ಭಾರತದಲ್ಲಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಮಿಷನ್ ಅಂದರೆ ಡಿಜಿಟಲ್ ಆರೋಗ್ಯ ಐಡಿ (Digital Health ID System) ವ್ಯವಸ್ಥೆಯನ್ನು ಬಿಲಿಯನೇರ್ ಬಿಲ್ಗೇಟ್ಸ್ ಶ್ಲಾಘಿಸಿದ್ದಾರೆ. ಟ್ವೀಟ್ ಮಾಡಿರುವ ಬಿಲ್ಗೇಟ್ಸ್ (Bill Gates), ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್(Ayushman Bharat Digital Mission)ಗೆ ಚಾಲನೆ ನೀಡಿದ ಪ್ರಧಾನಿ ಮೋದಿ (PM Narendra Modi)ಯವರು ಅಭಿನಂದನಾರ್ಹರು. ಈ ಡಿಜಿಟಲ್ ಆರೋಗ್ಯ ಮೂಲಸೌಕರ್ಯ ಜನರಿಗೆ ನ್ಯಾಯಯುತವಾದ, ಕೈಗೆಟಕಬಹುದಾದ ಆರೋಗ್ಯ ವ್ಯವಸ್ಥೆಯನ್ನು ಒದಗಿಸುತ್ತದೆ. ಹಾಗೇ, ಭಾರತದ ಆರೋಗ್ಯ ಕ್ಷೇತ್ರದ ಸುಧಾರಣೆಯ ಗುರಿಯಲ್ಲಿ ಇನ್ನಷ್ಟು ಪ್ರಗತಿ ತರುತ್ತದೆ ಎಂದು ಹೇಳಿದ್ದಾರೆ.
Congratulations @narendramodi on the national launch of Ayushman Bharat Digital Mission. This digital health infrastructure will help ensure equitable, accessible healthcare delivery and accelerate progress on India’s health goals. @PMOIndia @MoHFW_INDIA https://t.co/FbfKyNSfXI
— Bill Gates (@BillGates) September 28, 2021
ಇನ್ನು ಬಿಲ್ಗೇಟ್ಸ್ ಅವರ ಟ್ವೀಟ್ಗೆ ಪ್ರತಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಆಯಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ನಿಮಗೆ ಧನ್ಯವಾದಗಳು. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ತಂತ್ರಜ್ಞಾನ ಸದುಪಯೋಗಪಡಿಸಿಕೊಳ್ಳಲು ಅಪಾರ ಅವಕಾಶವಿದೆ ಮತ್ತು ಭಾರತವೂ ಇದೇ ದಿಸೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸೋಮವಾರ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ನ್ನು ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಈ ಯೋಜನೆಯಡಿ ರಾಷ್ಟ್ರಾದ್ಯಂತ ಪ್ರತಿ ಭಾರತೀಯನಿಗೂ ಒಂದು ಆರೋಗ್ಯ ಐಡಿ ನೀಡಲಾಗುತ್ತದೆ. ಅದರಲ್ಲಿ ಆಯಾ ನಾಗರಿಕನ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳೂ ಇರಲಿವೆ. ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಡಿಜಿಟಲ್ ಮಿಷನ್ನಿಂದ ಆಸ್ಪತ್ರೆಗಳಲ್ಲಿ ಕೆಲಸಗಳು ಸರಳೀಕರಣಗೊಳ್ಳುವ ಜತೆಗೆ, ಸಾಮಾನ್ಯ ಜನರಿಗೂ ಅನುಕೂಲ ಹೆಚ್ಚು ಮಾಡುತ್ತವೆ. ಈ ಯೋಜನೆಯಡಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಒಂದು ಆರೋಗ್ಯ ಐಡಿ ಸಿಗುತ್ತದೆ. ಅದರಲ್ಲಿರುವ ದಾಖಲೆಗಳನ್ನು ಡಿಜಿಟಲಿ ಸಂರಕ್ಷಿಸಲಾಗುತ್ತದೆ ಎಂದು ಹೇಳಿದ್ದರು.
Published On - 10:17 am, Thu, 30 September 21