ಪಾಟ್ನಾ: ಬಿಹಾರದಲ್ಲಿ ಕಳೆದ ಮಂಗಳವಾರ ನಡೆದ ಇಂಡಿಗೋ ಏರ್ಲೈನ್ ಸಿಬ್ಬಂದಿ ಹತ್ಯೆಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಿಡಿಕಾರಿದ್ದಾರೆ. ಮಾಧ್ಯಮದವರ ಪ್ರಶ್ನೆಯೇ ಸರಿಯಿಲ್ಲ ಮತ್ತು ಅಸಮಂಜಸವಾದದ್ದು ಎಂಬರ್ಥದಲ್ಲಿ ರೇಗಾಡಿರುವ ನಿತೀಶ್ ಕುಮಾರ್ ನಿಮ್ಮ ಬಳಿ ಏನಾದರೂ ಮಾಹಿತಿ ಇದ್ದರೆ, ಹೋಗಿ ಪೊಲೀಸರೊಂದಿಗೆ ಹಂಚಿಕೊಳ್ಳಿ ಎನ್ನುವ ಮೂಲಕ ಮಾಧ್ಯಮ ಪ್ರತಿನಿಧಿಗಳ ಮೇಲೆಯೇ ತಿರುಗಿಬಿದ್ದಿದ್ದಾರೆ.
ನೀವು ಮಹಾನ್ ವ್ಯಕ್ತಿಗಳು. ಆದರೂ ನಿಮ್ಮನ್ನು ನೇರವಾಗಿ ಕೇಳುತ್ತೇನೆ. ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ? ಎಂದು ವ್ಯಂಗ್ಯವಾಡಿದ್ದಾರೆ. ಮಾಧ್ಯಮದವರು ಕಾನೂನು ಪಾಲನೆಯ ಕುರಿತಾಗಿ ಕೇಳಿದ ಪ್ರಶ್ನೆಗೆ ಆಕ್ರೋಶಗೊಂಡ ನಿತೀಶ್ ಕುಮಾರ್ 15 ವರ್ಷಗಳ ಕಾಲ ಗಂಡ-ಹೆಂಡತಿ ಇಬ್ಬರೂ ಅಧಿಕಾರದಲ್ಲಿದ್ದಾಗ ಎಷ್ಟೊಂದು ಅಪರಾಧಗಳಾಗಿದ್ದವು. ಅದನ್ನೇಕೆ ನೀವು ತೋರಿಸಲಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿಯನ್ನು ಕುಟುಕಿದ್ದಾರೆ.
ರಾಜ್ಯದಲ್ಲಿ ಏನೇ ಅವಘಡ ಆದರೂ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ, ನಿಮ್ಮ ಬಗ್ಗೆ ನಮಗೆ ಗೌರವವಿದೆ. ಆದರೆ, ನಿಮಗೆ ಸಲಹೆ ಕೊಡುವವರಿಗೆ ಸೂಕ್ತ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಕೊಲೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳೊಂದಿಗೆ ಮೈತ್ರಿಪಕ್ಷ ಬಿಜೆಪಿಯೂ ನಿತೀಶ್ ಕುಮಾರ್ ಅವರ ಮೇಲೆ ಒತ್ತಡ ಹೇರುತ್ತಿವೆ.
ಪ್ರಧಾನ ಕಾರ್ಯದರ್ಶಿಯಿಂದ ಜೆಡಿಯು ಅಧ್ಯಕ್ಷ ಸ್ಥಾನದವರೆಗೆ; ನಿತೀಶ್ ಆಪ್ತ ಆರ್ಸಿಪಿ ಸಿಂಗ್ ರಾಜಕೀಯ ಪಯಣ