ಬರದಲ್ಲೂ ಕರ್ನಾಟಕಕ್ಕೆ ಬರೆ, ತಮಿಳುನಾಡಿಗೆ ನೀರು ಬಿಡುವಂತೆ CWMA ನಿರ್ದೇಶನ
ಮಳೆ ಇಲ್ಲದೇ ತೀವ್ರ ಬರಗಾಲದಿಂದ ನೀರಿಲ್ಲದೇ ಕಾವೇರಿ ನದಿ ಬತ್ತಿ ಹೋಗಿತ್ತು, ಆದ್ರೆ, ಕೆಲ ದಿನಗಳಿಂದ kಆವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ನದಿಗೆ ನೀರು ಹರಿದುಬರಲಾರಂಭಿಸಿದೆ. ಇದರಿಂದ ಕಾವೇರಿ ನದಿ ಮತ್ತೆ ಜೀವ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬಿಗ್ ಶಾಕ್ ಕೊಟ್ಟಿದೆ.
ನವದೆಹಲಿ, (ಮೇ 21): ತಮಿಳುನಾಡಿಗೆ (tamil nadu) 2.5 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(Cauvery Water Management Authority) ಸೂಚನೆ ನೀಡಿದೆ. ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ನೀರು ಹರಿಸಲು ನಿರ್ದೇಶನ ನೀಡಿದೆ. ಮೊನ್ನೆ ಮೇ 16ರಂದು ನವದೆಹಲಿಯಲ್ಲಿ ನಡೆದಿದ್ದ ಸಭೆಯಲ್ಲಿ ಕಾವೇರಿ ನದಿ ನೀರು9Cauvery Water) ಸಂಘರ್ಷ ವಿಚಾರದಲ್ಲಿ ತಮಿಳುನಾಡು ಬೇಡಿಕೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಿರಸ್ಕರಿಸಿತ್ತು. ಆದ್ರೆ, ಇಂದು(ಮೇ 21) ನಡೆದ ಸಭೆಯಲ್ಲಿ ತಮಿಳುನಾಡಿಗೆ 2.5 ಟಿಎಂಸಿ ನೀರು ಬಿಡುವಂತೆ ಸಿಡಬ್ಲ್ಯುಎಂಎ ಕರ್ನಾಟಕಕಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಬರದಲ್ಲೂ ಕರ್ನಾಟಕಕ್ಕೆ ಬರೆ ಎಳೆದಂತಾಗಿದೆ.
ಸಿಡಬ್ಲ್ಯುಎಂಎ ಸಭೆಯಲ್ಲಿ ತಮಿಳುನಾಡಿನ ವಾದ
ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಕರ್ನಾಟಕದ ಅಗತ್ಯತೆಗಳಿಗೆ ಸದ್ಯ 4 ಟಿಎಂಸಿ ನೀರು ಸಾಕು. ಮುಖ್ಯ ಅಣೆಕಟ್ಟುಗಳಲ್ಲಿ 19.17 ಟಿಎಂಸಿ ನೀರಿದೆ. ಹೀಗಾಗಿ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಬೇಕು. ನೀರು ಬಿಡಲು ಅವರಿಗೆ ಯಾವುದೇ ತೊಂದರೆ ಇಲ್ಲ. ಈ ವರ್ಷ ಸಾಕಷ್ಟು ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಸದ್ಯಕ್ಕೆ ಆರು ಟಿಎಂಸಿ ನೀರನ್ನು ತಕ್ಷಣವೇ ಬಿಡಬೇಕು ಎಂದು ತಮಿಳುನಾಡು ವಾದ ಮಂಡಿಸಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಉತ್ತಮ ಮಳೆ: ಮತ್ತೆ ಜೀವ ಪಡೆದುಕೊಂಡ ಕಾವೇರಿ ನದಿ, ನೀರಿನ ಬವಣೆ ದೂರ
ಕೊಳಚೆ ನೀರು ಬಿಡಲಾಗುತ್ತಿದೆ ಎಂದ ತಮಿಳುನಾಡು
