ದೆಹಲಿ: ಕೆಲವು ದಿನಗಳ ಹಿಂದೆ ಬಿಹಾರದ ರೈತನೊಬ್ಬ ಹೊಪ್ ಶೂಟ್ಸ್ ಎಂಬ ವಿಶೇಷ ಬೆಳೆಯನ್ನು ಬೆಳೆದಿದ್ದಾರೆ. ಇದು ಜಗತ್ತಿನ ಅತ್ಯಂತ ದುಬಾರಿ ತರಕಾರಿಯಾಗಿದ್ದು, 1 ಕೆಜಿಗೆ 1 ಲಕ್ಷ ರೂಪಾಯಿ ಬೆಲೆಬಾಳುತ್ತದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗಿತ್ತು. ಬರೀ ಸಾಮಾಜಿಕ ಜಾಲತಾಣಗಳಷ್ಟೇ ಅಲ್ಲದೆ, ಪ್ರಮುಖ ಮಾಧ್ಯಮಗಳೂ ಇದನ್ನು ವರದಿ ಮಾಡಿದ್ದವು. ಅಲ್ಲದೆ, ಈ ಬೆಳೆಯನ್ನು ಬಿಹಾರದ ಔರಂಗಾಬಾದ್ ಜಿಲ್ಲೆ ಕರಮ್ನಿಧಿ ಗ್ರಾಮದ 38 ವರ್ಷದ ರೈತ ಅಮರೇಶ್ ಸಿಂಗ್ ಬೆಳೆದಿದ್ದಾರೆ. ಹೊಪ್ ಶೂಟ್ಸ್ ಬೆಳೆದ ಮೊದಲ ಭಾರತೀಯ ರೈತ ಇವರು ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವೀಟ್ ಮಾಡಿ, ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದರು.
ಮಾರ್ಚ್ 31ರಂದು ಸುಪ್ರಿಯಾ ಅವರು ಮಾಡಿದ್ದ ಟ್ವೀಟ್ ಸಿಕ್ಕಾಪಟೆ ವೈರಲ್ ಆಗಿತ್ತು. 5000 ಬಾರಿ ರೀಟ್ವೀಟ್ ಆಗಿತ್ತು. ಅದನ್ನೇ ಇಟ್ಟುಕೊಂಡು ಹಲವು ಮಾಧ್ಯಮಗಳೂ ಸುದ್ದಿ ಮಾಡಿದ್ದವು. ಆದರೆ ಇದೊಂದು ಪಕ್ಕಾ ಸುಳ್ಳುಸುದ್ದಿ ಎಂಬುದೀಗ ಬಯಲಾಗಿದೆ. ಹಿಂದಿ ದಿನಪತ್ರಿಕೆ ದೈನಿಕ್ ಜಾಗರಣ್ದ ತಂಡವೊಂದು ಅಮರೇಶ್ ಸಿಂಗ್ ಅವರ ಕರಮ್ನಿಧಿ ಗ್ರಾಮಕ್ಕೆ ಭೇಟಿ ನೀಡಿದಾಗ, ಅಲ್ಲಿ ಯಾವುದೇ ಹಾಪ್ಶೂಟ್ಸ್ ಬೆಳೆಯೂ ಕಂಡುಬಂದಿಲ್ಲ. ಈ ಬಗ್ಗೆ ಪತ್ರಿಕೆಯ ತಂಡ ಸ್ಥಳೀಯರನ್ನೂ ಮಾತನಾಡಿಸಿದೆ. ಅವರೂ ಸಹ ಇಲ್ಲಿ ಯಾರೂ ಹೊಪ್ ಶೂಟ್ಸ್ ತರಕಾರಿ ಬೆಳೆದಿಲ್ಲ. ಅಂಥ ಹೆಸರನ್ನು ಎಲ್ಲಿಯೂ ಕೇಳಿಯೂ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಅಮರೇಶ್ ಸಿಂಗ್ ಫೋನ್ ನಂಬರ್ ತೆಗೆದುಕೊಂಡು ಕರೆ ಮಾಡಿದಾಗ, ನನ್ನ ಊರು ಕರಮ್ನಿಧಿ. ಆದರೆ ನಾನು ಹೊಪ್ ಶೂಟ್ಸ್ ಬೆಳೆದಿದ್ದು ನಲಂದಾ ಜಿಲ್ಲೆಯಲ್ಲಿ ಎಂದು ಹೇಳಿದ್ದಾರೆ. ಪತ್ರಿಕೆಯ ಸಿಬ್ಬಂದಿ ಅಲ್ಲಿಗೂ ಹೋಗಿದ್ದಾರೆ. ಆದರೆ ಅಲ್ಲಿ ಕೂಡ ಹೊಪ್ ಶೂಟ್ಸ್ ಕಂಡುಬಂದಿಲ್ಲ. ನಲಂದಾದಿಂದ ಅಮರೇಶ್ಗೆ ಕರೆ ಮಾಡಿದರೆ, ತರಕಾರಿ ಬೆಳೆದಿದ್ದು ಔರಂಗಾಬಾದ್ನಲ್ಲಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹೊಪ್ ಶೂಟ್ಸ್ ಬೆಳೆಯ ಬಗ್ಗೆ ಔರಂಗಾಬಾದ್ ಜಿಲ್ಲಾಧಿಕಾರಿ ಸೌರಭ್ ಜೋರ್ವಲ್ ಅವರನ್ನು ದೈನಿಕ್ ಜಾಗರಣ್ ಸಂಪರ್ಕಿಸಿದಾಗ, ಔರಂಗಾಬಾದ್ನಲ್ಲಿ ಆ ಬೆಳೆಯನ್ನು ಯಾರೂ ಬೆಳೆದಿಲ್ಲ. ಅಮರೇಶ್ ಅವರು ಕಪ್ಪು ಅಕ್ಕಿ, ಗೋಧಿಯನ್ನು ಬೆಳೆದಿದ್ದಾರೆ ಹೊರತು, ಹೊಪ್ ಶೂಟ್ಸ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬಿಹಾರದ ರೈತ ಬೆಳೆದ ಈ ಬೆಳೆ 1 ಕೆಜಿಗೆ 1 ಲಕ್ಷ ರೂಪಾಯಿ: ಸೋಷಿಯಲ್ ಮೀಡಿಯಾದಲ್ಲಿ ಫುಲ್ ಹವಾ
Published On - 8:21 pm, Sun, 4 April 21