Odisha: 15 ವರ್ಷಗಳ ನಂತರ ಎನ್​ಡಿಎ ತೆಕ್ಕೆಗೆ ಮರಳಲಿರುವ ಬಿಜು ಜನತಾ ದಳ; ಕಾರಣ ಇದು

|

Updated on: Mar 07, 2024 | 12:52 PM

BJD-BJP Alliance: ಬಿಜು ಜನತಾ ದಳ ಮತ್ತು ಬಿಜೆಪಿ ನಡುವೆ ಚುನಾವಣಾ ಪೂರ್ವ ಮೈತ್ರಿ ಏರ್ಪಡಬಹುದು ಎನ್ನುವ ಸುದ್ದಿ ದಟ್ಟವಾಗಿದೆ. 15 ವರ್ಷಗಳ ಬಳಿಕ ಬಿಜೆಡಿ ಎನ್​ಡಿಎ ಮೈತ್ರಿಕೂಟದ ತೆಕ್ಕೆಗೆ ಮರಳುತ್ತಿರುವಂತಿದೆ. ಒಡಿಶಾ ಸಿಎಂ ನವೀನ್ ಪಟ್ನಾಯಕ್ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರ ಸಭೆ ನಡೆಸಿದ್ದಾರೆ. ಒಡಿಶಾದ ಬಿಜೆಪಿ ನಾಯಕರೂ ಕೂಡ ದೆಹಲಿಯಲ್ಲಿ ಸಭೆ ನಡೆಸಿ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Odisha: 15 ವರ್ಷಗಳ ನಂತರ ಎನ್​ಡಿಎ ತೆಕ್ಕೆಗೆ ಮರಳಲಿರುವ ಬಿಜು ಜನತಾ ದಳ; ಕಾರಣ ಇದು
ನವೀನ್ ಪಟ್ನಾಯಕ್, ನರೇಂದ್ರ ಮೋದಿ
Follow us on

ನವದೆಹಲಿ, ಮಾರ್ಚ್ 7: ಒಡಿಶಾದಲ್ಲಿ ಕಳೆದ 24 ವರ್ಷದಿಂದ ಮುಖ್ಯಮಂತ್ರಿ ಆಗಿರುವ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (BJD- Biju Janata Dal) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಗಳು ಹೇಳುತ್ತಿವೆ. ಒಡಿಶಾದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಡಿ ಮತ್ತು ಬಿಜೆಪಿ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ (BJD-BJP pre-poll alliance) ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ. ವಿಪಕ್ಷಗಳು ಹೆಣೆದ ಇಂಡಿಯಾ ಕೂಟದಿಂದ ಹೊರಗುಳಿಯಲು ಬಿಜೆಡಿ ನಿರ್ಧರಿಸಿದ್ದಾಗಲೇ ಅವರು ಎನ್​ಡಿಎ ಕಡೆ ವಾಲಬಹುದು ಎಂದು ನಿರೀಕ್ಷಿಸಲಾಗಿತ್ತು. ನಿನ್ನೆ ಬುಧವಾರ ಸಿಎಂ ನವೀನ್ ಪಟ್ನಾಯಕ್ ಅವರ ನಿವಾಸದಲ್ಲಿ ಬಿಜೆಡಿ ಮುಖಂಡರ ಸಭೆ ನಡೆದಿದೆ. ಇತ್ತ ದೆಹಲಿಯಲ್ಲಿ ಒಡಿಶಾದ ಬಿಜೆಪಿ ನಾಯಕರು ಸಭೆ ನಡೆಸಿ ಬಿಜೆಪಿ ಮತ್ತು ಬಿಜೆಡಿ ಮೈತ್ರಿ ಸಾಧ್ಯತೆ ಬಗ್ಗೆ ಚರ್ಚೆ ನಡೆಸಿರುವುದು ತಿಳಿದುಬಂದಿದೆ.

ಬಿಜೆಪಿ ಜೊತೆ ಮೈತ್ರಿಗೆ ನವೀನ್ ಯಾಕೆ ಆಸಕ್ತಿ?

