ನವದೆಹಲಿ: 2002ರ ಗುಜರಾತ್ ಗಲಭೆಯ (Gujarat Riots) ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ (Bilkis Bano) ಎಂಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಕುಟುಂಬಸ್ಥರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆದರೆ, ಆ ಅಪರಾಧಿಗಳನ್ನು ಅವಧಿಗೂ ಮೊದಲೇ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು ಎಂದು ಗುಜರಾತ್ ಸರ್ಕಾರ (Gujarat Government) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದೆ.
ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಂದ 11 ಮಂದಿ ಅಪರಾಧಿಗಳು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾಗಲೇ ಸಾವಿರ ದಿನಗಳ ಕಾಲ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಈ ಪ್ರಕರಣದ 11 ಆರೋಪಿಗಳು 14 ವರ್ಷಗಳ ಶಿಕ್ಷೆಯನ್ನು ಪೂರ್ತಿಗೊಳಿಸಿದ್ದರಿಂದ ಅವರ ಉತ್ತಮ ನಡವಳಿಕೆಯ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತು ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಈ ಬಗ್ಗೆ ಜುಲೈ 11ರಂದು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿತ್ತು ಎಂದು ಗುಜರಾತ್ ಸರ್ಕಾರ ಹೇಳಿದೆ.
ಕೇಂದ್ರದ ಅನುಮೋದನೆಯ ನಂತರ ಈ ವರ್ಷದ ಆರಂಭದಲ್ಲಿ ಬಿಲ್ಕಿಸ್ ಬಾನೋ ಅತ್ಯಾಚಾರದ ಅಪರಾಧಿಗಳನ್ನು ಅವಧಿಗೂ ಮೊದಲೇ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಆದರೆ ಸಿಬಿಐ ಮತ್ತು ವಿಶೇಷ ನ್ಯಾಯಾಲಯವು ಸಾಮೂಹಿಕ ಅತ್ಯಾಚಾರ ಮತ್ತು ಕೊನೆಯಂತಹ ಘೋರ ಅಪರಾಧ ಎಸಗಿದ್ದಕ್ಕಾಗಿ ಆ ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿದೆ.
ಇದನ್ನೂ ಓದಿ: BIG NEWS ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: ಅಪರಾಧಿಗಳ ಬಿಡುಗಡೆ ಕುರಿತು ಸುಪ್ರೀಂಕೋರ್ಟ್ ವಿಚಾರಣೆ
ಜುಲೈ 11ರಂದು ರಾಜ್ಯ ಸರ್ಕಾರ ಅನುಮೋದನೆಯನ್ನು ಕೋರಿದ 2 ವಾರಗಳಲ್ಲಿ ಗೃಹ ಸಚಿವಾಲಯದ ಅನುಮತಿ ಸಿಕ್ಕಿದೆ ಎಂದು ದಾಖಲೆಗಳು ತೋರಿಸಿವೆ. ಆ ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 3 ಅರ್ಜಿಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
“ಇದು ದ್ವೇಷದ ಅಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ” ಎಂದು ವಿಶೇಷ ನ್ಯಾಯಾಧೀಶ ಆನಂದ್ ಎಲ್ ಯಾವಲ್ಕರ್ ಕಳೆದ ವರ್ಷ ಮಾರ್ಚ್‌ನಲ್ಲಿ ಗೋಧ್ರಾ ಉಪ ಕಾರಾಗೃಹದ ಅಧೀಕ್ಷಕರಿಗೆ ಬರೆದ ಪತ್ರದಲ್ಲಿ ಹೇಳಿದ್ದರು.
ಏನಿದು ಘಟನೆ?:
ಗುಜರಾತ್ ಕೋಮು ಗಲಭೆಯ ವೇಳೆ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಅವರ ಕುಟುಂಬದ 7 ಮಂದಿಯನ್ನು ಕೊಲೆ ಮಾಡಲಾಗಿತ್ತು. ಆಗ ಅವರಿಗೆ ಕೇವಲ 21 ವರ್ಷವಾಗಿತ್ತು. ಈ ಅವಧಿಯಲ್ಲಿ ಬಿಲ್ಕಿಸ್ ಬಾನೋ 5 ತಿಂಗಳ ಗರ್ಭಿಣಿಯಾಗಿದ್ದರು. ಅವರ 3 ವರ್ಷದ ಮಗಳನ್ನೂ ಕೊಲ್ಲಲಾಗಿತ್ತು. ಅತ್ಯಾಚಾರದ ನಂತರದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮಹಿಳೆಗೆ ಎಚ್ಚರಗೊಂಡ ನಂತರದಲ್ಲಿ ಬಿಲ್ಕಿಸ್ ಬುಡಕಟ್ಟು ಮಹಿಳೆಯಿಂದ ಬಟ್ಟೆಯನ್ನು ಪಡೆದುಕೊಂಡರು. ನಂತರ ದಾಹೋದ್ ಜಿಲ್ಲೆಯ ಲಿಮ್ಖೇಡಾ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದರು. ಆದರೆ ಅಂದು ಅಲ್ಲಿನ ಹೆಡ್ ಕಾನ್‌ಸ್ಟೆಬಲ್ ಸತ್ಯವನ್ನು ಮುಚ್ಚಿಟ್ಟು ದೂರನ್ನು ಮೊಟಕುಗೊಳಿಸಿದ್ದರು. ನಂತರ ಈ ಪ್ರಕರಣ ದೇಶಾದ್ಯಂತ ಸುದ್ದಿಯಾದ ಬಳಿಕ ಹೆಚ್ಚು ಮಹತ್ವ ಪಡೆದುಕೊಂಡಿತ್ತು.
ಇದನ್ನೂ ಓದಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ: ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ
ಮುಂಬೈನ ಸಿಬಿಐ ಕೋರ್ಟ್ ಜನವರಿ 21, 2008ರಂದು ಈ ಪ್ರಕರಣಕ್ಕೆ ಸಂಬಂಧಿಸಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಬಾಂಬೆ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿತ್ತು. 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಜನರು 14 ವರ್ಷಗಳಿಂದ ಜೈಲಿನಲ್ಲಿದ್ದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅವರ ನಡವಳಿಕೆ ಉತ್ತಮವಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ 3 ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ವರದಿ ಸಲ್ಲಿಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿತ್ತು.