ಮೇ. 31 ರಿಂದ ಕೇರಳದಿಂದ ಮುಂಗಾರು ಆರಂಭವಾಗಲಿದೆ. ಜೂನ್ ತಿಂಗಳಿಗೆ 9.19 ಟಿಎಂಸಿ ನೀರು ಬಿಡುವುದನ್ನು ಕರ್ನಾಟಕ ಖಚಿತಪಡಿಸಬೇಕು. ಜುಲೈನಿಂದ ಡಿಸೆಂಬರ್ ವರೆಗೆ ತಮಿಳುನಾಡಿನ ಕೃಷಿಗೆ ನೀರುಬೇಕು. ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಪ್ರತಿ ತಿಂಗಳು ನೀರು ಬಿಡಬೇಕು. ಇಲ್ಲದಿದ್ದರೆ ತಮಿಳುನಾಡಿನ ಕೃಷಿಗೆ ಹಾನಿಯಾಗುವ ಸಾಧ್ಯತೆ ಇದೆ ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳ ವಾದ ಮಂಡಿಸಿದರು. ಅಲ್ಲದೇ ಇದೇ ವೇಳೆ ಕರ್ನಾಟಕ ಕೊಳಚೆ ನೀರು ಹರಿಸುತ್ತಿದೆ ಗಂಭೀರ ಆರೋಪ ಮಾಡಿದ್ದು, ಇದನ್ನು ನೀರು ನಿರ್ವಹಣ ಪ್ರಾಧಿಕಾರ ಗಮನಿಸಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕದ ವಾದ
ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜಲಾಶಯಗಳಲ್ಲಿ ನೀರಿಲ್ಲದೆ ಬರಿದಾಗಿದ್ದು, ಕುಡಿಯುವ ನೀರಿಗೆ ನಮ್ಮಲ್ಲಿನ ನೀರು ಸಾಕಾಗುತ್ತಿಲ್ಲ. ಇರುವ ನೀರನ್ನು ಸಂಪೂರ್ಣ ಬಳಸಿಕೊಳ್ಳಲು ಆಗಲ್ಲ. ಮಾನ್ಸೂನ್ ಸಾಮಾನ್ಯವಾಗಿದ್ದರೆ ಮಾತ್ರ ನೀರು ಬಿಡಬಹುದು. ಇಲ್ಲದಿದ್ದರೆ ನೀರು ಬಿಡುವುದಕ್ಕೆ ಸಾಧ್ಯವೆ ಇಲ್ಲ ಎಂದು ಸಿಡಬ್ಲ್ಯುಎಂಎ ಸಭೆಯಲ್ಲಿ ಕರ್ನಾಟಕದ ವಾದ ಮಂಡಿಸಿದೆ.
ತಮಿಳುನಾಡು ಮನವಿ ತಿಸ್ಕರಿಸಿದ್ದ CWRC
ಕಾವೇರಿ ನದಿ ನೀರು ಸಂಘರ್ಷ ವಿಚಾರದಲ್ಲಿ ತಮಿಳುನಾಡು ಬೇಡಿಕೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಿರಸ್ಕರಿಸಿದೆ. ಮೇ 16ರಂದು 2023-2024 ಜಲವರ್ಷದ ಅಂತಿಮ ಸಭೆಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸಿಡಬ್ಲ್ಯೂಆರ್‌ಸಿ ಸ್ಪಷ್ಟಪಡಿಸಿತ್ತು. ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಇರುವ ಕಾರಣ ನೀರು ಕೊಡಲು ಸಾಧ್ಯವಿಲ್ಲ, ಹಾಗಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಿಂದ ನೈಸರ್ಗಿಕವಾಗಿ ನದಿ ಸೇರುವ ನೀರು ಬಳಸಿಕೊಳ್ಳಿ ಎಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ತಿಳಿಸಿತ್ತು.
ಕಾವೇರಿಗೆ ಜೀವ ಕಳೆ
ಕಳೆದೊಂದು ವಾರದಿಂದ ಕಾವೇರಿ ಜಲನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಬಿಸಿಲ ಝಳಕ್ಕೆ ಒಣಗಿ ಹೋಗಿದ್ದ ಪ್ರಕೃತಿಯಲ್ಲಿ ಪುಳಕ ಶುರುವಾಗಿದ್ದರೆ, ಬತ್ತಿದ್ದ ಕಾವೇರಿ ನದಿಯಲ್ಲಿ ನೀರಿನ ಹರಿವು ನಿಧಾನವಾಗಿ ಆರಂಭವಾಗಿದೆ. ಇದರಿಂದ ಜಿಲ್ಲೆಯ ಜನತೆಯಲ್ಲಿ ಹರ್ಷ ತಂದಿದೆ. ಖಾಲಿ ಖಾಲಿಯಾಗಿದ್ದ ಕಾವೇರಿ ಒಡಲಿಗೆ ಇನ್ನೇನು ನೀರು ಬರಲಾರಂಭಿಸಿರುವ ನಡುವೆ ಮತ್ತೆ ತಮಿಳುನಾಡಿಗೆ ನೀರು ಹರಿಸಬೇಕೆಂದು ಸೂಚನೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Tue, 21 May 24