ನವೀನ್ ಪಟ್ನಾಯಕ್ 2000ರಿಂದಲೂ ಸತತವಾಗಿ ಒಡಿಶಾ ಸಿಎಂ ಆಗಿದ್ದಾರೆ. ಅವರ ಜನಪ್ರಿಯತೆ ತುಸುವೂ ಕುಂದಿಲ್ಲ. ಎನ್​ಡಿಎಯಿಂದ ದೂರ ಇದ್ದರೂ ಬಿಜೆಪಿ ಜೊತೆಗಿನ ಸಂಬಂಧ ವೈರತ್ವದ ಮಟ್ಟಕ್ಕೆ ಹೋಗಿಲ್ಲ. ಇತ್ತೀಚಿನ ಕೆಲ ವರ್ಷಗಳಲ್ಲಿ ಒಡಿಶಾದಲ್ಲಿ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಅನುದಾನಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ, ಒಡಿಶಾದ ಅಭಿವೃದ್ಧಿಗೋಸ್ಕರ ನವೀನ್ ಪಾಟ್ನಾಯಕ್ ಅವರು ಬಿಜೆಪಿ ಜೊತೆ ಮೈತ್ರಿಗೆ ಮನಸು ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಇಡಿ ಕರೆಗೆ ಸ್ಪಂದಿಸದ ಕೇಜ್ರಿವಾಲ್​ಗೆ ಕೋರ್ಟ್​ನಿಂದಲೇ ಸಮನ್ಸ್; ಮಾರ್ಚ್ 16ಕ್ಕೆ ಹಾಜರಾಗಲು ಸೂಚನೆ

ಒಡಿಶಾದಲ್ಲಿ ಬಿಜೆಪಿ ಮತ್ತು ಬಿಜೆಡಿ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರವಲ್ಲ, ವಿಧಾನಸಭಾ ಚುನಾವಣೆಗೂ ಮೈತ್ರಿ ಇರಲಿದೆ. ಒಡಿಶಾದಲ್ಲಿ ಎರಡೂ ಚುನಾವಣೆ ಏಕಕಾಲದಲ್ಲಿ ನಡೆಯಲಿದೆ. ಈಗ ಪ್ರಸ್ತಾವ ಆಗಿರುವ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ ಒಡಿಶಾದ 21 ಕ್ಷೇತ್ರಗಳ ಪೈಕಿ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಬಹುದು. ವಿಧಾನಸಭಾ ಚುನಾವಣೆಯ 147 ಕ್ಷೇತ್ರಗಳ ಪೈಕಿ ಬಿಜು ಜನತಾ ದಳ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಡಿ 12 ಮತ್ತು ಬಿಜೆಪಿ 8 ಕ್ಷೇತ್ರಗಳಲ್ಲಿ ಗೆದ್ದಿದ್ದವು. ವಿಧಾನಸಭಾ ಚುನಾವಣೆಯಲ್ಲಿ 147 ಕ್ಷೇತ್ರಗಳ ಪೈಕಿ ಬಿಜೆಡಿ 112 ಕ್ಷೇತ್ರಗಳಲ್ಲಿ ಗೆದ್ದು ನಿಚ್ಚಳ ಬಹುಮತ ಪಡೆದಿತ್ತು. ಬಿಜೆಪಿ 23 ಕ್ಷೇತ್ರಗಳಲ್ಲಿ ಜಯಿಸಿತ್ತು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ್​ಗೆ ಪ್ರಧಾನಿ ಮೋದಿ ಭೇಟಿ: ಜನರಲ್ಲಿ ಹರ್ಷೋನ್ಮಾದ, ಕಣಿವೆಯಲ್ಲಿ ಪ್ರತಿಧ್ವನಿಸುತ್ತಿರುವ ಮೋದಿ ಸಾಬ್ ಜಿಂದಾಬಾದ್ ಘೋಷಣೆ!

ನವೀನ್ ಪಟ್ನಾಯಕ್ ಅವರು 2000ರಲ್ಲಿ ಒಡಿಶಾ ಸಿಎಂ ಆಗುವ ಮುನ್ನ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. 2008ರ ಲೋಕಸಭಾ ಚುನಾವಣೆ ಬಳಿಕ ಅವರು ಎನ್​ಡಿಎ ಮೈತ್ರಿಕೂಟದಿಂದ ಹೊರಬಂದರು. ಎನ್​ಡಿಎಯಿಂದ ಹೊರಬಂದಿದ್ದಕ್ಕೆ ಮುಂದೆ ಪರಿತಪಿಸುತ್ತೀರಿ ಎಂದು ಸುಷ್ಮಾ ಸ್ವರಾಜ್ ಒಂದೊಮ್ಮೆ ನವೀನ್ ಪಾಟ್ನಾಯಕ್​ಗೆ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