ನವದೆಹಲಿ: ಬಿಜೆಪಿ ನಾಯಕ ಸಂಬಿತ್ ಪಾತ್ರಾ (Sambit Patra) ಅವರು ಜಗನ್ನಾಥ ದೇವರ ಮೇಲೆ “ತಪ್ಪಾಗಿ” ಹೇಳಿಕೆ ನೀಡಿದ್ದಕ್ಕೆ ನನಗೆ ನೋವಾಗಿದೆ. ಇದರಿಂದಾಗಿ ಪಶ್ಚಾತ್ತಾಪದಿಂದ 3 ದಿನಗಳ ಕಾಲ ಉಪವಾಸ ಮಾಡುವುದಾಗಿ ಘೋಷಿಸಿದ್ದಾರೆ. ಬಿಜೆಪಿಯ ಪುರಿ ಲೋಕಸಭಾ (Lok Sabha Polls) ಅಭ್ಯರ್ಥಿ ಸಂಬಿತ್ ಪಾತ್ರಾ ಅವರು ಭಗವಾನ್ ಜಗನ್ನಾಥನ ಕುರಿತು ತಪ್ಪಾಗಿ ಹೇಳಿಕೆ ನೀಡಿದ್ದಕ್ಕಾಗಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಸಿಲುಕಿದ ನಂತರ ಸಂಬಿತ್ ಪಾತ್ರಾ ಅವರು ಮಂಗಳವಾರದಿಂದ 3 ದಿನಗಳ ಕಾಲ ಉಪವಾಸ ಮಾಡುವ ಮೂಲಕ ತಪಸ್ಸು ಮಾಡುವುದಾಗಿ ಹೇಳಿದ್ದಾರೆ.
ಸೋಮವಾರ ಸ್ಥಳೀಯ ಟಿವಿ ಚಾನೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಬಿತ್ ಪಾತ್ರಾ, “ಲಾರ್ಡ್ ಜಗನ್ನಾಥ ಪ್ರಧಾನಿ ನರೇಂದ್ರ ಮೋದಿ ಅವರ ಭಕ್ತ” ಎಂದು ಹೇಳಿದ್ದರು. ಇದಾದ ನಂತರ, ಬಿಜೆಪಿ ನಾಯಕ ಸಂಬಿತ್ ಪಾತ್ರಾ ನಾಲಿಗೆ ಸ್ಲಿಪ್ ಆಗಿ ಆ ರೀತಿ ಹೇಳಿದ್ದಾಗಿ ಸ್ಪಷ್ಟಪಡಿಸಿದ್ದರು. ನಾನು ಪ್ರಧಾನಿ ಮೋದಿಯವರು ಜಗನ್ನಾಥನ ಅಪ್ಪಟ ‘ಭಕ್ತ’ ಎಂದು ಚಾನೆಲ್‌ನಲ್ಲಿ ಹೇಳಲು ಹೋಗಿ ಅಲ್ಲಿನ ಗಲಾಟೆಯಿಂದಾಗಿ ನಾಲಿಗೆ ತಡವರಿಸಿ ಜಗನ್ನಾಥ ಮೋದಿಯ ಭಕ್ತ ಎಂದು ಹೇಳಿದ್ದೆ. ನನ್ನ ಉದ್ದೇಶ ಅದಾಗಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: 21ನೇ ಶತಮಾನದಲ್ಲಿ ಭಾರತವು ಇಂಡಿಯಾ ಮೈತ್ರಿಕೂಟದ ಪಾಪಗಳೊಂದಿಗೆ ಮುಂದುವರೆಯಲು ಸಾಧ್ಯವಿಲ್ಲ: ಮೋದಿ
ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಸಂಬಿತ್ ಪಾತ್ರಾ, “ಈ ತಪ್ಪಿಗೆ ನಾನು ಭಗವಾನ್ ಶ್ರೀ ಜಗನ್ನಾಥನ ಪಾದದಲ್ಲಿ ಕ್ಷಮೆ ಯಾಚಿಸುತ್ತೇನೆ. ಈ ತಪ್ಪಿಗೆ ಪ್ರಾಯಶ್ಚಿತ್ತಕ್ಕಾಗಿ ಮುಂದಿನ 3 ದಿನಗಳ ಕಾಲ ಉಪವಾಸ ಮಾಡುತ್ತೇನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೋಮವಾರ, ಪುರಿಯಲ್ಲಿ ಮೋದಿಯವರ ರೋಡ್‌ಶೋ ಸಂದರ್ಭದಲ್ಲಿ ನಾನು ಅನೇಕ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದೆ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುವಾಗ ‘ನಮ್ಮ ನರೇಂದ್ರ ಮೋದಿಯವರು ಮಹಾ ಪ್ರಭು ಜಗನ್ನಾಥನ ಭಕ್ತ’ ಎಂದು ಹೇಳುವ ಬದಲು ‘ಮೋದಿಯವರ ಭಕ್ತ ಜಗನ್ನಾಥ’ ಎಂದು ತಪ್ಪಾಗಿ ಉಚ್ಚರಿಸಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ನೀಡುವುದಾಗಿ ರಾಹುಲ್ ಗಾಂಧಿಯೇ ಹೇಳಿದ್ದಾರೆ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಬಿಜೆಪಿ ಅಭ್ಯರ್ಥಿಯ ಮಾತುಗಳು ವಿವಾದವನ್ನು ಹುಟ್ಟುಹಾಕಿತು ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಖಂಡಿಸಿದ್ದರು. ಭಗವಾನ್ ಜಗನ್ನಾಥನನ್ನು ದೇಶದಲ್ಲಿ ರಾಜಕೀಯ ಭಾಷಣದಿಂದ ದೂರವಿಡುವಂತೆ ಬಿಜೆಪಿಗೆ ಮನವಿ ಮಾಡಿದ್ದರು. ಮಹಾಪ್ರಭು ಶ್ರೀ ಜಗನ್ನಾಥ ಬ್ರಹ್ಮಾಂಡದ ಪ್ರಭು. ಮಹಾಪ್ರಭುವನ್ನು ಇನ್ನೊಬ್ಬ ಮನುಷ್ಯನ ಭಕ್ತ ಎಂದು ಕರೆಯುವುದು ಭಗವಂತನಿಗೆ ಮಾಡಿದ ಅವಮಾನ. ಇದು ಸಂಪೂರ್ಣವಾಗಿ ಖಂಡನೀಯ. ಇದು ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಜಗನ್ನಾಥ ಭಕ್ತರ ಭಾವನೆಗಳನ್ನು ಘಾಸಿಗೊಳಿಸಿದೆ ಮತ್ತು ಅವಮಾನಿಸಿದೆ ಎಂದು ನವೀನ್ ಪಟ್ನಾಯಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. “ಬಿಜೆಪಿಯ ಈ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರು ದೇವರಿಗಿಂತ ಮೇಲಿನವರು ಎಂದು ಭಾವಿಸಲು ಪ್ರಾರಂಭಿಸಿದ್ದಾರೆ. ಇದು ದುರಹಂಕಾರದ ಪರಮಾವಧಿ. ದೇವರೇ ಮೋದಿಯವರ ಭಕ್ತ ಎಂದು ಕರೆಯುವುದು ದೇವರಿಗೆ ಮಾಡಿದ ಅವಮಾನ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Tue, 21 May 24