶ್ ಕುಮಾರ್ ಮೊದಲ ಬಾರಿಗೆ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ತೊರೆದಿದ್ದರು. 2017ರಲ್ಲಿ ಮತ್ತೆ ಆರ್‌ಜೆಡಿ-ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತೊರೆದು ಮತ್ತೆ ಎನ್‌ಡಿಎ ಪಾಳಯ ಸೇರಿಕೊಂಡಿದ್ದರು.
ಬಿಜೆಪಿ ತನ್ನ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ನಿತೀಶ್ ಕುಮಾರ್ ಆರೋಪಿಸಿದ್ದರು. ಅಲ್ಲದೆ, ಮಾಜಿ ಕೇಂದ್ರ ಸಚಿವ ಮತ್ತು ಜೆಡಿಯು ನಾಯಕ ಆರ್‌ಸಿಪಿ ಸಿಂಗ್ ಕೇಸರಿ ಪಾಳಯದೊಂದಿಗೆ ಶಾಮೀಲಾಗಿದ್ದಾರೆ ಎಂದು ಶಂಕಿಸಿದ್ದರು. ಇದಾದ ನಂತರ ಜೆಡಿಯು- ಬಿಜೆಪಿ ನಡುವಿನ ಜಗಳ ಹೆಚ್ಚಾಗಿತ್ತು.